ಜೈಪುರ: ರಾಜಸ್ಥಾನದಲ್ಲಿ ಟ್ರಾಫಿಕ್ ಪೊಲೀಸರ ವಿಚಿತ್ರ ಎಡವಟ್ಟೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಪರಿಸರ ಸ್ನೇಹಿ ಮತ್ತು ಹೊಗೆಯೇ ಬಿಡದ ಟಾಟಾ ತಿಯಾಗೊ ಇವಿ (Tata Tiago EV) ಕಾರಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (PUC) ಇಲ್ಲ ಎಂಬ ಕಾರಣ ನೀಡಿ ಪೊಲೀಸರು ದಂಡ ವಿಧಿಸಿರುವುದು ಈಗ ಸಾರ್ವಜನಿಕರ ಹಾಸ್ಯಕ್ಕೆ ಕಾರಣವಾಗಿದೆ.
ರಾಜಸ್ಥಾನದ ಹೆದ್ದಾರಿಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸರು ಟಾಟಾ ತಿಯಾಗೊ ಎಲೆಕ್ಟ್ರಿಕ್ ಕಾರನ್ನು ತಡೆದಿದ್ದಾರೆ. ಚಾಲಕನ ಬಳಿ ದಾಖಲೆಗಳನ್ನು ಕೇಳಿದಾಗ, ಎಲ್ಲಾ ದಾಖಲೆಗಳಿದ್ದರೂ ‘ಪೊಲ್ಯೂಷನ್ ಸರ್ಟಿಫಿಕೇಟ್’ ಇಲ್ಲ ಎಂದು ಪೊಲೀಸರು ವಾದಕ್ಕಿಳಿದಿದ್ದಾರೆ. ಇದು ಎಲೆಕ್ಟ್ರಿಕ್ ಕಾರು, ಇದಕ್ಕೆ ಸೈಲೆನ್ಸರ್ ಇರುವುದಿಲ್ಲ ಮತ್ತು ಹೊಗೆ ಬಿಡುವುದಿಲ್ಲ ಎಂದು ಚಾಲಕ ಎಷ್ಟು ವಿವರಿಸಿದರೂ ಕೇಳದ ಪೊಲೀಸರು, ಕೊನೆಗೆ ದಂಡದ ಚಲನ್ ಹರಿದಿದ್ದಾರೆ.
ಕಾರಿನ ಚಾಲಕ ಇಡೀ ಘಟನೆಯನ್ನು ತನ್ನ ಮೊಬೈಲ್ನಲ್ಲಿ ಚಿತ್ರೀಕರಿಸಿದ್ದು, ಅದರಲ್ಲಿ ಪೊಲೀಸರು “ನಮಗೆ ರೂಲ್ಸ್ ಗೊತ್ತಿದೆ, ಪೇಪರ್ ಇಲ್ಲದಿದ್ದರೆ ದಂಡ ಕಟ್ಟಲೇಬೇಕು” ಎಂದು ವಾದಿಸುತ್ತಿರುವುದು ಕಂಡುಬಂದಿದೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರು ಪೊಲೀಸರ ಜ್ಞಾನವನ್ನು ಲೇವಡಿ ಮಾಡುತ್ತಿದ್ದಾರೆ. “ಮುಂದಿನ ಬಾರಿ ಸೈಕಲ್ಗಳಿಗೂ ಮಾಲಿನ್ಯ ಪತ್ರ ಕೇಳಬಹುದು!” ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.
ಭಾರತದ ಮೋಟಾರು ವಾಹನ ಕಾಯ್ದೆಯ ಪ್ರಕಾರ, ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ವಾಹನಗಳಿಗೆ (EV) ಮಾಲಿನ್ಯ ಪರೀಕ್ಷೆಯ ಅಗತ್ಯವಿಲ್ಲ. ಏಕೆಂದರೆ ಇವುಗಳು ಯಾವುದೇ ಇಂಧನ ದಹನ ಮಾಡುವುದಿಲ್ಲ.








