ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಅನ್ನು ಗುರಿಯಾಗಿಸಿಕೊಂಡು ಅವಹೇಳನಕಾರಿ ಜಾಹೀರಾತುಗಳನ್ನು ಪ್ರಕಟಿಸದಂತೆ ನಿರ್ದೇಶಿಸಿದ ಕಲ್ಕತ್ತಾ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಬಿಜೆಪಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಿಚಾರಣೆ ನಡೆಸಲಿದೆ.
ಇಂತಹ ಜಾಹೀರಾತುಗಳು ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಿತ್ತು.
ನ್ಯಾಯಮೂರ್ತಿಗಳಾದ ಜೆ.ಕೆ.ಮಹೇಶ್ವರಿ ಮತ್ತು ಕೆ.ವಿ.ವಿಶ್ವನಾಥನ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು ಸೋಮವಾರ ಬಿಜೆಪಿಯ ಮನವಿಯನ್ನು ಆಲಿಸಲಿದೆ.
ಬಿಜೆಪಿ ಶುಕ್ರವಾರ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಹಿರಿಯ ವಕೀಲ ಸೌರಭ್ ಮಿಶ್ರಾ ಅವರು ಶುಕ್ರವಾರ ಮತ್ತೊಂದು ರಜಾಕಾಲದ ಪೀಠದ ಮುಂದೆ ಈ ವಿಷಯವನ್ನು ಪ್ರಸ್ತಾಪಿಸಿ ತುರ್ತು ವಿಚಾರಣೆಯನ್ನು ಕೋರಿದ್ದರು.
ಟಿಎಂಸಿಯನ್ನು ಗುರಿಯಾಗಿಸಿಕೊಂಡು ಜಾಹೀರಾತುಗಳನ್ನು ಪ್ರಕಟಿಸದಂತೆ ಕಲ್ಕತ್ತಾ ಹೈಕೋರ್ಟ್ ಮೇ 20 ರಂದು ಬಿಜೆಪಿಯನ್ನು ನಿರ್ಬಂಧಿಸಿತ್ತು. ಟಿಎಂಸಿಯ ದೂರುಗಳನ್ನು ಪರಿಹರಿಸುವಲ್ಲಿ ಚುನಾವಣಾ ಆಯೋಗವು ಸಂಪೂರ್ಣವಾಗಿ ವಿಫಲವಾಗಿದೆ ಎಂದು ಅದು ತರಾಟೆಗೆ ತೆಗೆದುಕೊಂಡಿದೆ