ಗದಗ: ನಮ್ಮ ಹಿರಿಯರ ತ್ಯಾಗದಿಂದ ದೊರೆತಿರುವ ಸ್ವಾತಂತ್ರ್ಯವನ್ನು ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸಿ ದೇಶದ್ರೋಹಿಗಳಿಗೆ ತಕ್ಕ ಪಾಠ ಕಲಿಸಿ ಮನೆಗೆ ಕಳುಹಿಸುವ ಮುಖಾಂತರ ದೇಶ ಭಕ್ತರ, ಬಲಿಷ್ಯ, ಶಾಂತಿ ಸಮೃದ್ಧಿಯ ಭಾರತ ಕಲ್ಪನೆಯನ್ನು ಮುಂದಿನ ಜನಾಂಗಕ್ಕೆ ಬಿಟ್ಟು ಹೋದರೆ ನಾವು ನಿಜವಾದ ಭಾರತ ಮಾತೆಯ ಮಕ್ಕಳು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಇಂದು ಗದಗ ಜಿಲ್ಲೆಯ ನರಗುಂದ ಪಟಣದಲ್ಲಿ ಧಾರವಾಡ ವಿಭಾಗ ಮಟದ ಹರ್ ಘರ್ ತಿರಂಗಾ ಯಾತೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅಮೇರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಗೆ ಯಾವುದೊ ದೆವ್ವದ ಗಾಳಿ ಬಡೆದಿದೆ. ಅದಕ್ಕೆ ದಿನಕ್ಕೊಂದು ಹೇಳಿಕೆ ಕೊಡುತ್ತಾನೆ. ಡೋನಾಲ್ಡ್ ಟ್ರಂಪ್ ನಮ್ಮ ದೇಶದ ಮೇಲೆ ಶೇ 50 ರಷ್ಟು ತೆರಿಗೆ ಹಾಕಿದ್ದ. ಅಂದರೆ ನಮ್ಮ ದೇಶದ ಉತ್ಪನ್ನಗಳನ್ನು ಅಲ್ಲಿ ಮಾರಾಟ ಮಾಡಿದರೆ ಅವುಗಳಿಗೆ ಶೇ 50 ರಷ್ಟು ತೆರಿಗೆ ಹಾಕಿದ್ದಾನೆ. ಯಾಕೆಂದರೆ ಭಾರತ ನನ್ನ ಮಾತು ಕೇಳುವುದಿಲ್ಲ. ನಾನು ಹೇಳಿದಲ್ಲಿ ಭಾರತ ಸಹಿ ಮಾಡುವುದಿಲ್ಲ ಎಂದು ತೆರಿಗೆ ಹಾಕಿದ್ದಾನೆ. ಭಾರತದ ರೈತ ಏನು ಉತ್ಪಾದನೆ ಮಾಡುತ್ತಾನೆ ಅದೇ ಉತ್ಪಾದನೆಯನ್ನು ಅಮೇರಿಕಾ ರೈತ ಮಾಡುತ್ತಾನೆ. ಅದನ್ನು ಭಾರತದಲ್ಲಿ ಮಾರಾಟ ಮಾಡಲು ಅವಕಾಶ ಕೊಡಬೇಕೆಂದು ಟ್ರಂಪ್ ಕೇಳಿದ. ಆದರೆ ಅಮೇರಿಕಾದ ರೈತರು ಬೆಳೆದ ಉತ್ಪನ್ನ ಇಲ್ಲಿ ಮಾರಾಟ ಮಾಡಿದರೆ ನಮ್ಮ ರೈತರು ಬೆಳೆದ ಬೆಳೆ ಸ್ಥಿತಿ ಏನಾಗುತ್ತದೆ ಯೋಚನೆ ಮಾಡಿ. ನರಗುಂದ ರೈತ ಬಂಡಾಯದ ಊರು, ರೈತರ ಹಿತ ಶಕ್ತಿ ಕಾಪಾಡಲು ನಮಗೆಲ್ಲರಿಗೂ ಶಕ್ತಿ ಕೊಟ್ಟಿರುವುದು, ಬಾಬಾ ಸಾಹೇಬ, ಜಗನ್ನಾಥ ಜೋಶಿ ಹುಟ್ಟಿರುವ ಕ್ಷೇತ್ರದಲ್ಲಿ ರೈತರು ಜಾಗೃತಿ ಆದರೆ ಇಡೀ ಕರ್ನಾಟಕದಲ್ಲಿ ರೈತರ ಜಾಗೃತಿ ಆಗುತ್ತದೆ. ಅಮೇರಿಕಾದಲ್ಲಿ ರೈತರಿಗೆ ಶೇ 60 ರಷ್ಟು ಸಬ್ಸಿಡಿ ಇದೆ. ಅಲ್ಲಿ ಶೇ.6% ರಷ್ಟು ರೈತರು ಮಾತ್ರ ಕೃಷಿಯಲ್ಲಿ ತೊಡಗಿದ್ದಾರೆ. ನಮ್ಮಲ್ಲಿ ಶೇ 60 ರಷ್ಟು ರೈತರು ಕೃಷಿಯಲ್ಲಿ ತೊಡಗಿದ್ದಾರೆ. ಅಲ್ಲಿ ಶೇ 60 ರಷ್ಟು ಬೀಜ, ಗೊಬ್ಬರ, ನೀರು, ಸಬ್ಸಿಡಿ ಸಿಗುತ್ತದೆ. ಇಲ್ಲಿ ಎಲ್ಲವೂ ಸೇರಿ ಶೇ 6 ರಷ್ಟು ಸಬ್ಸಿಡಿ ಸಿಗುತ್ತದೆ. ಅದಕ್ಕೆ ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ರೈತರ ಹಿತ ಕಾಯುವಲ್ಲಿ ಯಾವುದೇ ರಾಜಿ ಇಲ್ಲ. ವಯಕ್ತಿಕವಾಗಿ ಯಾವುದೇ ಬೆಲೆ ತೆತ್ತರೂ ನನ್ನ ರೈತರ ಹಿತ ಕಾಯುತ್ತೇನೆ ಎಂದು ಹೇಳಿದ್ದಾರೆ ಎಂದರು.
ಯುಪಿಎ ಅವಧಿಯಲ್ಲಿ ಮನಮೋಹನ್ ಸಿಂಗ್ ಅವರು ಪಧಾನಿಯಾಗಿದ್ದಾಗ ಇದೇ ರೀತಿ ಪರಿಸ್ಥಿತಿ ಬಂದಾಗ ಮನಮೋಹನ್ ಸಿಂಗ್ ಅವರು ಅಮೇರಿಕಾಕ್ಕೆ ಹೋಗಿ ಸಹಿ ಮಾಡಿ ಬಂದರು. ನರೇಂದ್ರ ಮೋದಿ ಮನಮೋಹನ್ ಸಿಂಗ್ ಅಲ್ಲ. ಅವರು ಭಾರತದ ಹಿತ ಕಾಯುವ ಭಾರತ ಮಾತೆಯ ಮಗ. ಈ ದೇಶವನ್ನು ಸುರಕ್ಷಿತವಾಗಿ ಇಡಲು ಏನು ಬೇಕು ಅದನ್ನು ಮೋದಿ ಮಾಡಿದ್ದಾರೆ. ನಮ್ಮ ರೈತರು, ಪಶು ಪಾಲಕರು, ಮೀನುಗಾರರು, ರೈತಾಪಿ ಕೆಲಸ ಮಾಡುವಂಥವರ ಬದುಕು ಬಹಳ ಮುಖ್ಯ ಅದಕ್ಕಾಗಿ ನಾನು ದೊಡ್ಡ ಬೆಲೆ ತೆರಲುಸಿದ್ದನಿದ್ದೇನೆ ಎಂದು ಮೋದಿ ಹೇಳಿದ್ದಾರೆ ಎಂದರು.
ಮೋದಿ ದಿಟ್ಟ ಹೆಜ್ಜೆ
ಸ್ವಾತಂತ್ರ್ಯ ಬಂದು ಎಪ್ಪತ್ತೈದು ವರ್ಷ ಕಳೆದ ಸಂದರ್ಭದಲ್ಲಿ ದೇಶದ ಸುರಕ್ಷತೆಗಾಗಿ ದಿಟ್ಟ ಹೆಜ್ಜೆ ಇಟ್ಟ ಪಥಮ ಪ್ರಧಾನಿ ನರೇಂದ್ರ ಮೋದಿಯವರು. ಅವರು ಒಪ್ಪಿಕೊಂಡಿದ್ದರೆ, ಬರುವ ದಿನಗಳಲ್ಲಿ ದೇಶದ ರೈತರು ಉಳಿಯುತ್ತಿರಲಿಲ್ಲ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದರೆ ರೈತರ ಸುರಕತೆ ಇಲ್ಲ ಎನ್ನುವುದು ಈಗಾಗಲೇ ಗೊತ್ತಿದೆ. ದೇಶದಲ್ಲಿ ಭಯೋತ್ಪಾದಕರಿಗೆ ಭಯ ಹುಟ್ಟಿಸುವ ಕೆಲಸವನ್ನು ನರೇಂದ್ರ ಮೋದಿ ಮಾಡಿದ್ದಾರೆ. ಅವರು ಎಲ್ಲಿ ಅಡಗಿ ಕುಳಿತಿದ್ದಾರೆ ಅಲ್ಲಿ ಹೋಗಿ ಹೊಡೆದಿದ್ದಾರೆ. ಅಲ್ಲದೇ ಪಾಕಿಸ್ತಾನದಲ್ಲಿ ಹೋಗಿ ಹೊಡೆದಿದ್ದಾರೆ. ಇದರಿಂದ ನಮ್ಮ ಸೇನೆಯ ಶಕ್ತಿ ಎಷ್ಟಿದೆ ಅನ್ನುವುದನ್ನು ಸಾಬೀತು ಮಾಡಿದ್ದಾರೆ. ನಮ್ಮ ಸೈನಿಕರಿಗೆ ದೊಡ್ಡ ಸಲಾಮ ಎಂದರು.
ಬಿಟೀಷರು ಹೋದ ಮೇಲೆ ಬಡತನ, ನಿರುದ್ಯೋಗ, ಹಸಿವು ನಮ್ಮ ವೈರಿಗಳು, ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ 33 ಕೋಟಿ ಜನಸಂಖ್ಯೆ ಇದ್ದಾಗ ತಿನ್ನಲು ಅನ್ನ ಇರಲಿಲ್ಲ. ಈಗ 133 ಕೋಟಿ ಜನರಿಗೆ ಆಹಾರ ಒದಗಿಸುವ ಶಕ್ತಿ ಈ ದೇಶಕ್ಕಿದೆ. ರೈತರು ಕೊಟ್ಟಿದ್ದಾರೆ. ಆಹಾರವನ್ನು ಬಡವರಿಗೆ ಮುಟ್ಟಿಸುವ ಪುಣ್ಯ ಕಾರ್ಯ ನಮ್ಮ ರಾಜ್ಯದ ಪ್ರಲ್ಹಾದ್ ಜೋಶಿಯವರಿಗೆ ಬಂದಿದೆ. ಬಡತನ ವಿರುದ್ಧ ನರೇಂದ್ರ ಮೋದಿಯವರು ಸಮರ ಸಾರಿದ್ದಾರೆ. ಅವರಿಗೆ ಅನ್ನ, ನೀರು, ಮನೆ, ಗ್ಯಾಸ್ ಎಲ್ಲ ಸಹಾಯ, ಸಹಕಾರ ಮಾಡಿ ಬಡತನದ ವಿರುದ್ಧ ಸಮರ ಸಾರಿ ಹತ್ತು ವರ್ಷದಲ್ಲಿ ಇಪತ್ತೈದು ಕೋಟಿ ಜನರನ್ನು ಬಡತನದಿಂದ ಮೇಲೆ ಎತ್ತುವ ಕೆಲಸವನ್ನು ನರೇಂದ್ರ ಮೋದಿಯವರು ಮಾಡಿದ್ದಾರೆ. ನಿರುದ್ಯೋಗ ಸಮಸ್ಯೆಯನ್ನು ಸಂಪೂರ್ಣವಾಗಿ ಹತೋಟಿಗೆ ತಂದಿದ್ದಾರೆ. ಯಾವುದೇ ಯುವಕರು ತರಬೇತಿ ಪಡೆದರೆ ಕೆಲಸ ಸಿಗುತ್ತದೆ. ನಮ್ಮ ಅಭಿವೃದ್ಧಿ ಶೇ. 6.5 ಇದೆ. ಅಮೇರಿಕಾದ್ದು ಶೇ 1 ರಷ್ಟಿದೆ. ಇದು ನರೇಂದ್ರ ಮೋದಿಯವರ ಭಾರತ ಎಂದರು
ನಂಬರ್ ಒನ್ ಭಾರತ
2047 ಕ್ಕೆ ಭಾರತಕ್ಕೆ ಸ್ವಾತಂತ್ರ್ಯ ಬಂದು ನೂರು ವರ್ಷ ಆಗುತ್ತದೆ. ಆಗ ಭಾರತ ವಿಶ್ವದ ನಂಬರ್ ಒನ್ ಸ್ಥಾನದಲ್ಲಿ ಇರಬೇಕು ಎಂದು ಮೋದಿ ಬಯಸಿದ್ದಾರೆ. 2047 ರಲ್ಲಿ ನಾವಿರುತ್ತೇವೋ ಇಲ್ಲವೋ ನಮ್ಮ ಮಕ್ಕಳಿಗಾಗಿ ನಾವು ಕೆಲಸ ಮಾಡುತ್ತೇವೆ. ನಾವು ದೇಶಕ್ಕಾಗಿ ಕೆಲಸ ಮಾಡುತ್ತೇವೆ. ವಿರೋಧ ಪಕ್ಷದವರು ರಾಜಕೀಯಕ್ಕಾಗಿ ಕೆಲಸ ಮಾಡುತ್ತಾರೆ. ಸ್ವಾತಂತ್ರ್ಯ ಬಂದಾಗ ಒಬ್ಬ ಬ್ರಿಟೀಷ್ ಅಧ್ಯಾಪಕರ ವಿದ್ಯಾರ್ಥಿಯನ್ನು ದೇಶಕ್ಕಾಗಿ ಏನು ಮಾಡುತ್ತೀಯ ಎಂದು ಕೇಳಿದರು. ಆತ ದೇಶಕ್ಕಾಗಿ ತನ್ನ ಪ್ರಾಣ ಕೊಡುತ್ತೇನೆ ಎಂದು ಹೇಳಿದ ಅದಕ್ಕೆ ಆ ಅಧ್ಯಾಪಕರು ದೇಶಕ್ಕಾಗಿ ಪಾಣ ಕೊಡುವುದಲ್ಲ ದೇಶಕ್ಕಾಗಿ ದುಡಿದು ದೇಶ ಸೇವೆ ಮಾಡುತ್ತೇನೆ ಎಂದು ಹೇಳಿದರು. ತಿರಂಗಾ ಯಾತ್ರೆ ಎಂದರೆ ಧ್ವಜದ ಗೌರವ ನಿರಂತರ ಎತ್ತರದಲ್ಲಿ ಇರಬೇಕೆಂದರೆ ದೇಶಕ್ಕಾಗಿ ದುಡಿಯಬೇಕು. ನಮ್ಮ ಲೋಕಸಭೆ ವಿರೋಧ ಪಕ್ಷದ ನಾಯಕ ಲೋಕಸಭೆಯಲ್ಲಿ ಮಾತನಾಡುವುದನ್ನು ಬಿಟ್ಟು ಹೊರಗಡೆ ಬಂದು ಮಾತನಾಡುತ್ತಾರೆ. ಟಂಪ್ ಭಾರತದ ಆರ್ಥಿಕ ಪರಿಸ್ಥಿತಿ ಸತ್ತಿದೆ ಅಂತ ಹೇಳಿದರು, ಅದನ್ನೇ ರಾಹುಲ್ ಗಾಂಧಿ ಹೇಳುತ್ತಿದ್ದಾರೆ. ಇಡೀ ಜಗತ್ತು ಶೇ 1 ರಷ್ಟು ಅಭಿವೃದ್ಧಿಯಾಗುತ್ತಿದೆ. ಭಾರತ ಶೇ 6.5 ರಷ್ಟು ಅಭಿವೃದ್ಧಿ ಆಗುತ್ತಿದೆ ಎಂದು ವಿಶ್ವ ಬ್ಯಾಂಕ್ ಹೇಳಿದೆ ಎಂದರು.
ಹಸಿ ಸುಳ್ಳು
ರಾಹುಲ್ ಗಾಂಧಿ ಮತಗಳ್ಳತನದ ಆರೋಪ ಮಾಡಿ ಆಟಂಬಾಂಬ್ ಅಂತ ಹೇಳಿ ತನ್ನ ಕೈಯಲ್ಲಿ ಇಟ್ಟುಕೊಂಡು ತಾನೇ ಕೈ ಸುಟ್ಟುಕೊಂಡಿದ್ದಾರೆ. 2014 ರಲ್ಲಿ ಯುಪಿಎ ಸರ್ಕಾರ ಇದ್ದಾಗ ಮನಮೋಹನ್ ಸಿಂಗ್ ಪಧಾನಿಯಾಗಿದ್ದರು. ಮಹಾದೇವಪುರದಲ್ಲಿ ಆಗಲೇ 1 ಲಕ್ಷ ಮತದಾರರು ಹೆಚ್ಚಳವಾಗಿದ್ದರು. ಸರ್ವಜ್ಞ ನಗರದಲ್ಲಿ ಸುಮಾರು 30ಸಾವಿರ ಮತದಾರರು ಹೆಚ್ಚಾಗಿದ್ದರು. ರಾಹುಲ್ ಗಾಂಧಿ ಹೇಳುತ್ತಿರುವುದು ಹಸಿ ಸುಳ್ಳು ಎಂದು ಜನರೇ ಮಾತನಾಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಮೋದಿ ಮತಗಳ್ಳತನದಿಂದಲೇ ಪ್ರಧಾನಿಯಾಗಿದ್ದಾರೆ ಎಂದು ಆರೋಪಿಸುತ್ತಾರೆ. ವಿಧಾನಸಭೆ ಚುನಾವಣೆಯಲ್ಲಿ 136 ಸ್ಥಾನ ಬರುತ್ತವೆ ಎಂದು ಹೇಳಿದ್ದರು. ಅದರ ಬಗ್ಗೆ ತನಿಖೆಯಾದರೆ ಕಾಂಗ್ರೆಸ್ ನವರ ಮತಗಳ್ಳತನ ಬಯಲಿಗೆ ಬರುತ್ತದೆ. ಮಾಜಿ ಕೇಂದ್ರ ಸಚಿವ ಸಿಎಂ ಇಬ್ರಾಹಿಂ ಸಿದ್ದರಾಮಯ್ಯ ಅವರ ಚುನಾವಣೆಯಲ್ಲಿ 2 ಸಾವಿರ ಮತ ಖರೀದಿಸಿದ್ದೇವು ಎಂದು ಹೇಳಿದ್ದಾರೆ. ಚುನಾವಣಾ ಆಯೋಗ ರಾಹುಲ್ ಗಾಂಧಿಗೆ ಅಫಿಡವಿಟ್ ನೀಡಲು ಹೇಳಿದ್ದರು. ಅವರು ಅಫಿಡವಿಟ್ ನೀಡದೇ ಪಲಾಯನ ಮಾಡಿದ್ದರು. ಜನಗಳ ಮನಸಲ್ಲಿ ಸುಳ್ಳು ಸುದ್ದಿ ಬಿತ್ತಿ ಪ್ರಜಾಪ್ರಭುತ್ವಕ್ಕೆ ಮಾರಕವಾಗುವ, ಸಂವಿಧಾನ ವಿರೋಧಿ ಕೆಲಸ ಮಾಡುತ್ತಿದ್ದಾರೆ. ಸಂವಿಧಾನಾತ್ಮಕವಾಗಿ ಪ್ರಮಾಣ ವಚನ ತೆಗೆದುಕೊಂಡು ಏನು ಬೇಕಾದರೂ ಮಾಡಬಹುದಾ. ಆದ್ದರಿಂದ ಜನಜಾಗೃತಿ ಮೂಡಿಸಲು ಪಧಾನಿ ಮೋದಿಯವರ ನಿರ್ದೇಶನದಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ನಾಯಕತ್ವದಲ್ಲಿ ರಾಜ್ಯದಲ್ಲಿ ಬಿ.ವೈ ವಿಜಯೇಂದ್ರ ಅವರ ನಾಯಕತ್ವದಲ್ಲಿ ಜಾಗೃತಿ ಕಾರ್ಯಕ್ರಮ ನರಗುಂದದಿಂದ ನಡೆಯುತ್ತಿದೆ. ಇದು ಶುಭ ಶಕುನ ಎಂದು ಹೇಳಿದರು.
ಸ್ವಾತಂತ್ರ್ಯಕ್ಕಾಗಿ ತ್ಯಾಗ
1857ರಲ್ಲಿ ಝಾನ್ಸಿ ರಾಣಿ ಲಕ್ಷ್ಮೀ ಬಾಯಿ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡುವ ಮುಂಚೆಯೇ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕಿತ್ತೂರು ರಾಣಿ ಚನ್ನಮ್ಮ, ಸಂಗೋಳ್ಳಿ ರಾಯಣ್ಣ ನರಗುಂದದಲ್ಲಿ ಬಾಬಾಸಾಹೇಬರು ಬ್ರಿಟೀಷರ ವಿರುದ್ಧ ಹೋರಾಟ ಮಾಡಿ ಪ್ರಾಣ ಕಳೆದುಕೊಂಡಿದ್ದಾರೆ. ಸ್ವತಂತ್ರ್ಯಕ್ಕಾಗಿ ಸಾಕಷ್ಟು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಸುಭಾಶಚಂದ್ರ ಬೋಸ್, ಲಾಲಾ ಲಜಪತರಾಯ್, ಭಗತ್ ಸಿಂಗ್, ಕರ್ನಾಟಕದಲ್ಲಿ ಮೈಲಾರ ಮಹದೇವಪ್ಪ ಅಂತ ಹೋರಾಟಗಾರರು ಪ್ರಾಣ ತ್ಯಾಗ ಮಾಡಿದ್ದಾರೆ. ಅದರ ಫಲಾನುಭವಿಗಳು ನಾವು. ನಾವು ಈ ಸ್ವಾತಂತ್ರ್ಯವನ್ನು ಮುಂದಿನ ಜನಾಂಗಕ್ಕೆ ಯಾವ ಸ್ವರೂಪದಲ್ಲಿ ಬಿಟ್ಟು ಹೋಗುತ್ತೇವೆ. ಭಲಿಷ್ಟ ಭಾರತ, ಸುರಕ್ಷಿತ ಅಥವಾ ಅರಾಜಕತೆಯ, ಅಸುರಕ್ಷಿತ ಭಾರತವನ್ನು ಮುಂದಿನ ಪೀಳಿಗೆಗೆ ಬಿಟ್ಟು ಹೋಗುತ್ತೇವೆ ಎನ್ನುವುದನ್ನು ನಾವು ತೀರ್ಮಾಣ ಮಾಡಿ ಸಂಕಲ್ಪ ಮಾಡಿ ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸಿ ದೇಶದ್ರೋಹಿಗಳಿಗೆ ತಕ್ಕ ಪಾಠ ಕಲಿಸಿ ಮನೆಗೆ ಕಳುಹಿಸುವ ಮುಖಾಂತರ ದೇಶ ಭಕ್ತರ ಭಾರತ, ಸಮೃದ್ಧಿಯ ಭಾರತ ಕಲ್ಪನೆಯನ್ನು ಮುಂದಿನ ಜನಾಂಗಕ್ಕೆ ಬಿಟ್ಟು ಹೋದರೆ ನಾವು ನಿಜವಾದ ಭಾರತ ಮಾತೆಯ ಮಕ್ಕಳು ಎಂದು ಹೇಳಿದರು.
ಈ ಸಂಧರ್ಭದಲ್ಲಿ ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಶಾಸಕರಾದ ಸಿ.ಸಿ ಪಾಟೀಲ್, ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಡಾ.ಚಂದ್ರು ಲಮಾಣಿ, ಎಸ್.ವಿ ಸಂಕನೂರ, ಮಾಜಿ ಶಾಸಕರಾದ ವೀರುಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಪೂಜಾರ, ಶಿವರಾಜ ಸಜ್ಜನ, ಭಾರತೀಯ ಜನತಾ ಪಕ್ಷದ ಜಿಲ್ಲಾಧ್ಯಕ್ಷರಾದ ರಾಜು ಕುರಡಗಿ, ನರಗುಂದ ಮಂಡಳದ ಅಧ್ಯಕ್ಷರಾದ ನಾಗನಗೌಡ ತಿಮ್ಮನಗೌಡ್ರ ಸೇರಿದಂತೆ ಧಾರವಾಡ ವಿಭಾಗದ ಎಲ್ಲಾ ಮಂಡಳಗಳ ಅಧ್ಯಕ್ಷರುಗಳು ಹಾಗೂ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
ನಾಳೆ ಬೆಂಗಳೂರಿಗೆ ಪ್ರಧಾನಿ ಮೋದಿ ಆಗಮನ ಹಿನ್ನಲೆ: ವಾಹನ ಸವಾರರಿಗೆ ಈ ಸಂಚಾರ ಸಲಹೆ | Bengaluru Traffic Update
ಬೆಂಗಳೂರಲ್ಲಿ ಮರದ ಕೊಂಬೆ ಮುರಿದು ವೃದ್ಧನ ಸೊಂಟದ ಮೂಳೆ ಮುರಿತ : ‘BBMP’ ಸಿಬ್ಬಂದಿ ವಿರುದ್ಧ ‘FIR’ ದಾಖಲು