ಬೆಂಗಳೂರು: ಕಾಂಗ್ರೆಸ್ ಸರಕಾರವು ಒಳ ಮೀಸಲಾತಿ ಜಾರಿ ಮಾಡಿಲ್ಲ. ಇಷ್ಟು ದಿನಗಳ ಕಾಲ ನೀವು ದಲಿತರಿಗೂ ವಂಚನೆ ಮಾಡಿದ್ದೀರಿ; ಯುವಜನರಿಗೂ ಅನ್ಯಾಯ ಮಾಡಿದ್ದಾರೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಕ್ಷೇಪಿಸಿದ್ದಾರೆ.
ಅವರು ಇಂದು ಮಾಧ್ಯಮಗಳ ಜೊತೆ ಮಾತನಾಡಿದರು. ಈ ಪರಿಸ್ಥಿತಿಗೆ ಸರಕಾರದ ಲೋಪ ಕಾರಣವೇ ಹೊರತು ಜನರ ಲೋಪ ಅಲ್ಲ. ಈಗ ಯಾವ ರೀತಿ ಮೀಸಲಾತಿ ಕೊಡುತ್ತೀರೆಂದು ಹೇಳಿ ಎಂದು ಸವಾಲು ಹಾಕಿದರು. ಈಗ ಮೀಸಲಾತಿ ಹಳೆ ರೀತಿಯಲ್ಲೇ ಕೊಡುವುದಾದರೆ ಅದು ಒಳ ಮೀಸಲಾತಿ ಆಗುವುದಿಲ್ಲ ಎಂದು ನುಡಿದರು.
ಒಳ ಮೀಸಲಾತಿ ಕೊಡುವುದಾದರೆ ಶೇ 17 ರಂತೆ ಕೊಡಬೇಕು. ಅದು ಆಗುವುದಿಲ್ಲ. ಕೋರ್ಟಿನಲ್ಲಿ ಕೇಸಿದೆ. ಜಾರ್ಖಂಡ್, ಹರಿಯಾಣ, ತೆಲಂಗಾಣದಲ್ಲಿ ಕೊಟ್ಟಿದ್ದಾರೆ. ಎಸ್‍ಸಿ ಮೀಸಲಾತಿಯಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಜಾಸ್ತಿ ಆಗಿದೆ. ನೀವಿಲ್ಲಿ ಶೇ 50ರ ಮಿತಿ ಇದೆ ಎಂದಿದ್ದೀರಿ. ಆದರೆ, ಎಸ್‍ಸಿ, ಎಸ್‍ಟಿ ಮೀಸಲಾತಿಗೆ ಮಿತಿ ಇಲ್ಲ ಎಂದು ಗಮನ ಸೆಳೆದರು.
ಅದನ್ನು ಮನವರಿಕೆ ಮಾಡಿಕೊಡದೇ ಸರಕಾರ ವಿಫಲವಾಗಿದೆ. ಇದನ್ನು ಜನರ ಮೇಲೆ ಹಾಕುವುದು ಸರಿಯಲ್ಲ. ಯಾವ ರೀತಿ ಈ ಮೀಸಲಾತಿ ಕೊಡುತ್ತೀರೆಂದು ಜನರಿಗೆ ತಿಳಿಸಬೇಕು. ಇಲ್ಲವಾದರೆ ಈ ಜನರಿಗೆ ನೀವು ಅಪಮಾನ, ಮೋಸ ಮಾಡುವುದಾಗಿ ನಾವು ಹೇಳಬೇಕಾಗುತ್ತದೆ ಎಂದು ತಿಳಿಸಿದರು.
ಬಿಜೆಪಿ ಅಧಿಕಾರದಲ್ಲಿದ್ದ ಕಾಲದಲ್ಲಿ ಬಸವರಾಜ ಬೊಮ್ಮಾಯಿಯವರು ಪರಿಶಿಷ್ಟ ಜಾತಿಗೆ ಶೇ 15ರಿಂದ 17ಕ್ಕೆ ಮೀಸಲಾತಿಯನ್ನು ಹೆಚ್ಚಿಸಿದ್ದರು. ಪರಿಶಿಷ್ಟ ವರ್ಗಗಳಿಗೆ ಶೇ 3ರಿಂದ 7ಕ್ಕೆ ಏರಿಸಿದ್ದರು. ಒಳ ಮೀಸಲಾತಿಗೆ ಒಳಪಡುವ ಪರಿಶಿಷ್ಟ ಜಾತಿಗಳ ಹೋರಾಟ ಎರಡ್ಮೂರು ದಶಕಗಳಿಂದ ನಡೆಯುತ್ತಿತ್ತು. ಒಳ ಮೀಸಲಾತಿ ಮಾಡಲು ಒತ್ತಡ ಹೆಚ್ಚಾದ ಕಾರಣ ಒಂದು ತೀರ್ಮಾನಕ್ಕೆ ಬಂದು ಎಬಿಸಿಡಿ ಗುಂಪುಗಳನ್ನು ಮಾಡಿ ಕೇಂದ್ರ ಸರಕಾರಕ್ಕೆ ಕಳಿಸಲಾಗಿತ್ತು. ಆಗ ನಮಗೆ ಅದನ್ನು ಜಾರಿಗೊಳಿಸಲು ಅಧಿಕಾರ ಇರಲಿಲ್ಲ ಎಂದು ವಿಶ್ಲೇಷಿಸಿದರು.
ಕೋರ್ಟಿನಲ್ಲಿ ಮೊಕದ್ದಮೆ ಬಾಕಿ ಇದ್ದುದರಿಂದ ಕೇಂದ್ರ ಸರಕಾರವು ಸ್ವಲ್ಪ ಕಾಯಲು ಹೇಳಿತ್ತು. ಬಳಿಕ ಕೋರ್ಟ್ ಆದೇಶ ಬಂತು. ಎಲ್ಲ ರಾಜ್ಯಗಳು ಅವರೇ ತೀರ್ಮಾನ ತೆಗೆದುಕೊಳ್ಳಬಹುದೆಂದು ತಿಳಿಸಿದರು. ಇದರಿಂದ ಬಹಳ ಸುಲಭ ಆಗಿದೆ. ಇದನ್ನು ರಾಜ್ಯ ಸರಕಾರ ಜಾರಿಗೊಳಿಸಬೇಕಿದೆ ಎಂದು ವಿವರಿಸಿದರು. ನಾವು ಶೇ 6, ಶೇ 5, ಶೇ 4 ಮತ್ತು ಶೇ 1 ಎಂದು ಮಾಡಿದ್ದೆವೋ ಅದನ್ನು ತಿದ್ದುಪಡಿ ಮಾಡಿ ರಾಜಕೀಯ ತೀರ್ಮಾನ ತೆಗೆದುಕೊಂಡು ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ- ಅವರನ್ನು ಪ್ರತ್ಯೇಕವಾಗಿ ಇಟ್ಟಿದ್ದರು. ಅವರ ಮೂಲ ಜಾತಿಗಳು ಇದೇ ಆಗಿದೆ. ಅಲೆಮಾರಿಗಳು ಈ ಎಲ್ಲ ಗುಂಪಿಗೂ ಸೇರಿದ್ದರೂ ಅವರನ್ನು ಸಿ ಗುಂಪಿಗೆ ಹಾಕಿದ್ದಾರೆ ಎಂದರು.
ಇದು ಸರಿ ಇಲ್ಲದಿದ್ದರೂ ಒಂದು ಇತ್ಯರ್ಥ ಆಗಲೆಂದು, ಯಾರಿಗೋ ಅನ್ಯಾಯ ಆಗುವುದಾದರೆ ಮುಂದಿನ ದಿನಗಳಲ್ಲಿ ಸರಿಪಡಿಸಬಹುದೆಂದು ನಾವೆಲ್ಲರೂ ಒಪ್ಪಿದೆವು. ಒಂದೇ ಗುಂಪಿಗೆ ಎಲ್ಲ ಹುದ್ದೆಗಳು ಹೋಗಲಿದೆ ಎಂದು ರಾಜ್ಯದಲ್ಲಿ ಒಂದು ರೀತಿಯ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಇದು ನಡೆಯುವಾಗಲೇ ಧಾರವಾಡದಲ್ಲಿ ಯುವಜನರು ದೊಡ್ಡ ಹೋರಾಟ ಪ್ರಾರಂಭಿಸಿದ್ದರು. ಒಳ ಮೀಸಲಾತಿಯನ್ನು ತೋರಿಸಿಕೊಂಡು 2 ಲಕ್ಷ 84 ಸಾವಿರ ಹುದ್ದೆ ಭರ್ತಿ ಮಾಡದೇ ಬಾಕಿ ಉಳಿಸಿದ್ದೀರಿ ಎಂಬ ಆಕ್ಷೇಪ ಅವರದಾಗಿತ್ತು. ನಮ್ಮ ನಾಯಕರೆಲ್ಲ ಕೈಜೋಡಿಸಿದ್ದರಿಂದ ಆ ಹೋರಾಟದಲ್ಲಿ ಸರಕಾರಕ್ಕೆ ಜ್ವರ ಬಂತು. ತಕ್ಷಣ ಹೋಗಿ ಮಾನ್ಯ ರಾಜ್ಯಪಾಲರನ್ನು ಭೇಟಿ ಮಾಡಿ ಅಂಕಿತವನ್ನು ಪಡೆದರು. ಆದರೆ ಮಾಡಿದ್ದೇನು? ಎಂದು ಪ್ರಶ್ನೆಯನ್ನು ಮುಂದಿಟ್ಟರು.
ನಾಳೆ ಹಾಸ್ಟೆಲ್ ಪ್ರವೇಶಕ್ಕೆ ಪರೀಕ್ಷೆ: 2.31 ಲಕ್ಷ ಮಕ್ಕಳು ಪರೀಕ್ಷೆ ಬರೆಯುವ ನಿರೀಕ್ಷೆ








