ಬೆಳಗಾವಿ ಸುವರ್ಣ ವಿಧಾನಸೌಧ : ರಾಜ್ಯದಲ್ಲಿ ಒಟ್ಟು 98 ಸಕ್ಕರೆ ಕಾರ್ಖಾನೆಗಳು ಅಸ್ತಿತ್ವದಲ್ಲಿದ್ದು, ಇವುಗಳಲ್ಲಿ ಪ್ರಸ್ತುತ 81 ಕಾರ್ಖಾನೆಗಳು ಕಾರ್ಯನಿರತವಾಗಿವೆ. ಅಲ್ಲದೆ, ಕಬ್ಬು ಸರಬರಾಜು ಮಾಡಿದ ರೈತರಿಗೆ ಸಕ್ಕರೆ ಕಾರ್ಖಾನೆಗಳಿಂದ ಯಾವುದೇ ರೀತಿಯ ಕಬ್ಬಿನ ದರ ಬಾಕಿ ಉಳಿದಿಲ್ಲ. ಇನ್ನು 2024-25ನೇ ಸಾಲಿನಲ್ಲಿ 521.61 ಲಕ್ಷ ಮೆಟ್ರಿಕ್ ಟನ್ ಕಬ್ಬು ಅರೆಯಲಾಗಿದೆ ಎಂದು ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಸಚಿವರಾದ ಶಿವಾನಂದ ಪಾಟೀಲ್ ತಿಳಿಸಿದ್ದಾರೆ.
ವಿಧಾನ ಪರಿಷತ್ ಶಾಸಕರಾದ ದಿನೇಶ್ ಗೂಳಿಗೌಡ ಅವರು ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಳೆದ ಮೂರು ವರ್ಷಗಳಲ್ಲಿ (2022-23, 2023-24 ಮತ್ತು 2024-25ರ) ಕಾರ್ಖಾನೆಗಳಿಗೆ ಸರಬರಾಜು ಮಾಡಿದ ಕಬ್ಬಿನ ಸಂಪೂರ್ಣ ಮೊತ್ತವನ್ನು ರೈತರಿಗೆ ಪಾವತಿಸಲಾಗಿದೆ ಎಂದು ತಿಳಿಸಿದ್ದಾರೆ.
3 ವರ್ಷಗಳಲ್ಲಿ ಕಬ್ಬು ಅರೆದಿರುವ ವಿವರ
ಕಾರ್ಖಾನೆಗಳಲ್ಲಿ ಅರೆಯಲಾದ ಕಬ್ಬಿನ ಪ್ರಮಾಣ: ಲಕ್ಷ ಮೆಟ್ರಿಕ್ ಟನ್‌ಗಳಲ್ಲಿ ವಿವರ
• 2022-23: ಒಟ್ಟು 603.55 ಲಕ್ಷ ಮೆಟ್ರಿಕ್ ಟನ್ ಕಬ್ಬು ಅರೆಯಲಾಗಿದೆ
– ಇದರಲ್ಲಿ ಪಾವತಿಸಿದ ಮೊತ್ತ: 20138.93 ಕೋಟಿ ರೂ.
• 2023-24: ಒಟ್ಟು 585.08 ಲಕ್ಷ ಮೆಟ್ರಿಕ್ ಟನ್ ಕಬ್ಬು ಅರೆಯಲಾಗಿದೆ
• ಇದರಲ್ಲಿ ಪಾವತಿಸಿದ ಮೊತ್ತ: 20645.91 ಕೋಟಿ ರೂ.
• 2024-25: ಒಟ್ಟು 521.61 ಲಕ್ಷ ಮೆಟ್ರಿಕ್ ಟನ್ ಕಬ್ಬು ಅರೆಯಲಾಗಿದೆ.
• ಇದರಲ್ಲಿ ಪಾವತಿಸಿದ ಮೊತ್ತ: 19569.15 ಕೋಟಿ ರೂ.
ರಾಜ್ಯ ಸರ್ಕಾರವು ಪ್ರಸಕ್ತ ಹಂಗಾಮಿನಲ್ಲಿ ಕಬ್ಬು ಬೆಳೆಗಾರರ ಹಿತಾಸಕ್ತಿ ಕಾಪಾಡುವ ಉದ್ದೇಶದಿಂದ ಮಹತ್ವದ ನಿರ್ಧಾರಗಳನ್ನು ಕೈಗೊಂಡಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರು ಮತ್ತು ರೈತ ಪ್ರತಿನಿಧಿಗಳ ನಡುವಿನ ಸಭೆಯಲ್ಲಿ ತೀರ್ಮಾನಿಸಿದಂತೆ ನವೆಂಬರ್ 8ರಂದು ಸರ್ಕಾರವು ಅಧಿಕೃತ ಆದೇಶವನ್ನು ಹೊರಡಿಸಿತ್ತು. ಈ ಆದೇಶದ ಪ್ರಕಾರ, ಕನಿಷ್ಠ ಹೆಚ್ಚುವರಿ ಕಬ್ಬು ಬೆಲೆಯನ್ನು ನಿಗದಿಪಡಿಸಲಾಗಿತ್ತು. 9.5% ಅಥವಾ ಕಡಿಮೆ ಸಕ್ಕರೆ ಇಳುವರಿ ದರ ಇರುವ ಕಬ್ಬಿಗೆ ಪ್ರತಿ ಟನ್‌ಗೆ ಕಾರ್ಖಾನೆ ಮತ್ತು ರಾಜ್ಯ ಸರ್ಕಾರದಿಂದ ತಲಾ ₹50 ರಂತೆ ಒಟ್ಟು ₹100 ಹೆಚ್ಚುವರಿ ಬೆಲೆಯನ್ನು ಘೋಷಿಸಲಾಯಿತು. ಅದೇ ರೀತಿ, 10.25% ಇಳುವರಿ ದರಕ್ಕೆ, ಕಟಾವು ಮತ್ತು ಸಾಗಾಟ ವೆಚ್ಚ ಹೊರತುಪಡಿಸಿ, ಪ್ರತಿ ಟನ್‌ಗೆ ಒಟ್ಟು ₹3,200 ದರ ನಿಗದಿಪಡಿಸಲಾಗಿತ್ತು. ಒಟ್ಟಾರೆಯಾಗಿ ರೈತರಿಗೆ ₹3300 ದೊರೆಯುವಂತೆ ದರ ನಿಗದಿಪಡಿಸಲಾಗಿತ್ತು.








