ಬೆಂಗಳೂರು : “ಕುಡಿಯುವ ನೀರಿನ ದಂಧೆ ತಡೆಗಟ್ಟಿ ನೀರಿನ ಅಭಾವವನ್ನು ನೀಗಿಸಲು ರಾಜ್ಯ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಕೆಲವರು ರಾಜಕಾರಣಕ್ಕಾಗಿ ಟೀಕೆ ಮಾಡುತ್ತಿದ್ದು, ಅವರಿಗೆ ರಾಜಕಾರಣ ಮಾಡಬೇಡಿ ಎಂದು ಹೇಳುವುದಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ವಿಧಾನಸೌಧದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, “ಬೆಂಗಳೂರಿನಲ್ಲಿ ಕಾವೇರಿ ನೀರು ಪೂರೈಕೆಯಾಗುತ್ತಿರುವ ಪ್ರದೇಶಗಳಲ್ಲಿ ನೀರಿನ ಕೊರತೆ ಇಲ್ಲ, ಕೊಳವೆ ಬಾವಿಗಳ ಬತ್ತಿರುವುದರಿಂದ ಇವುಗಳನ್ನೇ ಅವಲಂಬಿಸಿದ್ದ ಪ್ರದೇಶಗಳಲ್ಲಿ ನೀರಿನ ಅಭಾವ ಎದುರಾಗಿದೆ. ಈ ನೀರಿನ ಅಭಾವ ನೀಗಿಸಲು ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದರು.
ಕಳೆದ 30-40 ವರ್ಷಗಳಲ್ಲಿ ಇಂತಹ ಭೀಕರ ಬರಗಾಲವನ್ನು ನಾವು ನೋಡಿರಲಿಲ್ಲ. ಬೆಂಗಳೂರಿನಲ್ಲಿರುವ 13,900 ಕೊಳವೆ ಬಾವಿಗಳಲ್ಲಿ 6,900 ಕೊಳವೆ ಬಾವಿ ಬತ್ತಿರುವ ಹಿನ್ನೆಲೆಯಲ್ಲಿ ಇವುಗಳನ್ನೇ ಅವಲಂಬಿಸಿದ್ದ ಪ್ರದೇಶಗಳಲ್ಲಿ ನೀರಿನ ಅಭಾವ ಸೃಷ್ಟಿಯಾಗಿದೆ. ಹೀಗಾಗಿ ಖಾಸಗಿ ನೀರಿನ ಟ್ಯಾಂಕರ್ ಗಳನ್ನು ಸರ್ಕಾರದ ಸುಪರ್ದಿಗೆ ಪಡೆದು ನೀರು ಪೂರೈಸಲು ಮುಂದಾಗಿದ್ದೇವೆ ಎಂದು ಹೇಳಿದರು.
ನೀರಿನ ಪೂರೈಕೆಯಲ್ಲಿ ನಡೆಯುತ್ತಿದ್ದ ದಂಧೆಯನ್ನು ನಾವು ತಡೆದಿದ್ದೇವೆ. ಜನರಿಗೆ ಸೂಕ್ತ ದರದಲ್ಲಿ ನೀರು ಸಿಗುವಂತೆ ಮಾಡಿದ್ದೇವೆ. ಕೆಲವು ಕೊಳಗೇರಿ ಪ್ರದೇಶದಲ್ಲಿ ಉಚಿತವಾಗಿ ನೀರು ನೀಡುತ್ತಿದ್ದೇವೆ. ಉಳಿದಂತೆ ಅಪಾರ್ಟ್ ಮೆಂಟ್ ಗಳಿಗೆ ಪೂರೈಸುವ ನೀರಿಗೆ ದರ ನಿಗದಿ ಮಾಡಿದ್ದು, ಕೈಗಾರಿಕೆಗಳ ಬಳಕೆಗೆ ಪ್ರತ್ಯೇಕ ದರ ನಿಗದಿ ಮಾಡಲಾಗಿದೆ. ಈಗಾಗಲೇ 1500ಕ್ಕೂ ಹೆಚ್ಚು ಟ್ಯಾಂಕರ್ ಗಳನ್ನು ನೋಂದಣಿ ಮಾಡಲಾಗಿದ್ದು, ಬೇರೆಯವರಿಗೆ ನೋಂದಣಿ ಮಾಡಿಕೊಳ್ಳಲು ಕಾಲಾವಕಾಶ ನೀಡಿದ್ದೇವೆ. ಪೊಲೀಸ್, ಆರ್ ಟಿಓ, ಪಾಲಿಕೆ ಅವರಿಗೆ ಸೂಚನೆ ನೀಡಿ ನೋಂದಾಯಿತ ಟ್ಯಾಂಕರ್ ಗಳ ಮೇಲೆ ಸರ್ಕಾರದ ನಾಮಫಲಕ ಅಳವಡಿಸುವಂತೆ ಮಾಡುತ್ತೇವೆ. ಆಮೂಲಕ ಸರ್ಕಾರದ ನಿಯಂತ್ರಿತ ಕಾನೂನುಬಾಹಿರವಾಗಿ ಜನರಿಂದ ವಸೂಲಿ ಮಾಡುವುದನ್ನು ತಡೆಗಟ್ಟಲು ಮುಂದಾಗಿದ್ದೇವೆ. ಬೆಂಗಳೂರಿನ ಸುತ್ತಮುತ್ತಲು ಇರುವ ನೀರಾವರಿ ಕೊಳವೆ ಬಾವಿಯನ್ನು ನಾವು ಗುರುತಿಸಿದ್ದು, ಅಗತ್ಯ ಬಿದ್ದರೆ ಅವುಗಳನ್ನು ಬಳಸಿಕೊಳ್ಳುತ್ತೇವೆ. ಇನ್ನು ಬೆಂಗಳೂರಿನ ಹೊರವಲಯದ 110 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಕಾವೇರಿ 5ನೇ ಹಂತದ ಯೋಜನೆ ಮೇ ಅಂತ್ಯದೊಳಗೆ ಪೂರ್ಣಗೊಳಿಸುತ್ತೇವೆ ಎಂದು ತಿಳಿಸಿದರು.
‘ಶೃಂಗೇರಿ ಪೋಕ್ಸೋ’ ಕೇಸ್: ತಾಯಿ ಸೇರಿ ‘ನಾಲ್ವರು ಆರೋಪಿ’ಗಳಿಗೆ 25 ಸಾವಿರ ದಂಡ, ’20 ವರ್ಷ’ ಜೈಲು ಶಿಕ್ಷೆ