ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ದೂರವಾಣಿ ಮೂಲಕ ಮಹತ್ವದ ಚರ್ಚೆ ನಡೆಸಿದ್ದಾರೆ. ಈ ವೇಳೆ ‘ಹೋರ್ಮುಜ್ ಜಲಸಂಧಿ’ (Strait of Hormuz) ಜಾಗತಿಕ ವ್ಯಾಪಾರ ಮತ್ತು ಇಂಧನ ಪೂರೈಕೆಗಾಗಿ ಸದಾ ಮುಕ್ತ ಮತ್ತು ಸುರಕ್ಷಿತವಾಗಿರಬೇಕು ಎಂದು ಮೋದಿ ಒತ್ತಿಹೇಳಿದ್ದಾರೆ.
ಹೋರ್ಮುಜ್ ಜಲಸಂಧಿಯು ವಿಶ್ವದ ಅತಿ ದೊಡ್ಡ ತೈಲ ಸಾಗಾಣಿಕಾ ಮಾರ್ಗವಾಗಿದ್ದು, ಇಲ್ಲಿ ಯಾವುದೇ ಅಡಚಣೆ ಉಂಟಾದರೆ ಅದು ಜಾಗತಿಕ ಆರ್ಥಿಕತೆಯ ಮೇಲೆ ಭೀಕರ ಪರಿಣಾಮ ಬೀರಲಿದೆ ಎಂದು ಮೋದಿ ಕಳವಳ ವ್ಯಕ್ತಪಡಿಸಿದ್ದಾರೆ.
ಭಾರತವು ತನ್ನ ಹೆಚ್ಚಿನ ಪ್ರಮಾಣದ ಕಚ್ಚಾ ತೈಲ ಮತ್ತು ಅನಿಲವನ್ನು ಈ ಮಾರ್ಗದ ಮೂಲಕವೇ ಆಮದು ಮಾಡಿಕೊಳ್ಳುತ್ತದೆ. ಆದ್ದರಿಂದ ಈ ಪ್ರದೇಶದಲ್ಲಿ ಹಡಗುಗಳ ಸಂಚಾರಕ್ಕೆ ಯಾವುದೇ ಧಕ್ಕೆ ಬರಬಾರದು ಎಂಬುದು ಭಾರತದ ಸ್ಪಷ್ಟ ನಿಲುವು.ಯುದ್ಧದ ಬದಲು ರಾಜತಾಂತ್ರಿಕ ಮಾತುಕತೆಗಳ ಮೂಲಕ ಬಿಕ್ಕಟ್ಟನ್ನು ಬಗೆಹರಿಸುವ ಅಗತ್ಯವಿದೆ ಎಂದು ಮೋದಿ ಅವರು ಟ್ರಂಪ್ ಅವರಿಗೆ ತಿಳಿಸಿದ್ದಾರೆ.
ಭಾರತದ ಕಾಳಜಿಯನ್ನು ಆಲಿಸಿದ ಅಧ್ಯಕ್ಷ ಟ್ರಂಪ್, ಪ್ರಾದೇಶಿಕ ಸ್ಥಿರತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಭಾರತದ ಸಹಕಾರ ಮತ್ತು ಸಲಹೆಗಳನ್ನು ಶ್ಲಾಘಿಸಿದ್ದಾರೆ ಎನ್ನಲಾಗಿದೆ.








