ಬೆಂಗಳೂರು: ಸಾಂಪ್ರದಾಯಿಕ ಉಡುಗೆ ಪಂಚೆ ಧರಿಸಿದ ಗ್ರಾಮೀಣ ಭಾಗದ ರೈತನಿಗೆ ಜಿ.ಟಿ. ಮಾಲ್ ಪ್ರವೇಶ ನಿರಾಕರಿಸಿದ ಹಾಗೂ ರೈತರಿಗೆ ಅಗೌರವ ತೋರಿಸಿದ ಜಿ.ಟಿ ಮಾಲ್ನ್ನು 7 ದಿವಸಗಳ ಕಾಲ ಮುಚ್ಚಿಸಲು ಈ ಕೂಡಲೇ ಆದೇಶ ಹೊರಡಿಸಲಾಗುವುದೆಂದು ನಗರಾಭಿವೃದ್ಧಿ ಸಚಿವರಾದ ಬೈರತಿ ಸುರೇಶ್ ರವರು ವಿಧಾನಸಭೆಯಲ್ಲಿ ಹೇಳಿದರು.
ಜುಲೈ 16, 2024 ರಂದು ಗ್ರಾಮೀಣ ಭಾಗದಿಂದ ಆಗಮಿಸಿದ ಓರ್ವ ರೈತರನ್ನು ಬೆಂಗಳೂರಿನಲ್ಲಿ ವಾಸವಾಗಿರುವ ಅವರ ಮಗ ಮಾಲ್ಗೆ ಕರೆದುಕೊಂಡು ಹೋದಾಗ ಸಾಂಪ್ರದಾಯಿಕ ಉಡುಗೆ ಪಂಚೆಯನ್ನು ಧರಿಸಿದ್ದ ಕಾರಣ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಜಿ.ಟಿ ಮಾಲ್ನ ಪ್ರವೇಶಕ್ಕೆ ನಿರಾಕರಿಸಲಾಗಿದೆ. ಈ ಘಟನೆಯನ್ನು ತೀವ್ರವಾಗಿ ಖಂಡಿಸಬೇಕು ಮಾಲ್ನ ವಿರುದ್ದ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕೆಂದು ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ. ಖಾದರ್ ಸದನದಲ್ಲಿ ಪ್ರಸ್ತಾಪಿಸಿದರು.
ಸಚಿವರಾದ ಮಹಾದೇವಪ್ರಸಾದ್ ರವರು ಮಾತನಾಡಿ, ವ್ಯಕ್ತಿಯ ಘನತೆಗೆ ಸ್ವಾಭಿಮಾನಕ್ಕೆ ಧಕ್ಕೆ ಹಾಗೂ ಅಪಮಾನ ಮಾಡಿರುವುದು ಖಂಡನೀಯ. ಈ ಕೂಡಲೇ ಮಾಲ್ನ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.ವಿಧಾನಸಭೆಯ ಸಭಾಧ್ಯಕ್ಷರು ಪ್ರಸ್ತಾಪಿಸಿದ ವಿಷಯಕ್ಕೆ ರಾಣೆಬೆನ್ನೂರು ಕ್ಷೇತ್ರದ ಶಾಸಕರಾದ ಪ್ರಕಾಶ್ ಕೋಳಿವಾಡ, ಅಥಣಿ ಕ್ಷೇತ್ರದ ಶಾಸಕರಾದ ಲಕ್ಷ್ಮಣ್ ಸವದಿ, ಸರ್ಕಾರಿ ಮುಖ್ಯಸಚೇತಕರಾದ ಅಶೋಕ್ ಪಟ್ಟಣ್ ರವರು ಇದು ಬಹಳ ಗಂಭೀರವಾದ ವಿಷಯವಾಗಿದ್ದು ಸಾಮಾನ್ಯ ಜನರಿಗೆ ಪ್ರವೇಶ ನಿರಾಕರಿಸಿದ ಜಿ.ಟಿ. ಮಾಲ್ನ ಮಾಲೀಕರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಸಾಂಪ್ರದಾಯಿಕ ಉಡುಗೆ ಧರಿಸಿದ್ದ ರೈತರಿಗೆ ಅಗೌರವ ತೋರಿಸಿದ ಮಾಲ್ನ ವಿದ್ಯುತ್ನ್ನು ತತ್ಕ್ಷಣದಿಂದ ಬಂದ್ ಮಾಡಿ ಮಾಲ್ನ ಮಾಲೀಕರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಿಧಾನಸಭೆಯಲ್ಲಿ ಹೇಳಿದರು.