ನವದೆಹಲಿ: ಜನಪ್ರಿಯ ಮೆಸೇಜಿಂಗ್ ಆ್ಯಪ್ ಟೆಲಿಗ್ರಾಂ (Telegram) ಅನ್ನು ಉಗ್ರವಾದ, ಸೈಬರ್ ಅಪರಾಧ, ಮಾದಕ ದ್ರವ್ಯ ಸಾಗಣೆ ಹಾಗೂ ಹಣಕಾಸು ವಂಚನೆಗಳಂತಹ ಕಾನೂನುಬಾಹಿರ ಚಟುವಟಿಕೆಗಳಿಗೆ ವ್ಯಾಪಕವಾಗಿ ಬಳಸಿಕೊಳ್ಳಲಾಗುತ್ತಿದ್ದು, ಇದು ಅಪರಾಧಿಗಳ ಪಾಲಿಗೆ “ಹೊಸ ಡಾರ್ಕ್ ವೆಬ್” (New Dark Web) ಆಗಿ ಮಾರ್ಪಟ್ಟಿದೆ ಎಂದು ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್ಗೆ ತಿಳಿಸಿದೆ.
ಜೂನ್ 21 ರಂದು ನಡೆಯಲಿರುವ ನೀಟ್-ಯುಜಿ 2026 (NEET-UG 2026) ಮರುಪರೀಕ್ಷೆಯ ಹಿನ್ನೆಲೆಯಲ್ಲಿ, ಭಾರತದಲ್ಲಿ ಟೆಲಿಗ್ರಾಂ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಟೆಲಿಗ್ರಾಂ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಕಾನೂನು ಹೋರಾಟದ ನಡುವೆ ಕೇಂದ್ರ ಸರ್ಕಾರವು ನ್ಯಾಯಾಲಯಕ್ಕೆ ಆಘಾತಕಾರಿ ವಿವರಗಳನ್ನೊಳಗೊಂಡ ಅಫಿಡವಿಟ್ ಸಲ್ಲಿಸಿದೆ.
‘ಟೆಲಿಗ್ರಾಂ ಹೊಸ ಡಾರ್ಕ್ ವೆಬ್’: ನ್ಯಾಯಾಲಯಕ್ಕೆ ಸಲ್ಲಿಕೆಯಾಗಿರುವ ವರದಿಯಲ್ಲಿ, “ಟೆಲಿಗ್ರಾಂ ಜಾಲವು ಸೈಬರ್ ಅಪರಾಧಿಗಳನ್ನು ಲಿಂಕ್ ಮಾಡುವ ಹೊಸ ಡಾರ್ಕ್ ವೆಬ್ ಆಗಿದೆ. ಅಪರಾಧಿಗಳು ತನಿಖಾ ಸಂಸ್ಥೆಗಳಿಗೆ ಸಿಗದೇ ತಪ್ಪಿಸಿಕೊಳ್ಳಲು ಟೆಲಿಗ್ರಾಂ ಚಾನೆಲ್ಗಳನ್ನು ಬಳಸುತ್ತಿದ್ದಾರೆ. ಈ ಚಾನೆಲ್ಗಳ ಮೂಲಕ ಡೀಪ್ ವೆಬ್ ಲಿಂಕ್ಗಳನ್ನು ಹಂಚಿಕೊಂಡು, ಬಳಕೆದಾರರನ್ನು ಡಾರ್ಕ್ ವೆಬ್ ಫೋರಮ್ಗಳಿಗೆ ಸಂಪರ್ಕಿಸುತ್ತಿದ್ದಾರೆ. ಇದರಿಂದಾಗಿ ಅಪರಾಧಿಗಳ ಗುರುತು ಪತ್ತೆ ಹಚ್ಚುವುದು ಅಧಿಕಾರಿಗಳಿಗೆ ಅತ್ಯಂತ ಕಷ್ಟಕರವಾಗಿದೆ,” ಎಂದು ಸರ್ಕಾರ ಆತಂಕ ವ್ಯಕ್ತಪಡಿಸಿದೆ.
ಉಗ್ರವಾದ ಹಾಗೂ ಹಿಂಸಾತ್ಮಕ ವಿಷಯಗಳ ಪ್ರಸಾರ: ಭಯೋತ್ಪಾದಕ ಸಂಸ್ಥೆಗಳಿಗೆ ನಂಟಿರುವ ಕೆಲವು ಗುಂಪುಗಳು ಸಾರ್ವಜನಿಕ ಸುವ್ಯವಸ್ಥೆಯನ್ನು ಕದಡುವ ಮತ್ತು ತಪ್ಪು ಮಾಹಿತಿಯನ್ನು ಹರಡುವ ಉದ್ದೇಶದಿಂದ ಟೆಲಿಗ್ರಾಂ ಗ್ರೂಪ್ ಹಾಗೂ ಚಾನೆಲ್ಗಳನ್ನು ಬಳಸುತ್ತಿವೆ. ಹಿಂಸಾತ್ಮಕ ಸಿದ್ಧಾಂತ ಮತ್ತು ಉಗ್ರಗಾಮಿ ವಿಚಾರಗಳನ್ನು ಹರಡಲು ಈ ವೇದಿಕೆಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಗಂಭೀರ ಆರೋಪ ಮಾಡಿದೆ.
ಸೈಬರ್ ವಂಚನೆ, ಪೈರಸಿ ಮತ್ತು ಡೇಟಾ ಲೀಕ್:
-
ಹಣಕಾಸು ವಂಚನೆ: ಸೈಬರ್ ಅಪರಾಧಿಗಳು ನಕಲಿ ಗುರುತಿನ ಚೀಟಿಗಳ ಮೂಲಕ ಖಾತೆಗಳನ್ನು ತೆರೆದು ಹಣಕಾಸು ವಂಚನೆ ಎಸಗುತ್ತಿದ್ದಾರೆ. ಬ್ಯಾಂಕಿಂಗ್ ವ್ಯವಸ್ಥೆ, ಯುಪಿಐ (UPI) ಹಾಗೂ ಕ್ರಿಪ್ಟೋಕರೆನ್ಸಿಗಳ ಮೂಲಕ ಅಕ್ರಮ ಹಣವನ್ನು ವರ್ಗಾವಣೆ (Money Laundering) ಮಾಡಲು ಟೆಲಿಗ್ರಾಂ ಅನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ.
-
ವೈಯಕ್ತಿಕ ಡೇಟಾ ಸೋರಿಕೆ: ಟೆಲಿಗ್ರಾಂ ಬೋಟ್ಗಳ (Bots) ಮೂಲಕ ಈ ಹಿಂದೆ ಸೋರಿಕೆಯಾಗಿದ್ದ ಸಾರ್ವಜನಿಕರ ಮೊಬೈಲ್ ಸಂಖ್ಯೆಗಳು ಸೇರಿದಂತೆ ಪ್ರಮುಖ ಸರ್ಕಾರಿ ಗುರುತಿನ ಚೀಟಿಗಳ ಸೂಕ್ಷ್ಮ ವಿವರಗಳನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ ಮತ್ತು ಪ್ರಸಾರ ಮಾಡಲಾಗುತ್ತಿದೆ.
-
ಪೈರಸಿ ಹಾಗೂ ಅಪ್ರಾಪ್ತರ ಶೋಷಣೆ: ಚಲನಚಿತ್ರಗಳು, ವೆಬ್ ಸೀರೀಸ್ಗಳು ಸೇರಿದಂತೆ ಕಾಪಿರೈಟ್ ಹೊಂದಿರುವ ಕಂಟೆಂಟ್ಗಳನ್ನು ಅಕ್ರಮವಾಗಿ ಹಂಚಿಕೆ ಮಾಡಿ ಭಾರಿ ಆದಾಯ ನಷ್ಟ ಉಂಟುಮಾಡಲಾಗುತ್ತಿದೆ. ಇದರೊಂದಿಗೆ, ಕಾನೂನುಬಾಹಿರವಾಗಿ ಮಕ್ಕಳ ಮೇಲಿನ ಲೈಂಗಿಕ ಶೋಷಣೆಯ ದೃಶ್ಯಗಳನ್ನು (CSEAM) ಹಂಚಿಕೊಳ್ಳಲು ಇದನ್ನು ಬಳಸಲಾಗುತ್ತಿದೆ ಎಂದು ಕೇಂದ್ರ ಹೇಳಿದೆ.
ಟೆಲಿಗ್ರಾಂ ವರ್ಸಸ್ ಕೇಂದ್ರ ಸರ್ಕಾರ: ನೀಟ್ ಪರೀಕ್ಷೆಗಾಗಿ ನಿಷೇಧ! ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನೀಡಿದ ಶಿಫಾರಸುಗಳ ಆಧಾರದ ಮೇಲೆ, ನೀಟ್-ಯುಜಿ 2026 ರ ಪರೀಕ್ಷಾ ಪತ್ರಿಕೆ ಸೋರಿಕೆಯಾಗುವುದನ್ನು ತಡೆಯಲು ಮತ್ತು ಪರೀಕ್ಷಾ ಪ್ರಕ್ರಿಯೆಯ ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು ಕೇಂದ್ರ ಸರ್ಕಾರವು ಭಾರತದಲ್ಲಿ ಟೆಲಿಗ್ರಾಂ ಅನ್ನು ಜೂನ್ 22 ರವರೆಗೆ ತಾತ್ಕಾಲಿಕವಾಗಿ ಬ್ಲಾಕ್ ಮಾಡಿದೆ.
ಇದರ ಜೊತೆಗೆ ಜೂನ್ 30 ರವರೆಗೆ ಟೆಲಿಗ್ರಾಂನ ‘ಮೆಸೇಜ್ ಎಡಿಟಿಂಗ್’ (Message Editing) ಫೀಚರ್ ಅನ್ನು ಭಾರತದಲ್ಲಿ ಸ್ಥಗಿತಗೊಳಿಸುವಂತೆ ನಿರ್ದೇಶನ ನೀಡಲಾಗಿದೆ. ಈ ಹಿಂದೆ ಅಡ್ಮಿನ್ಗಳು ಹಳೆಯ ಮೆಸೇಜ್ಗಳನ್ನು ಎಡಿಟ್ ಮಾಡಿ, ಅಸಲಿ ಟೈಮ್ಸ್ಟ್ಯಾಂಪ್ ಉಳಿಸಿಕೊಂಡು ಬೇರೆ ಫೈಲ್ಗಳನ್ನು ಅಪ್ಲೋಡ್ ಮಾಡುವ ಮೂಲಕ “ಪೇಪರ್ ಲೀಕ್” ಆದಂತೆ ಸುಳ್ಳು ಪುರಾವೆಗಳನ್ನು ಸೃಷ್ಟಿಸಿ ಗೊಂದಲ ಉಂಟುಮಾಡಿದ್ದರು ಎಂದು ಎನ್ಟಿಎ ಹೇಳಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಟೆಲಿಗ್ರಾಂ ಮೇಲೆ ಕಠಿಣ ನಿರ್ಬಂಧಗಳನ್ನು ಹೇರಲಾಗಿದ್ದು, ಸದ್ಯ ದೆಹಲಿ ಹೈಕೋರ್ಟ್ನಲ್ಲಿ ಈ ಪ್ರಕರಣದ ವಿಚಾರಣೆ ಮುಂದುವರಿದಿದೆ.
SHOCKING: ಭಾರತದಲ್ಲಿ ಶೇ. 37ರಷ್ಟು ಆರಂಭಿಕ ಹಂತದ ಕೆಲಸಗಳು ಈಗ ಎಐ ಪಾಲು: ವರದಿ








