ವರದಿ: ವಸಂತ ಬಿ ಈಶ್ವರಗೆರೆ
ಬೆಂಗಳೂರು: ರಾಜ್ಯ ಸರ್ಕಾರದಿಂದ ಪಠ್ಯಪುಸ್ತಕಗಳ ಪರಿಷ್ಕರಣಾ ವರದಿಯನ್ನು ಪ್ರಕಟಿಸಲಾಗಿದೆ. ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು-2005ರ ಮಾರ್ಗಸೂಚಿಯಂತೆ ರಾಜ್ಯ ಪಠ್ಯಕ್ರಮದಲ್ಲಿ 1 ರಿಂದ 10ನೇ ತರಗತಿ ಕನ್ನಡ ಪ್ರಥಮ ಮತ್ತು ದ್ವಿತೀಯ ಭಾಷೆ ಹಾಗೂ 9 ಮತ್ತು 10ನೇ ತರಗತಿಯ ಕನ್ನಡ ತೃತೀಯ ಭಾಷೆಯ ಪಠ್ಯಪುಸ್ತಕಗಳು 6 ರಿಂದ 10ನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕಗಳಲ್ಲಿ ಅಮೂಲಾಗ್ರ ಬದಲಾವಣೆಯನ್ನು ಮಾಡಲಾಗಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಶಾಲಾ ಶಿಕ್ಷಣ ಆಯುಕ್ತರು ಹಾಗೂ ಕರ್ನಾಟಕ ಪಠ್ಯಪುಸ್ತಕ ಸಂಘ(ರಿ)ಯಿಂದ ಮಾಹಿತಿ ನೀಡಲಾಗಿದೆ. ಅದರಲ್ಲಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು-2005 ರ ಮಾರ್ಗಸೂಚಿಯಂತೆ ರಾಜ್ಯ ಪಠ್ಯಕ್ರಮದಲ್ಲಿ 01 ರಿಂದ 10 ನೇ ತರಗತಿವರೆಗಿನ ಕನ್ನಡ ಪ್ರಥಮ ಮತ್ತು ದ್ವಿತೀಯ ಭಾಷೆ ಹಾಗೂ 09 ಮತ್ತು 10 ನೇ ತರಗತಿಯ ಕನ್ನಡ ತೃತೀಯ ಭಾಷೆಯ ಪಠ್ಯಪುಸ್ತಕಗಳು ಮತ್ತು 06 ರಿಂದ 10 ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕಗಳ ಪರಿಷ್ಕರಣೆಗೆ ವಿಷಯವಾರು ತಜ್ಞರ ಸಮಿತಿಯನ್ನು ಹಾಗೂ ಪಠ್ಯಪುಸ್ತಕಗಳ ಪರಿಷ್ಕರಣಾ ಕಾರ್ಯನಿರ್ವಹಿಸುವ ಸಮಿತಿಗಳಿಗೆ ಶೈಕ್ಷಣಿಕ ಮಾರ್ಗದರ್ಶನ ಹಾಗೂ ಸಲಹೆ ನೀಡುವ ಉದ್ದೇಶಕ್ಕಾಗಿ ಡಾ|| ಮಂಜುನಾಥ.ಜಿ.ಹೆಗಡೆ, ನಿವೃತ್ತ ಪ್ರಾಧ್ಯಾಪಕರು, ಚಿತ್ತರಗಿ ಗ್ರಾಮ, ಕುಮಟಾ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ ಇವರನ್ನು ಮುಖ್ಯ ಸಂಯೋಜಕರನ್ನಾಗಿ ಸಮಿತಿಯ ಅಧ್ಯಕ್ಷರು/ಸದಸ್ಯರುಗಳನ್ನು ಹಾಗೂ ನಿರ್ದೇಶಕರು, ಕರ್ನಾಟಕ ಪಠ್ಯಪುಸ್ತಕ ಸಂಘ(ರಿ), ಬೆಂಗಳೂರು ಇವರನ್ನು ಸದಸ್ಯ ಕಾರ್ಯದರ್ಶಿಯನ್ನಾಗಿ ಸರ್ಕಾರವು ಆದೇಶ ಸಂಖ್ಯೆ ಇಪಿ.270 ಪಿ.ಎಂ.ಸಿ ದಿನಾಂಕ:25.09.2023 ರನ್ವಯ ಆದೇಶ ಹೊರಡಿಸಿರುತ್ತದೆ ಎಂದು ತಿಳಿಸಿದೆ.
ಪರಿಷ್ಕರಣಾ ಸಮಿತಿಯು ಮುಖ್ಯವಾಗಿ ಈ ಕೆಳಕಂಡ ಅಂಶಗಳಿಗೆ ಆದ್ಯತೆಯನ್ನು ನೀಡಿ, ಪಠ್ಯಪುಸ್ತಕಗಳನ್ನು ಪರಿಷ್ಕರಿಸಲಾಗಿದೆ.
1. ರಾಷ್ಟ್ರೀಯ ಹಾಗೂ ರಾಜ್ಯ ಪಠ್ಯಕ್ರಮ ಚೌಕಟ್ಟುಗಳು ಮತ್ತು ಸಂವಿಧಾನದ ಆಶಯಗಳಿಗೆ ವ್ಯತಿರಿಕ್ತವಾಗದಂತೆ, ಪರಿಷ್ಕರಣೆಗೆ ಒಳಪಟ್ಟ ಪಠ್ಯಪುಸ್ತಕಗಳ ಮೂಲ ಸ್ವರೂಪ ಬದಲಾಗದಂತೆ, ವಿದ್ಯಾರ್ಥಿಗಳ ಶೈಕ್ಷಣಿಕ ಹಿತಾಸಕ್ತಿಗಳನ್ನಷ್ಟೇ ಗಮನದಲ್ಲಿರಿಸಿಕೊಂಡು ಈ ಪರಿಷ್ಕರಣೆಯನ್ನು ನಡೆಸಲಾಗಿದೆ.
2. ಪ್ರಸ್ತುತ ಪರಿಷ್ಕರಣ ಸಮಿತಿಗೆ ಪೂರ್ವದಲ್ಲಿಯೇ ಶಾಲಾ ಶಿಕ್ಷಣ ಇಲಾಖೆಯು ಹೊರಡಿಸಿದ್ದ “2023-24ನೇ ಸಾಲಿನ ಪಠ್ಯಪುಸ್ತಕಗಳ ತಿದ್ದೋಲೆ” ಯ ಅಂಶಗಳನ್ನು ಸಮಿತಿಯು ಅಳವಡಿಸಿಕೊಂಡಿದೆ.
3. ವಿವಿಧ ಸಂಘಟನೆಗಳು, ವ್ಯಕ್ತಿಗಳು ಹಾಗೂ ಸರ್ಕಾರದ ಇಲಾಖೆಗಳು ಪಠ್ಯಪುಸ್ತಕದಲ್ಲಿ ನಿರ್ದಿಷ್ಟ ವಿಷಯಾಂಶವನ್ನು ಅಳವಡಿಸುವ/ಕೈಬಿಡುವ/ಪರಿಷ್ಕರಿಸುವ ಕುರಿತು ಮಾಡಿದ ಎಲ್ಲಾ ಮನವಿಗಳನ್ನು ಪರಿಶೀಲಿಸಿ ಸೂಕ್ತವೆನಿಸಿದ ಸಲಹೆಗಳನ್ನು ಪರಿಷ್ಕರಣೆಯಲ್ಲಿ ಅಳವಡಿಸಿಕೊಳ್ಳಲಾಗಿದೆ.
4. ವಿಷಯಾಂಶಗಳಿಗೆ ಸಂಬಂಧಿಸಿದಂತೆ, ಪಠ್ಯಪುಸ್ತಕದಲ್ಲಿರುವ ಅಂಕಿ ಅಂಶಗಳನ್ನೂ, ಮಾಹಿತಿಗಳನ್ನು, ನಕ್ಷೆಗಳನ್ನು, ಚಿತ್ರಗಳು ಮತ್ತು ವ್ಯಾಕಾರಣಾಂಶಗಳನ್ನು ಅಗತ್ಯವಿರುವ ಕಡೆ ಪರಿಷ್ಕರಿಸಲಾಗಿದೆ.
5. ಮಕ್ಕಳ ಪಠ್ಯಪುಸ್ತಕದ ಹೊರೆ ಕಡಿಮೆ ಮಾಡುವ ನಿಟ್ಟಿನಲ್ಲಿ ಎಲ್ಲಾ ಪಠ್ಯಪುಸ್ತಕಗಳನ್ನು ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಎರಡು ಸಂಪುಟಗಳಾಗಿ ವಿಭಾಗಿಸುವ ಸರ್ಕಾರದ ನಿರ್ಣಯಕ್ಕೆ ಅನುಸಾರವಾಗಿ, ಎರಡೂ ಸಂಪುಟಗಳಲ್ಲಿನ ಕಲಿಕಾಂಶಗಳು/ಪಾಠಗಳು ಸರಳತೆಯಿಂದ ಸಂಕೀರ್ಣತೆಯೆಡೆಗೆ ಸಾಗುವಂತೆ ವ್ಯವಸ್ಥಿತವಾಗಿ ಅಳವಡಿಸಲಾಗಿದೆ. 6. ಕನ್ನಡ ಭಾಷಾ ಪಠ್ಯಪುಸ್ತಕಗಳಲ್ಲಿ ಪ್ರಮುಖ ಸಾಹಿತಿಗಳಿಗೆ ಹಾಗೂ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿಗಳಿಗೂ ಪ್ರಾಶಸ್ಯ ನೀಡಲಾಗಿರುತ್ತದೆ.
7. ವಿದ್ಯಾರ್ಥಿಗಳ ಬೌದ್ಧಿಕ ಮಟ್ಟ, ಸ್ಪರ್ಧಾತ್ಮಕ ಪರೀಕ್ಷಾ ದೃಷ್ಟಿಯಿಂದ ಮಕ್ಕಳ ಕಲಿಕೆಗೆ ಹೊರೆಯಾಗದಂತೆ ಕೆಲವು ಹೊಸ ಅಧ್ಯಾಯಗಳು, ವಿಷಯಾಂಶಗಳನ್ನು ಸೇರ್ಪಡೆ ಮಾಡಲಾಗಿದೆ.
ಸಮಾಜ ವಿಜ್ಞಾನ ಪಠ್ಯಪುಸ್ತಕಗಳಲ್ಲಿ ಪರಿಷ್ಕರಿಸಿರುವ ಪ್ರಮುಖ ಅಂಶಗಳು
ಸಮಾಜ ವಿಜ್ಞಾನ ಪರಿಷ್ಕೃತ ಪಠ್ಯಪುಸ್ತಕಗಳು ಸಂವಿಧಾನದ ಪ್ರಸ್ತಾವನೆ, ಲಿಂಗ ಸೂಕ್ಷ್ಮತೆ, ಮಕ್ಕಳ ಹಕ್ಕುಗಳ ಕುರಿತ ಮಾಹಿತಿ, ಪ್ರಜಾಸತ್ತಾತ್ಮಕ ಮತ್ತು ಜಾತ್ಯಾತೀತ ಮೌಲ್ಯಗಳು ಹಾಗೂ ವೈಜ್ಞಾನಿಕ ಮನೋಭಾವನೆಯನ್ನು ಗಮನದಲ್ಲಿಟ್ಟುಕೊಂಡು ಈ ಕೆಳಕಂಡಂತೆ ಪರಿಷ್ಕರಿಸಲಾಗಿದೆ.
6ನೇ ತರಗತಿ
ಇತಿಹಾಸದ ಪರಿಚಯ ಮತ್ತು ಆರಂಭಿಕ ಸಮಾಜದ ಕುರಿತ ಮಾಹಿತಿ ಇರುವ ಅಧ್ಯಾಯವನ್ನು ಹೊಸದಾಗಿ ಸೇರಿಸಲಾಗಿದೆ.
‘ನಮ್ಮ ಹೆಮ್ಮೆಯ ರಾಜ್ಯ ಕರ್ನಾಟಕ’ ಅಧ್ಯಾಯದಲ್ಲಿ ಎಲ್ಲಾ ಮಾಹಿತಿಗಳನ್ನು ನವೀಕರಿಸಲಾಗಿದೆ ಹಾಗೂ ಹೊಸ ಚಿತ್ರಗಳು ಮತ್ತು ವಿವರಣೆಗಳನ್ನು ಸೇರಿಸಲಾಗಿದೆ. ಚಂದ್ರಶೇಖರ್ ಕಂಬಾರ, ನಾಲ್ವಡಿ ಕೃಷ್ಣರಾಜ ಒಡೆಯರ್, ಎಚ್.ಎಲ್. ನಾಗೇಗೌಡ, ಡಾ. ಸಿದ್ದಲಿಂಗಯ್ಯ, ಶ್ರೀ ಸಿದ್ದೇಶ್ವರ ಸ್ವಾಮಿ, ಶ್ರೀ ಶಾಂತವೇರಿ ಗೋಪಾಲಗೌಡರ ಹಾಗೂ ಕೊಪ್ಪಳದ ಗವಿಮಠದ ಭಾವಚಿತ್ರಗಳನ್ನು ವಿವರಗಳೊಂದಿಗೆ ಸೇರಿಸಲಾಗಿದೆ.
• ದಕ್ಷಿಣ ಭಾರತದ ಪ್ರಾಚೀನ ರಾಜವಂಶಗಳು ಮತ್ತು ಉತ್ತರ ಭಾರತದ ರಾಜ ಮನೆತನಗಳನ್ನು ಕ್ರಮವಾಗಿ ಒಂದೆಡೆ ತಂದು ಚರ್ಚಿಸಿ, ರಾಜಮನೆತನಗಳ ಪಟ್ಟಿಯನ್ನು ಸೇರಿಸಲಾಗಿದೆ.
·’ದಕ್ಷಿಣ ಭಾರತದ ಪ್ರಾಚೀನ ರಾಜವಂಶಗಳು’ ಅಧ್ಯಾಯದಲ್ಲಿ ‘ಗುಳ್ಳಕಾಯಜ್ಜಿಯ ಕಥೆ’ ಎಂಬ ಜಾನಪದ ಕಥೆ ಪಠ್ಯಕ್ಕೆ ಪೂರಕವಾಗದ ಕಾರಣಕ್ಕೆ ಕೈಬಿಡಲಾಗಿದೆ.
ತಿದ್ದೋಲೆಯ ಪ್ರಕಾರ ‘ವೇದ ಕಾಲದ ಸಂಸ್ಕೃತಿ’ ಮತ್ತು ‘ಹೊಸ ಧರ್ಮಗಳ ಉದಯ’ ಪಾಠಗಳನ್ನು ಸೇರಿಸಲಾಗಿದೆ.
ಪೌರ ಮತ್ತು ಪೌರತ್ವ ಪಾಠವನ್ನು ಲಿಂಗ ಸಮಾನತೆಯ ನೆಲೆಯಲ್ಲಿ ಪರಿಷ್ಕರಿಸಲಾಗಿದೆ. ನಮ್ಮ ಸಂವಿಧಾನ ಪಾಠದಲ್ಲಿ ಸಂವಿಧಾನ ರಚನಾ ಸಭೆಯಲ್ಲಿ ಭಾಗಿಯಾದ ಮಹಿಳಾ ಸದಸ್ಯರ ವಿವರ ಮತ್ತು ಭಾವಚಿತ್ರವನ್ನು ಸೇರಿಸಲಾಗಿದೆ.
ಸಮಾನತೆಯ ಹಕ್ಕನ್ನು ಚರ್ಚಿಸುವಾಗ ಲಿಂಗತ್ವ ಅಲ್ಪಸಂಖ್ಯಾತರಿಗೆ ಇರುವ ಅವಕಾಶಗಳನ್ನು ಸೇರಿಸಲಾಗಿದೆ. ‘ಸ್ಥಳೀಯ ಆಡಳಿತ’ ದ ಬದಲಿಗೆ ಹೆಚ್ಚು ವಿಸ್ತಾರವಾದ ಹಿನ್ನೆಲೆಯನ್ನು ಒದಗಿಸುವ ‘ಪ್ರಭುತ್ವದ ಪ್ರಕಾರಗಳು’ ಅಧ್ಯಾಯವನ್ನು ಸೇರಿಸಲಾಗಿದೆ. ‘ಸ್ಥಳೀಯ ಆಡಳಿತವು 8ನೇ ತರಗತಿಯ ‘ಸ್ಥಳೀಯ ಸ್ವಯಂ ಸರ್ಕಾರ’ ಅಧ್ಯಾಯದ ಪುನರಾವರ್ತನೆ ಆಗಿರುವುದರಿಂದ ಈ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ.
‘ಮಾನವ ಹಕ್ಕುಗಳು ಮತ್ತು ಮೂಲಭೂತ ಹಕ್ಕು-ಕರ್ತವ್ಯಗಳು’ ಅಧ್ಯಾಯವನ್ನು ತಿದ್ದುಪಡಿ ಮಾಡಿ, ಮಕ್ಕಳ ಹಕ್ಕುಗಳನ್ನು ಸೇರಿಸಲಾಗಿದೆ.
ಅಧ್ಯಾಯಗಳು ಹಾಗೂ ವಿವರಣೆಗಳನ್ನು ವಿಷಯಾನುಕ್ರಮದಲ್ಲಿ ಮರುಜೋಡಣೆ ಮಾಡಲಾಗಿದೆ.
• ಭೂಪಟಗಳನ್ನು ನವೀಕರಿಸಲಾಗಿದೆ. ಜಿಲ್ಲೆ, ತಾಲ್ಲೂಕು, ಹೋಬಳಿ ಗಳಿಗೆ ಸಂಬಂಧಿಸಿದ ಅಂಕಿ ಅಂಶಗಳನ್ನು
ನವೀಕರಿಸಲಾಗಿದೆ.
7ನೇ ತರಗತಿ
ಭಾರತಕ್ಕೆ ಐರೋಪ್ಯರ ಆಗಮನ ಮತ್ತು ಬ್ರಿಟೀಷ್ ಆಳ್ವಿಕೆಯ ಪರಿಣಾಮಗಳು ಪಾಠದ ವಿವರಣೆಯಲ್ಲಿ ಸ್ಪಷ್ಟತೆಯನ್ನು ತರಲು 2017-18ರ ಪರಿಷ್ಕರಣ ಪಠ್ಯಪುಸ್ತಕದಲ್ಲಿನ ಮಾಹಿತಿಗಳನ್ನು ಪಡೆದು ಮರು ನಿರೂಪಿಸಲಾಗಿದೆ.
ತಿದ್ದೋಲೆಯಂತೆ ‘ಮೈಸೂರು ಮತ್ತು ಇತರ ಸಂಸ್ಥಾನಗಳು ಅಧ್ಯಾಯವನ್ನು ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣೆಗಳು’ ಎಂಬ ಅಧ್ಯಾಯವನ್ನು ಸೇರ್ಪಡೆ ಮಾಡುವುದರೊಂದಿಗೆ ಸ್ವಾತಂತ್ರ್ಯ ಚಳುವಳಿಯ ನಿರೂಪಣೆಯಲ್ಲಿ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಮಾಹಿತಿ ಸೇರಿಸಲಾಗಿದೆ.
ವಿಶ್ವಗುರು ಬಸವೇಶ್ವರರನ್ನು ಸಾಂಸ್ಕೃತಿಕ ನಾಯಕ ರೆಂದು ದಾಖಲಿಸಲಾಗಿದೆ.
‘ರಿಲಿಜಿಯನ್’ ಗಳು ಎಂಬ ಶೀರ್ಷಿಕೆಯನ್ನು ‘ಧರ್ಮಗಳು’ ಎಂದು ಬದಲಾಯಿಸಲಾಗಿದೆ.
• ಪೌರನೀತಿಯಲ್ಲಿ ಶಾಸಕಾಂಗ, ಕಾಯಾರ್ಂಗ ಮತ್ತು ನ್ಯಾಯಾಂಗಗಳನ್ನು ಪರಿಚಯಿಸುವ ಅಧ್ಯಾಯವನ್ನು
ಸೇರಿಸಲಾಗಿದೆ.
• ಭೂಪಟಗಳನ್ನು ನವೀಕರಿಸಲಾಗಿದೆ, ಜಿಲ್ಲೆ, ತಾಲ್ಲೂಕು, ಹೋಬಳಿಗಳಿಗೆ ಸಂಬಂಧಿಸಿದ ಅಂಕಿ ಅಂಶಗಳನ್ನು ನವೀಕರಿಸಲಾಗಿದೆ.
ಇತಿಹಾಸ
8ನೇ ತರಗತಿ
• ‘ಆಧಾರಗಳು’ ಎಂಬ ಅಧ್ಯಾಯವನ್ನು ಪರಿಷ್ಕರಿಸಿ, ಪ್ರಾಕ್ತನ ಆಧಾರಗಳ ಅರ್ಥ ಮತ್ತು ಪ್ರಾಮುಖ್ಯತೆಯೊಂದಿಗೆ ವಿಷಯಾಂಶವನ್ನು ಸೇರ್ಪಡೆ ಮಾಡಲಾಗಿದೆ.
• ‘ಭರತವರ್ಷ’ ಎಂಬ ಅಧ್ಯಾಯ ಶೀರ್ಷಿಕೆಯನ್ನು ‘ಭರತ ವರ್ಷ: ಭಾರತದ ಭೌಗೋಳಿಕ ಲಕ್ಷಣಗಳು ಮತ್ತು ಪ್ರಾಗೈತಿಹಾಸಿಕ ಕಾಲ’ ಎಂದು ನಿರ್ದಿಷ್ಟ ಪಡಿಸಲಾಗಿದೆ.
·“ಸಿಂಧೂ-ಸರಸ್ವತಿ ನಾಗರಿಕತೆ’ ಎಂಬ ಅಧ್ಯಾಯ ಶೀರ್ಷಿಕೆಯನ್ನು ‘ಪ್ರಾಚೀನ ಭಾರತದ ನಾಗರಿಕತೆಗಳು: ಸಿಂಧು-ಸರಸ್ವತಿ ನಾಗರಿಕತೆ ಮತ್ತು ವೇದಗಳ ಕಾಲ’ ಎಂದು ಬದಲಾಯಿಸಿದೆ.
‘ಸನಾತನ ಧರ್ಮ’ ಎಂಬ ಅಧ್ಯಾಯದಲ್ಲಿ ಕೆಲವು ಅಂಶಗಳನ್ನು ಸೇರಿಸಿ, ವ್ಯವಸ್ಥಿತವಾದ ನಿರೂಪಣೆಯನ್ನು ನೀಡಲಾಗಿದೆ.
‘ಜೈನ ಮತ್ತು ಬೌದ್ಧ ಮತಗಳು’ ಶೀರ್ಷಿಕೆಯನ್ನು ‘ಜೈನ ಮತ್ತು ಬೌದ್ಧ ಧರ್ಮಗಳು’ ಎಂದು ಬದಲಾಯಿಸಿ, ಈ ಧರ್ಮಗಳ ಉದಯದ ಹಿನ್ನೆಲೆಯನ್ನು ಸೇರ್ಪಡೆ ಮಾಡಲಾಗಿದೆ.
ಮಾನ್ಯಖೇಟದ ರಾಷ್ಟ್ರಕೂಟರು ಮತ್ತು ಕಲ್ಯಾಣದ ಚಾಳುಕ್ಯರು ಅಧ್ಯಾಯದಲ್ಲಿ ‘ವೀರಶೈವ ಪಂಥದ ಮೌಲ್ಯಗಳು’ ಬದಲಾಗಿ ‘ಬಸವಾದಿ ಶಿವಶರಣ ಮೌಲ್ಯಗಳು’ ಪದವನ್ನು ಬಳಸಲಾಗಿದೆ. ವಿಶ್ವಗುರು ಬಸವೇಶ್ವರರನ್ನು ಸಾಂಸ್ಕೃತಿಕ ನಾಯಕರೆಂದು ದಾಖಲಿಸಲಾಗಿದೆ.
9ನೇ ತರಗತಿ
“ಪಾಶ್ಚಾತ್ಯ ರಿಲಿಜಿಯನ್” ಗಳು ಎಂಬ ಶೀರ್ಷಿಕೆಯನ್ನು ‘ಪಾಶ್ಚಾತ್ಯ ಧರ್ಮಗಳು’ ಎಂದು ಬದಲಾಯಿಸಲಾಗಿದೆ.
ಕಾಶ್ಮೀರದ ಕಾರ್ಕೋಟರು ಮನೆತನ ಮತ್ತು ಅಹೋಮ್ ರಾಜನಮನೆತನದ ಸಂಕೀರ್ಣ ವಿವರಣೆಯನ್ನು ಸಂಕ್ಷಿಪ್ತಗೊಳಿಸಲಾಗಿದೆ.
‘ಭಕ್ತಿಪಂಥ’ ಅಧ್ಯಾಯದಲ್ಲಿ ಕನಕದಾಸರು, ಪುರಂದರದಾಸರು ಹಾಗೂ ಸಂತ ಶಿಶುನಾಳ ಶರೀಫರ ಕುರಿತ ಮಾಹಿತಿಯನ್ನು ಸೇರಿಸಲಾಗಿದೆ.
10ನೇ ತರಗತಿ
•’ಭಾರತಕ್ಕೆ ಯೂರೋಪಿಯನ್ನರ ಆಗಮನ ಅಧ್ಯಾಯದಲ್ಲಿ ಮಾತಾರ್ಂಡ ವರ್ಮನ ಕುರಿತು ವಿವರಗಳನ್ನು ಸಂಕ್ಷಿಪ್ತಗೊಳಿಸಲಾಗಿದೆ.
• ‘ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಗೆ ಪ್ರತಿರೋಧಗಳು’ ಅಧ್ಯಾಯದಲ್ಲಿ ಮೈಸೂರಿನ ಅರಸರ ಹಾಗೂ ಕಿತ್ತೂರು, ಸುರಪುರ, ಕೊಪ್ಪಳ, ಹಲಗಲಿಗಳ ಸ್ಥಳೀಯ ಬಂಡಾಯಗಳನ್ನು ಕ್ರಮಬದ್ಧವಾಗಿ ದಾಖಲಿಸಲಾಗಿದೆ.
• ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳುವಳಿಗಳು ಅಧ್ಯಾಯದಲ್ಲಿ ಸಾವತ್ರಿಬಾಯಿ ಫುಲೆ, ಯುವ ಬಂಗಾಳಿ ಚಳವಳಿ ಮತ್ತು ಪೆರಿಯಾರ್ ರವರ ವಿಷಯಾಂಶಗಳನ್ನು ಸೇರ್ಪಡೆ ಮಾಡಲಾಗಿದೆ.
ರಾಜ್ಯಶಾಸ್ತ್ರ
8ನೇ ತರಗತಿ
•ಸ್ಥಳೀಯ ಸ್ವಯಂ ಸರ್ಕಾರ ಎಂಬ ಅಧ್ಯಾಯದಲ್ಲಿ ಕರ್ನಾಟಕ ಪಂಚಾಯತ್ ರಾಜ್ ಇಲಾಖೆಗೆ ಸಂಬಂಧಿಸಿದ ಕಾಯಿದೆ ಸೇರಿಸಿ, ನಕಾಶೆ ಮತ್ತು ಸ್ಥಳೀಯ ಸಂಸ್ಥೆಗಳ ಮಾಹಿತಿಯನ್ನು ನವೀಕರಿಸಲಾಗಿದೆ.
9ನೇ ತರಗತಿ
•ಕೇಂದ್ರ ಸರ್ಕಾರ, ‘ರಾಜ್ಯ ಸರ್ಕಾರ’ ಮತ್ತು ನ್ಯಾಯಾಂಗ ವ್ಯವಸ್ಥೆ ಎಂಬ ಅಧ್ಯಾಯಗಳಲ್ಲಿ ಭಾರತದ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ವಿವರಗಳನ್ನು ನವೀಕರಿಸಿ, ನೂತನ ಸಂಸತ್ ಭವನದ ಚಿತ್ರ ಕರ್ನಾಟಕದ ಮುಖ್ಯ ಮಂತ್ರಿಗಳು ಹಾಗೂ ಅವರ ಕಾಲಾವಧಿಯ ಯಾದಿಯನ್ನು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ಆಡಳಿತಾತ್ಮಕ ನಕ್ಷೆಯನ್ನು ಸೇರಿಸಲಾಗಿದೆ.
ಚುನಾವಣಾ ವ್ಯವಸ್ಥೆ ಅಧ್ಯಾಯದಲ್ಲಿ ವಿವರಗಳನ್ನು ನವೀಕರಿಸಿರುವುದರೊಂದಿಗೆ, SVEEP ಮಾಹಿತಿಯನ್ನು ಮತ್ತು ರಾಷ್ಟ್ರೀಯ ಮತದಾರರ ದಿನಾಚರಣೆ ಕುರಿತು ಮಾಹಿತಿಯನ್ನು ಸೇರ್ಪಡೆ ಮಾಡಲಾಗಿದೆ.
‘ದೇಶದ ರಕ್ಷಣೆ’ ಅಧ್ಯಾಯದಲ್ಲಿ ಮಾಹಿತಿಯನ್ನು ನವೀಕರಿಸುವುದರೊಂದಿಗೆ ಸೇನಾ ತರಬೇತಿ ಕೇಂದ್ರಗಳು ಹಾಗೂ ಹಡಗು ನಿರ್ಮಾಣ ಕೇಂದ್ರಗಳ ಮಾಹಿತಿ ನೀಡಲಾಗಿದೆ. ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಕುರಿತ ಮಾಹಿತಿ ಹೆಚ್ಚುವರಿಯಾಗಿ ನೀಡಲಾಗಿದೆ.
ಅಂತರಾಷ್ಟ್ರೀಯ ಸಂಬಂಧಗಳನ್ನು ಪರಿಚಯಿಸುವ ಹೊಸ ಅಧ್ಯಾಯವನ್ನು ಸೇರ್ಪಡೆ ಮಾಡಲಾಗಿದೆ. 10ನೇ ತರಗತಿ
·10ನೇ ತರಗತಿಯಲ್ಲಿ ‘ಸಾರ್ವಜನಿಕ ಆಡಳಿತ’ ಎಂಬ ಹೊಸ ಅಧ್ಯಾಯವನ್ನು ಸೇರ್ಪಡೆ ಮಾಡಲಾಗಿದೆ. ಈ ಹಿಂದೆ ಇದ್ದ ‘ಅನ್ಯ ರಾಷ್ಟ್ರಗಳೊಂದಿಗೆ ಭಾರತದ ಸಂಬಂಧ’ ಎಂಬ ಅಧ್ಯಾಯವು ಹಿಂದಿನ ತರಗತಿಗಳಲ್ಲಿ ಪುನರಾವರ್ತನೆ ಆಗಿರುವುದರಿಂದ ಕೈಬಿಡಲಾಗಿದೆ.
“ಭಾರತದ ವಿದೇಶಾಂಗ ನೀತಿ’ ಕಿರು ಶೀರ್ಷಿಕೆಯನ್ನು ವಿದ್ಯಾರ್ಥಿಗಳ ಕಲಿಕಾ ದೃಷ್ಟಿಯಿಂದ ಸೇರ್ಪಡೆ ಮಾಡಲಾಗಿದೆ. ಮಹಿಳಾ ಮೀಸಲಾತಿಯ ಬಗ್ಗೆ ಇತ್ತೀಚಿನ ಮಸೂದೆಯ ‘ನಾರೀ ಶಕ್ತಿ ವಂದನಾ’ ಅಧಿನಿಯಮ, ಲಿಂಗತ್ವ ಅಲ್ಪ ಸಂಖ್ಯಾತರ ಕ್ಷೇಮ ಕುರಿತ ಮಾಹಿತಿಯನ್ನು ಸೇರ್ಪಡೆ ಮಾಡಲಾಗಿದೆ. ಸಮಾಜ ಶಾಸ್ತ್ರ
ಅರ್ಥಶಾಸ್ತ್ರ
ಸಮಾಜ ಶಾಸ್ತ್ರದ ಅರ್ಥ ಮಹತ್ವ ಮತ್ತು ಪ್ರಕಾರಗಳನ್ನು ಪರಿಷ್ಕರಿಸುವುದರೊಂದಿಗೆ, “ಸಾಮಾಜಿಕ ಚಳುವಳಿಗಳು ಹಾಗೂ ಸಾಮಾಜಿಕ ಸ್ತರ ವಿನ್ಯಾಸ’ ದಲ್ಲಿ ಕೆಲವೊಂದು ಅಗತ್ಯ ವಿಷಯಾಂಶಗಳನ್ನು ಸೇರ್ಪಡೆ ಮಾಡುವುದರೊಂದಿಗೆ ಪೋಕೋ ಕಾಯಿದೆಯನ್ನು ಅಳವಡಿಸಲಾಗಿದೆ.
• ‘ಅರ್ಥಶಾಸ್ತ್ರದ ಪರಿಚಯ ಮತ್ತು ವ್ಯಾಖ್ಯಾನ’ ಹೊಸದಾಗಿ ನೀಡಲಾಗಿದೆ.
•’ರಾಷ್ಟ್ರೀಯ ವರಮಾನ’ದ ಅರ್ಥವನ್ನು ಹೊಸದಾಗಿ ಸೇರ್ಪಡೆ ಮಾಡಲಾಗಿದೆ.
ಪಂಚವಾರ್ಷಿಕ ಯೋಜನೆ, ನೀತಿ ಆಯೋಗ, ಸಾರ್ವಜನಿಕ ಹಣಕಾಸು ಮತ್ತು ಆಯವ್ಯಯ ಕುರಿತ ವಿವರಗಳನ್ನು ನವೀಕರಿಸಲಾಗಿದೆ.
ಹಸಿರು ಕ್ರಾಂತಿಯ ಹರಿಕಾರ ಡಾ. ಎಂ.ಎಸ್. ಸ್ವಾಮಿನಾಥನ್ ರವರಿಗೆ ಗೌರವಾರ್ಥಕವಾಗಿ ನೀಡಿರುವ ಭಾರತ ರತ್ನ ಪ್ರಶಸ್ತಿಯ ಮಾಹಿತಿಯನ್ನು ಸೇರಿಸಲಾಗಿದೆ.
ವ್ಯವಹಾರ ಅಧ್ಯಯನ
ಸಹಕಾರ ಸಂಘಗಳು, ಬಹುರಾಷ್ಟ್ರೀಯ ಕಂಪನಿಗಳು, ಮಾರುಕಟ್ಟೆ ವಿಧಗಳು ಇವುಗಳಿಗೆ ವಿವರಣೆ/ ಉದಾಹರಣೆ ನವೀಕರಿಸಲಾಗಿದೆ.
• ಬ್ಯಾಂಕ್‌ಗಳ ವಿಲೀನೀಕರಣ ಮಾಹಿತಿಯನ್ನು ನೀಡಲಾಗಿದೆ.
ಭೂಗೋಳ
ಭೂಪಟಗಳು, ತಾಲ್ಲೂಕು, ಜಿಲ್ಲೆಗಳಿಗೆ ಸಂಬಂಧಿಸಿದ ಅಂಕಿ ಅಂಶಗಳನ್ನು ವಿಷಯಾಂಶಗಳಿಗೆ ಅನುಗುಣವಾಗಿ ನವೀಕರಿಸಲಾಗಿದೆ.
• ರಾಷ್ಟ್ರೀಯ ಹೆದ್ದಾರಿ, ವಿಮಾನ ನಿಲ್ದಾಣ, ಮೆಟ್ರೋ ರೈಲು ಮಾಹಿತಿಗಳನ್ನು ಸೇರ್ಪಡೆ ಮಾಡಲಾಗಿದೆ.
• ಪಕ್ಷಿಧಾಮ, ವನ್ಯ ಜೀವಿ ಧಾಮ, ರಾಷ್ಟ್ರೀಯ ಉದ್ಯಾನವನ ಹಾಗೂ ವಿಶ್ವ ಪರಂಪರೆ ತಾಣ ಇವುಗಳ ಕುರಿತ ಇತ್ತೀಚಿನ ಮಾಹಿತಿ ನೀಡಲಾಗಿದೆ.
•ಇಸ್ರೋ ಸಂಸ್ಥೆಯ ಕುರಿತು ಮಾಹಿತಿಯನ್ನು ಅಳವಡಿಸಲಾಗಿದೆ.
ಕನ್ನಡ ಪ್ರಥಮ ಭಾಷಾ ಪಠ್ಯಪುಸ್ತಕಗಳಲ್ಲಿ ಆಗಿರುವ ಬದಲಾವಣೆ/ಸೇರ್ಪಡೆ
1 ರಿಂದ 5ನೇ ತರಗತಿ
• ಕನ್ನಡದ ಹಿರಿಯ ಕವಿಗಳಾದ ಕೆ.ವಿ.ತಿರುಮಲೇಶ್ ಮತ್ತು ವಿ.ಜಿ.ಭಟ್ಟರ ಮಕ್ಕಳ ಕವನಗಳನ್ನು ಪೂರಕ ಓದಿಗೆ ಹೊಸದಾಗಿ ನೀಡಲಾಗಿದೆ.
ಮಹಿಳಾ ದಿನಾಚರಣೆ ಎಂಬ ಪಾಠದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮಹಿಳೆಯರನ್ನು ಪರಿಚಯಿಸಲಾಗಿದೆ.
• ‘ಪ್ರಾಮಾಣಿಕತೆ’ ಎಂಬ ಪೂರಕ ಗದ್ಯವನ್ನು ಕೈಬಿಡಲಾಗಿದೆ.
•ಪುರಂದರದಾಸರ ಕ್ಷಿಷ್ಟವಾದ ಕೀರ್ತನೆಯನ್ನು 5ನೇ ತರಗತಿಯಿಂದ 8ನೇ ತರಗತಿಗೆ ಸ್ಥಳಾಂತರಿಸಲಾಗಿದೆ. 6 ಮತ್ತು 7ನೇ ತರಗತಿ :
•ಬಿ.ಎಸ್.ಕುರ್ಕಾಲ ಮತ್ತು ರಾಜಶೇಖರ ಕುಕ್ಕುಂದ ಅವರ ಕವನಗಳು ಮಕ್ಕಳ ವಯೋಮಾನಕ್ಕೆ ಮೀರಿದ್ದಾಗಿರುವುದರಿಂದ ಕೈಬಿಡಲಾಗಿದೆ ಹಾಗೂ ಶ್ರೀನಿವಾಸ ಉಡುಪರ ಕವನವನ್ನು 10 ನೇ ತರಗತಿಯ ತೃತೀಯ ಭಾಷೆ ಕನ್ನಡ ಪುಸ್ತಕದಲ್ಲಿ ಪೂರಕ ಪದ್ಯವಾಗಿ ಸ್ಥಳಾಂತರಿಸಲಾಗಿದೆ. ಕನ್ನಡದ ಹಿರಿಯ ಕವಿಗಳಾದ ಕಯ್ಯಾರ ಕಿಞ್ಞಣ್ಣರೈ ಹಾಗೂ ಹೆಚ್.ಎಸ್.ಶಿವಪ್ರಕಾಶ್ ರವರ ಕವನಗಳನ್ನು ಹೊಸದಾಗಿ ಸೇರಿಸಲಾಗಿದೆ.
8 ರಿಂದ 10ನೇ ತರಗತಿ
ಈ ಕೆಳಗಿನ ಪಾಠಗಳನ್ನು ಹೊಸದಾಗಿ ಸೇರಿಸಿ, ಕನ್ನಡದ ಹಿರಿಯ ಹಾಗೂ ಪ್ರಶಸ್ತಿ ವಿಜೇತ ಲೇಖಕರ ಪದ್ಯ/ಗದ್ಯಗಳನ್ನು ಸೇರಿಸಲಾಗಿದೆ.
- ಚಂದ್ರಶೇಖರ ಕಂಬಾರ – ಸೀಮೆ
- ಗಿರೀಶ್ ಕಾರ್ನಾಡ್ – ಅಧಿಕಾರ
- ದೇವಿದಾಸ-ಚಕ್ರಗ್ರಮಹಣ(ಯಕ್ಷಗಾನ)
- ಮರಿಯಪ್ಪ ಭಟ್ಟ-ನಮ್ಮ ಭಾಷೆ
- ಎ.ಎನ್.ಮೂರ್ತಿರಾವ್- ವ್ಯಾಘ್ರ ಗೀತೆ
- ದೇವನೂರು ಮಹಾದೇವ – ಎದೆಗೆ ಬಿದ್ದ ಅಕ್ಷರ
- ಅಕ್ಕಮಹಾದೇವಿ – ವಚನಗಳು
ಹಳಗನ್ನಡ ಪಠ್ಯ ದುರ್ಗಸಿಂಹನ ‘ವೃಕ್ಷ ಸಾಕ್ಷಿ’ ಪಾಠಕ್ಕೆ ಬದಲಾಗಿ ಎ.ಎಸ್. ಮೂರ್ತಿರಾಯರ ಲಲಿತ ಪ್ರಬಂಧವನ್ನು ಸೇರಿಸಲಾಗಿದೆ.
ಕನ್ನಡ ದ್ವಿತೀಯ ಭಾಷೆ ಪಠ್ಯಪುಸ್ತಕಗಳಲ್ಲಿ ಆಗಿರುವ ಬದಲಾವಣೆ/ಸೇರ್ಪಡೆ
5 ರಿಂದ 7 ನೇ ತರಗತಿ
5ನೇ ತರಗತಿಯಲ್ಲಿ ಈ ಕೆಳಗಿನ ಮಕ್ಕಳ ಸಾಹಿತ್ಯದ ಶ್ರೇಷ್ಟ ಕೃತಿಗಳನ್ನು ಹೊಸದಾಗಿ ಪೂರಕ ಓದಿಗಾಗಿ ಸೇರಿಸಲಾಗಿದೆ.
• ಹೋಯಿಸಳ — ‘ಸಂತಮ್ಮಣ್ಣ’
ರಾಜರತ್ನಂ – ‘ತುತ್ತೂರಿ’
• ಅಡಿಗ – ‘ದೇಶ ಪ್ರೇಮ’
• ವಿ.ಜಿ.ಭಟ್ಟ – – ‘ಕನಸಿನಲ್ಲಿ’
8ನೇ ತರಗತಿ
‘ಬ್ಲಡ್ ಗ್ರೂಪ್’ ಕಥೆಯನ್ನು ಕೈಬಿಟ್ಟು ನೇಮಿಚಂದ್ರರ ‘ಏನಾದರೂ ಮಾಡಿ ದೂರಬೇಡಿ’ ಎಂಬ ಪರಿಸರ ಸಂರಕ್ಷಣೆ ಸಂಬಂಧಿತ ಗದ್ಯ ಲೇಖನವನ್ನು ಸೇರಿಸಲಾಗಿದೆ.
8ನೇ ತರಗತಿಯಲ್ಲಿ ಯಾವುದೇ ಪೂರಕ ಓದು ಇರಲಿಲ್ಲವಾದ್ದರಿಂದ ‘ಒಗಟು’, ‘ಸರ್.ಎಂ.ವಿಶ್ವೇಶ್ವರಯ್ಯ’ ಮತ್ತು ‘ಬಸವಣ್ಣನ ವಚನಗಳ’ನ್ಯೂ ಪೂರಕ ಓದಿಗೆ ಸೇರ್ಪಡೆ ಮಾಡಲಾಗಿದೆ.
9ನೇ ತರಗತಿ
ಎಸ್.ಜಿ.ನರಸಿಂಹಾಚಾರರ “ಗೋವಿನ ಚರಿತ್ರೆ’ ಹಾಗೂ ಮುಡ್ನಾಕೂಡು ಚಿನ್ನಸ್ವಾಮಿಯವರ ‘ಸಮುದ್ರ ಚುಂಬನ’ ಕವನಗಳನ್ನು ಸೇರಿಸಿ, ಪೂರಕ ಓದು ಪೂರ್ಣಗೊಳಿಸಲಾಗಿದೆ.
10ನೇ ತರಗತಿ
·ಮಕ್ಕಳ ಕಲಿಕೆಗೆ ಕಠಿಣವಾದ ವಿದೇಶಿ ಪ್ರವಾಸ ಕಥನ ‘ಟುಸ್ಪೋಡ್ ವ್ಯಾಕ್ಸ್ ಮ್ಯೂಸಿಯಂ’ ಲೇಖನವನ್ನು ಕೈಬಿಟ್ಟು ಜಿ.ಎಸ್.ಶಿವರುದ್ರಪ್ಪನವರ ‘ಗಂಗೆಯಲ್ಲಿ ದೀಪ ಮಾಲೆ’ ಪ್ರವಾಸ ಕಥನವನ್ನು ಸೇರಿಸಲಾಗಿದೆ.
ಪೂರಕ ಪಠ್ಯ ಕಡಿಮೆ ಇರುವುದರಿಂದ ಕವಿರಾಜ ಮಾರ್ಗದ ಕನ್ನಡ ನಾಡು ನುಡಿ ಕುರಿತ ಕವನಗಳನ್ನೂ, ಹಾ.ಮಾ.ನಾಯಕ್ ಹಾಗೂ ಗೌರೀಶ್ ಕಾಯ್ಕಿಣಿಯವರ ಲೇಖನಗಳನ್ನು ಸೇರಿಸಲಾಗಿದೆ.
ಕನ್ನಡ ತೃತೀಯ ಭಾಷೆ ಪಠ್ಯಪುಸ್ತಕಗಳಲ್ಲಿ ಆಗಿರುವ ಬದಲಾವಣೆ/ಸೇರ್ಪಡೆ
9 ಮತ್ತು 10 ನೇ ತರಗತಿ
•ಕೈಬಿಟ್ಟಿದ್ದ ನಾಗೇಶ್ ಹೆಗಡೆ, ಪಿ.ಲಂಕೇಶ್ ರವರ ಲೇಖನವನ್ನೂ, ಶ್ರೀನಿವಾಸ ಉಡುಪರವರ ಕವನವನ್ನೂ ಹೊಸದಾಗಿ ಸೇರಿಸಲಾಗಿದೆ.
Watch Video: ‘ಬರಗಾಲ’ದಲ್ಲೂ ಖುಲಾಯಿಸಿದ ‘ರೈತ’ನ ಅದೃಷ್ಠ: ‘ಬೇಸಿಗೆ’ಯಲ್ಲೂ ಬೋರಲ್ಲಿ 45 ಅಡಿಗೆ ‘2.5 ಇಂಚು’ ನೀರು