ಬೆಂಗಳೂರು: ರಾಜ್ಯದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಶಿಕ್ಷಕರು ಪಾಲ್ಗೊಂಡಿರುವ ಕಾರಣ ಏಕಕಾಲದಲ್ಲಿ ವರ್ಗಾವಣೆ ಕೌನ್ಸೆಲಿಂಗ್ ಹಾಗೂ ಸಮೀಕ್ಷೆಯಲ್ಲಿ ತೊಡಗಿಸಿಕೊಳ್ಳಲು ಸಮಸ್ಯೆಯಾಗಲಿದೆ. ಈ ಕಾರಣದಿಂದ ಗುರುವಾರದಿಂದ ಆರಂಭವಾಗಬೇಕಿದ್ದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್ ಅನ್ನು ಶಿಕ್ಷಣ ಇಲಾಖೆ ಮುಂದೂಡಿದೆ.
ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು [ಶಿಕ್ಷಕರ ವರ್ಗಾವಣೆ ನಿಯಂತ್ರಣ] ಅಧಿನಿಯಮ-2020 [2020ರ ಕರ್ನಾಟಕ ಅಧಿನಿಯಮ ಸಂಖ್ಯೆ:04] ಹಾಗೂ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು [ಶಿಕ್ಷಕರ ವರ್ಗಾವಣೆ ನಿಯಂತ್ರಣ] ನಿಯಮಗಳು-2020ರ ಹಾಗೂ ವರ್ಗಾವಣಾ ತಿದ್ದುಪಡಿ ಕಾಯ್ದೆ ಮತ್ತು ನಿಯಮಗಳು-2022ರ ಪ್ರಕಾರ ಶಾಲಾ ಶಿಕ್ಷಣ ಇಲಾಖೆಯ ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರನ್ನು ಒಳಗೊಂಡಂತೆ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕ ವೃಂದ/ತತ್ಸಮಾನ ವೃಂದದ ಶಿಕ್ಷಕರು ಮತ್ತು ಸರ್ಕಾರಿ ಪ್ರೌಢ ಶಾಲಾ ಸಹ ಶಿಕ್ಷಕರು/ತತ್ಸಮಾನ ವೃಂದ, ದೈಹಿಕ ಶಿಕ್ಷಣ ಶಿಕ್ಷಕರು ಮತ್ತು ವಿಶೇಷ ಶಿಕ್ಷಕರುಗಳಿಗೆ ಕೋರಿಕೆ/ಪರಸ್ಪರ ವರ್ಗಾವಣೆ ಕೌನ್ಸಿಲಿಂಗ್ ನಡೆಸುವ ಸಂಬಂಧ ದಿನಾಂಕ: 19/09/2025 ರಲ್ಲಿ ಪರಿಷ್ಕೃತ ವರ್ಗಾವಣಾ ವೇಳಾಪಟ್ಟಿ-4 ಪ್ರಕಟಿಸಲಾಗಿತ್ತು.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ವತಿಯಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2025 ನಡೆಯುತಿದ್ದು, ಇದರಲ್ಲಿ ಬಹುತೇಕ ಶಿಕ್ಷಕರು ಸಮೀಕ್ಷಾ ಕಾರ್ಯದಲ್ಲಿ ಪಾಲ್ಗೊಂಡಿರುವುದರಿಂದ, ಶಿಕ್ಷಕರು ವರ್ಗಾವಣೆ ಕೌನ್ಸಿಲಿಂಗ್‌ಗೆ ಹಾಜರಾಗಲು ಮತ್ತು ಸಮೀಕ್ಷೆಯನ್ನು ಏಕ ಕಾಲದಲ್ಲಿ ನಡೆಸಲು ಸಮಸ್ಯೆಯಾಗುವುದರಿಂದ ದಿನಾಂಕ: 25/09/2025 ರಿಂದ ಪ್ರಾರಂಭವಾಗಬೇಕಾಗಿದ್ದ ಎಲ್ಲಾ ವರ್ಗಾವಣಾ ಕೌನ್ಸಿಲಿಂಗ್ ಪ್ರಕ್ರಿಯೆಯನ್ನು ಮುಂದೂಡಲಾಗಿದೆ. ಮುಂದಿನ ಎಲ್ಲಾ ರೀತಿಯ ಕೌನ್ಸಿಲಿಂಗ್ ದಿನಾಂಕಗಳನ್ನು ಪರಿಷ್ಕೃತ ವರ್ಗಾವಣಾ ವೇಳಾಪಟ್ಟಿಯಲ್ಲಿ ಮುಂದೆ ಪ್ರಕಟಿಸಲಾಗುವುದು. ಈ ಮಾಹಿತಿಯನ್ನು ಶಿಕ್ಷಕರುಗಳಿಗೆ ತಿಳಿಸಲು ಸೂಚಿಸಿದೆ.