ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ನಿಷ್ಠೆಯಿಂದ ಬೆಲೆ ಏರಿಕೆ, ತೆರಿಗೆ ಹೆಚ್ಚಳವನ್ನು ಜನರಿಗೆ ಕೊಡುಗೆಯಾಗಿ ನೀಡಿದೆ ಎಂದು ರಾಜ್ಯದ ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಅವರು ಆಕ್ಷೇಪಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ. ಇದರ ವಿರುದ್ಧ ಸೋಮವಾರ ಬಿಜೆಪಿ ವತಿಯಿಂದ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಿದ್ದೇವೆ. ಬೆಂಗಳೂರಿನ ಫ್ರೀಡಂ ಪಾರ್ಕ್, ಎಲ್ಲ ಜಿಲ್ಲಾ ಕೇಂದ್ರಗಳು, ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರಕಟಿಸಿದರು. ಏರಿಸಿದ ದರವನ್ನು ಸಂಪೂರ್ಣವಾಗಿ ಹಿಂದಕ್ಕೆ ಪಡೆಯಬೇಕು ಎಂದು ಅವರು ಆಗ್ರಹಿಸಿದರು.

ಕಾಂಗ್ರೆಸ್ ಸರಕಾರವು ಆಸ್ತಿ ತೆರಿಗೆ ಹೆಚ್ಚಳ, ಕುಡಿಯುವ ನೀರಿನ ದರ ಏರಿಕೆ, ವಿದ್ಯುತ್ ದರ ಏರಿಕೆ ಮಾಡಿದೆ. ವಾಹನಗಳ ತೆರಿಗೆ, ಆಸ್ತಿ ತೆರಿಗೆಯನ್ನೂ ಹೆಚ್ಚಿಸಲಾಗಿದೆ. ಸಾಲ ಪಡೆಯಲು ಬ್ಯಾಂಕಿಗೆ ಹೋದರೆ ರಿಜಿಸ್ಟ್ರೇಶನ್ ದರವನ್ನೂ ಹೆಚ್ಚಿಸಲಾಗಿದೆ ಎಂದು ದೂರಿದರು.

ಹಣದುಬ್ಬರ, ಬೆಲೆ ಏರಿಕೆ ವಿರುದ್ಧ ಹೋರಾಟ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ಸಿನವರು, ಚುನಾವಣೆ ವೇಳೆ ಬೆಲೆ ಇಳಿಸುವ ಭರವಸೆ ಕೊಟ್ಟಿದ್ದರು. ಇದೀಗ ರಾಜ್ಯದ ಜನತೆಗೆ ಕಾಂಗ್ರೆಸ್ಸಿನವರದು ಬೆಲೆ ಏರಿಕೆಯ ಗ್ಯಾರಂಟಿ ಎಂದು ಅವರು ತಿಳಿಸಿದರು.

ಸರಕಾರವು ನಿನ್ನೆ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಹೆಚ್ಚಿಸಿದೆ. ಪೆಟ್ರೋಲ್ ಬೆಲೆ 3 ರೂ. ಮತ್ತು ಡೀಸೆಲ್ ಬೆಲೆ 3.50 ರೂ ಏರಿಸಿದ್ದಾರೆ. ಕರ್ನಾಟಕ ಸೇಲ್ಸ್ ಟ್ಯಾಕ್ಸನ್ನು ಶೇ 26ರಿಂದ ಶೇ 30ಕ್ಕೆ ಏರಿಸಿದ್ದಾರೆ. ಡೀಸೆಲ್ ತೆರಿಗೆಯನ್ನು ಶೇ 14ರಿಂದ 18 ಶೇಕಡಾಕ್ಕೆ ಏರಿಸಿದ್ದಾರೆ ಎಂದು ಟೀಕಿಸಿದರು.

ಹಿಂದೆ ಒಂದು ರೂ. ಹೆಚ್ಚಳ ಮಾಡಿದ್ದಾಗ ಹಣಕಾಸು ಸಚಿವ, ಆರ್ಥಿಕ ತಜ್ಞರಾಗಿ ಸಿದ್ದರಾಮಯ್ಯನವರು ಎಲ್ಲ ವಸ್ತುಗಳ ಬೆಲೆ ಏರಿಕೆ ಆಗಲಿದೆ ಎಂದು ಪ್ರಬಲವಾಗಿ ವಿರೋಧಿಸಿದ್ದರು. ನಾಚಿಕೆ ಆಗಲ್ವ ಎಂಬ ಭಾಷೆಯನ್ನೂ ಬಳಸಿದ್ದರು. ಇವತ್ತು ವಿದ್ಯುತ್ ದರವನ್ನು ಶೇ 100ರಿಂದ 150ರಷ್ಟು ಏರಿಸಿದ್ದಾರೆ. ಯಾವ ರೀತಿ ಇವರು ಸಮಜಾಯಿಷಿ ಕೊಡುತ್ತಾರೆ ಎಂದು ಪ್ರಶ್ನಿಸಿದರು.

ಸ್ವಾತಂತ್ರ್ಯ ಬಂದ ಬಳಿಕ ಎಂದೂ ಕಾಣದಂಥ ಕೆಟ್ಟ ಆಡಳಿತ ಇದು ಎಂದು ಟೀಕಿಸಿದರು. ಕೆಟ್ಟ ನಿರ್ಧಾರ, ದರ ಏರಿಕೆಗಳನ್ನು ಏಕಾಏಕಿ ಮಾಡುತ್ತಿದ್ದಾರೆ. ಯಾವುದೇ ಸಮಾಲೋಚನೆ, ಮಾತುಕತೆ ಇಲ್ಲದೆ, ಸ್ಪಷ್ಟತೆ ಇಲ್ಲದೆ ಅಧಿಕಾರದ ದುರ್ಬಳಕೆ ಆಗುತ್ತಿದೆ ಎಂದು ದೂರಿದರು.

ಬಿಜೆಪಿ ಆಡಳಿತ ನಡೆಸುವ ಹರಿಯಾಣ ರಾಜ್ಯದಲ್ಲಿ 95.54 ರೂ, ಉತ್ತರ ಪ್ರದೇಶದಲ್ಲಿ 94.55 ರೂ, ಗುಜರಾತ್- 94.50 ರೂ., ಅಸ್ಸಾಂ 97 ರೂ., ದರ ಇದೆ. ಆದರೆ, ಕಾಂಗ್ರೆಸ್ ಆಡಳಿತ ಮಾಡುವ ರಾಜ್ಯಗಳಲ್ಲಿ 103 ರೂ, 107 ರೂ, ತೆಲಂಗಾಣದಲ್ಲಿ 109.50 ರೂ., ಬಿಜೆಪಿಯೇತರ ಆಡಳಿತ ಇರುವ ಕೇರಳದಲ್ಲಿ 105.68 ರೂ., ದರ ಇದೆ ಎಂದು ವಿವರ ನೀಡಿದರು.

ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಪರ ವಾತಾವರಣ ಇಲ್ಲ. ನೆಗೆಟಿವ್ ರೇಟಿಂಗ್ ಇದೆ ಎಂದು ವಿಶ್ಲೇಷಿಸಿದರು. ಭೂಮಿ ಸಿಗಲ್ಲ; ನೀರು ಕೊಡುವುದಿಲ್ಲ, ಕರೆಂಟ್ ದರ ಹೆಚ್ಚು, ಇಂಥ ಹತ್ತಾರು ಸಮಸ್ಯೆಗಳಿವೆ ಎಂದು ವಿವರಿಸಿದರು. ಆರ್ಥಿಕ ವ್ಯವಸ್ಥೆ ಹೆಚ್ಚಿಸಿ ಆದಾಯ ಹೆಚ್ಚಿಸಬೇಕಿತ್ತು. ಇರುವವರನ್ನೇ ಪೂರ್ತಿ ಕತ್ತು ಕುಯ್ದು ಇರುವಂಥವರು ಬದುಕಲು ಸಾಧ್ಯವಿಲ್ಲದ ರೀತಿಯಲ್ಲಿ ಆಡಳಿತ ಮಾಡುತ್ತಿರುವವರು ಕಾಂಗ್ರೆಸ್ಸಿಗರು ಎಂದರು.

ಬಿಲ್ಡರ್‍ಗಳು, ಕೈಗಾರಿಕೆದಾರರು ರಾಜ್ಯವನ್ನು ತೊರೆಯುವಂತಾಗಿದೆ. ಹಣದುಬ್ಬರ ಒಂದೆಡೆ ಇನ್ನೊಂದೆಡೆ ಲೂಟಿ, ಭ್ರಷ್ಟಾಚಾರ ಈ ಸರಕಾರದಿಂದ ನಡೆದಿದೆ. ಎಲ್ಲರ ಲೂಟಿ ಕಾರ್ಯ ನಡೆದಿದೆ. ರೈತರು ಆತ್ಮಹತ್ಯೆ ಮಾಡಿಕೊಂಡರೆ ಪರಿಹಾರ ಮೊತ್ತಕ್ಕಾಗಿ ಆತ್ಮಹತ್ಯೆ ಎನ್ನುವಷ್ಟು ಆಡಳಿತ ಹದಗೆಟ್ಟಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಬಿಜೆಪಿ ರಾಜ್ಯ ಕಾರ್ಯದರ್ಶಿ ತಮ್ಮೇಶ್ ಗೌಡ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್.ಹರೀಶ್ ಅವರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

BREAKING : ಭೀಮಾ ತೀರದಲ್ಲಿ ಮತ್ತೆ ಮೊಳಗಿದ ಗುಂಡಿನ ಸದ್ದು : ಗುಂಡಿಕ್ಕಿ ರೌಡಿಶೀಟರ್‌ ಅಶೋಕ್‌ ಬರ್ಬರ ಹತ್ಯೆ

BREAKING : ಭೀಮಾ ತೀರದಲ್ಲಿ ಮತ್ತೆ ಮೊಳಗಿದ ಗುಂಡಿನ ಸದ್ದು : ಗುಂಡಿಕ್ಕಿ ರೌಡಿಶೀಟರ್‌ ಅಶೋಕ್‌ ಬರ್ಬರ ಹತ್ಯೆ

Share.
Exit mobile version