ಬೆಂಗಳೂರು : ಸೆಪ್ಟೆಂಬರ್ 22 ರಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2025 ಆರಂಭವಾಗಲಿದ್ದು, ತಪ್ಪದೇ ಎಲ್ಲಾರೂ ಈ ಮಾಹಿತಿ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ.
ಕರ್ನಾಟಕ ರಾಜ್ಯ ಹಿಂದುಳಿದ ಆಯೋಗವು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7ರ ವರೆಗೆ ಕೈಗೊಳ್ಳಲಿದೆ. ರಾಜ್ಯದ ಪ್ರತಿ ಮನೆಗೆ ಆಯೋಗದ ಸಿಬ್ಬಂದಿಗಳು ಭೇಟಿ ನೀಡಿ ಸ್ಟಿಕ್ಕರ್ ಅಂಟಿಸಿದ ಬಳಿಕ ಶಿಕ್ಷಕರು ಭೇಟಿ ನೀಡಿ ಸಮೀಕ್ಷೆ ನಡೆಸಲಿದ್ದಾರೆ. ಈ ವೇಳೆ ಅವರಿಗೆ ಅಗತ್ಯ ದಾಖಲೆಗಳ ಜೊತೆಗೆ ಸೂಕ್ತ ಮಾಹಿತಿ ಒದಗಿಸಿ ಸಹಕರಿಸುವ ಮೂಲಕ ಈ ಸಮೀಕ್ಷೆಯನ್ನು ಯಶಸ್ವಿಗೊಳಿಸಿಕೊಡಬೇಕು ಎಂದು ಸೂಚನೆ ನೀಡಲಾಗಿದೆ.
ಸಮೀಕ್ಷೆ ಕಾರ್ಯದಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು. ಯಾರೂ ಕೂಡಾ ಸಮೀಕ್ಷೆಯಿಂದ ಹೊರಗುಳಿಯಬಾರದು. ಸಮೀಕ್ಷೆಯಲ್ಲಿ 60 ಪ್ರಶ್ನೆಗಳನ್ನು ಕೇಳಲಾಗುವುದು. ಎಲ್ಲರೂ ಪ್ರತಿಯೊಂದು ಪ್ರಶ್ನೆಗಳಿಗೆ ಸಮರ್ಪಕವಾದ ಮಾಹಿತಿಯನ್ನು ಒದಗಿಸಬೇಕು. ಸರಿಯಾದ ಮಾಹಿತಿ ನೀಡಿದರೆ ಮಾತ್ರ ವೈಜ್ಞಾನಿಕ ಸಮೀಕ್ಷೆ ಸಾಧ್ಯವಿದೆ.
ಆಯೋಗದ ಸಹಾಯವಾಣಿ ಸಂಖ್ಯೆ 8050770004 ಗೆ ಕರೆ ಮಾಡಿ ಸಾರ್ವಜನಿಕರು ಸಮೀಕ್ಷೆ ಕುರಿತು ಯಾವುದೇ ದೂರು ಅಥವಾ ಮಾಹಿತಿಯನ್ನು ಪಡೆಯಬಹುದು. ಆನ್ ಲೈನ್ ಮೂಲಕ ಸಹ ಸಮೀಕ್ಷೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.
ಸಮೀಕ್ಷೆ ಆರಂಭವಾಗುವ ಪೂರ್ವದಲ್ಲೇ ಆಶಾ ಕಾರ್ಯಕರ್ತರು ಎಲ್ಲರ ಮನೆಗಳಿಗೆ ಹೋಗಿ ಸಮೀಕ್ಷೆಯ ನಮೂನೆಯನ್ನು ಒದಗಿಸಲಿದ್ದಾರೆ. ಇದರಿಂದ ಸರಿಯಾದ ಮಾಹಿತಿಯನ್ನು ಒದಗಿಸುವ ಬಗ್ಗೆ ಜಾಗೃತಿ ಮೂಡಲು ಸಾಧ್ಯವಿದೆ. ಪ್ರತಿ ಶಿಕ್ಷಕರಿಗೆ 120ರಿಂದ 150ಮನೆಗಳ ವ್ಯಾಪ್ತಿಯನ್ನು ನಿಗದಿಪಡಿಸಲಾಗಿದೆ.