ಬೆಂಗಳೂರು : 2023-24ನೇ ಸಾಲಿಗೆ ಸಂಬಂಧಿಸಿದಂತೆ. ಎಲ್ಲಾ ನೌಕರರು/ಅಧಿಕಾರಿಗಳು ಆಸ್ತಿ ಮತ್ತು ಋಣ ಪಟ್ಟಿಯನ್ನು ಸಕಾಲದಲ್ಲಿ ಸಲ್ಲಿಸುವುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖಿತ ಅಧಿಕೃತ ಜ್ಞಾಪನ ಹಾಗೂ ಸುತ್ತೋಲೆಯಲ್ಲಿ ಸರ್ಕಾರಿ ನೌಕರರು ತಮ್ಮ ಆಸ್ತಿ ಮತ್ತು ಋಣ ಪಟ್ಟಿಯನ್ನು ಸಕಾಲದಲ್ಲಿ ಸಲ್ಲಿಸಬೇಕೆಂತಲೂ ಮತ್ತು ಈ ಪಟ್ಟಿಯನ್ನು ಸಕ್ಷಮ ಪ್ರಾಧಿಕಾರಿಗಳು ಪರಿಶೋಧಿಸಬೇಕೆಂತಲೂ ಸೂಚನೆ ನೀಡಲಾಗಿದೆ.
ಅದರಂತೆ ಈ ಕೆಳಕಂಡ ಮಾರ್ಗ ಸೂಚಿಗಳನ್ನು ನೀಡಲಾಗಿದೆ: –
1. ಎಲ್ಲಾ ಸರ್ಕಾರಿ ನೌಕರರು (ಗ್ರೂಪ್-ಡಿ ನೌಕರರನ್ನೂ ಒಳಗೊಂಡಂತೆ) ನಡತೆ ನಿಯಮಗಳ 24ರ ಉಪ ನಿಯಮ
(2) ರ ತಮ್ಮ ವಾರ್ಷಿಕ ಆಸ್ತಿ ಮತ್ತು ಋಣ ಪಟ್ಟಿಗಳನ್ನು ಮಾರ್ಚ್ 31-2024ಕ್ಕೆ ಅಂತ್ಯಗೊಂಡಿರುವಂತೆ ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಸಂಬಂಧಪಟ್ಟ ನಿಗದಿತ ಪ್ರಾಧಿಕಾರಿಗಳಿಗೆ ಸಲ್ಲಿಸತಕ್ಕದ್ದು.
2. ಗ್ರೂಪ್-ಸಿ ಮತ್ತು ಗ್ರೂಪ್-ಡಿ ನೌಕರರಿಗೆ ಸಂಬಂಧಿಸಿದಂತೆ ಆಯಾ ಜಿಲ್ಲಾ ಮಟ್ಟದಲ್ಲಿರುವ ಖಜಾನೆ ಇಲಾಖಾ ಕಚೇರಿಯ, ಕಚೇರಿ ಮುಖ್ಯಸ್ಥರು ಪರಿಶೋಧಿಸುವ ಪ್ರಾಧಿಕಾರಿಗಳಾಗಿರುತ್ತಾರೆ.
3. ಪರಿಶೋಧಿಸುವ ಪ್ರಾಧಿಕಾರಿಗಳು ಈ ಪಟ್ಟಿಯಲ್ಲಿ ತೋರಿಸಿರುವ ವ್ಯವಹಾರಗಳು ನಿಯಮಬದ್ಧವಾಗಿದೆಯೇ ಮತ್ತು ನೌಕರರು ಗಳಿಸಿರುವ ಆಸ್ತಿಯು ಅವರು ಸಂಪಾದಿಸಿದ ಆದಾಯಕ್ಕೆ ಅನುಗುಣವಾಗಿದೆಯೇ ಎಂಬುದನ್ನು ಅತಿ ಜಾಗರೂಕವಾಗಿ ಪರಿಶೋಧಿಸಬೇಕು, ಹಾಗೆ ಪರಿಶೋಧಿಸಿದ ನಂತರ ಯಾವ ನೌಕರನ ಆಸ್ತಿ ಅವನು ಸಂಪಾದಿಸಿದ ಆದಾಯಕ್ಕಿಂತ ಹೆಚ್ಚಾಗಿದ್ದು, ಅದಕ್ಕೆ ಸಮರ್ಥನೆಯನ್ನು ಆತ ಕೊಡದಿದ್ದಲ್ಲಿ ಅವನ ಮೇಲೆ ಶಿಸ್ತಿನ ಕ್ರಮವನ್ನು ತೆಗೆದುಕೊಳ್ಳಬೇಕು ಮತ್ತು ಅಂತಹ ಪ್ರಕರಣಗಳನ್ನು ತಪಾಸಣೆಗಾಗಿ ಲೋಕಾಯುಕ್ತಕ್ಕೆ ತಪಾಸಣೆ ಮಾಡಲು ವಹಿಸುವ ಕ್ರಮವನ್ನು ತೆಗೆದುಕೊಳ್ಳಬೇಕು.
4. ಹೀಗೆ ಪರಿಶೋಧಿಸಿದ ಫಲಿತಾಂಶವನ್ನು (ಅನುಬಂಧ -01 ರಲ್ಲಿ ಲಗತ್ತಿಸಿದ) ದೃಢೀಕರಣದೊಂದಿಗೆ ಖಜಾನೆ ಆಯುಕ್ತಾಲಯಕ್ಕೆ 2 ತಿಂಗಳೊಳಗಾಗಿ ತಿಳಿಸಬೇಕು.
5. ಗ್ರೂಪ್ ‘ಸಿ’ ಮತ್ತು ‘ಡಿ’ ನೌಕರರಿಗೆ ಸಂಬಂಧಿಸಿದ ಆಸ್ತಿ ಮತ್ತು ಋಣ ಪಟ್ಟಿಯನ್ನು ಖಜಾನೆ ಆಯುಕ್ತಾಲಯಕ್ಕೆ ಕಳುಹಿಸುವ ಅಗತ್ಯವಿರುವುದಿಲ್ಲ. ಆಯಾ ಜಿಲ್ಲಾ ಖಜಾನೆಯ ಹಂತದಲ್ಲಿ ಅದನ್ನು ನಿಯಮಾನುಸಾರ ಇರಿಸಿಕೊಳ್ಳಲು ಸೂಚಿಸಲಾಗಿದೆ ಹಾಗೂ ಅಗತ್ಯಬಿದ್ದಾಗ ಪ್ರತ್ಯೇಕವಾಗಿ ಅಥವಾ ಒಟ್ಟಾರೆಯಾಗಿ ಅದನ್ನು ಖಜಾನೆ ಆಯುಕ್ತಾಲಯಕ್ಕೆ ತರಿಸಿಕೊಳ್ಳುವ ಅವಕಾಶ ಖಜಾನೆ ಆಯುಕ್ತಾಲಯ ಹೊಂದಿರುತ್ತದೆ.
6. ಗ್ರೂಪ್’ ಎ’ ಮತ್ತು ‘ಬಿ’ ಅಧಿಕಾರಿಗಳು ತಮ್ಮ ಆಸ್ತಿ ಮತ್ತು ಋಣ ಪಟ್ಟಿಗಳನ್ನು ಏಪ್ರಿಲ್ ಅಂತ್ಯದೊಳಗೆ ಖಜಾನೆ ಆಯುಕ್ತಾಲಯಕ್ಕೆ ಸಲ್ಲಿಸುವಂತೆ ಕ್ರಮ ಕೈಗೊಳ್ಳುವುದು.
ಈ ನಿಯಮ ಹಾಗೂ ಸೂಚನೆಗಳನ್ನು ನಿರ್ಲಕ್ಷಿಸುವ ನೌಕರರ / ಅಧಿಕಾರಿಗಳ ಮೇಲೆ ನಿಯಮಾನುಸಾರ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದೆಂದು ಈ ಮೂಲಕ ತಿಳಿಸಲಾಗಿದೆ.