ಬೆಂಗಳೂರು: ಗ್ರಾಮ ಪಂಚಾಯತಿ ಅರಿವು ಕೇಂದ್ರದ ಮೂಲಕ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರಗಳನ್ನು ನಡೆಸಲು ಗ್ರಾಮಪಂಚಾಯತಿಗಳನ್ನು ಸಜ್ಜುಗೊಳಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿಬ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಶಾಲೆಗಳಿಗೆ ಬೇಸಿಗೆ ರಜೆ ಆರಂಭಗೊಂಡಿದ್ದು, ಬೇಸಿಗೆ ರಜೆ ಅಂತ್ಯಗೊಳ್ಳುವವರೆಗೆ ಏಪ್ರಿಲ್ 2025- ಮೇ 2025ರ ಮಾಹೆಯಲ್ಲಿ ಶಿಬಿರಗಳನ್ನು ಆಯೋಜಿಸಲಾಗುವುದು ಎಂದು ಹೇಳಿರುವ ಸಚಿವರು ಗ್ರಾಮ ಪಂಚಾಯತಿ ಅರಿವು ಕೇಂದ್ರದಲ್ಲಿ ಹಲವು ಮಕ್ಕಳ ಸ್ನೇಹಿ ಚಟುವಟಿಕೆಗಳನ್ನು ಈಗಾಗಲೇ ಹಮ್ಮಿಕೊಳ್ಳಲಾಗಿದೆ, ಮುಂದುವರೆದ ಭಾಗವಾಗಿ ಗ್ರಾಮ ಪಂಚಾಯತಿ ನೇತೃತ್ವದಲ್ಲಿ ಮಕ್ಕಳಿಗೆ ಬೇಸಿಗೆ ಶಿಬಿರವನ್ನು ಅರಿವು ಕೇಂದ್ರಗಳ ಮೂಲಕ ಶಾಲೆಗಳ ಬೇಸಿಗೆ ರಜೆಯ ಸಮಯದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ, ಶಿಬಿರದ ನಿರ್ವಹಣೆಯನ್ನು ಅರಿವು ಕೇಂದ್ರದ ಮೇಲ್ವಿಚಾರಕರು, ಗ್ರಾಮ ಪಂಚಾಯತಿ ಪುನರ್ವಸತಿ ಕಾರ್ಯಕರ್ತರು ಮತ್ತು ಗುರುತಿಸಿದ ಸ್ವಯಂ ಸೇವಕರೊಂದಿಗೆ ಪರಿಣಾಮಕಾರಿಯಾಗಿ ಆಯೋಜಿಸಲು ಕ್ರಮವಹಿಸಲು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಹದಿನೈದು ದಿನಗಳ ಕಾಲ ಶಿಬಿರವನ್ನು ಆಯೋಜಿಸುವ ಮೂಲಕ ಓದುವ, ಬರೆಯುವ, ಕಲಾತ್ಮಕ ಚಟುವಟಿಕೆಗಳಿಗೆ ಮತ್ತು ಆಟಗಳಿಗೆ ಒತ್ತು ನೀಡಲಾಗುವುದು, ಗ್ರಾಮೀಣ ಪ್ರದೇಶದಲ್ಲಿರುವ ಮಕ್ಕಳು ತಮ್ಮ ಬೇಸಿಗೆ ರಜೆಯನ್ನು ಮನರಂಜನೀಯವಾಗಿ ಹಾಗೂ ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಬೇಸಿಗೆ ಶಿಬಿರವನ್ನು ಆಯೋಜಿಸಲಾಗುತ್ತಿದೆ, ಓದುವ, ಬರೆಯುವ, ಅಂಕಿ ಸಂಖ್ಯೆ, ವಿಜ್ಞಾನ ವಿಷಯಗಳು, ನಾಯಕತ್ವ ಮತ್ತು ಸಂವಹನ ಕೌಶಲ್ಯವನ್ನು ಅಭಿವೃದ್ಧಿಪಡಿಸುವ ಉದ್ದೇಶವನ್ನು ಹೊಂದಲಾಗಿದೆ, ಪರಿಸರ ಮತ್ತು ಸಾಮಾಜಿಕ ಕಾಳಜಿ ಬೆಳೆಸುವುದು, ಸ್ಥಳೀಯ ಸಂಸ್ಕೃತಿ, ಜೀವನ ಶೈಲಿ, ಇತಿಹಾಸ ಅಂಶಗಳನ್ನು ತಿಳಿಯುವಂತೆ ಅರಿವು ಮೂಡಿಸುವುದು ಹಾಗೂ ಮಕ್ಕಳಲ್ಲಿರುವ ಸೃಜನಾತ್ಮಕ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವುದು ಬೇಸಿಗೆ ಶಿಬಿರದ ಆಶಯವಾಗಿರುತ್ತದೆ ಎಂಬ ವಿವರಗಳನ್ನು ಸಚಿವ ಪ್ರಿಯಾಂಕ್ ಖರ್ಗೆ ನೀಡಿದ್ದಾರೆ.
ವಿಜ್ಞಾನಕ್ಕೆ ಸಂಬಂಧಿಸಿದಂತೆ ಕೌಶಲ್ಯವನ್ನು ಅಭಿವೃದ್ಧಿಪಡಿಸಲು ಕಾಮನಬಿಲ್ಲು ಮೂಡಿಸುವಿಕೆ, ವಿವಿಧ ಗಣಿತದ ಘನಾಕೃತಿಗಳ ಪರಿಚಯ, ಚಿನ್ನಿದಾಂಡು, ಗ್ರಾಮದಲ್ಲಿ ಬಳಸುವ ಅಳತೆ ಮತ್ತು ಮಾಪಕಗಳು, ಟ್ಯಾನ್ಗ್ರ್ಯಾಮ್, ಪೇಪರ್ ಫ್ಯಾನ್, ಜೆಟ್ ಪ್ಲೇನ್, ಕಣ್ಣುಮಿಟುಕಿಸುವ ಗೊಂಬೆ, ಚದುರಂಗ, ಕೇರಂ, ಆಕಾಶ ವೀಕ್ಷಣೆ ಮತ್ತಿತರೆ ಚಟುವಟಿಕೆಗಳನ್ನು ಸ್ಥಳೀಯವಾಗಿ ಹಮ್ಮಿಕೊಳ್ಳಲು ಗ್ರಾಮ ಪಂಚಾಯತಿಗಳಿಗೆ ತಿಳಿಸಲಗಿದೆ ಎಂದೂ ಸಚಿವರು ಹೇಳಿದ್ದಾರೆ.
ಯೋಜನಾ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳಲು ಯೋಜಿಸಲಾಗಿದ್ದು, ಪ್ರಮುಖವಾಗಿ ನಮ್ಮೂರಿನ ಪಕ್ಷಿಗಳು, ನೀರಿನ ಪಯಣ, ನನ್ನ ಊರು, ನಮ್ಮೂರಿನ ಇತಿಹಾಸ, ನಮ್ಮೂರ ಜಾತ್ರೆ, ನಮ್ಮೂರ ಜನಪದ ಗೀತೆಗಳು-ಜನಪದ ಕಥೆ, ನಮ್ಮೂರ ಕ್ರೀಡೆಗಳು, ನಮ್ಮೂರ ಕಲೆಗಳ ಬಗ್ಗೆ ಮಕ್ಕಳಿಗೆ ಮಾಹಿತಿ ಒದಗಿಸಲಾಗುವುದು; ಸ್ಥಳೀಯ ಅಂಚೆ ಕಚೇರಿ, ಹಾಲು ಉತ್ಪಾದಕರ ಸಹಕಾರ ಸಂಘ, ಬ್ಯಾಂಕ್, ಪಶುವೈದ್ಯಕೀಯ ಆಸ್ಪತ್ರೆ, ಅಂಗನವಾಡಿ ಕೇಂದ್ರ, ಗ್ರಾಮ ಪಂಚಾಯತಿ, ಆಸ್ಪತ್ರೆ ಮುಂತಾದ ಸ್ಥಳಗಳಿಗೆ ಮಕ್ಕಳನ್ನು ಕರೆದೊಯ್ದು ಮಕ್ಕಳಿಗೆ ಪರಿಚಯ ಮಾಡಿಸಲಾಗುವುದು ಎಂದೂ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
BREAKING: ಮರಾಠ ಕ್ಷತ್ರೀಯ ಸಂಪ್ರದಾಯದಂತೆ ನೆರವೇರಿದ ನಟ ಬ್ಯಾಂಕ್ ಜನಾರ್ಧನ್ ಅಂತ್ಯಕ್ರಿಯೆ: ಇನ್ನೂ ನೆನಪು ಮಾತ್ರ