ಬೆಂಗಳೂರು: ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿದ್ದಂತ ಬೋಧಕ ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರ ಅನುಮತಿ ನೀಡಿತ್ತು. ಅಲ್ಲದೇ ಆರ್ಥಿಕ ಇಲಾಖೆಯೂ ಗ್ರೀನ್ ಸಿಗ್ನಲ್ ನೀಡಿತ್ತು. ಆದರೇ ಹುದ್ದೆಗಳನ್ನು ತುಂಬಿಕೊಳ್ಳಲು ತಂತ್ರಾಂಶದ 1ನೇ ಮತ್ತು 2ನೇ ಹಂತವನ್ನು ಬಿಡುಗಡೆಗೊಳಿಸಿರಲಿಲ್ಲ. ಈ ತಂತ್ರಾಂಶ ಬಿಡುಗಡೆಗೆ ಸಚಿವ ಹೆಚ್.ಸಿ ಮಹದೇವಪ್ಪ ಅವರನ್ನು ಭೇಟಿಯಾಗಿ ಶಿಕ್ಷಕರ ಸಂಘಟನೆ ಮನವಿ ಮಾಡಿದೆ.
ಈ ಸಂಬಂಧ ಸಮಾಜಕಲ್ಯಾಣ ಸಚಿವ ಹೆಚ್.ಸಿ ಮಹದೇವಪ್ಪ ಅವರನ್ನು ಭೇಟಿಯಾಗಿರುವಂತ ರಾಜ್ಯ ಅನುದಾನಿತ ಶಿಕ್ಷಣ ಸಂಸ್ಥೆಗಳ, ಅನುದಾನ ರಹಿತ ಶಿಕ್ಷಕರ ಸಂಘಟನೆಯ ಅಧ್ಯಕ್ಷ ತಿಪ್ಪೇಸ್ವಾಮಿ ಜಿ ಬಳ್ಳಾರಿಯ ನೇತೃತ್ವದ ಶಿಕ್ಷಕರು ಮನವಿ ಮಾಡಿದ್ದಾರೆ.
ಸಚಿವರಿಗೆ ಸಲ್ಲಿಸಿದ ಮನವಿಯಲ್ಲಿ ಏನಿದೆ.?
ನಾವು ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರಾಗಿ ಕಳೆದ 8-9 ವರ್ಷಗಳಿಂದ ಸೇವೆಸಲ್ಲಿಸುತ್ತಿದ್ದು, ಸರ್ಕಾರದಿಂದ ಹಾಗೂ ಆಡಳಿತ ಮಂಡಳಿಯಿಂದ ಯಾವುದೇ ರೀತಿಯ ವೇತನವಿಲ್ಲದೆ, ಉಚಿತವಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ನಿಸ್ವಾರ್ಥದಿಂದ ಸೇವೆ ಸಲ್ಲಿಸುತ್ತಾ ಬಂದಿರುತ್ತೇವೆ. ನಾವೆಲ್ಲರೂ ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ, ಸರ್ಕಾರದ ಆರ್ಥಿಕ ಇಲಾಖೆಯು 2016 ರಿಂದ 2020 ರವರೆಗೆ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ನಿವೃತ್ತಿ, ನಿಧನ, ರಾಜೀನಾಮೆ & ಇತರೇ ಕಾರಣಗಳಿಂದ ತೆರವಾಗಿರುವ ಹುದ್ದೆಗಳನ್ನು ತುಂಬಿಕೊಳ್ಳಲು ದಿನಾಂಕ 07-08-2024ರಂದು ಅನುಮತಿ ನೀಡಿರುತ್ತದೆ. ಆದರೆ ಐದಾರು ಗತಿಸಿದರೂ ಇದುವರಗೆ ಪ್ರಧಾನ ಕಾರ್ಯದರ್ಶಿಗಳು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಬೆಂಗಳೂರು, ಹಾಗೂ ಆಯುಕ್ತರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಬೆಂಗಳೂರು ಅವರು ಹುದ್ದೆ ತುಂಬಲು ಅನುಮತಿ ನೀಡಿರುವುದಿಲ್ಲ.
ಈ ಬಗ್ಗೆ ಕೇಳಿದಾಗ ‘ಒಳ ಮಿಸಲಾತಿ ವರದಿ ಬರುವ ತನಕ ಯಾವುದೇ ನೇಮಕಾತಿ ಇಲ್ಲ’ ಎಂದು ತಿಳಿಸಿರುತ್ತಾರೆ. ಇದರಿಂದ ನಾವು ಮತ್ತು ರಾಜ್ಯಾದ್ಯಂತ ನಮ್ಮಂತಹ ಸಾವಿರಾರು ಶಿಕ್ಷಕರು ಆತಂಕದಲ್ಲಿ ಇದ್ದೇವೆ. ಸುಮಾರು 8-9 ವರ್ಷಗಳಿಂದ ನೇಮಕಾತಿ ನಿರೀಕ್ಷೆಯಲ್ಲಿಯೇ ವೇತನ ರಹಿತವಾಗಿ, ನಿಸ್ವಾರ್ಥತೆಯಿಂದ ಹಾಗೂ ವಿದ್ಯಾರ್ಥಿಗಳ ಏಳಿಗೆಯನ್ನು ಗಮನದಲ್ಲಿಟ್ಟುಕೊಂಡು ಇಲ್ಲಿಯವರೆಗೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತ ಬಂದಿರುತೇವೆ. ನಮ್ಮಲ್ಲಿ ಕೆಲವು ಶಿಕ್ಷಕರ ನೇಮಕಾತಿ ವಯೋಮಿತಿ ಮೀರುತ್ತ ಬಂದಿರುತ್ತದೆ. ನಮಗೆ ಯಾವುದೇ ರೀತಿಯ ವೇತನವಿಲ್ಲದೆ ಜೀವನ ನಡೆಸಲು ಕಷ್ಟಕರವಾಗಿದೆ. ದಿನದ ಒಂದು ಹೊತ್ತಿನ ಊಟ ಮಾಡುವಾಗಲೂ ಯೋಚಿಸಿ ತಿನ್ನುವ ಪರಿಸ್ಥಿತಿ ಬಂದಿದೆ. ಸಾವಿರಾರು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಶಿಕ್ಷಕರು, ತಮ್ಮ ಹಾಗೂ ತಮ್ಮ ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಅಸಹಾಯಕರಾಗಿದ್ದೇವೆ ಎಂಬುದಾಗಿ ಅಳಲು ತೋಡಿಕೊಂಡಿದ್ದಾರೆ.
ಹೀಗಾಗಿ ನಮ್ಮಂತ ಅನೇಕ ಶಿಕ್ಷಕರು ಶಿಕ್ಷಕ ವೃತ್ತಿಯಿಂದ ಜಿಗುಪ್ಸೆ ಬಾರದಂತೆ ಹಾಗೂ ಜೀವ & ಜೀವನವನ್ನು ಕಳೆದುಕೊಳ್ಳದಂತೆ, ನಮ್ಮ ಮುಂದಿನ ಜೀವನ ರೂಪಿಸಿಕೊಳ್ಳುವುದಕ್ಕೆ ತಾವುಗಳು ಕರುಣೆ ತೋರಿಸಿ, 2016 ರಿಂದ 2020 ವರೆಗೆ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಇರುವ ಬೋಧಕರ ಹುದ್ದೆಗಳನ್ನು ತುಂಬಿಕೊಳ್ಳಲು ಅವಕಾಶ ನಿಡಬೇಕೆಂದು ಕೋರಿದ್ದಾರೆ.
ಆಯುಕ್ತರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಬೆಂಗಳೂರು ಅವರು ಸಮಾಜ ಕಲ್ಯಾಣ ಇಲಾಖಾ ಪ್ರಧಾನ ಕಾರ್ಯದರ್ಶಿಗಳಿಗೆ ಬರೆದ, ದಿನಾಂಕ 02-01-2025ರ ತಮ್ಮ ಪತ್ರದಲ್ಲಿ “2016 ರಿಂದ 2020 ವರೆಗೆ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಇರುವ ಬೋಧಕರ ಹುದ್ದೆಗಳನ್ನು ತುಂಬಿಕೊಳ್ಳಲು ಈಗಾಗಲೇ ತಂತ್ರಾಂಶದ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದ್ದು, ಅದರಲ್ಲಿ ಮೊದಲ ಮತ್ತು ಎರಡನೇ ಹಂತದ ಅಭಿವೃದ್ಧಿ ಕಾರ್ಯ ಪೂರ್ಣಗೊಂಡಿರುವುದಾಗಿ ತಿಳಿಸಿರುತ್ತಾರೆ. ಮೊದಲನೇ ಹಂತಗಳಲ್ಲಿ ಯಾವುದೇ ರೋಸ್ಟರ್ ಬಿಂದು ನಿಗದಿಪಡಿಸುವ ಪ್ರಕ್ರಿಯೆದಿರುವುದಿಲ್ಲ ಎಂದೂ ಹೇಳಿರುತ್ತಾರೆ ಎಂಬುದಾಗಿ ಸಚಿವರ ಗಮನಕ್ಕೆ ತಂದಿದ್ದಾರೆ.
ಆದ್ದರಿಂದ ದಯಾಮಾಡಿ ಒಳಮೀಸಲಾತಿ ವರದಿ ಬರುವ ತನಕ ವಿಳಂಬ ಮಾಡದೇ ಶಿಕ್ಷಣದ ಮೇಲಿನ ಕಾಳಜಿಯಿಂದ ಮತ್ತು ಆಪತ್ತಿನಲ್ಲಿರುವ ಅನುದಾನ ರಹಿತ ಶಿಕ್ಷಕರಾದ ನಮ್ಮಗಳ ಹಿತದೃಷ್ಠಿಯಿಂದ, ನೇಮಕಾತಿ ಪ್ರಕ್ರಿಯೆಯ ಮೊದಲ ಮತ್ತು ಎರಡನೇ ಹಂತದ ಪ್ರಕ್ರಿಯೆಯನ್ನು ನಡೆಸಲು ಶಿಕ್ಷಣ ಇಲಾಖೆಗೆ ಮತ್ತು ಅವಶ್ಯಕ ದಾಖಲೆಗಳೊಂದಿಗೆ ಶಿಕ್ಷಣ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲು ಆಡಳಿತ ಮಂಡಳಿಗಳಿಗೆ ಅನುಮತಿ ನೀಡಲು ಅವಕಾಶ ನೀಡಬೇಕು ಕೋರಿದ್ದಾರೆ.
ಇನ್ನೂ ಆರಂಭಿಕ ಪ್ರಕ್ರಿಯೆಗಳಾದ ಅರ್ಜಿಗಳನ್ನು ಸ್ವೀಕಾರ ಮಾಡುವ ಮತ್ತು ಅವುಗಳನ್ನು ಪರಿಶೀಲನೆ ಮಾಡುವ ತಂತ್ರಾಂಶದ 1ನೇ ಹಂತ ಮತ್ತು 2ನೇ ಹಂತದಲ್ಲಿ ಯಾವುದೇ ರೋಸ್ಟರ್ ಬಿಂದುವನ್ನು ನಿಗದಿಪಡಿಸುವ ಪ್ರಕ್ರಿಯೆ ಇಲ್ಲದಿರುವುದರಿಂದ ಈ ಹಂತದವರೆಗಿನ ತಂತ್ರಾಂಶ ಬಿಡುಗಡೆಗೆ ಅವಕಾಶ ಮಾಡಿಕೂಡಬೇಕೆಂದು ಮತ್ತು ಈ ಕುರಿತು ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಅನುದಾನಿತ ಶಾಲೆಗಳ, ಅನುದಾನ ರಹಿತ ಶಾಲೆಗಳ ಶಿಕ್ಷಕರ ಸಂಘಟನೆಯಿಂದ ಸಚಿವ ಹೆಚ್.ಸಿ ಮಹದೇವಪ್ಪ ಅವರಿಗೆ ವಿನಂತಿ ಮಾಡಿದೆ.
ಸಚಿವ ಹೆಚ್.ಸಿ ಮಹದೇವಪ್ಪ ಅಲ್ಲದೇ ಪರಿಷತ್ ಸದಸ್ಯರಾದಂತ ಡಿಟಿ.ಶ್ರೀನಿವಾಸ್, ಪುಟ್ಟಣ್ಣ ಸೇರಿದಂತೆ ಇತರೆ ಮುಖಂಡರನ್ನು ಅನುದಾನಿತ, ಅನುದಾನ ರಹಿತ ಶಾಲೆಗಳ ಶಿಕ್ಷಕರ ಸಂಘಟನೆಯ ಶಿಕ್ಷಕರು ಭೇಟಿಯಾಗಿ, ಶೀಘ್ರವೇ ಅನುದಾನಿತ ಶಾಲೆಗಳಲ್ಲಿನ ಖಾಲಿ ಹುದ್ದೆಗಳ ಭರ್ತಿ ಪ್ರಕ್ರಿಯೆ ಆರಂಭಿಸುವಂತೆ ಸರ್ಕಾರದ ಮೇಲೆ ಒತ್ತಡ ಹಾಕುವಂತೆ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಶಿಕ್ಷಕರ ಸಂಘಟನೆಯ ಕಾರ್ಯದರ್ಶಿಗಳು ಗುರು, ಉಪಾಧ್ಯಕ್ಷ ರಾಜೇಶ್, ಸಂಘಟನೆಯ ಸಂಚಾಲಕರು ಸತೀಶ್, ನೆಲ್ಸನ್, ಸಂಘಟನೆಯ ಮಹಿಳಾ ಕಾರ್ಯದರ್ಶಿಗಳು ಅನ್ನಪೂರ್ಣ, ದಿವ್ಯ, ವೀರೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
‘PM ಜನ್ ಮನ್ ಯೋಜನೆ’ಗೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯ ‘ಪೂವನಹಳ್ಳಿ’ ಆಯ್ಕೆ: HDK ಘೋಷಣೆ
BIG NEWS: ರಾಜ್ಯದಲ್ಲಿ ಹೆಚ್ಚಾದ ಬಡ್ಡಿ ದಂಧೆಕೋರರ ಕಿರುಕುಳ: ಲಾರಿಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ