ಮಂಡ್ಯ : ರಾಜ್ಯದಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಮಹತ್ವಾಕಾಂಕ್ಷಿ ಯೋಜನೆಯನ್ನು ರೂಪಿಸಿದ್ದಾರೆ. ಆದರೆ, ರಾಜ್ಯ ಸರ್ಕಾರ ಅವರಿಗೆ ಯಾವುದೇ ಸೂಕ್ತ ಸಹಕಾರ ನೀಡುತ್ತಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ವಿವೇಕಾನಂದ ಗಂಭೀರ ಆರೋಪ ಮಾಡಿದರು.
ಮದ್ದೂರು ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರದ ಬೃಹತ್ ಕೈಗಾರಿಕಾ ಸಚಿವರಾಗಿ ರಾಜ್ಯದಲ್ಲೂ ಕೈಗಾರಿಕೆಗಳ ಸ್ಥಾಪನೆಗೆ ಮುಂದಾಗಿದ್ದಾರೆ. ಆದರೆ, ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ಸಹಕಾರ ನೀಡುತ್ತಿಲ್ಲ. ಹೀಗಾದರೆ ಕೈಗಾರಿಕೆಗಳನ್ನು ತರಲು ಎಲ್ಲಿ ಸಾಧ್ಯ ಎಂದು ಪ್ರಶ್ನಿಸಿದರು.
ಮಂಡ್ಯ ಜಿಲ್ಲೆಯ ಜನತೆಯ ಆಶೀರ್ವಾದದಿಂದ ಹೆಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾಗಿದ್ದಾರೆ. ಹೀಗಾಗಿ ತಮ್ಮ ಅವಧಿಯಲ್ಲಿ ರಾಜ್ಯದ ಅಭಿವೃದ್ಧಿಗೆ ಮುಂದಾಗಿರುವ ಕುಮಾರಸ್ವಾಮಿ ಅವರು ಒಂದೇ ಬಾರಿಗೆ ರಾಜ್ಯಕ್ಕೆ 4500 ವಿದ್ಯುತ್ ಚಾಲಿತ ಬಸ್ ಗಳನ್ನು ನೀಡಿದರು. ಆದರೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರುಗಳು ಅಭಿನಂದನೆ ಸಲ್ಲಿಸಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಬೇರೆ ರಾಜ್ಯಗಳಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಅಲ್ಲಿನ ಸರ್ಕಾರಗಳು ಹೆಚ್ಚಿನ ಆದ್ಯತೆ ನೀಡುತ್ತಿರುವ ಪರಿಣಾಮ ರಾಜ್ಯದಿಂದ ಬೃಹತ್ ಕೈಗಾರಿಕೆಗಳು ಬೇರೆ ರಾಜ್ಯಗಳತ್ತ ಮುಖ ಮಾಡುತ್ತಿವೆ. ರಾಜ್ಯಕ್ಕೆ ಕೈಗಾರಿಕೆಗಳು ಬಂದರೆ ಅದರ ಕ್ರೆಡಿಟ್ ಕುಮಾರಸ್ವಾಮಿ ಅವರಿಗೆ ಸಲ್ಲುತ್ತದೆ ಎಂಬ ಕೆಟ್ಟ ಆಲೋಚನೆಯಿಂದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರುಗಳು ಸಹಕಾರ ನೀಡುತ್ತಿಲ್ಲ ಎಂದು ಆರೋಪಿಸಿದರು.
ಮಂಡ್ಯ ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಜಾಗ ನೀಡುವಂತೆ ಈಗಾಗಲೇ ಜಿಲ್ಲಾಡಳಿತಕ್ಕೆ ಕುಮಾರಸ್ವಾಮಿ ಅವರು ಪತ್ರ ವ್ಯವಹಾರ ಹಾಗೂ ದಿಶಾ ಸಭೆಯಲ್ಲಿ ಪ್ರಸ್ತಾಪ ಮಾಡಿದ್ದಾರೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಜಿಲ್ಲಾಧಿಕಾರಿಗಳು ಸಹ ಯಾವುದೇ ಜಾಗವನ್ನು ಗುರುತಿಸಿಲ್ಲ. ರಾಜ್ಯದಲ್ಲಿ ಕೇಂದ್ರದಿಂದ ಏನೇ ಕೆಲಸ ಆಗಬೇಕಿದ್ದರೂ ರಾಜ್ಯದ ಸಹಕಾರ ಬೇಕಿದೆ. ಮುಂದಿನ ದಿನಗಳಲ್ಲಿ ಸರ್ಕಾರದ ಸಹಕಾರ ಕುಮಾರಸ್ವಾಮಿ ಅವರಿಗೆ ಸಿಗುತ್ತದೆ ಎಂಬ ನಂಬಿಕೆ ಇದೆ ಎಂದರು.
ಇನ್ನು ಮುಂದಾದರೂ ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ರಾಜ್ಯ ಸರ್ಕಾರ ಕುಮಾರಸ್ವಾಮಿ ಅವರ ಜೊತೆಗೆ ಸಹಕಾರ ನೀಡಬೇಕು. ಬೃಹತ್ ಕೈಗಾರಿಕೆಗಳನ್ನು ರಾಜ್ಯದಲ್ಲಿ ಸ್ಥಾಪನೆ ಮಾಡುವ ಮೂಲಕ ನಿರುದ್ಯೋಗ ಸಮಸ್ಯೆಗಳನ್ನು ಬಗೆಹರಿಸಲು ಪಕ್ಷಾತೀತವಾಗಿ ಮುಂದಾಗಬೇಕೆಂದು ಸಲಹೆ ನೀಡಿದರು.
ವರದಿ : ಗಿರೀಶ್ ರಾಜ್, ಮಂಡ್ಯ
ಸಿಎಂ ಆದೇಶಕ್ಕೂ ಅಧಿಕಾರಿಗಳೂ ಡೋಂಟ್ ಕೇರ್: ಮಂಡ್ಯದಲ್ಲಿ ಕೆಡಿಪಿ ಸಭೆಯಲ್ಲೇ ಪ್ಲಾಸ್ಟಿಕ್ ನೀರಿನ ಬಾಟಲ್ ಬಳಕೆ
ರಾಜ್ಯದಲ್ಲಿ ಜಪಾನ್ 600 ಕೋಟಿ ಹೂಡಿಕೆ: ನೈಡೆಕ್ ಕಂಪನಿಯ ‘ಆರ್ಚರ್ಡ್ ಹಬ್’ಗೆ ಚಾಲನೆ ನೀಡಿದ ಸಚಿವ ಎಂ ಬಿ ಪಾಟೀಲ
IPL 2026 ಹರಾಜಿಗೂ ಮುನ್ನ ಬಿಡುಗಡೆಯಾದ 73 ಆಟಗಾರರ ಸಂಪೂರ್ಣ ಪಟ್ಟಿ ಹೀಗಿದೆ.! | IPL 2026 auction








