ಬೆಂಗಳೂರು : ಗ್ಯಾರಂಟಿ ಯೋಜನೆಗಳ ಅನುಷ್ಟಾನ ಮತ್ತು ಸಾಂಸ್ಥಿಕ ಕಾರ್ಯವಿಧಾನಗಳು ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಅನುಷ್ಠಾನ ಪ್ರಾಧಿಕಾರ, ಬಿ.ಬಿ.ಎಂ.ಪಿ. ಮಟ್ಟದ ಅನುಷ್ಮಾನ ಸಮಿತಿ ಹಾಗೂ ತಾಲ್ಲೂಕು ಮಟ್ಟದಲ್ಲಿ ಅನುಷ್ಠಾನ ಸಮಿತಿಗಳನ್ನು ರಚಿಸಿ, ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಕುರಿತು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಆದೇಶದಲ್ಲಿ ಉಲ್ಲೇಖ ಮಾಡಿರುವಂತೆ ಮುಖ್ಯಮಂತ್ರಿಗಳು ಜುಲೈ-2023ರಲ್ಲಿ ಮಂಡಿಸಿದ 2023-24ನೇ ಸಾಲಿನ ಆಯವ್ಯಯ ಭಾಷಣದಲ್ಲಿ ರಾಜ್ಯದ ಜನತೆಗೆ ‘ಶಕ್ತಿ’, ‘ಗೃಹ ಜ್ಯೋತಿ’, ‘ಅನ್ನ ಭಾಗ್ಯ’, ‘ಗೃಹ ಲಕ್ಷ್ಮಿ’ ಮತ್ತು ‘ಯುವ ನಿಧಿ’ ಯೋಜನೆಗಳನ್ನು ಜಾರಿಗೊಳಿಸುವುದಾಗಿ ಘೋಷಿಸಿರುತ್ತಾರೆ. ಅದರಂತೆ, ಶಕ್ತಿ ಯೋಜನೆಯನ್ನು ಜೂನ್ 11, 2023 ರಂದು, ‘ಗೃಹ ಜ್ಯೋತಿ’ ಯೋಜನೆಯನ್ನು ಜುಲೈ 1, 2023 ರಂದು, ‘ಅನ್ನ ಭಾಗ್ಯ’ ಯೋಜನೆಯನ್ನು ಜುಲೈ- 2023ರಂದು, ‘ಗೃಹ ಲಕ್ಷ್ಮಿ’ ಯೋಜನೆಯನ್ನು 2023ರಂದು ಮತ್ತು ‘ಯುವ ನಿಧಿ’ ಯೋಜನೆಯನ್ನು ಜನವರಿ 12, 2024 ರಂದು ಜಾರಿಗೊಳಿಸಿ, ಅರ್ಹ ಫಲಾನುಭವಿಗಳಿಗೆ ಯೋಜನೆಯ ಲಾಭಗಳನ್ನು ವಿತರಿಸಲಾಗುತ್ತಿದೆ.
ಶಕ್ತಿ’ ಯೋಜನೆಯ ಮೂಲಕ ರಾಜ್ಯದ ಎಲ್ಲಾ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ರಾಜ್ಯದ ಪ್ರತಿ ಮಹಿಳೆಯೂ ಉಚಿತವಾಗಿ ಪ್ರಯಾಣ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಹಸಿವು ಮುಕ್ತ ಕರ್ನಾಟಕ ಎಂಬುದು ಸರ್ಕಾರದ ಪ್ರಧಾನ ಆಶಯ. ಅದಕ್ಕಾಗಿ ಅನ್ನ ಭಾಗ್ಯ ಯೋಜನೆಯ ಮೂಲಕ ‘ನೆಮ್ಮದಿಯ ಜೀವನಕ್ಕಾಗಿ ಆಹಾರ ಭದ್ರತೆ” ಎಂಬ ಘೋಷವಾಕ್ಯದೊಂದಿಗೆ ರಾಜ್ಯದ ಬಡ ಕುಟುಂಬದ (ಬಿ.ಪಿ.ಎಲ್) ಪ್ರತಿ ಸದಸ್ಯರಿಗೆ ಪ್ರತಿ ತಿಂಗಳು 5 ಕೆ.ಜಿ. ಅಕ್ಕಿ/ಧಾನ್ಯ ಹಾಗೂ 5 ಕೆ.ಜಿ. ಅಕ್ಕಿಯ ಬೆಲೆಗೆ ಸಮನಾಗಿ ರೂ. 170.00 ಗಳನ್ನು ಸರ್ಕಾರದಿಂದ ನೀಡಲಾಗುತ್ತಿದೆ.
ಗೃಹ ಜ್ಯೋತಿ’ ಯೋಜನೆಯ ಮೂಲಕ ರಾಜ್ಯದ ಎಲ್ಲಾ ಕುಟುಂಬಗಳಿಗೆ ಗೃಹಬಳಕೆಯ 200 ಯೂನಿಟ್ ವರೆಗಿನ ವಿದ್ಯುತ್ತನ್ನು ಉಚಿತವಾಗಿ ನೀಡಲಾಗುತ್ತಿದೆ. ತಿಂಗಳ ಸರಾಸರಿ ವಿದ್ಯುತ್ ಬಳಕೆಯ ಪ್ರಮಾಣಕ್ಕೆ ಶೇ.10 ರಷ್ಟನ್ನು ಹೆಚ್ಚುವರಿಯಾಗಿ ಬಳಸಿದರೂ ಸಹ ವಿದ್ಯುತ್ತನ್ನು ಉಚಿತವಾಗಿ ನೀಡಲಾಗುತ್ತಿದೆ.
‘ಗೃಹ ಲಕ್ಷ್ಮಿ’ ಯೋಜನೆಯಡಿ ರಾಜ್ಯದ ಪ್ರತಿ ಕುಟುಂಬದ ಮಹಿಳಾ ಮುಖ್ಯಸ್ಥೆಗೆ ಮಾಸಿಕ ರೂ.2,000/- ಸಹಾಯಧನ ನೀಡಲಾಗುತ್ತಿದೆ.
‘ಯುವ ನಿಧಿ’ ಯೋಜನೆಯ ಮೂಲಕ 2022-2023ನೇ ಸಾಲಿನಲ್ಲಿ ಪದವಿ ಪೂರ್ಣಗೊಳಿಸಿ ಉದ್ಯೋಗ ಸಿಗದ ನಿರುದ್ಯೋಗಿ ಯುವಜನರಿಗೆ ಮಾಸಿಕ ರೂ.3000/- ಗಳನ್ನು ಹಾಗೂ ಡಿಪ್ಲೊಮೊ ವ್ಯಾಸಂಗ ಪೂರ್ಣಗೊಳಿಸಿ ಉದ್ಯೋಗ ಸಿಗದ ನಿರುದ್ಯೋಗಿ ಯುವಜನರಿಗೆ ಮಾಸಿಕ ರೂ.1500/-ಗಳ ನಿರುದ್ಯೋಗ ಭತ್ಯೆಯನ್ನು ಒದಗಿಸಲಾಗುತ್ತಿದೆ.
ಮೇಲ್ಕಂಡ 5 ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನ ಹಾಗೂ ಮೇಲ್ವಿಚಾರಣೆಗೆ ರಾಜ್ಯ ಮಟ್ಟದ ಕಾರ್ಯವ್ಯವಸ್ಥೆಯನ್ನು ಜಾರಿಗೆ ತರುವ ಅವಶ್ಯಕತೆಯನ್ನು ಸರ್ಕಾರವು ಮನಗಂಡು, ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ಅಗತ್ಯ ನೀತಿ, ಸುಧಾರಣೆಗಳು, ಅನುಷ್ಠಾನದ ವಿಧಾನಗಳಲ್ಲಿ ಸರಳೀಕರಣ ತರಲು ಹಾಗೂ ತಳಮಟ್ಟದಲ್ಲಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಮಾನ್ಯ ಮುಖ್ಯಮಂತ್ರಿಯವರು ಮೇಲೆ ಓದಲಾದ ದಿನಾಂಕ: 17/01/2024ರ ಟಿಪ್ಪಣಿ ಮೂಲಕ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಅನುಷ್ಠಾನ ಪ್ರಾಧಿಕಾರಗಳನ್ನು ಮತ್ತು ತಾಲ್ಲೂಕು ಮಟ್ಟದಲ್ಲಿ ಅನುಷ್ಠಾನ ಸಮಿತಿಗಳನ್ನು ರಚಿಸಲು ಸೂಕ್ತ ಆದೇಶ ಹೊರಡಿಸುವಂತೆ ನಿರ್ದೇಶನ ನೀಡಿರುತ್ತಾರೆ.
ನಿಟ್ಟಿನಲ್ಲಿ, ಸರ್ಕಾರವು ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಮೇಲ್ವಿಚಾರಣೆಗಾಗಿ ಸಾಂಸ್ಥಿಕ ಕಾರ್ಯವಿಧಾನಗಳನ್ನು ಜಾರಿಗೆ ತರಲು ನಿರ್ಣಯಿಸಿ, ರಾಜ್ಯ ಮಟ್ಟದಲ್ಲಿ ‘ರಾಜ್ಯ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ’, ಜಿಲ್ಲಾ ಮಟ್ಟದಲ್ಲಿ ‘ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ’ .ತಾಲ್ಲೂಕು ಮಟ್ಟದಲ್ಲಿ ‘ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ’ ಹಾಗೂ ಬಿ.ಬಿ.ಎಂ.ಪಿ. ಮಟ್ಟದಲ್ಲಿ “ಬಿ.ಬಿ.ಎಂ.ಪಿ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ” ಗಳನ್ನು ರಚಿಸಲು ಸರ್ಕಾರವು ನಿರ್ಧರಿಸಿ ಈ ಕೆಳಕಂಡಂತೆ ಆದೇಶಿಸಿದೆ ಅಂತ ತಿಳಿಸಿದೆ.