ಬೆಂಗಳೂರು: ಕಾಲೇಜುಗಳು ಹಾಗೂ ವಿವಿಯಲ್ಲಿ ವಿದ್ಯಾರ್ಥಿ ಚುನಾವಣೆಗಳನ್ನು ನಡೆಸುವ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಅವರು ರಚಿಸಿದ ಸಮಿತಿಯು ಮಂಗಳವಾರ *ವೈದ್ಯಕೀಯ ಶಿಕ್ಷಣ ಹಾಗೂ ಕೌಶಲಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅಧ್ಯಕ್ಷತೆಯಲ್ಲಿ ಮೊದಲ ಸಭೆ ನಡೆಸಿತು.
ಬೆಂಗಳೂರಿನ ಕೆಪಿಸಿಸಿ ಭವನದಲ್ಲಿ ನಡೆದ ಸಭೆಯಲ್ಲಿ ಸಮಿತಿಯು, ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಚುನಾವಣೆ ನಡೆಸುವ ಕುರಿತು ಸಾಧಕ ಬಾಧಕಗಳ ಬಗ್ಗೆ ಸುಧೀರ್ಘ ಚರ್ಚೆ ನಡೆಸಿತು.
ಕಾಲೇಜುಗಳು ಹಾಗೂ ವಿಶ್ವವಿದ್ಯಾನಿಲಯಗಳಲ್ಲಿ ವಿದ್ಯಾರ್ಥಿ ಚುನಾವಣೆಗಳನ್ನು ನಡೆಸುವ ಅಗತ್ಯತೆ, ಪ್ರಸ್ತುತತೆ, ಹಾಗೂ ಕೈಗೊಳ್ಳಬೇಕಾದ ಮುಂಜಾಗ್ರತೆ ಕ್ರಮಗಳು, ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಸಮಿತಿಯು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡಿತು.
ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸಬೇಕಾದರೆ ಚುನಾವಣೆ ನಡೆಸುವುದು ಅತ್ಯಗತ್ಯ ಎಂಬ ಅಭಿಪ್ರಾಯವನ್ನು ಸಮಿತಿಯ ಸದಸ್ಯರು ಸಭೆಯಲ್ಲಿ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳ ಚುನಾವಣೆಗಳನ್ನು ಪ್ರಜಾಪ್ರಭುತ್ವ ವ್ಯವಸ್ಥೆ ಬಲಪಡಿಸುವುದು, ಶೈಕ್ಷಣಿಕ ಮತ್ತು ಸಾಮಾಜಿಕ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು ನಡೆಸಬೇಕು.ಯಾವುದೇ ಕಾರಣಕ್ಕೂ ಏಕಪಕ್ಷಿಯಾಗಿ ನಿರ್ಧಾರ ತೆಗೆದುಕೊಳ್ಳುದೆ, ಎಲ್ಲರ ಅಭಿಪ್ರಾಯವನ್ನು ಕ್ರೋಢಿಕರಿಸಿಕೊಂಡು ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕೆಂಬ ಸಲಹೆಯು ಕೇಳಿಬಂದಿತು.
ಚುನಾವಣೆ ನಡೆಸುವ ಮೊದಲು ಸಂಬಂಧಪಟ್ಟವರ ಜೊತೆ ಸಮಾಲೋಚನೆ, ಸಭೆಗಳು, ಪೋಷಕರ ಜೊತೆಗೆ ಚರ್ಚೆ, ಅಭಿಪ್ರಾಯ ಸಂಗ್ರಹಣೆ ,ಸಾರ್ವಜನಿಕರ ಜೊತೆ ಸಂವಾದ, ಶಿಕ್ಷಣ ತಜ್ಞರ ಜೊತೆ ಸೇರಿದಂತೆ ಹಲವರ ಜೊತೆ ಮುಕ್ತ ಸಂವಾದಗಳನ್ನು ನಡೆಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಸಭೆಯು ಸರ್ವಾನುಮತದಿಂದ ತೀರ್ಮಾನಿಸಿತು.
ಮುಂದಿನ ಸಭೆಯು ಇದೇ ತಿಂಗಳ 22 ರಂದು ಪುನಃ ನಡೆಯಲಿದ್ದು ಸಾರ್ವಜನಿಕರಿಂದ ವ್ಯಕ್ತವಾಗುವ ಅಭಿಪ್ರಾಯಗಳನ್ನು ಪರಿಶೀಲಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲು ಸಭೆ ನಿರ್ಧರಿಸಿದೆ.
ಮಂಗಳವಾರ ನಡೆದ ಸಭೆಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಎಂ ಸಿ ಸುಧಾಕರ್, ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹಮದ್, ಶಾಸಕ ರಿಜ್ವಾನ್ ಹರ್ಷದ್ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ,ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಕೆಪಿಸಿಸಿ ಸಾಮಾಜಿಕ ಮಾಧ್ಯಮದ ಐಶ್ವರ್ಯ ಮಹದೇವ್ ಎನ್ .ಎಸ್ ಯು.ಐ ನಾಯಕರಾದ ಕೀರ್ತಿ ಗಣೇಶ್ ಮತ್ತು ಲಕ್ಷ್ಯ ರಾಜ್ ಭಾಗವಹಿಸಿದ್ದರು.
ವಿದ್ಯಾರ್ಥಿಗಳು ಸಾರ್ವಜನಿಕರು ಶಿಕ್ಷಕರು ಸೇರಿದಂತೆ ಮತ್ತಿತರರು ತಮ್ಮ ಅಭಿಪ್ರಾಯಗಳನ್ನು ಸಲಹಾ ರೂಪದಲ್ಲಿ ನೀಡಲು ಸಮಿತಿಯು ಮುಕ್ತ ಅವಹಾನ ನೀಡಿದೆ . ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಚುನಾವಣೆ ನಡೆಸುವ ಸಂಬಂಧ ಸಾರ್ವಜನಿಕರು ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಳ್ಳಲು ವಿಶೇಷ ಇ-ಮೇಲ್ ಸ್ಥಾಪನೆ ಮಾಡಲಾಗಿದ್ದು karstudentselections@gmail.com ಇದರಲ್ಲಿ ಸಂಬಂಧಪಟ್ಟವರು ಸಲಹ ರೂಪದಲ್ಲಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಬಹುದು.
ಶಿವಮೊಗ್ಗ ಜಿಲ್ಲೆಯ ಜನತೆಗೆ 3023.95 ಕೋಟಿ ಗ್ಯಾರಂಟಿ ಯೋಜನೆಗಳಿಗಾಗಿ ವೆಚ್ಚ: ಉಪಾಧ್ಯಕ್ಷ ದಿನೇಶ್ ಗೂಳಿಗೌಡ








