ಬೆಂಗಳೂರು: ಪ್ರಧಾನ ಮಂತ್ರಿ ಆವಾಸ್ ಯೋಜನೆ 2.0 ಅಡಿಯಲ್ಲಿ ಫಲಾನುಭವಿ ನೇತೃತ್ವದ ನಿರ್ಮಾಣ ವಸತಿ ಯೋಜನೆ (ಬಿಎಲ್‍ಸಿ), ಪಾಲುದಾರಿಕೆಯಲ್ಲಿ ಕೈಗೆಟಕುವ ಬಹುಮಹಡಿ ವಸತಿ ಯೋಜನೆ (ಎಎಚ್‍ಪಿ), ಕೈಗೆಟಕುವ ಬಾಡಿಗೆ ವಸತಿ ಯೋಜನೆ (ಎಆರ್‍ಎಚ್), ಬಡ್ಡಿ ಸಹಾಯಧನ (ಸಬ್ಸಿಡಿ) ವಸತಿ ಯೋಜನೆ (ಐಎಸ್‍ಎಸ್) ಈ 4 ವಸತಿ ಯೋಜನೆಗಳ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ಬಡ ಹಾಗೂ ಮಧ್ಯಮ ವರ್ಗದ ವಸತಿ ರಹಿತ (ಖಾಲಿ ನಿವೇಶನ/ಕಚ್ಚಾ ಮನೆ ಹೊಂದಿರುವ) ಹಾಗೂ ನಿವೇಶನ ರಹಿತ ಕುಟುಂಬಗಳಿಗೆ ವಸತಿ ಸೌಲಭ್ಯ ಕಲ್ಪಿಸಲು ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಆವಾಸ್ ಯೋಜನೆ-2.0 (ನಗರ) ದಡಿ ಅರ್ಜಿ ಆಹ್ವಾನಿಸಿದೆ.
ಭಾರತದಾದ್ಯಂತ ತಮ್ಮ ಹಾಗೂ ತಮ್ಮ ಕುಟುಂಬದ ಹೆಸರಿನಲ್ಲಿ ಸ್ವಂತ ಪಕ್ಕಾ ಮನೆಯನ್ನು ಹೊಂದಿರದ ಹಾಗೂ ರಾಜ್ಯ ಹಾಗೂ ಕೇಂದ್ರ ಸರ್ಕಾರ ಯಾವುದೇ ಯೋಜನೆ / ಇತರೆ ಇಲಾಖೆಯಿಂದ ಕಳೆದ 20 ವರ್ಷಗಳಲ್ಲಿ ಸಹಾಯಧನ ಪಡೆದು ಮನೆ ನಿರ್ಮಿಸದ ಎಲ್ಲಾ ಅರ್ಹ ವಸತಿ ರಹಿತ ಹಾಗೂ ನಿವೇಶನ ರಹಿತರು ವಸತಿ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ. ಆಸಕ್ತಿಯುಳ್ಳವರು ದಿನಾಂಕ15-07-2025ರೊಳಗಾಗಿ https://pmay-urban.gov.in ವೆಬ್‌ಸೈಟ್‌ನ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು :
1. ಫಲಾನುಭವಿಯು ವಿವಾಹಿತ ಮಹಿಳೆ ಅಥವಾ ಏಕ ಮಹಿಳಾ ಒಡೆತನದ ಗೃಹಿಣಿಯಾಗಿರಬೇಕು. ಇವರನ್ನು ಹೊರತುಪಡಿಸಿ ಪುರುಷರಾಗಿದ್ದಲ್ಲಿ ಮಾಜಿ ಯೋದರು, ವಿಧುರರು, ಅಂಗವಿಕಲರು, ಹಿರಿಯ ನಾಗರೀಕರು ಹಾಗೂ ವಿಚ್ಛೇದಿತರು ಅರ್ಹರಾಗಿರುತ್ತಾರೆ.
2.ವಾರ್ಷಿಕ ಆದಾಯ 2 ಲಕ್ಷದೊಳಗಿರಬೇಕು.
3. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಬೇರೆ ಯಾವುದೇ ಯೋಜನೆ / ಇಲಾಖೆಯಿಂದ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಆಯ್ಕೆಯಾಗಿ 20 ವರ್ಷದಿಂದ ವಸತಿ ಯೋಜನೆಯಡಿಯಲ್ಲಿ ಸಹಾಯಧನ ಪಡೆದು ಮನೆ ನಿರ್ಮಾಣ ಮಾಡಿಕೊಂಡಿರಬಾರದು.
4. ಸಂಬಂಧಪಟ್ಟ ನಗರ / ಪಟ್ಟಣದ ದಿನಾಂಕ 01-09-2024ರೊಳಗೆ ವಾಸವಿರುವವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
5. ರಾಜ್ಯದ ಯಾವುದೇ ಭಾಗದಲ್ಲಿ ನಿವೇಶನ ಅಥವಾ ವಸತಿ ಹೊಂದಿರದ ಕುಟುಂಬವನ್ನು ನಿವೇಶನ ರಹಿತರು ಎಂದು ಪರಿಗಣಿಸಲಾಗುವುದು. 06.ರಾಜ್ಯದ ಯಾವುದೇ ಭಾಗದಲ್ಲಿ ತಮ್ಮ ಸ್ವಂತ ನಿವೇಶನದಲ್ಲಿ ಪಕ್ಕಾ ಮನೆಯನ್ನು ಹೊಂದಿರದ ಹಾಗೂ ಕಚ್ಚಾ ಮನೆಯನ್ನು ಹೊಂದಿರುವ ಕುಟುಂಬವನ್ನು ವಸತಿ ರಹಿತ ಕುಟುಂಬವೆಂದು ಪರಿಗಣಿಸಲಾಗುವುದು.
7. ಅರ್ಜಿದಾರರು ಸ್ವಂತ ನಿವೇಶನ ಹೊಂದಿದ್ದಲ್ಲಿ ನಿವೇಶನಕ್ಕೆ ಸಂಬಂಧಿಸಿದಂತೆ ಹಕ್ಕುಪತ್ರ / ಕ್ರಯ ಪತ್ರ / ದಾನ ಪತ್ರ / ಉಡುಗೊರೆ ಪತ್ರ / ಖಾತಾ ಪತ್ರಗಳನ್ನು ಹೊಂದಿರಬೇಕು.
8. ಈ ಹಿಂದೆ ಪ್ರಧಾನ ಮಂತ್ರಿ ಆವಾಸ್ ಯೋಜನೆ-ನಗರ ದಡಿ ಆಯ್ಕೆಯಾಗಿ ಮನೆ ನಿರ್ಮಿಸದೇ ದಿನಾಂಕ 31-12-2023ರ ನಂತರ ಕೇಂದ್ರ ಸರ್ಕಾರದಿಂದ ಮನೆ ರದ್ದಾದ ಫಲಾನುಭವಿಗಳು ಅರ್ಜಿ ಸಲ್ಲಿಸಲು ಅನರ್ಹರಾಗಿರುತ್ತಾರೆ.
ಅರ್ಜಿದಾರರು ಹೊಂದಿರಬೇಕಾದ ದಾಖಲೆಗಳು :
* ಆಧಾರ್ ಕಾರ್ಡ್ (ಮನೆಯ ಯಜಮಾನ/ನಿ ಹಾಗೂ ತಂದೆ / ತಾಯಿ ಮತ್ತು ಪಡಿತರ ಚೀಟಿಯಲ್ಲಿ ಇರುವಂತಹ ಕುಟುಂಬ ಸದಸ್ಯರ ಆಧಾರ್ ಕಾರ್ಡ್‌ಗಳು)
* ವಸತಿ ರಹಿತರಾದಲ್ಲಿ ನಿವೇಶನಕ್ಕೆ ಸಂಬಂಧಿಸಿದ ದಾಖಲೆಗಳು (ಹಕ್ಕುಪತ್ರ / ಕ್ರಯ ಪತ್ರ / ದಾನ ಪತ್ರ / ಉಡುಗೊರೆ ಪತ್ರ / ಖಾತಾ ಪತ್ರ)
* ಆದಾಯ ಮತ್ತು ಜಾತಿ ಪ್ರಮಾಣ ಪತ್ರ.
* ಪಡಿತರ ಚೀಟಿ
* ಬ್ಯಾಂಕ್ ಖಾತೆಯ ವಿವರ.
* ನಿಗದಿತ ನಮೂನೆ (Annexure-2A/2B/2C) ಯಲ್ಲಿ “Self Undertaking” ಸಲ್ಲಿಸುವುದು.
* ಮೊಬೈಲ್ ಸಂಖ್ಯೆ
* ಪಾನ್ ಕಾರ್ಡ್ (ಲಭ್ಯವಿದ್ದಲ್ಲಿ ಮಾತ್ರ)
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 15-07-2025 ಆಗಿರುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ಸಂಸ್ಥೆಗಳಾದಂತ ನಗರಸಭೆ, ಪುರಸಭೆಗಳ ವಸತಿ ಶಾಖೆಯನ್ನು ಸಂಪರ್ಕಿಸಬಹುದಾಗಿದೆ.