ಬೆಂಗಳೂರು :ಬಿಎಂಟಿಸಿಯಿಂದ ವಿದ್ಯಾರ್ಥಿಗಳಿಗೆ ಬಸ್ ಪಾಸ್ ವಿತರಣೆ ಸಂಬಂಧ ಆನ್‌ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಜೂನ್ 1ರಿಂದ ವಿದ್ಯಾರ್ಥಿ ಬಸ್ ಪಾಸ್ ವಿತರಣೆ ಮಾಡಲಾಗುವುದು ಎಂದು ನಿಗಮ ತಿಳಿಸಿದೆ.
ಸರ್ಕಾರದ ನಿರ್ದೇಶನದಂತೆ ಉಚಿತ/ರಿಯಾಯಿತಿ ದರದಲ್ಲಿ ವಿದ್ಯಾರ್ಥಿ ಪಾಸ್‌ಗಳನ್ನು ವಿತರಣೆ ಮಾಡಲಾಗುತ್ತಿದ್ದು, 2024-25ನೇ ಸಾಲಿನ ವಿದ್ಯಾರ್ಥಿ ಪಾಸ್‌ನ ಮೇ 29ರಿಂದ ಆನ್‌ಲೈನ್ ಮೂಲಕ ಅರ್ಜಿ ಸ್ವೀಕರಿಸಿ, ಜೂನ್ 1ರಿಂದ ವಿದ್ಯಾರ್ಥಿ ಪಾಸ್‌ಗಳನ್ನು ಬೆಂಗಳೂರು ಒನ್ ಕೇಂದ್ರಗಳ ಮೂಲಕ ವಿತರಣೆ ಮಾಡಲಾಗುವುದು.
2024-25ನೇ ಸಾಲಿನ ವಿದ್ಯಾರ್ಥಿ ರಿಯಾಯಿತಿ ಪಾಸ್‌ನ ಆನ್‌ಲೈನ್ ಅರ್ಜಿಯು ಸೇವಾಸಿಂಧು ಪೋರ್ಟಲ್‌ನಲ್ಲಿ ಲಭ್ಯವಿರುತ್ತದೆ. ವಿದ್ಯಾರ್ಥಿಗಳು ಬೆಂಗಳೂರು ಒನ್ ಕೇಂದ್ರಗಳ ಮೂಲಕ ವಿದ್ಯಾರ್ಥಿ ಪಾಸ್‌ಗಾಗಿ ಅರ್ಜಿಯನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ವಿದ್ಯಾರ್ಥಿ ಪಾಸ್‌ಗಳನ್ನು ಬೆಳಗ್ಗೆ 8ರಿಂದ ಸಂಜೆ 6.30ರವರೆಗೆ ವಾರದ ಎಲ್ಲಾ ದಿನಗಳಲ್ಲಿ ಬೆಂಗಳೂರು ಒನ್ ಕೇಂದ್ರಗಳಲ್ಲಿ ಹಾಗೂ ಬಿಎಂಟಿಸಿಯ ಕೆಂಪೇಗೌಡ ಬಸ್ ನಿಲ್ದಾಣ, ಕೆಂಗೇರಿ ಟಿಟಿಎಂಸಿ, ಹೊಸಕೋಟೆ, ಎಲೆಕ್ಟ್ರಾನಿಕ್ ಸಿಟಿ ಘಟಕ-19, ಶಾಂತಿನಗರ ಟಿಟಿಎಂಸಿ, ಕರಾರಸಾನಿ ಆನೇಕಲ್ ಬಸ್ ನಿಲ್ದಾಣದಲ್ಲಿ ವಿತರಿಸಲಾಗುವುದು.