ಬೆಂಗಳೂರು: ವರಾಹಿ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸಲು ಅಗತ್ಯ ಕ್ರಮವಹಿಸುವುದಾಗಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಸದಸ್ಯ ಮಂಜುನಾಥ್ ಭಂಡಾರಿ ಅವರ ಪ್ರಶ್ನೆಗೆ ಉತ್ತರಿಸಿದ ಉಪ ಮುಖ್ಯಮಂತ್ರಿಗಳು, 1979 ರಿಂದ 2005 ರವರೆಗೆ ಸುಮಾರು 26 ವರ್ಷಗಳ ಕಾಲ ಕೇಂದ್ರ ಪರಿಸರ ಇಲಾಖೆಯ ತಿಳುವಳಿಕೆ ಪತ್ರ ಪಡೆಯಲು ಸಮಯ ಹೋಗಿದೆ. ಇದಾದ ನಂತರ ಈ ಯೋಜನೆಗೆ ಜೀವ ಬಂದಿತು. ಆದಷ್ಟು ಬೇಗ ಕೆಲಸ ಮುಗಿಸಲು ಕ್ರಮ ತೆಗೆದುಕೊಳ್ಳಲಾಗುವುದು. ವರಾಹಿ ಎಡದಂಡೆಯಲ್ಲಿ ಮಾತ್ರ ನೀರು ಹೋಗುತ್ತಿದೆ. ಒಮ್ಮೆ ಯೋಜನಾ ಸ್ಥಳಕ್ಕೆ ಭೇಟಿ ನೀಡಲಾಗುವುದು” ಎಂದು ತಿಳಿಸಿದರು.
“1979 ರಲ್ಲಿ ಅಧಿಕಾರಿಗಳು ಅರಣ್ಯ ಇಲಾಖೆಯ ನೀತಿ ನಿಯಮಗಳ ಅರಿವಿಲ್ಲದೆ ಯೋಜನೆ ಮಾಡಿಬಿಟ್ಟಿದ್ದಾರೆ. ಭೂ ಸ್ವಾಧೀನವೇ ಈ ಯೋಜನೆಯ ಪ್ರಮುಖ ವಿಚಾರ. 1,009 ಎಕರೆ ಪಟ್ಟಾ ಭೂಮಿಯಲ್ಲಿ 765 ಎಕರೆ ಭೂಮಿ ಸ್ವಾಧೀನ ಪಡೆಸಿಕೊಂಡಿದ್ದು, ಇನ್ನೂ 343 ಎಕರೆ ಬಾಕಿಯಿದೆ. 813 ಎಕರೆ ಸರ್ಕಾರಿ ಭೂಮಿಯಲ್ಲಿ 714 ಎಕರೆ ಸ್ವಾಧೀನ ಮಾಡಿಕೊಂಡಿದ್ದು 99 ಎಕರೆ ಬಾಕಿಯಿದೆ. 345 ಎಕರೆ ಅರಣ್ಯ ಭೂಮಿಯಲ್ಲಿ 319 ಎಕರೆ ಸ್ವಾಧೀನ ಮಾಡಿಕೊಂಡಿದ್ದು 19 ಎಕರೆ ಬಾಕಿಯಿದೆ. ಡೀಮ್ಡ್ ಅರಣ್ಯ ಭೂಮಿಯಲ್ಲಿ 11 ಎಕರೆ ಸ್ವಾಧೀನ ಪಡಿಸಿಕೊಂಡಿದ್ದು 104 ಎಕರೆ ಬಾಕಿಯಿದೆ. ಸ್ವಾಧೀನಗಳಿಗೆ 73 ಕೋಟಿ ಅವಶ್ಯಕತೆಯಿದೆ” ಎಂದು ಮಾಹಿತಿ ನೀಡಿದರು.
ಕೇಂದ್ರದಲ್ಲಿ ಯಾವುದೇ ಯೋಜನೆ ಮಾಡಿದರೂ ಯೋಜಿತವಾಗಿ ಮಾಡುತ್ತಾರೆ. ನಮ್ಮ ಇಲಾಖೆಗೆ ಇರುವ ಬಜೆಟ್ 22 ಸಾವಿರ ಕೋಟಿ ಆದರೆ 1.50 ಲಕ್ಷ ಕೋಟಿ ಕಾಮಗಾರಿಗಳು ನಡೆಯುತ್ತಿವೆ. ಬಿಲ್ ಗಳ ಶೇ.10ಕ್ಕಿಂತ ಹೆಚ್ಚು ಪಾವತಿ ಮಾಡಲು ಆಗುವುದಿಲ್ಲ. ಮುಖ್ಯಮಂತ್ರಿಗಳು ಬಿಲ್ ಪಾವತಿಗಾಗಿ 1,200 ಕೋಟಿ ಕೊಟ್ಟಿದ್ದಾರೆ. ಆದರೆ ಒಟ್ಟು ಬಿಲ್ 11 ಸಾವಿರ ಕೋಟಿಯಷ್ಟಿದೆ ಎಂದು ತಿಳಿಸಿದರು.