ಬೆಂಗಳೂರು : ವಿಧಾನಸೌಧದ ಆವರಣದಲ್ಲಿ ʻತಾಯಿ ಭುವನೇಶ್ವರಿʼ ಪ್ರತಿಮೆ ಸ್ಥಾಪನೆ ಮಾಡಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
ಕನ್ನಡ ನಾಡು ಏಕೀಕರಣಗೊಂಡು, ಕರ್ನಾಟಕ ಎಂಬ ಹೆಸರು ನಾಮಕರಣವಾಗಿ 50 ವರ್ಷ ಪೂರೈಸಿರುವ ಸಂದರ್ಭದಲ್ಲಿ ಕನ್ನಡತನದ ಹೆಗ್ಗುರುತು ವಿಧಾನಸೌಧದ ಆವರಣದಲ್ಲಿರಬೇಕೆಂಬ ಉದ್ದೇಶದಿಂದ ಕನ್ನಡ ನಾಡು, ನುಡಿ, ಸಂಸ್ಕೃತಿಯ ಸಂಕೇತವಾದ ತಾಯಿ ಭುವನೇಶ್ವರಿ ಪ್ರತಿಮೆಯನ್ನು ವಿಧಾನಸೌಧದ ಆವರಣದಲ್ಲಿ ಸುಮಾರು 23 ಕೋಟಿ ರೂ. ವೆಚ್ಚದಲ್ಲಿ ಸ್ಥಾಪನೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಬೆಂಗಳೂರಿನ ವಾಹನ ದಟ್ಟಣೆ ನಿವಾರಿಸುವ ಪರಿಣಾಮಕಾರಿ ಮಾರ್ಗವೆಂದರೆ ಮೆಟ್ರೋ ವ್ಯವಸ್ಥೆ. ಈಗಾಗಲೇ ಮೆಟ್ರೋ ಹಂತ 2 ಎ ಮತ್ತು 2 ಬಿ ಕಾಮಗಾರಿ ಇನ್ನೆರಡು ವರ್ಷಗಳಲ್ಲಿ ಮುಕ್ತಾಯಗೊಳ್ಳಲಿದ್ದು, ಭವಿಷ್ಯದ ಅವಶ್ಯಕತೆಯನ್ನು ಗಮನದಲ್ಲಿರಿಸಿಕೊಂಡು ಮೆಟ್ರೋ ರೈಲು ಹಂತ-3 ನಿರ್ಮಾಣಕ್ಕೆ ಸಚಿವ ಸಂಪುಟವು ಒಪ್ಪಿಗೆ ನೀಡಿದೆ.
44.65 ಕಿ.ಮೀ ಉದ್ದದ ಎರಡು ಕಾರಿಡಾರ್‌ಗಳಾದ ಕಾರಿಡಾರ್-1 ಜೆ.ಪಿ ನಗರ 4ನೇ ಹಂತದಿಂದ ಪಶ್ಚಿಮ ಹೊರವರ್ತುಲ ರಸ್ತೆಯುದ್ದಕ್ಕೂ ಕೆಂಪಾಪುರದವರೆಗೆ 32.15 ಕಿ.ಮೀ. ಹಾಗೂ ಕಾರಿಡಾರ್ -2 ಹೊಸಹಳ್ಳಿಯಿಂದ ಮಾಗಡಿ ರಸ್ತೆಯುದ್ದಕ್ಕೂ ಕಡಬಗೆರೆವರೆಗೆ 12.50 ಕಿ.ಮೀ ಒಟ್ಟು ಅಂದಾಜು ವೆಚ್ಚ ರೂ.15,611 ಕೋಟಿಗಳಲ್ಲಿ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಈ ಯೋಜನೆಯ ಶೇ.85 ರಷ್ಟು ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಲಿದ್ದು, ಉಳಿದ ಅನುದಾನವನ್ನು ಕೇಂದ್ರ ನೀಡಲಿದೆ. ನಗರದಲ್ಲಿ ಜನರ ಓಡಾಟಕ್ಕೆ ಉತ್ತಮ ಸಂಪರ್ಕ ಒದಗಿಸುವ ದಿಸೆಯಲ್ಲಿ ಈ ನಿರ್ಣಯವನ್ನು ಕೈಗೊಳ್ಳಲಾಗಿದೆ.