ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಎಲ್ಲಾ ವಲಯಗಳಲ್ಲಿ ಬೀದಿ ಬದಿ ವ್ಯಾಪಾರಿಗಳ ಸಮೀಕ್ಷೆಯನ್ನು 20ನೇ ಡಿಸೆಂಬರ್ 2024ಕ್ಕೆ ಮುಕ್ತಾಯವಾಗಲಿದೆಯೆಂದು ಕಲ್ಯಾಣ ವಿಭಾಗದ ವಿಶೇಷ ಆಯುಕ್ತರಾದ ಸುರಳ್ಕರ್ ವಿಕಾಸ್ ಕಿಶೋರ್ ರವರು ತಿಳಿಸಿದರು.
ಬೀದಿ ಬದಿ ವ್ಯಾಪಾರಿಗಳ(ಜೀವನೋಪಾಯ ಸಂರಕ್ಷಣೆ ಮತ್ತು ಬೀದಿ ವ್ಯಾಪಾರ ನಿಯಂತ್ರಣ) ಅಧಿನಿಯಮ-2014 ಮತ್ತು ಕರ್ನಾಟಕ ಬೀದಿ ಬದಿ ವ್ಯಾಪಾರಿಗಳ(ಜೀವನೋಪಾಯ ಸಂರಕ್ಷಣೆ, ಬೀದಿ ಬದಿ ವ್ಯಾಪಾರದ ನಿಯಂತ್ರಣ ಮತ್ತು ಪರವಾನಗಿ) ಯೋಜನೆ-2020 ರಂತೆ ಪಾಲಿಕೆಯಲ್ಲಿ ನಗರ ಬೀದಿ ಬದಿ ವ್ಯಾಪಾರಿಗಳ ಸಮೀಕ್ಷೆಯನ್ನು ನಡೆಸಲಾಗುತ್ತಿದೆ.
ಪಾಲಿಕೆಯ ಎಲ್ಲಾ 08 ವಲಯಗಳಲ್ಲಿ ಬೀದಿ ಬದಿ ವ್ಯಾಪಾರಿಗಳ ಸಮೀಕ್ಷೆಯನ್ನು ಕೈಗೊಂಡಿದ್ದು, ಗಣತಿದಾರರಿಂದ ಸಮೀಕ್ಷಾ ಕಾರ್ಯ ನಡೆಸಲಾಗುತ್ತಿದೆ. ಮೊಬೈಲ್ ತಂತ್ರಾಂಶದ ಮೂಲಕ ಸಮೀಕ್ಷೆ ನಡೆಸಲಾಗುತ್ತಿದ್ದು, ಇದುವರೆಗೆ ವಲಯವಾರು ಸುಮಾರು 23407 ಬೀದಿ ಬದಿ ವ್ಯಾಪಾರಿಗಳನ್ನು ಸಮೀಕ್ಷೆ ಮೂಲಕ ಗುರುತಿಸಲಾಗಿದೆ.
ಸಮೀಕ್ಷೆಯ ಅನುಸಾರ ಅರ್ಹ ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ಮತ್ತು ಪ್ರಮಾಣ ಪತ್ರಗಳನ್ನು ವಿತರಿಸಲಾಗುವುದು. ಅಲ್ಲದೇ ವಲಯ ಮಟ್ಟದಲ್ಲಿ ಪಟ್ಟಣ ಮಾರಾಟ ಸಮಿತಿಗಳನ್ನು ರಚಿಸಿ, ಬೀದಿ ಬದಿ ವ್ಯಾಪಾರಿಗಳ(ಜೀವನೋಪಾಯ ಸಂರಕ್ಷಣೆ ಮತ್ತು ಬೀದಿ ವ್ಯಾಪಾರ ನಿಯಂತ್ರಣ) ಅಧಿನಿಯಮ-2014 ಮತ್ತು ಕರ್ನಾಟಕ ಬೀದಿ ಬದಿ ವ್ಯಾಪಾರಿಗಳ(ಜೀವನೋಪಾಯ ಸಂರಕ್ಷಣೆ, ಬೀದಿ ಬದಿ ವ್ಯಾಪಾರದ ನಿಯಂತ್ರಣ ಮತ್ತು ಪರವಾನಗಿ) ಯೋಜನೆ-2020 ರಂತೆ ಬೀದಿ ವ್ಯಾಪಾರಿಗಳ ಯೋಜನೆಯನ್ನು ಅನುಷ್ಟಾನಗೊಳಿಸಲಾಗುತ್ತದೆ.
ಸಮೀಕ್ಷೆಗೆ ಅಗತ್ಯವಿರುವ ದಾಖಲೆಗಳು:
ಕಲ್ಯಾಣ ವಿಭಾಗದಿಂದ ನಿಯೋಜಿಸಿರುವ ಗಣತಿದಾರರು ಸಮೀಕ್ಷೆ ಮಾಡುವ ಸಮಯದಲ್ಲಿ ಬೀದಿ ಬದಿ ವ್ಯಾಪಾರಿಗಳು ಸಹಕಾರ ನೀಡಬೇಕಿದ್ದು, ಸಮೀಕ್ಷೆ ಸಮಯದಲ್ಲಿ ಈ ಕೆಳಗಿನ ದಾಖಲೆಗಳನ್ನು ಗಣತಿದಾರರಿಗೆ ನೀಡಬೇಕು.
* ಆಧಾರ್ ಕಾರ್ಡ್
* ಮತದಾರರ ಗುರುತಿನ ಚೀಟಿ
* ಬ್ಯಾಂಕ್ ಪಾಸ್ ಬುಕ್
* ಕುಟುಂಬ ಪಡಿತರ ಚೀಟಿ
* ಕುಟುಂಬ ಸದಸ್ಯರ ಮಾಹಿತಿ
* ಸ್ವ ಯಂ ಘೋಷಣೆ ಪ್ರಮಾಣ ಪತ್ರ
ಪಾಲಿಕೆಯಿಂದ ವಿವಿಧ ಸೌಲಭ್ಯಗಳು ಲಭ್ಯ:
ಬೀದಿ ಬದಿ ವ್ಯಾಪಾರಿಗಳ ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಿಂದ ಸಾಕಷ್ಟು ಯೋಜನೆಗಳಿದ್ದು, ಅದನ್ನು ಬೀದಿ ಬದಿ ವ್ಯಾಪಾರಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಪರಿಣಾಮಕಾರಿಯಾಗಿ ಸಮೀಕ್ಷಾ ಕಾರ್ಯ ನಡೆಸಲಾಗುತ್ತಿದೆ. ಪಿಎಂ ಸ್ವನಿಧಿ ಮಾತ್ರವಲ್ಲದೆ, ಪಾಲಿಕೆಯ ಕಲ್ಯಾಣ ವಿಭಾಗದಿಂದ ಇ-ಮಾರಾಟ ವಾಹನ ಖರೀದಿಗೆ ಸಹಾಯಧನ, ಒಂಟಿ ಮನೆ/ಅಮೃತ ಮಹೋತ್ಸವ ಮನೆ ಯೋಜನೆಗೆ ಸಹಾಯಧನ, ಗಂಭೀರ ಸ್ವರೂಪ ಖಾಯಿಲೆಗಳಿಂದ ಬಳಲುತ್ತಿರುವವರಿಗೆ ವೈದ್ಯಕೀಯ ವೆಚ್ಚ ಮರು ಪಾವತಿ, ಕೌಶಲ್ಯ ತರಬೇತಿ ಕಾರ್ಯಕ್ರಮ, ಬೀದಿ ಬದಿ ವ್ಯಾಪಾರಿಗಳ ಮಕ್ಕಳ ಶಿಕ್ಷಣಕ್ಕೆ ಶುಲ್ಕ ಮರುಪಾವತಿ ಸೇರಿದಂತೆ ಇನ್ನಿತರೆ ಸೌಲಭ್ಯಗಳಿದ್ದು, ಅದರ ಸದುಪಯೋಗ ಪಡೆದುಕೊಳ್ಳಬಹುದು.
ಫಿಎಂ ಸ್ವ-ನಿಧಿ ಯೋಜನೆ:
ಬಿಬಿಎಂಪಿ ವ್ಯಾಪ್ತಿಯಲ್ಲಿ ಪಿಎಂ ಸ್ವನಿಧಿ ಯೋಜನೆಯಿಂದ ಅನುಕೂಲ ಪಡೆದಿರುವ ವಿವರವನ್ನು ಪಿಎಂಎಸ್ ಡ್ಯಾಶ್‌ಬೋರ್ಡ್ ಲಿಂಕ್ https://pmsvanidhi.mohua.gov.in/Home/PMSDashboard ಗೆ ಭೇಟಿ ನೀಡಿ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.
ಡಿಸೆಂಬರ್ 20ರೊಳಗಾಗಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳಿ:
ಪಾಲಿಕೆ 8 ವಲಯಗಳಲ್ಲಿ ಬೀದಿ ಬದಿ ವ್ಯಾಪಾರಿಗಳ ಸಮೀಕ್ಷೆ ನಡೆಯುತ್ತಿದ್ದು, ಸಮೀಕ್ಷಾ ಕಾರ್ಯವನ್ನು ಇದೇ 20ನೇ ಡಿಸೆಂಬರ್ 2024ರ ವರೆಗೆ ಮಾತ್ರ ನಡೆಸಲಿದ್ದು, ನಗರದ ಎಲ್ಲಾ ಬೀದಿ ಬದಿ ವ್ಯಾಪಾರಿಗಳು ಕೂಡಲೆ ಸಮೀಕ್ಷಾ ಕಾರ್ಯದಲ್ಲಿ ಪಾಲ್ಗೊಳ್ಳಲು ಕೋರಿದೆ.
ಸೌಲಭ್ಯಗಳಿಂದ ವಂಚಿತರಾಗದಿರಿ:
ಇದುವರೆಗೆ ಬೀದಿ ಬದಿ ವ್ಯಾಪಾರಿಗಳ ಸಮೀಕ್ಷಾ ಕಾರ್ಯದಲ್ಲಿ ಪಾಲ್ಗೊಳ್ಳದವರು ಆಯಾ ವಲಯ ಜಂಟಿ ಆಯುಕ್ತರ ಕಛೇರಿಗಳಿಗೆ ಭೇಟಿ ನೀಡಿ ಡಿಸೆಂಬರ್ 20ರೊಳಗಾಗಿ ಸಮೀಕ್ಷೆಯಲ್ಲಿ ಹೆಸರು ನೊಂದಾಯಿಸಿಕೊಳ್ಳಬೇಕು. ಡಿಸೆಂಬರ್ 20ರ ನಂತರ ಸಮೀಕ್ಷೆಯನ್ನು ನಿಲ್ಲಿಸಲಾಗುವುದು. ಅನಂತರ ಬೀದಿ ಬದಿ ವ್ಯಾಪಾರಿಗಳು ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಹಾಗು ಯಾವುದೇ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಅರ್ಹರಿರುವುದಿಲ್ಲ.
ಇದುವರೆಗೆ ವಲಯವಾರು ಸಮೀಕ್ಷೆ ಮಾಡಿರುವ ವಿವರ(09-12-2024 ರವರೆಗೆ):
ವಲಯ – ಸರ್ವೇ ಮಾಡಿರುವ ಸಂಖ್ಯೆ:
ಪಶ್ಚಿಮ – 5727
ದಕ್ಷಿಣ – 4417
ಆರ್.ಆರ್ ನಗರ – 3448
ಪೂರ್ವ – 3067
ಬೊಮ್ಮನಹಳ್ಳಿ – 2156
ಮಹದೇವಪುರ – 1669
ಯಲಹಂಕ – 1572
ದಾಸರಹಳ್ಳಿ – 1351
ಒಟ್ಟು – 23407