ಬೆಂಗಳೂರು: ರಾಜ್ಯ ಸರ್ಕಾರದಿಂದ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸುವಂತ ಕರಡು ತಿದ್ದುಪಡಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಈ ಮೂಲಕ ಸ್ಥಳೀಯ ಸಂಸ್ಥೆಗಳಲ್ಲಿ ಶೇ.33ರಷ್ಟು ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನು ಇರಿಸಲಾಗಿದೆ.
ಈ ಸಂಬಂಧ ರಾಜ್ಯ ಸರ್ಕಾರವು ವಿಶೇಷ ರಾಜ್ಯ ಪತ್ರದಲ್ಲಿ ಕರಡು ತಿದ್ದುಪಡಿ ಅಧಿಸೂಚನೆಯನ್ನು ಪ್ರಕಟಿಸಲಾಗಿದ್ದೂ, ಅದರಲ್ಲಿ ಕರ್ನಾಟಕ ಮನಿಸಿಪಾಲಿಟಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಚುನಾವಣೆ ನಿಯಮ 1965ಕ್ಕೆ ತಿದ್ದುಪಡಿಯನ್ನು ತಂದು, ರಾಜ್ಯ ಸರ್ಕಾರ ಗೆಜೆಟ್ ಮೂಲಕ ಕರಡು ನಿಯಮಾವಳಿಗಳನ್ನು ಜಾರಿಗೊಳಿಸಿದೆ. ಇದಕ್ಕೆ ಸಾರ್ವಜನಿಕರಿಂದ ಆಕ್ಷೇಪಣೆ ಕೋರಿದೆ.
ಆಸಕ್ತರು ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ, ವಿಕಾಸ ಸೌಧಕ್ಕೆ ತಕರಾರು ಸಲ್ಲಿಸಲು ಕೋರಲಾಗಿದೆ. ಪರಿಶಿಷ್ಟ ಜಾತಿ ಮತ್ತು ವರ್ಗಗಳ ಮೀಸಲಾತಿಯೂ ಸೇರಿದಂತೆ ವಿಶೇಷವಾಗಿ ಎಲ್ಲಾ ವರ್ಗದ ಮಹಿಳೆಯರಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದಲ್ಲಿ ಮೀಸಲಾತಿ ಕಲ್ಪಿಸುವಲ್ಲಿ ಇದೊಂದು ಅಪೂರ್ವ, ಮಹತ್ವ ಪೂರ್ಣ ಕರಡು ಅಧಿಸೂಚನೆ ಆಗಿದೆ.
ಹೀಗಿದೆ ನಗರ ಮುನಿಸಿಪಲ್ ಕೌನ್ಸಿಲ್ ನಲ್ಲಿ ಮೀಸಲಾತಿ
ನಗರ ಮುನಿಸಿಪಲ್ ಕೌನ್ಸಿಲ್ ಗಳಲ್ಲಿ ಪರಿಶಿಷ್ಟ ಜಾತಿಯವರಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಲ್ಲಿ ತಲಾ 5, ಪರಿಶಿಷ್ಟ ಜಾತಿ ಮಹಿಳೆಯರಿಗೆ ತಲಾ 5, ಪರಿಶಿಷ್ಟ ವರ್ಗಕ್ಕೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಲ್ಲಿ ತಲಾ 2, ಇದೇ ವರ್ಗದ ಮಹಿಳೆಯರಿಗೆ ಪ್ರತ್ಯೇಕವಾಗಿ ತಲಾ 2 ಮೀಸಲಾತಿಯನ್ನು ಕಲ್ಪಿಸಲಾಗಿದೆ.
ಹಿಂದುಳಿದ ವರ್ಗ ಎ ಸಮುದಾಯಕ್ಕೆ ಸೇರಿದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದಲ್ಲಿ ತಲಾ 7 ಸ್ಥಾನಗಳನ್ನು ಹಂಚಲಾಗಿದ್ದು, ಇದೇ ವರ್ಗದ ಮಹಿಳೆಯರಿಗೆ ತಲಾ 6 ಸ್ಥಾನಗಳನ್ನು ನೀಡಲಾಗಿದೆ. ಹಿಂದುಳಿದ ವರ್ಗ ಬಿ ಯಲ್ಲಿ ತಲಾ 2 ಸ್ಥಾನಗಳನ್ನು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಿಟ್ಟಿದ್ದರೇ, ಇದೇ ವರ್ಗದ ಮಹಿಳೆಯರಿಗೆ ತಲಾ 1 ಸ್ಥಾನವನ್ನು ಮೀಸಲಿರಿಸಲಾಗಿದೆ.
ಸಾಮಾನ್ಯ ವರ್ಗದಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ತಲಾ 16 ಸ್ಥಾನಗಳನ್ನು ಮೀಸಲಿಟ್ಟಿದ್ದರೇ, ಇದೇ ವರ್ಗದ ಮಹಿಳೆಯರಿಗೆ ತಲಾ 15 ಸ್ಥಾನಗಳನ್ನು ಮೀಸಲಿಡಲಾಗಿದೆ.
ಹೀಗಿದೆ ಟೌನ್ ಮನಿಸಿಪಲ್ ಕೌನ್ಸಿಲ್ ತಿದ್ದುಪಡಿ ಮೀಸಲಾತಿ
ಟೌನ್ ಮುನಿಸಿಪಲ್ ಕೌನ್ಸಿಲ್ ಗಳಲ್ಲಿ ಪರಿಶಿಷ್ಟ ಜಾತಿಗಳಿಗೆ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗೆ ತಲಾ 11, ಇದೇ ವರ್ಗದ ಮಹಿಳೆಯರಿಗೆ ತಲಾ 10, ಪರಿಶಿಷ್ಟ ವರ್ಗಕ್ಕೆ ತಲಾ 5, ಇದೇ ವರ್ಗದ ಮಹಿಳೆಯರಿಗೆ ತಲಾ 4 ಮೀಸಲು ಕಲ್ಪಿಸಲು ಉದ್ದೇಶಿಸಲಾಗಿದೆ.
ಹಿಂದುಳಿದ ವರ್ಗ ಪ್ರವರ್ಗ-2ರಲ್ಲಿ ತಲಾ 13 ಸ್ಥಾನಗಳನ್ನು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ, ಇದೇ ವರ್ಗದ ಮಹಿಳೆಯರಿಗೆ ತಲಾ 12 ಸ್ಥಾನಗಳನ್ನು, ಪ್ರವರ್ಗ ಬಿ ಮಹಿಳೆಯರಿಗೆ ತಲಾ 3, ಮಹಿಳೆಯರಿಗೆ 3 ಸ್ಥಾನ, ಸಾಮಾನ್ಯ ವರ್ಗಕ್ಕೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ತಲಾ 31 ಸ್ಥಾನ ಮತ್ತು ಇದೇ ವರ್ಗದ ಮಹಿಳೆಯರಿಗೂ 31 ಸ್ಥಾನಗಳನ್ನು ನೀಡಲು ಉದ್ದೇಶಿಸಲಾಗಿದೆ.
ಹೀಗಿದೆ ಟೌನ್ ಪಂಚಾಯ್ತಿ ಮೀಸಲಾತಿ
ಟೌನ್ ಪಂಚಾಯ್ತಿಗಳಲ್ಲಿ ಪರಿಶಿಷ್ಟ ಜಾತಿಗೆ ತಲಾ 10 ಸ್ಥಾನ, ಇದೇ ವರ್ಗದ ಮಹಿಳೆಯರಿಗೂ ಅಷ್ಟೇ ಸ್ಥಾನ. ಪರಿಶಿಷ್ಟ ವರ್ಗಕ್ಕೆ ತಲಾ 4, ಮಹಿಳೆಯರಿಗೂ ತಲಾ 4, ಪ್ರವರ್ಗ ಎ ನಲ್ಲೂ ತಲಾ 12 ಸ್ಥಾನ ಮತ್ತು ಇದೇ ವರ್ಗದ ಮಹಿಳೆಯರಿಗೂ ಅಷ್ಟೇ ಸ್ಥಾನಗಳನ್ನು ಮೀಸಲಿಡಲು ಉದ್ದೇಶಿಸಲಾಗಿದೆ. ಹಿಂದುಳಿದ ಪ್ರವರ್ಗ ಬಿ ನಲ್ಲಿ ತಲಾ 3, ಮಹಿಳೆಯರಿಗೆ ತಲಾ 3. ಹಾಗೆ ಸಾಮಾನ್ಯ ವರ್ಗಕ್ಕೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ತಲಾ 30 ಮತ್ತು ಇದೇ ವರ್ಗದ ಮಹಿಳೆಯರಿಗೂ 29 ಸ್ಥಾನ ಮೀಸಲಿಡಲಾಗಿದೆ.
ಮಹಿಳೆಯರಿಗೆ ಸ್ಥಳೀಯ ಸಂಸ್ಥೆಗಳ ಅಧಿಕಾರದಲ್ಲಿ ಶೇ.33ರಷ್ಟು ಅಧಿಕಾರವನ್ನು ಹಂಚುವ ನಿಟ್ಟಿನಲ್ಲಿ ಇದೊಂದು ಮಹತ್ವ ಪೂರ್ಣ ಕರಡು ಅಧಿಸೂಚನೆಯಾಗಿದ್ದು, ಸಾರ್ವಜನಿಕರು ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ.
ವರದಿ: ಬಿ ಸಮೀವುಲ್ಲಾ ಬೆಲಗೂರು, ಹಿರಿಯ ಪತ್ರಕರ್ತರು
ಮುಡಾ ಸೈಟು ಹಂಚಿಕೆ ಹಗರಣವನ್ನು CBI ಮೂಲಕ ತನಿಖೆ ನಡೆಸಿ: ಸಂಸದ ಬೊಮ್ಮಾಯಿ ಆಗ್ರಹ
ಶೀಘ್ರವೇ ‘CET ಅರ್ಜಿ’ ತುಂಬುವ ವಿಧಾನ ತಿಳಿಸಲು ‘ಆಪ್’ ಬಿಡುಗಡೆ: ಕಂಪ್ಯೂಟರ್ ಆಧಾರಿತ ಪರೀಕ್ಷೆ