ಬೆಂಗಳೂರು: ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆ (ಇಂಡಿಯನ್ ಇನ್ಸಿಟ್ಯೂಟ್ ಆಫ್ ಆಸ್ತ್ರೋ ಫಿಜಿಕ್ಸ್-ಐಐಎ) ರಾಜ್ಯಾದ್ಯಂತ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನಿರ್ವಹಿಸುತ್ತಿರುವ ಗ್ರಾಮೀಣ ಗ್ರಂಥಾಲಯಗಳಾದ ಅರಿವು ಕೇಂದ್ರಗಳ ಮೂಲಕ ಖಗೋಳವನ್ನು ಉತ್ತೇಜಿಸಲು ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ರಾಜ್ಯದಲ್ಲಿ ಸುಮಾರು 6000 ಅರಿವು ಕೇಂದ್ರಗಳನ್ನು ನಿರ್ವಹಿಸುತ್ತಿದೆ, ಇವು ಪ್ರಾಥಮಿಕವಾಗಿ ಗ್ರಾಮೀಣ ಪ್ರದೇಶಗಳಲ್ಲಿದ್ದು ಇವುಗಳನ್ನು ಗ್ರಂಥಾಲಯ ಮೇಲ್ವಿಚಾರಕರು ನಿರ್ವಹಿಸುತ್ತಿದ್ದಾರೆ.
ಖಗೋಳ ಭೌತಶಾಸ್ತ್ರ ಸಂಸ್ಥೆಯೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆಯಂತೆ ಖಗೋಳದಲ್ಲಿ ಅರಿವು ಮತ್ತು ಆಸಕ್ತಿಯನ್ನು ಉತ್ತೇಜಿಸಲು ಗ್ರಾಮೀಣಾಭಿವೃದ್ಧಿ ಇಲಾಖೆಯೊಂದಿಗೆ ಸಂಸ್ಥೆ ವಿವಿಧ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಿದೆ ಹಾಗೂ ಅರಿವು ಕೇಂದ್ರಗಳು ಸೇವೆ ಸಲ್ಲಿಸುವ ಪ್ರದೇಶಗಳ ಸಮುದಾಯಗಳಲ್ಲಿ ವಿಜ್ಞಾನ ಸಾಕ್ಷರತೆ ಮತ್ತು ವೈಜ್ಞಾನಿಕ ಮನೋಭಾವವನ್ನು ಉತ್ತೇಜಿಸುತ್ತದೆ. ಮೇಲ್ವಿಚಾರಕರ ತರಬೇತಿ ಮತ್ತು ಮಾರ್ಗದರ್ಶನ, ಕನ್ನಡದಲ್ಲಿ ಖಗೋಳಸಂಪನ್ಮೂಲಗಳ ರಚನೆ ಮತ್ತು ಆಕಾಶಕಾಯಗಳ ಘಟನೆಗಳ ಸುತ್ತ ಸಾರ್ವಜನಿಕ ಚಟುವಟಿಕೆಗಳನ್ನು ಆಯೋಜಿಸುವಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನಡುವೆ ಆಗಿರುವ ಒಪ್ಪಂದದಂತೆ ಬರಿಗಣ್ಣಿನಿಂದ ನೋಡಬಹುದಾದ ಖಗೋಳಘಟನೆಗಳ ಬಗ್ಗೆ ಮತ್ತು ಖಗೋಳದ ವಿವರಗಳನ್ನು ಕನ್ನಡದಲ್ಲಿ ಒದಗಿಸಲು ಅನುವು ಮಾಡಿಕೊಡುತ್ತದೆ. ಸಾರ್ವಜನಿಕರು, ವಿಶೇಷವಾಗಿ ವಿದ್ಯಾರ್ಥಿಗಳು ಕಡಿಮೆ ವೆಚ್ಚದಲ್ಲಿ ಖಗೋಳಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ನಡೆಸಲು ಗ್ರಂಥಾಲಯ ಮೇಲ್ವಿಚಾರಕರಿಗೆ ತರಬೇತಿ ನೀಡುವುದು, ಅರಿವು ಕೇಂದ್ರಗಳಲ್ಲಿನ ಕಂಪ್ಯೂಟರ್ ಲ್ಯಾಬ್‌ಗಳ ಮೂಲಕ ಚರ್ಚೆ ಹಾಗೂ ಸ್ಪರ್ಧೆಗಳನ್ನು ಏರ್ಪಡಿಸುವುದು ಮತ್ತು ಡಿಜಿಟಲ್ ಪರಿಕರಗಳ ರೂಪದಲ್ಲಿ ಆನ್‌ಲೈನ್ ಸಂವಹನಗಳನ್ನು ಉತ್ತೇಜಿಸುವ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗುವದಲ್ಲದೆ, ಸಣ್ಣ ದೂರದರ್ಶಕಗಳ ಬಳಕೆಯ ತರಬೇತಿಯನ್ನೂ ನೀಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರು ಮಾಹಿತಿ ನೀಡಿದ್ದಾರೆ.
ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆಯ ನಿರ್ದೇಶಕರಾದ ಅನ್ನಪೂರ್ಣಿ ಸುಬ್ರಮಣ್ಯಂ ಮತ್ತು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಆಯುಕ್ತ (ಪಂಚಾಯತ್ ರಾಜ್) ಡಾ. ಅರುಂಧತಿ ಚಂದ್ರಶೇಖರ್ ಈ ಒಡಂಬಡಿಕೆಗೆ ಸಹಿ ಹಾಕಿದರು.
BIG NEWS: ಸಾಗರದ ‘ಉಳ್ಳೂರು ವ್ಯಾಪ್ತಿ’ಯಲ್ಲಿ ‘ಸಾಗುವಾನಿ ಮರ’ಗಳ ಕಳ್ಳಸಾಗಾಟ: ಕಣ್ಮುಚ್ಚಿ ಕುಳಿತ ‘ಅರಣ್ಯ ಇಲಾಖೆ’