ಬೆಂಗಳೂರು: ನಮಗೆ ತೀರ್ಥ, ಪ್ರಸಾದ ಬೇಡ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರೇ, ಶಾಲೆಗೆ ಹೋಗಿ ಬರೋದಕ್ಕೆ ಬಸ್ ಕೊಡಿ ಎಂದು 8ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಪತ್ರ ಬರೆದಿದ್ದರು. ಹೀಗೆ ಸಿಎಂ ಸಿದ್ಧರಾಮಯ್ಯಗೆ ವಿದ್ಯಾರ್ಥಿನಿ ಬರೆದಂತ ಪತ್ರ ವೈರಲ್ ಆಗಿತ್ತು. ಈ ಬೆನ್ನಲ್ಲೇ ಬೆಂಗಳೂರಲ್ಲಿ ಉತ್ತಮ ಸಾರಿಗೆ ಸೇವೆ ಒದಗಿಸುತ್ತಿರುವಂತ BMTCಯಿಂದ ಈ ಕೆಳಗಿನಂತೆ ಸ್ಪಷ್ಟನೆ ನೀಡಲಾಗಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ BMTCಯು, ಕುಮಾರಿ ಹರ್ಷಿನ್ ವಿ.ವೈ. 8ನೇ ತರಗತಿ ವಿದ್ಯಾರ್ಥಿನಿಯು ತಾವರೆಕೆರೆಯಿಂದ ಶ್ರೀನಗರಕ್ಕೆ ನೇರ ಬಸ್ ವ್ಯವಸ್ಥೆಯನ್ನು ನೀಡುವಂತೆ ಕೋರಿರುವ ಮನವಿಯನ್ನು ಹಾಗೂ ಸದರಿ ವಿದ್ಯಾರ್ಥಿನಿಯ ಮನವಿಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹೊನ್ನಗನಹಟ್ಟಿ, ಚನ್ನೇನಹಳ್ಳಿ, ಜಟ್ಟಿಪಾಳ್ಯ, ಸೀಗೇಹಳ್ಳಿಗಳಿಂದ ಬೆಂಗಳೂರು ನಗರಕ್ಕೆ ಬಸ್ ಸೌಲಭ್ಯವಿಲ್ಲವೆಂದು ಪ್ರಕಟವಾದ ಸುದ್ದಿಗೆ ಕೆಳಕಂಡಂತೆ ವಿವರಣೆ ನೀಡಲಾಗಿದೆ ಎಂದಿದೆ.
ಕುಮಾರಿ ಹರ್ಷಿನ್ ವಿ.ವೈ. 8ನೇ ತರಗತಿ ವಿದ್ಯಾರ್ಥಿನಿಯು ತಾವರೆಕೆರೆಯಿಂದ ಶ್ರೀನಗರಕ್ಕೆ ನೇರ ಸಾರಿಗೆ ಸೌಲಭ್ಯವನ್ನು ಕೋರಿದ್ದು, ಪ್ರಸ್ತುತ ತಾವರೆಕೆರೆಯಿಂದ ಹಾಗೂ ತಾವರೆಕೆರೆ ಮಾರ್ಗವಾಗಿ ಕೆಂಪೇಗೌಡ ಬಸ್ ನಿಲ್ದಾಣ ಮತ್ತು ಕೃ.ರಾ.ಮಾರುಕಟ್ಟೆಗೆ ಬೆಳಿಗ್ಗೆಯಿಂದ ರಾತ್ರಿಯವರೆಗೆ ಪ್ರತಿ 5 ರಿಂದ 10 ನಿಮಿಷಕ್ಕೊಂದರಂತೆ ಸಾರಿಗೆ ಸೌಲಭ್ಯವಿರುತ್ತದೆ. ಒಂದು ಅಥವಾ ಎರಡು ಕಡೆ ಬಸ್ ಬದಲಾಯಿಸುವ ಮೂಲಕ ಶ್ರೀನಗರಕ್ಕೆ ಪ್ರಯಾಣಿಸಬಹುದಾಗಿರುತ್ತದೆ. ಅಲ್ಲದೇ ಹೊನ್ನಗನಹಟ್ಟಿ, ಚನ್ನೇನಹಳ್ಳಿ ಗ್ರಾಮಗಳು ಮಾಗಡಿ ಮುಖ್ತರಸ್ತೆಗೆ ಹೊಂದಿಕೊಂಡಿದ್ದು, ಜಟ್ಟಿಪಾಳ್ಯ ಗ್ರಾಮವು ಚನ್ನೇನಹಳ್ಳಿಗೆ ಹೊಂದಿಕೊಂಡಿರುತ್ತದೆ. ಈಗಾಗಲೇ ಹೊನ್ನಗನಹಟ್ಟಿ, ಚನ್ನೇನಹಳ್ಳಿ ಮಾರ್ಗವಾಗಿ ಪ್ರತಿ 5 ರಿಂದ 10 ನಿಮಿಷಕ್ಕೊಂದರಂತೆ ಸಾರಿಗೆಗಳು ಆಚರಣೆಯಲ್ಲಿರುತ್ತವೆ ಎಂದು ತಿಳಿಸಿದೆ.
ಮುಂದುವರೆದು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು, ಸಾರ್ವಜನಿಕ ಸೇವಾ ಸಂಸ್ಥೆಯಾಗಿದ್ದು, ಬೆಂಗಳೂರು ನಗರ ಹಾಗೂ ಹೊರ ವಲಯದ ಸಾರ್ವಜನಿಕ ಪ್ರಯಾಣಿಕರಿಗೆ ಉತ್ತಮ, ಸುಲಭ, ಸುರಕ್ಷಿತ ಸಾರಿಗೆ ಸೇವೆಯನ್ನು ಒದಗಿಸಲು ನಿರಂತರವಾಗಿ ಶ್ರಮಿಸುತ್ತಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಿಂದ 25.0 ಕಿ.ಮೀ.ವರೆಗೆ ಕಾರ್ಯಾಚರಣೆ ವ್ಯಾಪ್ತಿಯನ್ನು ಹೊಂದಿದ್ದು, ಪ್ರತಿದಿನ 5,586 ಅನುಸೂಚಿಗಳಿಂದ 57,820 ಸುತ್ತುವಳಿಗಳನ್ನು ಬೆಂಗಳೂರು ನಗರ ಹಾಗೂ ಹೊರ ವಲಯದಲ್ಲಿ ಆಚರಣೆಗೊಳಿಸುತ್ತಿದ್ದು, ಸರಾಸರಿ 40 ಲಕ್ಷ ಪ್ರಯಾಣಿಕರು ಸಂಸ್ಥೆಯ ಸಾರಿಗೆಗಳಲ್ಲಿ ಪ್ರಯಾಣಿಸುತ್ತಿದ್ದಾರೆ ಎಂದಿದೆ.
ಸಾರ್ವಜನಿಕ ಪ್ರಯಾಣಿಕರ ಹೊಣೆಗಾರಿಕೆಯಲ್ಲಿ ನಗರದ ಹೊರ ವಲಯ ಪ್ರದೇಶಗಳಿಂದ ನಗರದ ಕೇಂದ್ರ ಭಾಗದ ನಿಲ್ದಾಣಗಳಾದ ಕೆಂಪೇಗೌಡ ಬಸ್ ನಿಲ್ದಾಣ ಹಾಗೂ ಕೃ.ರಾ.ಮಾರುಕಟ್ಟೆಗೆ ನೇರ ಸಾರಿಗೆ ಸೌಲಭ್ಯವನ್ನು ಕಲ್ಪಿಸಲಾಗಿದೆ. ಅಲ್ಲದೇ ನಗರದ ಕೇಂದ್ರ ಭಾಗದಲ್ಲಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ನಗರದ ಹೊರವಲಯದಲ್ಲಿರುವ ಟಿಟಿಎಂಸಿ/ ನಿಲ್ದಾಣಗಳಿಂದ, ಇನ್ನೊಂದು ಟಿಟಿಎಂಸಿ/ನಿಲ್ದಾಣಗಳಿಗೆ ನೇರ ಸಾರಿಗೆ ಸೌಲಭ್ಯವನ್ನು ಕಲ್ಪಿಸಲಾಗಿದೆ ಎಂದು ಹೇಳಿದೆ.
ಈಗಾಗಲೇ ತಾವರೆಕೆರೆ ಹಾಗೂ ಶ್ರೀನಗರ ಎರಡು ಪ್ರದೇಶಗಳಿಗೆ ಪ್ರತ್ಯೇಕವಾಗಿ ಸಂಸ್ಥೆಯಿಂದ ಸಮರ್ಪಕ ಸಾರಿಗೆ ಸೇವೆಯನ್ನು ಒದಗಿಸಲಾಗಿದೆ. ಬೆಂಗಳೂರಿನಂತಹ ಮಹಾನಗರದಲ್ಲಿ ಒಂದು ಬಡಾವಣೆಯಿಂದ ಇನ್ನೊಂದು ಬಡಾವಣೆಗೆ ನೇರ ಸಾರಿಗೆ ಸೌಲಭ್ಯವನ್ನು ಕಲ್ಪಿಸುವುದು ಕಷ್ಟಸಾಧ್ಯ. ಆದ್ದರಿಂದ ತಾವರೆಕೆರೆಯಿಂದ ಶ್ರೀನಗರಕ್ಕೆ ಪ್ರಯಾಣಿಸುವ ಪ್ರಯಾಣಿಕರು ಕೆಂಪೇಗೌಡ ಬಸ್ ನಿಲ್ದಾಣ ಅಥವಾ ಕೃ.ರಾ.ಮಾರುಕಟ್ಟೆಯಲ್ಲಿ ಒಂದು ಕಡೆ ಬಸ್ ಬದಲಾಯಿಸುವ ಮೂಲಕ ಅಥವಾ ಸುಮನಹಳ್ಳಿ ಜಂಕ್ಷನ್ ಹಾಗೂ ಹೊಸಕೆರೆಹಳ್ಳಿ ಕ್ರಾಸ್‌ನಲ್ಲಿ ಎರಡು ಕಡೆ ಬಸ್ ಬದಲಾಯಿಸುವ ಮೂಲಕ ಶ್ರೀನಗರಕ್ಕೆ ಪ್ರಯಾಣಿಸಬಹುದಾಗಿದೆ ಎಂದು ತಿಳಿಸಿದೆ.
ಅಲ್ಲದೇ ಸಂಸ್ಥೆಯಿಂದ ವಿದ್ಯಾರ್ಥಿ ಸಮುದಾಯದ ಅನುಕೂಲಕ್ಕಾಗಿ ಒಂದರಿಂದ ಎರಡು ಕಡೆ ಬಸ್ ಬದಲಾಯಿಸುವ ವ್ಯವಸ್ಥೆಯೊಂದಿಗೆ ವಿದ್ಯಾರ್ಥಿ ರಿಯಾಯಿತಿ ಪಾಸುಗಳ ಸೌಲಭ್ಯ ಕಲ್ಪಿಸಲಾಗಿದೆ ಎಂದಿದೆ.
ಇದು ಮಾಗಡಿ ರಸ್ತೆಯ ತಾವರೆಕೆರೆ, ಸದರಿ ವಿದ್ಯಾರ್ಥಿನಿಯು ನಮ್ಮಸಂಸ್ಥೆಯ ನಿರ್ವಾಹಕರ ಮಗಳಾಗಿದ್ದು, ಅವರಿಗೂ ಈ ಬಗ್ಗೆ ಮಾಹಿತಿ ಇದೆ. ಹಲವಾರು ವಿದ್ಯಾರ್ಥಿಗಳು ತಾವರೆಕರೆ ಮತ್ತು ಸುತ್ತಮುತ್ತಲಿನ ಸ್ಥಳಗಳಿಂದ ವಿದ್ಯಾಭ್ಯಾಸಕ್ಕಾಗಿ ಪ್ರಯಾಣ ಮಾಡುತ್ತಾರೆ. ದೂರದ ಸ್ಥಳಗಳಿಂದ ಬರುವ ಮಕ್ಕಳಿಗೆ ಮನೆಯಿಂದ ನೇರವಾಗಿ ಕಾಲೇಜಿಗೆ ಸಂಪರ್ಕ ಕಲ್ಪಿಸುವುದು ಸಾಧ್ಯವಿಲ್ಲ. ಬೆಂಗಳೂರಿಗೆ ಬಂದು ಮತ್ತೊಂದು ಬಸ್ ಮೂಲಕವೇ ತೆರಳಬೇಕಾಗಿರುತ್ತದೆ. ಅದರಲ್ಲಿಯೂ ಈ ಮಾರ್ಗದಲ್ಲಿ ಪ್ರತಿ 5 ನಿಮಿಷಕ್ಕೊಂದು ಬಸ್ ಸೌಲಭ್ಯವಿದೆ. ಆದ್ದರಿಂದ ಸಾರ್ವಜನಿಕ ಪ್ರಯಾಣಿಕರು ಹಾಲಿಯಿರುವ ಸಾರಿಗೆಗಳಲ್ಲಿ ಪ್ರಯಾಣಿಸಿ, ಸಂಸ್ಥೆಯೊಡನೆ ಸಹಕರಿಸಲು ಕೋರಿದೆ.