ಚಿತ್ರದುರ್ಗ: ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರಿಗೆ ಕರ್ನಾಟಕ ರಾಜ್ಯ ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘದಿಂದ ಅಭಿನಂದನೆಗಳನ್ನು ಅಧ್ಯಕ್ಷ ಸಿ.ಶಿವುಯಾದವ್ ತಿಳಿಸಿದ್ದಾರೆ.
ಈ ಕುರಿತಂತೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, ಕಾಡುಗೊಲ್ಲ ಜನಾಂಗದ ಇತಿಹಾಸದಲ್ಲಿ ದಿನಾಂಕ. 6/2/24 ಒಂದು ಅವಿಸ್ಮರಣೀಯ ದಿನವಾಗಿದೆ. ಕಾಡುಗೊಲ್ಲರ ಸ್ವತಂತ್ರ ನಂತರದ ಬಹುದಶಕಗಳ ಹೊರಾಟಕ್ಕೆ ಒಂದು ಮೈಲುಗಲ್ಲು ಸಿಕ್ಕಂತಾಗಿದೆ. ಕಾಡುಗೊಲ್ಲರ ಮುಂದಿನ ಭವಿಷ್ಯದ ದೃಷ್ಟಿಯಿಂದ ಮರಳುಗಾಡಿನಲ್ಲಿ ನೀರು ಸಿಕ್ಕಷ್ಟು ಸಂತೋಷವಾಗಿದೆ. ದೇವೇಗೌಡರು ಇಂದು ಕಾಡುಗೊಲ್ಲರ ಪರವಾಗಿ ರಾಜ್ಯ ಸಭೆಯಲ್ಲಿ ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡುವಂತೆ ಪ್ರದಾನಿಯವರನ್ನು ಒತ್ತಾಯಿಸಿ ಮನವಿ ಮಾಡಿ ಮಾತನಾಡಿದ್ದಾರೆ. ಇದು ಕಾಡುಗೊಲ್ಲ ಸಮುದಾಯಕ್ಕೆ ನೂರು ಆನೆ ಬಲದಷ್ಟು ಶಕ್ತಿ ಬಂದಂತಾಗಿದೆ ಎಂದು ತಿಳಿಸಿದ್ದಾರೆ.
ದೇಶದ ಮತ್ತು ರಾಜ್ಯದ ಯಾವೊಬ್ಬ ಸಂಸದರೂ ಇದುವರೆವಿಗೂ ಕರ್ನಾಟಕದ ಕಾಡುಗೊಲ್ಲರ ಬಗ್ಗೆ ಧ್ವನಿ ಎತ್ತಿದ ಇತಿಹಾಸ ಇಲ್ಲ. ಮಾಜಿ ಪ್ರದಾನಿಗಳು ಕಾಡುಗೊಲ್ಲರ ಪರವಾಗಿ ಸುದೀರ್ಘವಾಗಿ ರಾಜ್ಯ ಸಭೆಯಲ್ಲಿ ಕಾಡುಗೊಲ್ಲರ ಪರವಾಗಿ ರಾಜ್ಯ ಸಭೆಯಲ್ಲಿ ವಾದ ಮಂಡನೆ ಮಾಡಿದ್ದಕ್ಕೆ ಕರ್ನಾಟಕ ರಾಜ್ಯ ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘವು ಇಡೀ ರಾಜ್ಯದ ಕಾಡುಗೊಲ್ಲ ಜನಾಂಗದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತದೆ ಎಂದಿದ್ದಾರೆ.
ಇನ್ನೂ ಮೂರುದಿನಗಳೊಳಗಾಗಿ ಪ್ರದಾನಿ ಮೋದಿಯವರ ಹತ್ತಿರ ಮುಖಾಮುಖಿ ಮಾತನಾಡಿ ರಾಜ್ಯ ಕಾಡುಗೊಲ್ಲರ ಸ್ಥಿತಿ ಗತಿಯ ಬಗ್ಗೆ ಮನವರಿಕೆ ಮಾಡಿಕೊಟ್ಟು ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡ ಸೇರ್ಪಡೆ ಮಾಡುವಂತೆ ಮತ್ತು ಸದರಿ ವಿಷಯವನ್ನು ಲೋಕಸಭೆ ಮತ್ತು ರಾಜ್ಯ ಸಭೆಗಳಲ್ಲಿ ಮಂಡನೆ ಮಾಡಿ ಅಂಗೀಕಾರ ಪಡೆಯುವಂತೆ ಮಾಡಿದರೆ, ಇಡೀ ಕರ್ನಾಟಕ ರಾಜ್ಯದ ಕಾಡುಗೊಲ್ಲ ಜನಾಂಗವು ದೇವೆಗೌಡರಿಗೆ ಚಿರರುಣಿಯಾಗಿರುತ್ತದೆ ಎಂದು ಹೇಳಿದ್ದಾರೆ.
ಕರ್ನಾಟಕದ ಕಾಡುಗೊಲ್ಲರನ್ನು ಗುರ್ತಿಸಿ ಅಸ್ಮಿತೆ ನೀಡಿ ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಭಾರತ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ ಕೀರ್ತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ. ಅದನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿದ ಕೀರ್ತಿ ಮಾಜಿ ಪ್ರದಾನಿ ದೇವೇಗೌಡರಿಗೆ ಮತ್ತು ಪ್ರದಾನಿ ಮೋದಿಯವರಿಗೆ ಸಲ್ಲುತ್ತದೆ ಎಂದು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘವು 2004ರಲ್ಲಿ ವಿ.ನಾಗಪ್ಪನವರ ನೇತ್ರತ್ವದಲ್ಲಿ ಹುಟ್ಟಿ ಸುಮಾರು 20 ವರ್ಷಗಳ ಕಾಲ ಸುದೀರ್ಘ ಹೊರಾಟ ನಡೆಸಿದ ಫಲವಾಗಿ ಇಂದು ಈ ಹಂತಕ್ಕೆ ಬಂದು ತಲುಪಿದೆ ಎಂದು ಕರ್ನಾಟಕ ರಾಜ್ಯ ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯದ್ಯಕ್ಷರಾದ ಸಿ ಶಿವುಯಾದವ್ ತಿಳಿಸಿದ್ದಾರೆ