ಇಂದಿನ ವೇಗದ ಜೀವನಶೈಲಿ, ಕೆಲಸದ ಒತ್ತಡ ಮತ್ತು ಅತಿಯಾದ ಮೊಬೈಲ್ ಬಳಕೆಯಿಂದಾಗಿ ಹೆಚ್ಚಿನವರು ‘ನಿದ್ರಾಹೀನತೆ’ (Insomnia) ಸಮಸ್ಯೆಯಿಂದ ಬಳಲುತ್ತಿದ್ದಾರೆ. ಸರಿಯಾದ ನಿದ್ರೆ ಇಲ್ಲದಿದ್ದರೆ ಅದು ಹೃದಯದ ಆರೋಗ್ಯ, ರೋಗನಿರೋಧಕ ಶಕ್ತಿ ಮತ್ತು ಮಾನಸಿಕ ನೆಮ್ಮದಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನೀವು ಸುಖವಾಗಿ ನಿದ್ರಿಸಲು ವೈದ್ಯರು ಮತ್ತು ಆರೋಗ್ಯ ತಜ್ಞರು ಶಿಫಾರಸು ಮಾಡಿರುವ ಕೆಲವು ಸುಲಭ ಉಪಾಯಗಳು ಇಲ್ಲಿವೆ:
ಮಲಗುವ ಕನಿಷ್ಠ 1 ಗಂಟೆ ಮುಂಚಿತವಾಗಿ ಮೊಬೈಲ್, ಲ್ಯಾಪ್‌ಟಾಪ್ ಮತ್ತು ಟಿವಿ ವೀಕ್ಷಣೆಯನ್ನು ನಿಲ್ಲಿಸಿ. ಇವುಗಳಿಂದ ಹೊರಬರುವ ‘ಬ್ಲೂ ಲೈಟ್’ (Blue Light) ನಿಮ್ಮ ಮೆದುಳಿನಲ್ಲಿ ನಿದ್ರೆ ತರಿಸುವ ‘ಮೆಲಟೋನಿನ್’ ಹಾರ್ಮೋನ್ ಉತ್ಪಾದನೆಯನ್ನು ತಡೆಯುತ್ತದೆ.
ಪ್ರತಿದಿನ ಒಂದೇ ಸಮಯಕ್ಕೆ ಮಲಗುವ ಮತ್ತು ಬೆಳಿಗ್ಗೆ ಒಂದೇ ಸಮಯಕ್ಕೆ ಏಳುವ ಅಭ್ಯಾಸ ಮಾಡಿಕೊಳ್ಳಿ. ಇದು ನಿಮ್ಮ ದೇಹದ ಒಳಗಿನ ಜೈವಿಕ ಗಡಿಯಾರವನ್ನು (Circadian Rhythm) ಸರಿಪಡಿಸುತ್ತದೆ. ರಾತ್ರಿ ಮಲಗುವ 2-3 ಗಂಟೆ ಮುಂಚಿತವಾಗಿ ಲಘು ಆಹಾರ ಸೇವಿಸಿ. ಕೆಫೀನ್ ಅಂಶವಿರುವ ಕಾಫಿ, ಚಹಾ ಅಥವಾ ಧೂಮಪಾನವನ್ನು ರಾತ್ರಿ ಸಮಯದಲ್ಲಿ ಮಾಡಬೇಡಿ. ಇದು ನಿದ್ರೆಗೆ ಅಡ್ಡಿಪಡಿಸುತ್ತದೆ.
ನಿಮ್ಮ ಮಲಗುವ ಕೋಣೆ ಶಾಂತವಾಗಿ, ಕತ್ತಲೆಯಿಂದ ಕೂಡಿರಲಿ ಮತ್ತು ತಾಪಮಾನವು ಹಿತಕರವಾಗಿರಲಿ. ಮಲಗುವ ಮುನ್ನ ಬಿಸಿ ನೀರಿನ ಸ್ನಾನ ಮಾಡುವುದು ಅಥವಾ ಪುಸ್ತಕ ಓದುವುದು ಮನಸ್ಸನ್ನು ಶಾಂತಗೊಳಿಸುತ್ತದೆ.ದಿನವಿಡೀ ದೈಹಿಕವಾಗಿ ಸಕ್ರಿಯರಾಗಿರಿ. ಆದರೆ ಮಲಗುವ ಸ್ವಲ್ಪ ಸಮಯದ ಮೊದಲು ಕಠಿಣ ವ್ಯಾಯಾಮ ಮಾಡಬೇಡಿ. ಸಂಜೆ ವೇಳೆಯ ನಡಿಗೆ ಅಥವಾ ಯೋಗಾಭ್ಯಾಸ ನಿದ್ರೆಗೆ ಪೂರಕವಾಗಿದೆ.








