ಬೆಂಗಳೂರು: ಸಾಂಕ್ರಾಮಿಕವಲ್ಲದ ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಉಪ್ಪು ಬಳಿಕೆ ಕಡಿಮೆ ಮಾಡಲು “ಹಾಲ್ಟ್ – ಸಾಲ್ಟ್ ” ಜಾಗೃತ ಅಭಿಯಾನ ಕೈಗೊಳ್ಳುವುದು. ವರ್ಷದಲ್ಲಿ ಒಂದು ತಿಂಗಳ ಉಪ್ಪು ಕಡಿಮೆ ಬಳಕೆ ಅಭಿಯಾನ ಕೈಗೊಳ್ಳುವುದು. ಜನರು ತಮ್ಮ ದೈನಂದಿನ ಬದುಕಿನಲ್ಲಿ ಉಪ್ಪು ಕಡಿಮೆ ಬಳಕೆ ಮಾಡುವ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಯೋಜನೆ ರೂಪಿಸಿ ಸರ್ಕಾರಕ್ಕೆ ಸಲ್ಲಿಸಿ ಕಾರ್ಯಗತಗೊಳಿಸಲು ಶ್ರಮಿಸುವುದು.
ಸಾಂಕ್ರಾಮಿಕ ವಲ್ಲದ ರೋಗಗಳಾದ ಹೃದಯಾಘಾತ, ಲಕ್ವಾ, ಬಹು ಅಂಗಾಂಗ ವೈಫಲ್ಯಗಳಿಗೆ ಕಾರಣವಾಗಿರುವ ಅಧಿಕ ಉಪ್ಪು ಸೇವನೆ ಕಡಿಮೆ ಮಾಡಲು ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾಲಯ ಮತ್ತು ರೀಸಾಲ್ವ್ ಟು ಸೇವ್ ಲೀವ್ಸ್ ಇಂಡಿಯಾ ನೇತೃತ್ವದಲ್ಲಿ ಗುರುವಾರ ತಾಂತ್ರಿಕ ಸಲಹಾ ಸಮಿತಿ ರಚಿಸಲಾಯಿತು. ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾಲಯದ ಉಪ ಕುಲಪತಿ ಡಾ. ಭಗವಾನ್ ಬಿ.ಸಿ ಅವರ ಅಧ್ಯಕ್ಷತೆಯಲ್ಲಿ ತಾಂತ್ರಿಕ ಸಲಹಾ ಸಮಿತಿ ಮೊದಲ ಸಭೆ ನಡೆಯಿತು.
ರಾಜೀವ್‌ಗಾಂಧಿ ಅರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾಲಯದ ಉಪ ಕುಲಪತಿ ಡಾ. ಭಗವಾನ್ ಬಿ.ಸಿ ಮಾತನಾಡಿ, ರಾಜೀವ್‌ಗಾಂಧಿ ವಿವಿ ಆರೋಗ್ಯ ಕರ್ನಾಟಕ ಸೃಷ್ಟಿಸಲು ಅನೇಕ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಡ್ರಗ್ ಮುಕ್ತ ಕರ್ನಾಟಕ ಜಾಗೃತ ಅಭಿಯಾನವನ್ನು ರಾಜ್ಯದಲ್ಲಿ ಕಾರ್ಯಗತಗೊಂಡಿದೆ. ವಿಶ್ವದ ದೊಡ್ಡ ಆರೋಗ್ಯ ವಿವಿ ಜನರ ಆರೋಗ್ಯ ಕಾಪಾಡುವ ಜನಪರ ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸಲು ಮುಂಚೂಣಿಯಲ್ಲಿಯೇ ಇರುತ್ತದೆ. ಸಾಂಕ್ರಾಮಿಕವಲ್ಲದ ರೋಗಗಳ ತಡೆಗಟ್ಟುವ ನಿಟ್ಟಿನಲ್ಲಿ ಜನರ ದೈನಂದಿನ ಜೀವನದಲ್ಲಿ ಉಪ್ಪು ಬಳಕೆ ಕಡಿಮೆ ಮಾಡುವ ಬಗ್ಗೆ ತಾಂತ್ರಿಕ ಸಲಹಾ ಸಮಿತಿ ಕಾರ್ಯಗತಗೊಳಿಸುವ ಕಾರ್ಯಕ್ರಮಗಳಿಗೆ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಭರವಸೆ ನೀಡಿದರು. ಅಲ್ಲದೇ ಹಾಲ್ಟ್ ಸಾಲ್ಟ್ ಹೆಸರಿನಲ್ಲಿ ರಾಜ್ಯದಲ್ಲಿ ಜಾಗೃತಿ ಅಭಿಯಾನ ಕೈಗೊಳ್ಳಲಾಗುವುದು, ಇದನ್ನು ನಿರಂತರವಾಗಿ ಮುಂದುವರೆಸುವ ಜತೆಗೆ ಸರ್ಕಾರದ ಹಂತದಲ್ಲಿ ಯೋಜನೆ ರೂಪಿಸಿ ಕಾರ್ಯಗತಗೊಳಿಸಲು ಆರೋಗ್ಯ ವಿವಿ ಸಂಪೂರ್ಣ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದರು.
ರೀಸಾಲ್ವ ಟು ಸೇವ್ ಲಿವ್ಸ್ ಭಾರತ ಸಂಸ್ಥೆಯ ಕಾರ್ಯ ನಿರ್ವಾಹಕ ನಿರ್ದೇಶಕ ಡಾ. ಸಯ್ಯದ್ ಇಮ್ರಾನ್ ಫಾರೂಕ್ ಮಾತನಾಡಿ, ಸಾಂಕ್ರಾಮಿಕ ವಲ್ಲದ ರೋಗಗಳನ್ನು ತಡೆಯಲು ಉಪ್ಪು ಬಳಕೆ ಪ್ರಮಾಣ ಅತಿ ಪರಿಣಾಮಕಾರಿ ಕ್ರಮವಾಗಿದೆ. ಸಾಂಕ್ರಾಮಿಕವಲ್ಲದ ರೋಗಗಳಿಗೆ ಚಿಕಿತ್ಸೆ ನೀಡುವ ಬದಲಿಗೆ ಆರಂಭದಲ್ಲಿಯೇ ಅವನ್ನು ತಡೆಗಟ್ಟುವ ಉಪ ಕ್ರಮಗಳಿಗೆ ಒತ್ತು ನೀಡಬೇಕಿದೆ ಎಂದು ಹೇಳಿದರು.
ರಾಜ್ಯದಲ್ಲಿ ಸಾಂಕ್ರಾಮಿಕವಲ್ಲದ ರೋಗಗಳ ನಿಯಂತ್ರಣ ಮಾಡಿ ಜನರ ಅರೋಗ್ಯ ರಕ್ಷಣೆ ಮಾಡುವ ನಿಟ್ಟಿನಲ್ಲಿ ರಚನೆಯಾದ ತಾಂತ್ರಿಕ ಸಲಹಾ ಸಮಿತಿ (TAG) ನಲ್ಲಿ, ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ರಿಜಿಸ್ಟ್ರಾರ್ ಡಾ. ರಿಯಾಜ್ ಬಾಷ, ಡಾ. ಯು.ಎಸ್. ವಿಶಾಲ್ ರಾವ್, ಜಯದೇವ ಹೃದಯೋಗ ಸಂಸ್ಥೆಯ ಡಾ. ಶ್ರೀಧರ್, ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಡಯಾಬಿಟಾಲಜಿ ನ ಡಾ. ರವಿ, ಬಿಎಂಸಿಆರ್ಐ ನಿರ್ದೇಶಕಿ ಡಾ. ಕಾವ್ಯ, ಇಎಸ್ಐ ಆಸ್ಪತ್ರೆಯ ಪೀಡಿಯಾಟ್ರಿಕ್ ಡಾ. ಸುನೀಲ್, ನ್ಯೂಟ್ರೀಷಿಯನಿಸ್ಟ್ ಡಾ. ಹೇಮಾ ಮಾಲಿನಿ, ಹೃದ್ರೋಗ ತಜ್ಞ ಡಾ. ಶ್ರೀನಿವಾಸ್, ಆರ್‌ಟಿಎಸ್ ಎಲ್ ನ ಡಾ. ಮಣಿಕಾ ಶರ್ಮಾ, ಡಾ. ಪ್ರಿಯಾ ನಂದಿಮಠ್, ಡಾ. ಪೃತಾ ದೇಶಪಾಂಡೆ ಹಂದಿಗೋಳ್ , ಡಾ. ಚಂದ್ರಶೇಖರ್ ಕೊಟ್ಟಗಿ, ಐಪಿಎಚ್ ನ ಡಾ. ಉಪೇಂದ್ರ ಭೋಜಾನಿ, ಪದ್ಮಶ್ರೀ ಕಾಲೇಜಿನ ಡಾ. ವೆಂಕಟೇಶ್, ಐಪಿಆರ್ ನ ನಿರ್ದೇಶಕ ಅಮಿತ್ ಕಾರ್ಣಿಕ, ಡಾ. ವೈಷ್ಣವಿ ಭಟ್ ಮತ್ತಿತರರು ಈ ಸಮಿತಿಯಲ್ಲಿದ್ದಾರೆ.
ವಿಶ್ವ ಅರೋಗ್ಯ ಸಂಸ್ಥೆಯ ಮಾರ್ಗಸೂಚಿ ಪ್ರಕಾರ ಭಾರತೀಯರು ದಿನಕ್ಕೆ ಗರಿಷ್ಠ 4 ಗ್ರಾಂ ಉಪ್ಪು ಸೇವನೆ ಮಾಡಬೇಕು. ವಾಸ್ತವದಲ್ಲಿ 8 ರಿಂದ 11 ಗ್ರಾಂ ಸೇವನೆ ಮಾಡುತ್ತಿದ್ದಾರೆ. ಇದರಿಂದ ಸಾಂಕ್ರಾಮಿಕ ವಲ್ಲದ ರೋಗಗಳಿಗೆ ತುತ್ತಾಗುತ್ತಿದ್ದಾರೆ.ತಂಬಾಕು ನಿಯಂತ್ರಣ ಮಾಡುವಲ್ಲಿ ಕರ್ನಾಟಕ ವಿಶ್ವಕ್ಕೆ ಮಾದರಿಯಾಗಿದೆ. ಅದೇ ರೀತಿ ಉಪ್ಪು ಬಳಕೆ ಕಡಿಮೆ ಮಾಡುವ ಉಪ ಕ್ರಮದಲ್ಲಿ ಈ ಸಾಧನೆ ಮಾಡಬೇಕಿದೆ. ಇದನ್ನು ಸಾಧಿಸಲು ನಿರಂತರವಾಗಿ ಉಪ್ಪು ಬಳಕೆ ಕಡಿಮೆ ಮಾಡುವ ಬಗ್ಗೆ Halt- Salt” ಅಭಿಯಾನ ಕೈಗೊಳ್ಳುವುದು, ಉಪ್ಪು ಸೇವನೆ ಕಡಿಮೆ ಮಾಡುವ ಬಗ್ಗೆ ಶಾಲಾ ಮಕ್ಕಳ ಪಠ್ಯದಲ್ಲಿ ಅಳವಡಿಸಬೇಕು. ಮಹಿಳೆಯರು ಮನೆಯ ಹಂತದಲ್ಲಿಯೇ ಉಪ್ಪು ಬಳಕೆ ಕಡಿಮೆ ಮಾಡುವುದು, ಉಪ್ಪು ಅತಿ ಸೇವನೆಯಿಂದ ಅಗುವ ಪರಿಣಾಮಗಳ ಬಗ್ಗೆ ಜಾಗೃತ ಮಾಹಿತಿಯನ್ನು ಜನರಿಗೆ ತಲುಪುವಂತೆ ಮಾಡುವುದು. ಉಪ್ಪು ಬಳಕೆ ಕಡಿಮೆ ಮಾಡುವ ನಿಟ್ಟಿನಲ್ಲಿ ಸರ್ಕಾರದ ಹಂತದಲ್ಲಿ ಮಹತ್ವದ ಯೋಜನೆ ರೂಪಿಸಲು ಅಗತ್ಯ ಉಪ ಕ್ರಮಗಳ ವರದಿಯನ್ನು ಈ ಸಮಿತಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿ ಅದರ ಬಗ್ಗೆ ಚರ್ಚೆ ನಡೆಸಿ ನಿಯಮಗಳನ್ನು ರೂಪಿಸಲು ಶ್ರಮಿಸಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಕಾರ್ಯ ನಿರ್ವಹಿಸುವ ತೀರ್ಮಾನವನ್ನು ತಾಂತ್ರಿಕ ಸಲಹಾ ಸಮಿತಿಯ ಮೊದಲ ಸಭೆಯಲ್ಲಿ ಕೈಗೊಂಡರು.
ಅಕ್ರಮವಾಗಿ ಶಸ್ತ್ರಾಸ್ತ್ರ ಹೊಂದಿದ್ದ ಕೇಸಲ್ಲಿ ಮಹೇಶ್ ತಿಮರೋಡಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಜಾ
ರಾಜ್ಯದಲ್ಲಿ ‘ST ಮೀಸಲಾತಿ’ಯಲ್ಲೂ ವರ್ಗೀಕರಣ ಬೇಕು: ಸರ್ಕಾರಕ್ಕೆ ‘ಆದಿವಾಸಿ ನಾಯಕ’ರು ಆಗ್ರಹ