ಬೆಂಗಳೂರು: “ಶಿಕ್ಷಕರು ಆಧುನಿಕ ತಂತ್ರಜ್ಞಾನಗಳಿಗೆ ಹೊಂದಿಕೊಳ್ಳಬೇಕು. ಇಲ್ಲದಿದ್ದರೆ ಉತ್ತಮ ಶಿಕ್ಷಣ ನೀಡುವಲ್ಲಿ ಮಕ್ಕಳಿಗೆ ಸರಿಯಾಗಿ ನ್ಯಾಯ ಒದಗಿಸಲು ಆಗುವುದಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಕನಕಪುರದಲ್ಲಿ ನಡೆದ ತಾಲ್ಲೂಕು ಮಟ್ಟದ ಶಿಕ್ಷಕರ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ನಾವೆಲ್ಲರೂ ಇಂದು ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಅಂಗವಾಗಿ ಶಿಕ್ಷಕರ ದಿನ ಆಚರಿಸಲು ಸೇರಿದ್ದೇವೆ. ನಾನು ಪ್ರತಿ ವರ್ಷ ಎಷ್ಟೇ ಒತ್ತಡ, ಕೆಲಸಗಳಿದ್ದರೂ ಈ ಕಾರ್ಯಕ್ರಮವನ್ನು ತಪ್ಪಿಸದೇ ಭಾಗವಹಿಸುತ್ತೇನೆ. ರಾಧಾಕೃಷ್ಣನ್ ಅವರ ಇತಿಹಾಸ ಶಿಕ್ಷಣಕ್ಕೆ ದೊಡ್ಡ ಮಾರ್ಗದರ್ಶನ. ಅಂದಿನ ಕಾಂಗ್ರೆಸ್ ಸರ್ಕಾರ ಅವರಿಗೆ ದೊಡ್ಡ ಹುದ್ದೆ ನೀಡಿತ್ತು. ಶಿಕ್ಷಕರಿಗೆ ಗೌರವ ನೀಡುವ ಕೆಲಸವನ್ನು ಮಾಡಲಾಗಿದೆ. ಮೈಸೂರು ವಿವಿಯಲ್ಲಿ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದ ರಾಧಾಕೃಷ್ಣನ್ ಅವರು ಮಹಾರಾಜ ಕಾಲೇಜಿಗೆ ವರ್ಗಾವಣೆಯಾಗುತ್ತಾರೆ. ಆಗ ವಿದ್ಯಾರ್ಥಿಗಳೇ ಅವರನ್ನು ಕಾಲೇಜಿಗೆ ಕರೆದೊಯ್ದು ಅವರಿಗೆ ಬೀಳ್ಕೊಡುಗೆ ನೀಡುತ್ತಾರಂತೆ. ಇದು ರಾಧಾಕೃಷ್ಣನ್ ಹಾಗೂ ವಿದ್ಯಾರ್ಥಿಗಳ ನಡುವಣ ಸಂಬಂಧ ತಿಳಿಸುತ್ತದೆ” ಎಂದರು.
“ಹೆಚ್ಚಾಗಿ ಹೆಣ್ಣು ಮಕ್ಕಳು ಶಿಕ್ಷಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದೀರಿ. ತಾಲ್ಲೂಕಿನ ಪ್ರತಿಯೊಬ್ಬರ ಪರವಾಗಿ ನಿಮ್ಮನ್ನು ಅಭಿನಂದಿಸುತ್ತೇನೆ. ಗುರುವೇ ದೊಡ್ಡ ತತ್ವ, ಗುರುವೇ ದೊಡ್ಡ ತಪಸ್ವಿ. ನಮ್ಮ ಜೀವನದಲ್ಲಿ ಗುರು ಹಾಗೂ ಗುರಿ ಇರಬೇಕು. ಸ್ವಾಮಿ ವಿವೇಕಾನಂದರಿಗೆ ಅವರ ಗುರುಗಳಾದ ರಾಮಕೃಷ್ಣ ಪರಮಹಂಸರು ಬೋಧನೆ ಮಾಡುವಾಗ ನಾನು, ನಾನೇ, ನನ್ನಿಂದಲೇ ಎಂಬ ಪದ ತೆಗೆದು, ನಾವು, ನಮ್ಮಿಂದಲೇ ಎಂಬುದನ್ನು ಬಳಸಬೇಕು ಎಂದು ಹೇಳಿದ್ದರಂತೆ. ಆಗ ಈ ಪದಗಳು ಹೇಳುವವರ ಶ್ರೇಷ್ಠತೆಯನ್ನು ತೋರುತ್ತದೆ ಎಂದು ಸ್ವಾಮಿ ವಿವೇಕಾನಂದರು ಹೇಳುತ್ತಾರೆ” ಎಂದರು.
“ನೀವೆಲ್ಲರೂ ಮಕ್ಕಳಿಗೆ ಶಿಕ್ಷಣ ನೀಡುತ್ತೀರಿ. ನೀವು ನೀಡುವ ಶಿಕ್ಷಣ ಕೇವಲ ತಲೆಗೆ ಹೋಗುವುದು ಮಾತ್ರವಲ್ಲ, ಮಕ್ಕಳ ಹೃದಯಕ್ಕೆ ನಾಟಬೇಕು. ಆಗ ನಿಮ್ಮ ಜವಾಬ್ದಾರಿ ಹೆಚ್ಚುತ್ತದೆ. ಶಿಕ್ಷಣದಲ್ಲಿ ನಾವು ಪ್ರತಿ ಹಂತದಲ್ಲೂ ಅಪ್ ಡೇಟ್ ಆಗುತ್ತಿರಬೇಕಾಗುತ್ತದೆ. ಮೊದಲು ಅಬಾಕಸ್, ನಂತರ ಕ್ಯಾಲ್ಕುಲೇಟರ್, ಆಮೇಲೆ ಕಂಪ್ಯೂಟರ್, ಗೂಗಲ್ ಈಗ ಚಾಟ್ ಜಿಪಿಟಿ ಬಂದಿದೆ. ಹೀಗೆ ಪ್ರತಿ ಹಂತದಲ್ಲೂ ಹೊಸ ತಂತ್ರಜ್ಞಾನ ಬರುತ್ತಿದ್ದು, ನಾವು ಅವುಗಳನ್ನು ಅಳವಡಿಸಿಕೊಳ್ಳಲು ಸಿದ್ಧರಿರಬೇಕು. ಈಗ ಕೃತಕ ಬುದ್ಧಿಮತ್ತೆ ಕಾಲ. ಮುಂದಿನ ಹತ್ತು ವರ್ಷಗಳಲ್ಲಿ ಈ ತ್ರಂತ್ರಜ್ಞಾನ ಮಾಡಲಿರುವ ಬದಲಾವಣೆ ಊಹಿಸಲೂ ಸಾಧ್ಯವಿಲ್ಲ” ಎಂದರು.
“ನಾನು ಅನೇಕ ಶಾಲೆಗಳಲ್ಲಿ ಗಮನಿಸುತ್ತಿದ್ದೇನೆ. ಶಿಕ್ಷಕರು ಪಾಠ ಮಾಡುವಾಗ ತಪ್ಪು ಹೇಳಿದರೆ, ಮಕ್ಕಳೇ ಅದನ್ನು ತಿದ್ದುವ ಪರಿಸ್ಥಿತಿ ಇದೆ. ಈಗಿನ ಮಕ್ಕಳು ತಂತ್ರಜ್ಞಾನದ ಮೂಲಕ ಸಾಕಷ್ಟು ಜ್ಞಾನ ಸಂಪಾದಿಸುತ್ತಿದ್ದಾರೆ” ಎಂದು ತಿಳಿಸಿದರು.
“ನೀವೆಲ್ಲರೂ ಈಗ ಬೆಂಗಳೂರು ದಕ್ಷಿಣ ಜಿಲ್ಲೆಯ ಶಿಕ್ಷಕರು. ನೀವೆಲ್ಲರೂ ನಮ್ಮ ಮಕ್ಕಳನ್ನು ಜಾಗತಿಕ ಮಟ್ಟದ ಸ್ಪರ್ಧೆಗೆ ಸಿದ್ಧಗೊಳಿಸಬೇಕಿದೆ. ಬೆಂಗಳೂರಿಗೆ ಇಷ್ಟು ದೊಡ್ಡ ಆಕರ್ಷಣೆ ಬರಲು ಕಾರಣ ಇಂದು ಇಲ್ಲಿರುವ ಮಾನವ ಸಂಪನ್ಮೂಲ. ಬೆಂಗಳೂರಿನಲ್ಲಿ 25 ಲಕ್ಷ ಐಟಿ ಉದ್ಯೋಗಿಗಳಿದ್ದಾರೆ, ಜಾಗತಿಕ ಸಿಲಿಕಾನ್ ವ್ಯಾಲಿ ಕ್ಯಾಲಿಫೋರ್ನಿಯಾದಲ್ಲಿ 23 ಲಕ್ಷ ಐಟಿ ಉದ್ಯೋಗಿಗಳಿದ್ದಾರೆ. ಐಟಿ, ಸ್ಟಾರ್ಟ್ ಅಪ್, ಇವಿ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಬೆಂಗಳೂರು ಮುಂದಿದೆ. ಹೀಗಾಗಿ ನೀವೆಲ್ಲರೂ ಮಕ್ಕಳನ್ನು ಈ ಕ್ಷೇತ್ರಗಳಲ್ಲಿ ಬೆಳೆಯುವಂತೆ ತಯಾರು ಮಾಡಬೇಕಿದೆ” ಎಂದು ತಿಳಿಸಿದರು.
“ಕಾಂಗ್ರೆಸ್ ಪಕ್ಷದಲ್ಲಿ ಶಿಕ್ಷಕರ ಘಟಕವಿದ್ದು, ಇತ್ತೀಚೆಗೆ ಪಕ್ಷದ ಕಚೇರಿಯಲ್ಲಿ ಶಿಕ್ಷಕರ ದಿನ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಜಿ.ಸಿ ಚಂದ್ರಶೇಖರ್ ಅವರು ಒಂದು ಕಥೆ ಹೇಳಿದರು. ಒಮ್ಮೆ ರಾಜ ತನ್ನ ಆಸ್ಥಾನದಲ್ಲಿ ಸನ್ಮಾನ ಕಾರ್ಯಕ್ರಮ ಏರ್ಪಡಿಸಬೇಕು, ಯಾರಿಗೆಲ್ಲಾ ಸನ್ಮಾನ ಮಾಡಬೇಕು ಎಂದು ಚರ್ಚೆ ಮಾಡುವಾಗ ಒಬ್ಬ ಮಂತ್ರಿ ಇಂಜಿನಿಯರ್ ಗಳಿಗೆ ಮಾಡಬೇಕು, ಮತ್ತೊಬ್ಬ ಆರೋಗ್ಯ ಕಾಪಾಡುವ ವೈದ್ಯರಿಗೆ ಮಾಡಬೇಕು, ಮತ್ತೂ ಮಂತ್ರಿ ಆರ್ಥಿಕ ತಜ್ಞನಿಗೆ ಸನ್ಮಾನ ಮಾಡಬೇಕು ಎಂದು ಸಲಹೆ ನೀಡಿದ. ಮತ್ತೊಬ್ಬ ಮಂತ್ರಿಗೆ ಕೇಳಿದಾಗ ಆತ ವಯಸ್ಸಾದ ಹಿರಿಯ ಮಹಿಳೆಯನ್ನು ಕರೆತಂದರಂತೆ. ಆಕೆ ಬಂದಾಗ ಸಭೆಯಲ್ಲಿದ್ದ ಎಲ್ಲರೂ ಎದ್ದು ನಿಂತರಂತೆ. ಆಗ ರಾಜ ಯಾಕೆ ಎಲ್ಲರೂ ಎದ್ದು ನಿಂತಿರಿ ಎಂದು ಕೇಳಿದರಂತೆ. ಆಗ ಎಲ್ಲರೂ ಆಕೆ ನಮ್ಮ ಶಿಕ್ಷಕಿ, ಹೀಗಾಗಿ ಎದ್ದು ನಿಂತೆವು ಎಂದರಂತೆ. ಹೀಗೆ ಸಮಾಜದಲ್ಲಿ ಎಲ್ಲಾ ಸಾಧಕರನ್ನು ರೂಪಿಸುವವರು ಶಿಕ್ಷಕರು. ಹೀಗಾಗಿ ಶಿಕ್ಷಕಿಗೆ ಸನ್ಮಾನ ಮಾಡಲು ತೀರ್ಮಾನಿಸಿದರಂತೆ. ಸಮಾಜದಲ್ಲಿ ಶಿಕ್ಷಕರಿಗೆ ಇರುವ ಸ್ಥಾನ ಬೇರೆ ಯಾರಿಗೂ ಇಲ್ಲ” ಎಂದರು.
“ಶಿಕ್ಷಕರಲ್ಲಿ ಸಮಗ್ರತೆ, ನೈತಿಕತೆ ಹೆಚ್ಚಾಗಿ ಇರಬೇಕು. ನೀವು ಕಲಿಸುವುದನ್ನೇ ಮಕ್ಕಳು ಕಲಿಯುತ್ತಾರೆ. ವಿದ್ಯಾ ದದಾತಿ ವಿನಯಂ, ವಿನಯಾದ್ಯಾತಿ ಪಾತ್ರತಾಮ್, ಪಾತ್ರತ್ವಾತ್ ಧನಮಾಪ್ನೋತಿ, ಧನಾದ್ಧರ್ಮಂ ತತಃ ಸುಖಮ್ ಎಂಬ ಶ್ಲೋಕ ನನಗೆ ಈಗಲೂ ನೆನಪಿದೆ. ಇದರ ಅರ್ಥ, ಮನುಷ್ಯನಿಗೆ ವಿದ್ಯೆ ಇದ್ದರೆ ವಿನಯ ಇರುತ್ತದೆ. ವಿನಯದಿಂದ ಯೋಗ್ಯತೆ, ಯೋಗ್ಯತೆಯಿಂದ ಹಣ, ಹಣದಿಂದ ಧರ್ಮ, ಧರ್ಮದಿಂದ ಸುಖ ಸಿಗುತ್ತದಂತೆ. ಮನುಷ್ಯ ನ್ಯಾಯಾ ನೀತಿಯಿಂದ ನಡೆದು ಸುಖವಾಗಿರಬೇಕಾದರೆ ಇದಕ್ಕೆ ಮೂಲ ವಿದ್ಯೆ” ಎಂದು ತಿಳಿಸಿದರು.
“ವಿದ್ಯೆ ಎಂಬುದು ಗುಪ್ತ ನಿಧಿ. ಇದನ್ನು ಯಾರೂ ಕದಿಯಲು ಆಗುವುದಿಲ್ಲ, ಬೆಂಕಿಯಲ್ಲಿ ಸುಡಲೂ ಆಗುವುದಿಲ್ಲ, ನೀರಿನಲ್ಲಿ ನೆನೆಸಲು ಆಗದ ನಿಧಿ ಇದು. ಈ ಗುಪ್ತ ನಿಧಿಯನ್ನು ನೀವು ನಮ್ಮ ಮಕ್ಕಳಿಗೆ ಸರಿಯಾಗಿ ನೀಡಿ, ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ಮಾಡುವಂತೆ ತಯಾರು ಮಾಡಬೇಕು. ನಾವು ನಮ್ಮ ಮೂಲ ಮರೆತರೆ ಯಶಸ್ಸು ಸಾಧಿಸುವುದಿಲ್ಲ ಎಂದು ನಂಬಿದ್ದೇನೆ. ಇದನ್ನೇ ಮಕ್ಕಳಿಗೂ ಹೇಳುತ್ತೇನೆ. ನೀವು ಓದಿದ ಶಾಲೆ, ಕಲಿಸಿದ ಗುರು, ಬೆಳೆಸಿದ ಪೋಷಕರನ್ನು ನೀವು ಸ್ಮರಿಸಬೇಕು. ತಾಯಿ ಉಸಿರು ಕೊಟ್ಟರೆ, ತಂದೆ ಹೆಸರು ನೀಡುತ್ತಾನೆ. ಆದರೆ ಗುರು ಉಸಿರಿರುವವರೆಗೂ ಹೆಸರು ಕಾಪಾಡುವ ಶಕ್ತಿ ನೀಡುತ್ತಾನೆ” ಎಂದು ತಿಳಿಸಿದರು.
ಸಿಎಸ್ ಅರ್ ಅನುದಾನದಲ್ಲಿ ಶಾಲೆಗಳ ನಿರ್ಮಾಣಕ್ಕೆ ಹೊಸ ತೀರ್ಮಾನ
ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 50 ಸಾವಿರ ಶಿಕ್ಷಕರ ಕೊರತೆ ಇದೆ. ಇಂದು ಎಲ್ಲಾ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುತ್ತಿದ್ದಾರೆ. ನಾವುಗಳು ಇದನ್ನು ತಡೆಯಬೇಕು. ನಾನು ಕೂಡ ಶಿಕ್ಷಣಕ್ಕಾಗಿ ಬೆಂಗಳೂರಿಗೆ ಹೋದೆ. ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಹಾಗೂ ಉದ್ಯೋಗಕ್ಕಾಗಿ ಬೆಂಗಳೂರಿಗೆ ವಲಸೆ ಹೋಗುತ್ತಿದ್ದಾರೆ. ಇದನ್ನು ತಪ್ಪಿಸಲು ನಾವು ಸಿಎಸ್ ಅರ್ ಅನುದಾನದಲ್ಲಿ ಶಾಲೆಗಳ ನಿರ್ಮಾಣಕ್ಕೆ ಹೊಸ ತೀರ್ಮಾನ ಮಾಡಿದ್ದೇವೆ.
“ಮುಂದಿನ ಸಚಿವ ಸಂಪುಟದಲ್ಲಿ ಸಿಎಸ್ ಆರ್ ಅನುದಾನದಿಂದ ಶಾಲೆಗಳ ನಿರ್ಮಾಣದ ಬಗ್ಗೆ ಮಹತ್ವದ ತೀರ್ಮಾನ ಮಾಡಲಾಗುವುದು. ಯಾರು ಶಾಲೆ ನಿರ್ಮಾಣ ಮಾಡುತ್ತಾರೋ ಅವರ ಕಂಪೆನಿಯ ಹೆಸರನ್ನೇ ಇಟ್ಟುಕೊಳ್ಳಬಹುದು ಎಂದು ಹೇಳಿದ್ದೇವೆ. ಆದರೆ ಅತ್ಯುತ್ತಮ ಕಟ್ಟಡ ನಿರ್ಮಾಣ ಮಾಡಬೇಕು ಹಾಗೂ ನಗರ ಮಾದರಿಯಲ್ಲಿ ಸಿಬಿಎಸ್ ಇ ಶಿಕ್ಷಣ ದೊರೆಯಬೇಕು ಎಂಬುದು ನಮ್ಮ ಆಶಯ. ಈಗಾಗಲೇ ಒಂದಷ್ಟು ಶಾಲೆಗಳು ಪ್ರಾರಂಭವಾಗಿವೆ. ಸುಮಾರು 2 ಸಾವಿರ ಶಾಲೆ ನಿರ್ಮಾಣ ನಮ್ಮ ಗುರಿ” ಎಂದರು.
“ಇತ್ತೀಚೆಗೆ ಪತ್ರಿಕೆಯಲ್ಲಿ ಒಂದು ವರದಿ ಓದಿದೆ. ಸರ್ಕಾರಿ ಶಾಲೆಗಳನ್ನು ತೊರೆದು ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುತ್ತಿದ್ದಾರೆ ಎಂದು. ಅದಕ್ಕೆ ನಾವು ಸಿಎಸ್ ಆರ್ ಹಣದ ತೊಡಗಿಸುವಿಕೆಗೆ ಪ್ರೋತ್ಸಾಹ ನೀಡುತ್ತಿದ್ದೇವೆ. ನಮ್ಮ ರಾಜ್ಯದಲ್ಲಿ 7,800 ಕೋಟಿಯಷ್ಟು ಸಿಎಸ್ ಆರ್ ಹಣ ಲಭ್ಯವಿದೆ ಎಂದು ವರದಿಗಳು ಹೇಳುತ್ತವೆ. ಒಂದಷ್ಟು ಜನ ಉದ್ಯಮಿಗಳು ಇನ್ನೂ ಮನಸು ಮಾಡಿಲ್ಲ. ಕನಕಪುರದಲ್ಲಿ ಟೊಯೋಟಾ ಹಾಗೂ ಪ್ರೆಸ್ಟೀಜ್, ಬಾಷ್ ಸೇರಿದಂತೆ ಇತರೆ ಸಂಸ್ಥೆಗಳ ಮೂಲಕ 10-15 ಕಡೆಗಳಲ್ಲಿ ಶಾಲೆಗಳ ನಿರ್ಮಾಣ ಕಾರ್ಯ ಆರಂಭವಾಗಿದೆ. ಇವೆಲ್ಲವೂ ಸರ್ಕಾರಿ ಶಾಲೆಗಳು. ನಾನು ನಮ್ಮ ಊರಿನಲ್ಲಿ ಮೂರು ಶಾಲೆಗಳನ್ನು ದತ್ತು ತೆಗೆದುಕೋ ಎಂದು ಮಗಳಿಗೆ ಸೂಚನೆ ನೀಡಿದ್ದೇನೆ. ಈ ಮಾದರಿಯನ್ನು ಇಡೀ ರಾಜ್ಯಾದ್ಯಂತ ವಿಸ್ತರಣೆ ಮಾಡಲು ತೀರ್ಮಾನಿಸಿದ್ದೇವೆ” ಎಂದರು.
“ಉತ್ತಮ ಶಿಕ್ಷಣ ಆಯಾಯ ಊರಿನಲ್ಲಿಯೇ ದೊರೆಯಬೇಕು. ಇಲ್ಲದಿದ್ದರೆ ವಲಸೆ ತಡೆಯಲು ಆಗುವುದಿಲ್ಲ. ನನ್ನನ್ನು ಶಿಕ್ಷಣಕ್ಕಾಗಿ ಬೆಂಗಳೂರಿಗೆ ನಮ್ಮ ತಂದೆ ತಾಯಿ ಕಳಿಸಿದರು. ನಾನು ಮರಳಿ ಊರಿಗೆ ಹೋಗಲೇ ಇಲ್ಲ. ಅದಕ್ಕೆ ಗ್ರಾಮೀಣ ಭಾಗದಲ್ಲಿ ಮೂರು ಪಂಚಾಯತಿಗಳು ಸೇರಿದಂತೆ ಒಂದು ಕೆಪಿಎಸ್ ಶಾಲೆ ನಿರ್ಮಾಣ ಮಾಡಲಾಗುತ್ತದೆ” ಎಂದರು.
ಕೊಪ್ಪಳದಲ್ಲಿ 2,345 ಕೋಟಿ ವೆಚ್ಚದ ಉಕ್ಕು ಘಟಕ ಸ್ಥಾಪನೆ: ಸಚಿವ ಎಂ.ಬಿ ಪಾಟೀಲ್
BREAKING: ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆಯ ನೂತನ ನಿರ್ದೇಶಕರಾಗಿ ಡಾ.ದಿನೇಶ್ ನೇಮಕ