ಬೆಂಗಳೂರು: ದ್ವಿತೀಯ ಪಿಯು ಮತ್ತು ಎಸ್ಎಸ್ಎಲ್ಸಿ ಪ್ರಥಮ ಪರೀಕ್ಷೆಯ ಫಲಿತಾಂಶ ಪ್ರಕಟಣೆಯಲ್ಲಿ ವಿಳಂಬವಾಗುವುದನ್ನು ತಪ್ಪಿಸಲು ಪರೀಕ್ಷೆ ಮತ್ತು ಮೌಲ್ಯಮಾಪನ ಕರ್ತವ್ಯಕ್ಕೆ ನಿಯೋಜಿತರಾದ ಶಿಕ್ಷಕರಿಗೆ ಲೋಕಸಭಾ ಚುನಾವಣಾ ಕಾರ್ಯದಿಂದ ವಿನಾಯಿತಿ ನೀಡುವಂತೆ ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯಮಾಪನ ಮಂಡಳಿ (ಕೆಎಸ್ಇಎಬಿ) ಜಿಲ್ಲಾ ಚುನಾವಣಾಧಿಕಾರಿಗಳಿಗೆ ಪತ್ರ ಬರೆದಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ವಿನಾಯಿತಿ ನೀಡುವಂತೆ ಕೋರಿದ್ದಾರೆ.
ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಪರಿಗಣಿಸಿ, ಪರೀಕ್ಷೆ ಮತ್ತು ಮೌಲ್ಯಮಾಪನ ಕರ್ತವ್ಯಕ್ಕೆ ನಿಯೋಜಿಸಲಾದ ಶಿಕ್ಷಕರನ್ನು ಚುನಾವಣಾ ಕೆಲಸಕ್ಕೆ ನಿಯೋಜಿಸಬಾರದು ಎಂದು ಪ್ರಧಾನ ಕಾರ್ಯದರ್ಶಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
“ನಾವು ಮೌಲ್ಯಮಾಪನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಸಮಯಕ್ಕೆ ಸರಿಯಾಗಿ ಫಲಿತಾಂಶಗಳನ್ನು ಘೋಷಿಸಬೇಕಾಗಿರುವುದರಿಂದ ಮತ್ತು ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಪರಿಗಣಿಸಿ, ಲೋಕಸಭಾ ಚುನಾವಣಾ ಕಾರ್ಯಕ್ಕಾಗಿ ಪರೀಕ್ಷೆ ಮತ್ತು ಮೌಲ್ಯಮಾಪನ ಕಾರ್ಯಗಳಿಗೆ ನಿಯೋಜಿಸಲಾದ ಶಿಕ್ಷಕರನ್ನು ಬಳಸಿಕೊಳ್ಳದಂತೆ ನಾವು ವಿನಂತಿಸುತ್ತೇವೆ. ಮೌಲ್ಯಮಾಪನ ಕಾರ್ಯ ಪೂರ್ಣಗೊಂಡ ಕೂಡಲೇ ಅವರ ಸೇವೆಗಳನ್ನು ಬಳಸಿಕೊಳ್ಳಬಹುದು” ಎಂದು ಪತ್ರದಲ್ಲಿ ತಿಳಿಸಲಾಗಿದೆ.