ಮೈಸೂರು : ಈ ವರ್ಷದ ಮಾನ್ಸೂನ್‌ ಚುರುಕಾಗಿದ್ದು, ರಾಜ್ಯದ 1763 ಗ್ರಾಮಗಳಲ್ಲಿ ಅತಿವೃಷ್ಟಿ ಉಂಟಾಗುವ ಸಾಧ್ಯತೆ ಇದೆ ಎಂದು ಗುರುತಿಸಲಾಗಿದೆ. ಅಲ್ಲದೆ, ಪ್ರವಾಹ ಪರಿಸ್ಥಿತಿ ನಿಯಂತ್ರಿಸಲು ಪ್ರತಿಯೊಂದು ಸಮಸ್ಯಾತ್ಮಕ ಪಂಚಾಯತ್‌ ಮಟ್ಟದಲ್ಲಿ ಟಾಸ್ಕ್‌ಫೋರ್ಸ್‌ ರಚಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.

ಮಂಗಳವಾರ ಮೈಸೂರಿನ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಮೈಸೂರು ವಿಭಾಗದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ ಈ ವರ್ಷದ ಮಾನ್ಸೂನ್‌ನಲ್ಲಿ ರಾಜ್ಯದ 1763 ಗ್ರಾಮಗಳಲ್ಲಿ ಅತಿವೃಷ್ಟಿ ಉಂಟಾಗುವ ಸಾಧ್ಯತೆ ಇದೆ ಎಂದು ಗುರುತಿಸಲಾಗಿದೆ. ಎಲ್ಲಾ ಜಿಲ್ಲಾಧಿಕಾರಿಗಳಿಗೂ ಅವರ ಜಿಲ್ಲೆಯ ಯಾವ ಭಾಗದ ಯಾವ ಗ್ರಾಮದಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆ ಇದೆ ಎಂದು ಈಗಾಗಲೇ ಸಮಸ್ಯಾತ್ಮಕ ಗ್ರಾಮ ಪಂಚಾಯಿತಿಗಳ ಸಂಭವನೀಯ ಪಟ್ಟಿ ನೀಡಲಾಗಿದೆ.

ಅಲ್ಲದೆ, ಪ್ರತಿಯೊಂದು ವಾರವೂ ಅವರಿಗೆ ಮುಂದಿನ 7 ರಿಂದ 9 ದಿನಗಳ ವರೆಗಿನ ಹವಾಮಾನ ವರದಿಯನ್ನೂ ಒದಗಿಸುವ ವ್ಯವಸ್ಥೆ ಮಾಡಲಾಗಿದೆ. ಈ ಮಾಹಿತಿಯ ಆಧಾರದಲ್ಲಿ ಜಿಲ್ಲಾಧಿಕಾರಿಗಳು ಪ್ರತಿಯೊಂದು ಸಮಸ್ಯಾತ್ಮಕ ಗ್ರಾಮ ಪಂಚಾಯಿತಿಯಲ್ಲೂ ಅಧಿಕಾರಿಗಳ ಟಾಸ್ಕ್‌ಫೋರ್ಸ್‌ ರಚಿಸಿ ಮುನ್ನೆಚ್ಚರಿಕಾ ಕ್ರಮ ಜರುಗಿಸಬೇಕು ಎಂದು ಸೂಚನೆ ನೀಡಿರುವುದಾಗಿ ತಿಳಿಸಿದರು.

ನಾಡಿನ ಯಾವುದೇ ಭಾಗದಲ್ಲಿ ಸಮಸ್ಯೆ ಕಂಡು ಬಂದ ನಂತರ ಸರ್ಕಾರ ಪರಿಹಾರ ಕ್ರಮ ಜರುಗಿಸುವುದು ಸಾಮಾನ್ಯ. ಆದರೆ, ಸಮಸ್ಯೆ ಕಂಡು ಬರುವ ಮುನ್ನೆಚ್ಚರಿಕೆ ಕ್ರಮ ಜರುಗಿಸುವುದು ಹಾಗೂ ಜನ-ಜಾನುವಾರುಗಳ ಜೀವಗಳನ್ನು ಉಳಿಸುವುದು ಸರ್ಕಾರದ ಕರ್ತವ್ಯ. ಆ ನಿಟ್ಟಿನಲ್ಲಿ ಟಾಸ್ಕ್‌ಫೋರ್ಸ್‌ ರಚನೆಗೆ ಮುಂದಾಗಿದ್ದು, ಈ ಟಾಸ್ಕ್‌ಫೋರ್ಸ್‌ನಲ್ಲಿ ಕಂದಾಯ ಇಲಾಖೆ ನೌಕರರು, ಪಂಚಾಯತ್‌ ರಾಜ್‌ ಇಂಜಿನಯರ್‌ ವಿಭಾಗ, ಅಗ್ನಿಶಾಮಕ ವಿಭಾಗ, ಪೊಲೀಸ್‌ ಇಲಾಖೆ ಹಾಗೂ ಸಣ್ಣ ನೀರಾವರಿ ಅಧಿಕಾರಿಗಳು ಇರಲಿದ್ದಾರೆ. ಈ ತಂಡಕ್ಕೆ ವಿಕೋಪ ನಿರ್ವಹಣಾ ಕಾಯ್ದೆ ಅಡಿಯಲ್ಲಿ ಅಧಿಕಾರವನ್ನು ಪ್ರತ್ಯಾಯೋಜಿಸಲಾಗಿದ್ದು, ತಾಲೂಕು ಮಟ್ಟದ ಅಧಿಕಾರಿಯನ್ನು ನೋಡಲ್‌ ಅಧಿಕಾರಿಯನ್ನಾಗಿಯೂ ನೇಮಕ ಮಾಡಲಾಗುವುದು. ಈ ತಂಡ ಪ್ರವಾಹ ಉಂಟಾಗಬಹುದಾದ ಗ್ರಾಮಗಳಿಗೆ ತತಕ್ಷಣ ಭೇಟಿ ನೀಡಿ ಡ್ರಿಲ್‌ ನಡೆಸಬೇಕು, ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸೂಚಿಸಿರುವುದಾಗಿ ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.

ಟಾಸ್ಕ್‌ಫೋರ್ಸ್‌ಗೆ ಏನೆಲ್ಲಾ ಅಧಿಕಾರ?

ಯಾವುದೇ ಗ್ರಾಮದಲ್ಲಿ ಸತತ ಎರಡು-ಮೂರು ದಿನಕ್ಕೂ ಹೆಚ್ಚು ಮಳೆ ಬರುವ ಸಾಧ್ಯತೆ ಕಂಡುಬಂದಲ್ಲಿ ಟಾಸ್ಕ್‌ಫೋರ್ಸ್‌ ಅಂತಹ ಗ್ರಾಮಕ್ಕೆ ತೆರಳಿ ಮೊಕ್ಕಾಂ ಹೂಡಬೇಕು. ಪರಿಸ್ಥಿತಿಗೆ ತಕ್ಕಂತೆ ಕ್ರಮ ತೆಗೆದುಕೊಳ್ಳಬೇಕು. ಅಲ್ಲದೆ, ಪ್ರವಾಹ ಕಾರಣಕ್ಕೆ ಅಪಾಯ ಕಂಡುಬರುವ ಸಾಧ್ಯತೆ ಇದ್ದರೆ, ಹಳ್ಳ ಕಾಲಸಂಕ, ಸೇತುವೆ ಸೇರಿದಂತೆ ಯಾವುದೇ ಭಾಗಕ್ಕೆ ಜನರಿಗೆ ನಿರ್ಬಂಧ ಹೇರುವ ಅಧಿಕಾರ ಟಾಸ್ಕಕಪೋರ್ಸ್‌ಗೆ ಇರಲಿದೆ. ಇದರ ಜೊತೆಗೆ ಸಮಸ್ಯಾತ್ಮಕ ಗ್ರಾಮಗಳಲ್ಲಿ ಮಳೆಗೆ ಕುಸಿಯಬಹುದಾದ ಮನೆಗಳನ್ನು ಗುರುತಿಸಿ ಅಂತಹ ಮನೆಗಳಿಂದ ಜನರನ್ನು ಖಾಲಿ ಮಾಡಿಸುವ ಅಧಿಕಾರವನ್ನೂ ಟಾಸ್ಕ್‌ಫೋರ್ಸ್‌ ತಂಡಕ್ಕೆ ನೀಡಲಾಗಿದೆ.

ಅನಾಹುತಗಳು ಸಂಭವಿಸುವ ಮೊದಲೇ ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವ ಅಧಿಕಾರವನ್ನು ಟಾಸ್ಕ್‌ಫೋರ್ಸ್‌ಗೆ ನೀಡಲಾಗಿದ್ದು, ಸಾರ್ವಜನಿಕರು ಈ ನಿರ್ಧಾರಕ್ಕೆ ಸಹಕರಿಸಬೇಕು. ಟಾಸ್ಕ್‌ಫೊರ್ಸ್‌ ಜೊತೆ ಮಾರ್ಗದರ್ಶನದಲ್ಲಿ ಸುರಕ್ಷಿತವಾಗಿರಬೇಕು ಎಂದು ಅವರು ಜನರಲ್ಲಿ ಮನವಿ ಮಾಡಿಕೊಂಡರು.

ಕಾಳಜಿ ಕೇಂದ್ರಗಳ ರಚನೆಗೆ ಸೂಚನೆ

ಪ್ರವಾಹ ಸಾಧ್ಯತೆ ಇರುವ ತಾಲೂಕುಗಳಲ್ಲಿ ಶೀಘ್ರ ಕಾಳಜಿ ಕೇಂದ್ರಗಳನ್ನು ತೆರೆಯುವ ನಿಟ್ಟಿನಲ್ಲಿ ಮುಂಜಾಗರೂಕತೆಯ ಕ್ರಮವಾಗಿ ಸ್ಥಳ ಗುರುತಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.

ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರರ ಪಿ.ಡಿ. ಖಾತೆಗಳಲ್ಲಿ ಈಗಾಗಲೇ 787 ಕೋಟಿ ರೂ. ಹಣ ಇದ್ದು, ಈ ಹಣವನ್ನು ಪರಿಹಾರ ಹಾಗೂ ಕಾಳಜಿ ಕೇಂದ್ರಗಳ ಸ್ಥಾಪನೆಗೆ ಬಳಸಿಕೊಳ್ಳುವಂತೆ ಸೂಚಿಸಲಾಗಿದೆ. ಅಲ್ಲದೆ, ಅಗತ್ಯವಿದ್ದರೆ ರಾಜ್ಯ ಸರ್ಕಾರ ಮತ್ತಷ್ಟು ಹಣ ನೀಡಲು ಸಿದ್ದವಿದೆ ಎಂದೂ ಸಚಿವರು ಮಾಹಿತಿ ನೀಡಿದರು.

ವಿವಿಧ ಜಿಲ್ಲೆಗಳಲ್ಲಿ ವಿಪತ್ತು ನಿರ್ವಹಣಾ ದಳದ ತುಕಡಿ ಮೊಕ್ಕಾಂ

ಪ್ರವಾಹ ಸ್ಥಿತಿ ನಿಯಂತ್ರಣಕ್ಕಾಗಿ ಈಗಾಗಲೇ ದಕ್ಷಿಣ ಕನ್ನಡ, ಕೊಡಗು, ಬೆಳಗಾವಿ, ಬೆಂಗಳೂರಿನಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ ತುಕಡಿ ಮೊಕ್ಕಾಂ ಹೂಡಿದೆ. ರಾಯಚೂರಿನಲ್ಲೂ ಒಂದು ತುಕಡಿಯನ್ನು ನಿಯೋಜಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ಇದರ ಜೊತೆಗೆ ಬೆಂಗಳೂರು, ದಾವಣಗೆರೆ, ಬೆಳಗಾವಿ, ಕಲಬುರಗಿ ಹಾಗೂ ಮೈಸೂರು ಜಿಲ್ಲೆಗಳಲ್ಲಿ ರಾಜ್ಯ ವಿಪತ್ತು ದಳದ ತುಕಡಿಯನ್ನು ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದರು

ಅಲ್ಲದೆ, ಅತಿವೃಷ್ಟಿಯಿಂದ ಉಂಟಾಗಬಹುದಾದ ಸಮಸ್ಯೆಗಳನ್ನು ನಿಯಂತ್ರಿಸಲು ಮುಂಜಾಗ್ರತೆ ವಹಿಸಲಾಗಿದೆ. ಜನ ಜಾನುವಾರು ಪ್ರಾಣ ಹಾಗೂ ಜನರ ಆಸ್ತಿಯನ್ನು ಉಳಿಸುವ ನಿಟ್ಟಿನಲ್ಲಿ ಜವಾಬ್ದಾರಿಯುವ ಸರ್ಕಾರ ಏನೆಲ್ಲಾ ಮುಂಜಾಗ್ರತೆ ಕ್ರಮ ತೆಗೆದುಕೊಳ್ಳಬೇಕೋ ಆ ಎಲ್ಲಾ ಕ್ರಮಗಳನ್ನು ರಾಜ್ಯ ಸರ್ಕಾರ ತೆಗೆದುಕೊಂಡಿದೆ ಎಂದರು.

ಜಮೀನಿನ ಮಾಲೀಕತ್ವಕ್ಕೆ ನೆಮ್ಮದಿಯ ಗ್ಯಾರಂಟಿ…!

ರಾಜ್ಯದಾದ್ಯಂತ ಸುಮಾರು 4 ಕೋಟಿ ಆರ್‌ಟಿಸಿ ಮಾಲೀಕರಿದ್ದಾರೆ. ಈ ಪೈಕಿ 1.92 ಕೋಟಿ ಆರ್‌ಟಿಸಿದಾರರನ್ನು ಸಂಪರ್ಕಿಸಿ ಆ ಪೈಕಿ 1.20 ಕೋಟಿ ಆರ್‌ಟಿಸಿಗಳ್ನು ಒಟಿಪಿ (One Time Password) ಮೂಲಕ ಇಕೆವೈಸಿ ಮಾಡಲಾಗಿದೆ. ಇನ್ನೂ ಮೈಸೂರು ವಿಭಾಗದಲ್ಲಿ 1.37 ಕೋಟಿ ಆರ್‌ಟಿಸಿ ಮಾಲೀಕರಿದ್ದು ಈ ಪೈಕಿ 36 ಲಕ್ಷ ಆರ್‌ಟಿಸಿಗಳನ್ನು ಮಾತ್ರ ಆಧಾರ್‌ ಜೊತೆಗೆ ಜೋಡಿಸಲಾಗಿದೆ. ಅಂದರೆ ಶೇ. 35 ರಷ್ಟು ಕೆಲಸ ಮಾತ್ರ ಆಗಿದ್ದು, ಇದು ಸಾಲದು. ಇದೇ ಜುಲೈ ತಿಂಗಳ ಒಳಗಾಗಿ ಆಧಾರ್‌ ಸೀಡಿಂಗ್‌ ವಿಚಾರದಲ್ಲಿ ಶೇ. 90 ರಷ್ಟು ಪ್ರಗತಿ ಸಾಧಿಸಬೇಕು” ಎಂದು ಅಧಿಕಾರಿಗಳಿಗೆ ತಾಕೀತು ಮಾಡಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.

ಆರ್‌ಟಿಸಿಗಳನ್ನು ಆಧಾರ್‌ಗೆ ಲಿಂಕ್‌ ಮಾಡುವ ಮೂಲಕ ಯಾರದ್ದೋ ಜಮೀನನ್ನು ಮತ್ಯಾರೋ ಮಾರಾಟ ಮಾಡುವಂತಹ ವಂಚನೆಗಳನ್ನು ತಡೆಯಬಹುದು. ಅರ್ಹ ರೈತರಿಗೆ ಸರಿಯಾದ ಸಮಯಕ್ಕೆ ಪರಿಹಾರ ತಲುಪಿಸಲು ಹಾಗೂ ಮ್ಯುಟೇಶನ್‌, ಇನ್ಪುಟ್‌ ಸಬ್ಸಿಡಿ ನೀಡುವುದಕ್ಕೂ ಇದು ಸಹಕಾರಿಯಾಗುತ್ತದೆ. ಹೀಗಾಗಿ ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ರೈತರನ್ನು ಒಪ್ಪಿಸಿ ಆಧಾರ್‌ ಜೋಡಣೆ ಮಾಡಬೇಕು. ಸಾರ್ವಜನಿಕರೂ ಸಹ ತನಮ್ಮ ಜಮೀನಿನ ಮಾಲೀಕತ್ವಕ್ಕೆ ಭದ್ರತೆ ಅಗತ್ಯವಿದ್ದರೆ ಅಭಿಯಾನಕ್ಕೆ ರೈತರು ಮುಂದೆ ಬಂದು ಸಹಕಾರ ನೀಡಬೇಕು. ಇದರ ಮೂಲಕ ನಕಲಿ ವ್ಯವಹಾರ ಆಗುವುದನ್ನು ತಡೆಯಬಹುದು. ಜಮೀನಿನ ಮಾಲೀಕತ್ವಕ್ಕೆ ನೆಮ್ಮದಿಯ ಗ್ಯಾರಂಟಿ ನೀಡಬಹುದು ಎಂದು ಅವರು ಕರೆ ನೀಡಿದರು.

ಶೀಘ್ರ ಪೋಡಿ ಮುಕ್ತ ಗ್ರಾಮ ಅಭಿಯಾನ

ರಾಜ್ಯದಲ್ಲಿ ಶೀಘ್ರ ಪೋಡಿ ಮುಕ್ತ ಗ್ರಾಮ ಅಭಿಯಾನಕ್ಕೆ ಚಾಲನೆ ನೀಡಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.

ಈ ಬಗ್ಗೆ ಮಾಹಿತಿ ಹಂಚಿಕೊಂಡ ಅವರು, “ರಾಜ್ಯದಲ್ಲಿ 22 ಲಕ್ಷ ಖಾಸಗಿ ಆರ್‌ಟಿಸಿ ಗಳಿಗೆ ಪೋಡಿ ಆಗಿಲ್ಲ. ಪ್ರತಿಯೊಂದು ಆರ್‌ಟಿಸಿಯಲ್ಲಿ ಮೂರು ರಿಂದ ನಾಲ್ಕು ಜನ ಆರ್‌ಟಿಸಿ ಮಾಲೀಕರು ಇರುತ್ತಾರೆ. ಈ ಜಮೀನುಗಳ ಪೋಡಿ ಆಗಿಲ್ಲ. ಇನ್ನೂ ಸರ್ಕಾರಿಂದ ಭೂ ಮಂಜೂರಾದವ ಜಮೀನುಗಳೂ ಪೋಡಿ ಆಗಿಲ್ಲ. ಹೀಗಾಗಿ ಪೋಡಿ ಮುಕ್ತ ಅಭಿಯಾನದ ಅಡಿಯಲ್ಲಿ ಇಂತಹ ಜನರನ್ನು ನಾವೇ ಗುರುತಿಸಿ ಸರ್ಕಾರದಿಂದ ನಾವೇ ಪೋಡಿ ಮಾಡಿಕೊಡಲಿದ್ದೇವೆ. ಕೇಸ್‌ ಬೈ ಕೇಸ್‌ ಮಾಡುವುದರಿಂದ ಬಡವರಿಗೆ ಅನುಕೂಲವಾಗಲ್ಲ. ಹೀಗಾಗಿ ಪೋಡಿ ಮುಕ್ತ ಗ್ರಾಮಗಳ ಉದ್ದೇಶದಿಂದ ಆಯವ್ಯಯದಲ್ಲಿ ಘೋಷಿಸಿದಂತೆ ಪೋಡಿಮುಕ್ತ ಅಭಿಯಾನಕ್ಕೆ ಶೀಘ್ರವೇ ಚಾಲನೇ ನೀಡಲಾಗುವುದು

ಸಭೆಯಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ರಾಜೇಂದ್ರ ಕುಮಾರ್‌ ಕಟಾರಿಯಾ, ಪ್ರಧಾನ ಕಾರ್ಯದರ್ಶಿ (ವಿಪತ್ತು ನಿರ್ವಹಣೆ) ವಿ. ರಶ್ಮಿ ಮಹೇಶ್‌, ಕಂದಾಯ ಇಲಾಖೆ ಆಯುಕ್ತರಾದ ಸುನೀಲ್‌ ಕುಮಾರ್‌ ಹಾಗೂ ಮೈಸೂರು ವಿಭಾಗದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ತಹಶೀಲ್ದಾರರು, ಉಪ ವಿಭಾಗಾಧಿಕಾರಿಗಳು ಸೇರಿದಂತೆ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು.

ಹಿಂದೂ ವಿರೋಧಿ ಹೇಳಿಕೆಗೆ ಕ್ಷಮೆಯಾಚಿಸಲು ನಿರಾಕರಿಸಿದ ರಾಹುಲ್ ಗಾಂಧಿ

ಪೌರಕಾರ್ಮಿಕರಿಗೆ ಗುಡ್ ನ್ಯೂಸ್: ವಾರಕ್ಕೆ ಒಂದು ದಿನ ರಜೆ ನೀಡಿ ರಾಜ್ಯ ಸರ್ಕಾರ ಆದೇಶ | Pourakarmikas

Share.
Exit mobile version