ಬೆಂಗಳೂರು: ರಾಜ್ಯದಲ್ಲಿ ಅಂತರ್ಜಲ ದುರ್ಬಳಕೆ ತಡೆಯಲು ನಗರ ಪ್ರದೇಶಗಳಲ್ಲಿ ಕೊಳವೆ ಬಾವಿಯಿಂದ ಹೊರತೆಗೆಯುವ ನೀರಿನ ಬಳಕೆಗೆ ಮೀಟರ್ ಅಳವಡಿಸಿ ದರ ನಿಗದಿ ಮಾಡಲು ಸರ್ಕಾರ ಮುಂದಾಗಿದೆ.
ಹೌದು, ಕೇಂದ್ರ ಅಂತರ್ಜಲ ಪ್ರಾಧಿಕಾರ ಅಂತರ್ಜಲ ಬಳಕೆ ನಿರ್ಬಂಧಿಸಲು ಹೊರಡಿಸಿದ ಮಾರ್ಗಸೂಚಿಯನ್ನು ರಾಜ್ಯ ಸರ್ಕಾರ ಒಪ್ಪಿಕೊಂಡಿದೆ. ಕೊಳವೆಬಾವಿ ನೀರಿನ ಬಳಕೆ ಪ್ರಮಾಣ ಅಳೆಯಲು ಡಿಜಿಟಲ್ ಟೆಲಿಮೆಟ್ರಿ ಅಳವಡಿಸಿ ದರ ನಿಗದಿ ಮಾಡಲಾಗುವುದು.ಈ ಬಗ್ಗೆ ಸಣ್ಣ ನೀರಾವರಿ ಇಲಾಖೆ ಮಂಡಿಸಿದ ಪ್ರಸ್ತಾಪಕ್ಕೆ ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ಕರ್ನಾಟಕ ಅಂತರ್ಜಲ ಅಧಿನಿಯಮ 2011 ಮತ್ತು ನಿಯಮಾವಳಿ 2012ರ ಅನ್ವಯ ನಿರಾಕ್ಷೇಪಣಾ ಪತ್ರವನ್ನು ಕಡ್ಡಾಯ ಮಾಡಲಾಗಿತ್ತು. ರಾಜ್ಯ ಸರ್ಕಾರ ಆ ನಿಯಮ ರೂಪಿಸಿದಾಗ, ಬಳಕೆ ದರವನ್ನು ನಿಗದಿ ಮಾಡಿರಲಿಲ್ಲ. ಮಾರ್ಗಸೂಚಿ ಉಲ್ಲಂಘಿಸುವವರಿಗೆ ₹10 ಸಾವಿರದವರೆಗೆ ಮಾತ್ರ ದಂಡ ವಿಧಿಸುವ ಅವಕಾಶ ಕಲ್ಪಿಸಲಾಗಿತ್ತು. ಕೇಂದ್ರ ಅಂತರ್ಜಲ ಪ್ರಾಧಿಕಾರದ ಮಾರ್ಗಸೂಚಿಯಂತೆ, ಈಗ ಅದನ್ನು ₹1 ಲಕ್ಷಕ್ಕೆ ಹೆಚ್ಚಿಸಲಾಗಿದೆ.
ನಗರ ಪ್ರದೇಶದ ಅಪಾರ್ಟ್ಮೆಂಟ್ಗಳು, ಸಮೂಹ ವಸತಿ ಸಹಕಾರ ಸಂಘಗಳು ಮತ್ತು ಸಾರ್ವಜನಿಕ ನೀರು ಸರಬರಾಜು ಮಾಡುವ ಸರ್ಕಾರದ ಸಂಸ್ಥೆಗಳಿಗೆ ದಿನಕ್ಕೆ ಪ್ರತಿ 25 ಕ್ಯುಬಿಕ್ ಮೀಟರ್ವರೆಗೆ ₹1, 25–200 ಕ್ಯುಬಿಕ್ ಮೀಟರ್ ಮತ್ತು 200 ಹಾಗೂ ಮೇಲ್ಪಟ್ಟು ಕ್ಯುಬಿಕ್ ಮೀಟರ್ಗೆ ₹2 ನಿಗದಿ ಮಾಡಲಾಗಿದೆ. ಸರ್ಕಾರಿ ನೀರು ಪೂರೈಕೆ ಸಂಸ್ಥೆಗಳಿಗೆ ನೀರು ತೆಗೆಯುವ ಶುಲ್ಕ ಪ್ರತಿ ಕ್ಯುಬಿಕ್ ಮೀಟರ್ಗೆ 50 ಪೈಸೆ ಮತ್ತು ವಾಟರ್ ಫ್ಲೋ ಮೀಟರ್ ಅಳವಡಿಸುವುದನ್ನು ಕಡ್ಡಾಯ ಮಾಡಲಾಗಿದೆ.
ರಾಜ್ಯದಲ್ಲಿ ನೀರಿನ ಲಭ್ಯತೆ ಮತ್ತು ಕೊರತೆ ಇರುವ ಪ್ರದೇಶಗಳನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಿದ್ದು, ಗ್ರಾಮೀಣ ಮತ್ತು ನಗರಗಳಲ್ಲಿ ವೈಯಕ್ತಿಕ ಗೃಹ ಉಪಯೋಗಿ ಅಂತರ್ಜಲ ಬಳಕೆಗೆ ವಿನಾಯಿತಿ ನೀಡಲಾಗಿದೆ.