ಕಲಬುರಗಿ : ವಕ್ಫ ಆಸ್ತಿ ಹೆಸರಿನಲ್ಲಿ ರೈತರ ಮೇಲೆ ದಬ್ಬಾಳಿಕೆ ನಡೆಸಿ ಈ ನೆಲದ ಮಣ್ಣಿನ ಮಕ್ಕಳ ಭೂಮಿಯ ಹಕ್ಕು ಕಸಿಯಲು ರಾಜ್ಯ ಸರ್ಕಾರ ಹೊರಟಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ವಕ್ಫ್ ಬೋರ್ಡ್ ನಿಂದ ರೈತರ ಭೂಮಿಗಳನ್ನು ಕಬಳಿಸಲು ಷಡ್ಯಂತ್ರ ನಡೆದಿದೆ ಎಂದು ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ಕಿಡಿಕಾರಿದರು.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ತರಾತುರಿಯಲ್ಲಿ ನೀಡಲಾಗಿರುವ ವಕ್ಫ್ ಬೋರ್ಡ್‌ನ ನೋಟಿಸ್‌ನಿಂದ ರಾಜ್ಯದ ಸಾವಿರಾರು ರೈತರು ಮತ್ತು ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದಾರೆ
ಕಲಬುರಗಿ ಜಿಲ್ಲೆಯ ಸೇರಿದಂತೆ ಸೇಡಂ ಮತಕ್ಷೇತ್ರದ ರೈತರಿಗೂ ವಕ್ಫ್ ತನ್ನ ಆಸ್ತಿ ಎಂದು ನೋಟಿಸ್ ಜಾರಿಗೊಳಿಸಿದೆ. ದೇಶದಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಜಾರಿಯಾಗುವುದಕ್ಕೂ ಮುಂಚಿತವಾಗಿ ಕರ್ನಾಟಕದಲ್ಲಿ ಈ ವಕ್ಫ್ ಕಾನೂನು ಬದಲಾಗುವುದಕ್ಕೂ ಸಾಧ್ಯವಾದಷ್ಟು ಜಾಗವನ್ನು ವಕ್ಫ್ ಹೆಸರಿಗೆ ನೋಂದಣಿಗೊಳಿಸಬೇಕು ಎನ್ನುವ ಹುನ್ನಾರದಲ್ಲಿ ಪ್ರಯತ್ನ ನಡೆಸುತ್ತಿರುವುದು ಅಕ್ಷ್ಯಮ್ಯ ಎಂದರು.
ಕಳೆದ 2-3 ವಾರದ ಹಿಂದೆ ಜಮೀರ್ ಅಹ್ಮದ್ ರಾಜ್ಯದ ಕೆಲವು ಜಿಲ್ಲೆಗಳಿಗೆ ಭೇಟಿ ನೀಡಿ ಅಲ್ಲಿನ ಅಧಿಕಾರಿಗಳಿಗೆ ಮತ್ತು ಮುಸ್ಲಿಂ ಸಮಾಜದ ಮುಖಂಡರ ಜೊತೆ ಸಭೆ ನಡೆಸಿ ವಕ್ಫ್ ಬೋರ್ಡ್ ಹೆಸರಿಗೆ ರಿಜಿಸ್ಟರ್ ಮಾಡಿಸಲು ಸೂಚನೆ ನೀಡಿದ್ದಾರೆ. ಸಚಿವರ ಅದೇಶದ ಮೇರೆಗೆ ಜಿಲ್ಲಾಧಿಕಾರಿಗಳು, ತಲೆಮಾರುಗಳಿಂದ ಸಾಗುವಳಿ ಮಾಡಿಕೊಂಡು ಬಂದಿರುವ ರೈತರ ಜಮೀನಿನ ಪಹಣಿಗಳನ್ನು ರಾತ್ರೋರಾತ್ರಿ ಬದಲಾವಣೆ ಮಾಡಿದ್ದಾರೆ. 1920ರಿಂದ ಇಲ್ಲಿ ರೈತರು ಸಾಗುವಳಿ ಮಾಡಿಕೊಂಡು ಬಂದಿರುವ ದಾಖಲೆಗಳಿದ್ದರೂ ಸಹ ರೈತರ ಜಮೀನು ಮಾತ್ರವಲ್ಲದೇ ಹಿಂದೂಗಳ ರುದ್ರಭೂಮಿ , ದೇವಸ್ಥಾನಗಳಿಗೂ ಸಹ ವಕ್ಫ್ ಆಸ್ತಿಯನ್ನು ಅಕ್ರಮವಾಗಿ ಕಬಳಿಕೆ ಮಾಡಲು ಮುಂದಾಗಿರುವುದು ಸರಿಯಲ್ಲ ಎಂದು ಹೇಳಿದರು.
ವಕ್ಫ್ ಆಕ್ರಮಿತ ಆಸ್ತಿ, ವ್ಯಾಜ್ಯಗಳ ಕುರಿತಾಗಿ ಸೇಡಂ ಮತಕ್ಷೇತ್ರದ ನಿಡಗುಂದಾ, ಸುಲೇಪೇಟ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ರೈತರ ಭೂಮಿಯ ಪಾಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದು ಮಾಡಲಾಗಿದೆ, ಆಳಂದ ತಾಲ್ಲೂಕಿನ ಸಾವಳೇಶ್ವರ ಗ್ರಾಮದ ಆರಾಧ್ಯ ದೈವ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಜಾಗ ವಕ್ಫ್ ಆಸ್ತಿ ಅಂತ ಪಹಣಿಯಲ್ಲಿ ಬಂದಿದೆ, ಚಿಂಚೋಳಿ ಪಟ್ಟಣದ ಮಹಾಂತೇಶ್ವರ ಮಠದ ಆಸ್ತಿಯು ವಕ್ಫ ಆಸ್ತಿಎಂದು ಬಂದಿದೆ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕು ಗಳಲ್ಲಿಕೂಡ ಈ ರೀತಿ ಘಟನೆ ಆಗುತ್ತಿವೆ ಎಂದರೆ ವಕ್ಫ್ ಬೋರ್ಡ್ನಿಂದ ಯಾವ ಮಟ್ಟದ ಅತಿಕ್ರಮಣ ನಡೆದಿದೆ ಎಂಬುದನ್ನು ಊಹಿಸಬಹುದು ಎಂದರು.
ತಮ್ಮ ತಾತ-ಮುತ್ತಾತಂದಿರ ಕಾಲದಿಂದಲೂ ಕೃಷಿ, ಇತರ ಕಾರ್ಯಗಳನ್ನು ಮಾಡಿಕೊಂಡು ಬಂದಿರುವ ಎಷ್ಟೋ ಕುಟುಂಬಗಳಿಗೆ ತರಾತುರಿಯಲ್ಲಿ ನೋಟಿಸ್ ನೀಡಿರುವುದು ದುರದೃಷ್ಟಕರ. ಎಷ್ಟೋ ದಾಖಲೆಗಳನ್ನು ಪರಿಶೀಲಿಸಿದ ನಂತರ ಗಮನಕ್ಕೆ ಬಂದಿರುವ ಅಂಶವೆಂದರೆ, ವಕ್ಫ್ ಬೋರ್ಡ್ ತನ್ನ ಆಸ್ತಿಯೆಂದು ಘೋಷಿಸಿರುವ ಪತ್ರದಲ್ಲಿ ಎಲ್ಲಿಯೂ ಆ ಜಾಗ ವಕ್ಫ್ಗೆ ಹೇಗೆ ಬಂದಿದೆ ಎಂಬುದರ ಕುರಿತಾಗಿ ಒಂದೇ ಒಂದು ಸಾಲು ಕೂಡ ಇರದೇ ಇರುವುದು ಆಶ್ಚರ್ಯ ತಂದಿದೆ ಎಂದರು.
ನೋಟಿಸ್ ಬಂದಿದೆ ಎಂದ ತಕ್ಷಣ ಗಾಬರಿ, ಆತಂಕಗೊಳ್ಳುವ ಅಗತ್ಯವಿಲ್ಲ. ಕಾನೂನು ಹೋರಾಟದ ಮೂಲಕ ಈ ರೀತಿಯ ಅಕ್ರಮಗಳ ವಿರುದ್ಧ ಸೆಣಸುವ ಎಲ್ಲ ಅವಕಾಶಗಳಿವೆ ರೈತರು ಆತಂಕ ಪಡಬೇಡಿ ಎನ್ನುವ ಮೂಲಕ ಕಾಂಗ್ರೆಸ್ ಪಕ್ಷದ ವಿರುದ್ಧ ಆಕ್ರೊಶ ವ್ಯಕ್ತಪಡಿಸಿದರು.