ಜಮಖಂಡಿ (ಬಾಗಲಕೋಟೆ): ಮೃತಪಟ್ಟಿದ್ದಾನೆಂದು ವೈದ್ಯರು ಘೋಷಿಸಿದ ಬಳಿಕ, ಅಂತ್ಯಸಂಸ್ಕಾರಕ್ಕೆ ಕೊಂಡೊಯ್ಯುತ್ತಿದ್ದಾಗ ಮಾರ್ಗಮಧ್ಯೆ ವಾಹನ ಅಲುಗಾಡಿದ ರಭಸಕ್ಕೆ ವ್ಯಕ್ತಿಯೊಬ್ಬರು ಎದ್ದು ಕುಳಿತು ಮಾತನಾಡಿದ ಅಚ್ಚರಿಯ ಹಾಗೂ ಪವಾಡಸದೃಶ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ನಡೆದಿದೆ.
ಜಮಖಂಡಿ ನಗರದ ಮೊಮಿನ್ ಗಲ್ಲಿಯ ನಿವಾಸಿ ಮುಬಾರಕ್ ಆವಟಿ (65) ಎಂಬುವವರೇ ಮರಳಿ ಜೀವ ಪಡೆದು ಬಂದ ವ್ಯಕ್ತಿ. ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಇವರನ್ನು ಬೆಳಗಾವಿಯ ಕೆಎಲ್ಇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮುಬಾರಕ್ ಅವರು ಮೃತಪಟ್ಟಿರುವುದಾಗಿ ವೈದ್ಯರು ಕುಟುಂಬಸ್ಥರಿಗೆ ತಿಳಿಸಿದ್ದರು.
ರಸ್ತೆ ಉಬ್ಬೇ (Humps) ಸಂಜೀವಿನಿಯಾಯ್ತು!
ವೈದ್ಯರ ಮಾತು ಕೇಳಿ ಕಣ್ಣೀರು ಹಾಕುತ್ತಲೇ ಕುಟುಂಬಸ್ಥರು ಅಂತ್ಯಸಂಸ್ಕಾರದ ಸಿದ್ಧತೆಯೊಂದಿಗೆ ಮೃತದೇಹವನ್ನು ವಾಹನದ ಮೂಲಕ ಸ್ವಗ್ರಾಮಕ್ಕೆ ತೆಗೆದುಕೊಂಡು ಬರುತ್ತಿದ್ದರು. ವಾಹನವು ಲೋಕಾಪುರ ಸಮೀಪ ಬರುತ್ತಿದ್ದಂತೆ ರಸ್ತೆ ಉಬ್ಬು (ರೋಡ್ ಹಂಪ್ಸ್) ಹತ್ತಿ ಇಳಿದಿದೆ. ವಾಹನ ಜೋರಾಗಿ ಅಲುಗಾಡಿದ ರಭಸಕ್ಕೆ, ಮೃತಪಟ್ಟಿದ್ದರು ಎನ್ನಲಾಗಿದ್ದ ಮುಬಾರಕ್ ಅವರು ಏಕಾಏಕಿ ಉಸಿರಾಡಲು ಆರಂಭಿಸಿದ್ದಾರೆ. ಅಷ್ಟೇ ಅಲ್ಲದೆ, ತಮ್ಮ ಕುಟುಂಬದವರ ಜೊತೆಗೆ ಮಾತನಾಡಲು ಶುರು ಮಾಡಿದ್ದಾರೆ.
ಕುಟುಂಬಸ್ಥರಿಗೆ ಅಚ್ಚರಿ, ಆಸ್ಪತ್ರೆಗೆ ದಾಖಲು:
ತಮ್ಮ ಮುಂದೆಯೇ ಹೆಣವಾಗಿ ಮಲಗಿದ್ದ ವ್ಯಕ್ತಿ ಇದ್ದಕ್ಕಿದ್ದಂತೆ ಉಸಿರಾಡುತ್ತಾ ಮಾತನಾಡಿದ್ದನ್ನು ಕಂಡು ಕುಟುಂಬಸ್ಥರಿಗೆ ಒಮ್ಮೆಲೆ ಶಾಕ್ ಹಾಗೂ ಅಚ್ಚರಿಯಾಗಿದೆ. ಕೂಡಲೇ ಎಚ್ಚೆತ್ತುಕೊಂಡ ಅವರು, ವಿಜಯಪುರದ ಖಾಸಗಿ ಆಸ್ಪತ್ರೆಗೆ ಮುಬಾರಕ್ ಅವರನ್ನು ಕರೆದೊಯ್ದು ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.
ಸದ್ಯ ಈ ಅಚ್ಚರಿಯ ಘಟನೆ ಇಡೀ ಜಿಲ್ಲೆಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಸಾವನ್ನೇ ಗೆದ್ದು ಬಂದ ಈ ವೃದ್ಧನ ಕಥೆ ಕೇಳಿ ಜನರು ಬೆರಗಾಗಿದ್ದಾರೆ.








