ಬೆಂಗಳೂರು: ಮಾರ್ಚ್ ತಿಂಗಳ ಆರಂಭದಲ್ಲೇ ರಾಜ್ಯದ ಜನತೆಗೆ ಸೂರ್ಯನ ಬಿಸಿ ಮುಟ್ಟುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ತಾಪಮಾನ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಹಲವೆಡೆ ಸಾಮಾನ್ಯಕ್ಕಿಂತ 4-5 ಡಿಗ್ರಿ ಸೆಲ್ಸಿಯಸ್ ಹೆಚ್ಚಿನ ಉಷ್ಣಾಂಶ ದಾಖಲಾಗಿದೆ.
ಕಲಬುರಗಿ ಮತ್ತು ಬಳ್ಳಾರಿಯಲ್ಲಿ ಶನಿವಾರದಂದು 39.4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಶೀಘ್ರದಲ್ಲೇ ಇದು 45 ಡಿಗ್ರಿ ತಲುಪುವ ಆತಂಕವಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ಮೈಸೂರು, ದಾವಣಗೆರೆ, ಬೀದರ್ ಮತ್ತು ಕಾರವಾರ ಭಾಗಗಳಲ್ಲಿ ಸಾಮಾನ್ಯಕ್ಕಿಂತ 1-2 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಹೆಚ್ಚಳವಾಗಿದೆ.
ಮುಂದಿನ 5 ದಿನಗಳ ಕಾಲ ಉತ್ತರ ಕರ್ನಾಟಕದಲ್ಲಿ ತಾಪಮಾನ ಇನ್ನಷ್ಟು ಏರಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಬಿಸಿಲಿನ ತೀವ್ರತೆಗೆ ಕಾರಣಗಳೇನು?
ಜಾಗತಿಕ ತಾಪಮಾನ ಏರಿಕೆ, ತೇವಾಂಶದ ಕೊರತೆ, ಮೋಡಗಳಿಲ್ಲದ ಶುಭ್ರ ಆಕಾಶ ಮತ್ತು ‘ಲಾ ನಿನಾ’ ಪ್ರಭಾವ ಕಡಿಮೆಯಾಗಿ ಒಣಗಾಳಿ ಬೀಸುತ್ತಿರುವುದು ಈ ದಿಢೀರ್ ತಾಪಮಾನ ಏರಿಕೆಗೆ ಮುಖ್ಯ ಕಾರಣಗಳಾಗಿವೆ.
ಉಂಟಾಗಬಹುದಾದ ಪರಿಣಾಮಗಳು:
ಕೃಷಿ: ಕೃಷಿ ಉತ್ಪಾದನೆಯಲ್ಲಿ ಕುಸಿತ ಉಂಟಾಗುವ ಭೀತಿ.
ಸಂಪನ್ಮೂಲ: ವಿದ್ಯುತ್ ಕೊರತೆ ಮತ್ತು ಕುಡಿಯುವ ನೀರಿನ ಅಭಾವ ತಲೆದೂರುವ ಸಾಧ್ಯತೆ.
ಆರೋಗ್ಯ: ನಿರ್ಜಲೀಕರಣ (Dehydration) ಮತ್ತು ಹೀಟ್ ಸ್ಟ್ರೋಕ್‌ನಂತಹ ಆರೋಗ್ಯ ಸಮಸ್ಯೆಗಳು ಕಾಡಬಹುದು.
ಯಾರಿಗೆ ಹೆಚ್ಚಿನ ಎಚ್ಚರಿಕೆ ಅಗತ್ಯ?
ಬಿಸಿಲಿನ ಪ್ರಖರತೆ ಹೆಚ್ಚಿರುವುದರಿಂದ ಈ ಕೆಳಗಿನವರು ವಿಶೇಷ ಮುನ್ನೆಚ್ಚರಿಕೆ ವಹಿಸಬೇಕು:
ಬೀದಿ ಬದಿಯಲ್ಲಿ ವಾಸಿಸುವ ನಿರಾಶ್ರಿತರು.
ಆಟೋ ಚಾಲಕರು ಮತ್ತು ಸಂಚಾರ ಪೊಲೀಸರು.
ರೈತರು, ಕಟ್ಟಡ ಕಾರ್ಮಿಕರು ಮತ್ತು ರಸ್ತೆ ನಿರ್ಮಾಣ ಸಿಬ್ಬಂದಿ.
ಪ್ರವಾಸಕ್ಕೆ ಹೋಗುವ ಹಿರಿಯ ನಾಗರಿಕರು.








