ಬೆಂಗಳೂರು : ರಾಜ್ಯದ 3,800 ದಾಖಲೆ ರಹಿತ ವಸತಿ ಪ್ರದೇಶಗಳನ್ನು 6 ತಿಂಗಳಲ್ಲಿ ಕಂದಾಯ ಗ್ರಾಮಗಳೆಂದು ಘೋಷಿಸಲಾಗುವುದು. ಆ ಗ್ರಾಮಗಳಲ್ಲಿ ವಾಸಿಸುವ 1.50 ಲಕ್ಷ ಕುಟುಂಬಗಳಿಗೆ ಹಕ್ಕು ಪತ್ರ ನೀಡಲಾಗುವುದು ಎಂದು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆ ಶಿರಸಿಯ ಅಂಬೇಡ್ಕರ್ ಭವನದಲ್ಲಿ ಅರ್ಹ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಬಗರ್ ಹುಕುಂ ಸಾಗುವಳಿ ಚೀಟಿ, ಪಹಣಿ, ಪೋಡಿ ದಾಖಲೆ, ಕಂದಾಯ ಗ್ರಾಮಗಳ ಹಕ್ಕು ಪತ್ರ ವಿತರಿಸಿ ಅವರು ಮಾತನಾಡಿದರು.
ರಾಜ್ಯದ 3800 ದಾಖಲೆ ರಹಿತ ವಸತಿ ಪ್ರದೇಶಗಳನ್ನು ಮುಂದಿನ ಆರು ತಿಂಗಳಲ್ಲಿ ಕಂದಾಯ ಗ್ರಾಮಗಳೆಂದು ಘೋಷಿಸಲಾಗುವುದು. ಆ ಗ್ರಾಮಗಳಲ್ಲಿ ವಾಸಿಸುವ 1.50 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ನೀಡಲಾಗುವುದು. ಬಗರ್ ಹುಕುಂ ಸಾಗುವಳಿದಾರರಿಂದ ಲಕ್ಷಾಂತರ ಅರ್ಜಿಗಳು ಸಲ್ಲಿಕೆಯಾಗಿವೆ. ಕಂದಾಯ ಇಲಾಖೆಯಿಂದ ಆಂದೋಲನದ ರೀತಿಯಲ್ಲಿ ಅರ್ಜಿಗಳ ವಿಲೇವಾರಿ ಮಾಡಿ ಅರ್ಹರಿಗೆ ಹಕ್ಕುಪತ್ರ ನೀಡಲಿದೆ ಎಂದು ಹೇಳಿದರು.
ವಿವಿಧ ಪ್ರದೇಶಗಳಲ್ಲಿ ತಾಂಡಾಗಳು, ಹಟ್ಟಿಗಳು, ಕ್ಯಾಂಪ್ ಗಳಿಗೆ ಅಧಿಕೃತ ಮಾನ್ಯತೆ ಇಲ್ಲದ ಕಾರಣ ಅವುಗಳಿಗೆ ಕಂದಾಯ ಗ್ರಾಮದ ಅಧಿಕಾರ ನೀಡಲು ಸರ್ಕಾರ ನಿರ್ಧರಿಸಿದೆ. ಬಗರ್ ಹುಕುಂ ಸಮಿತಿಗಳ ನಡಾವಳಿಗಳನ್ನು ಡಿಜಿಟಲ್ ಮಾಡಲಾಗುವುದು. ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಅರ್ಹರಿಗೆ ಜಮೀನು ನೋಂದಣಿ ಮಾಡಿಸಿಕೊಡಲಾಗುವುದು ಎಂದು ತಿಳಿಸಿದ್ದಾರೆ.