ನವದೆಹಲಿ: ತುಟ್ಟಿಭತ್ಯೆ (DA) ಮತ್ತು ತುಟ್ಟಿ ಪರಿಹಾರ (DR) ಹೆಚ್ಚಳ ಮಾಡುವಾಗ ಹಾಲಿ ನೌಕರರು ಮತ್ತು ನಿವೃತ್ತ ನೌಕರರ (Pensioners) ನಡುವೆ ಸರ್ಕಾರ ತಾರತಮ್ಯ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಇಂದು (ಏಪ್ರಿಲ್ 10, 2026) ಐತಿಹಾಸಿಕ ತೀರ್ಪು ನೀಡಿದೆ. “ಬೆಲೆ ಏರಿಕೆಯ ಹೊಡೆತವು ನೌಕರರಿಗೆ ಮತ್ತು ನಿವೃತ್ತ ನೌಕರರಿಗೆ ಸಮಾನವಾಗಿಯೇ ಇರುತ್ತದೆ” ಎಂದು ನ್ಯಾಯಾಲಯ ಈ ವೇಳೆ ಅಭಿಪ್ರಾಯಪಟ್ಟಿದೆ.
ಸಂವಿಧಾನದ 14ನೇ ವಿಧಿಯಡಿ (ಸಮಾನತೆಯ ಹಕ್ಕು) ಎಲ್ಲರಿಗೂ ಸಮಾನ ರಕ್ಷಣೆ ಇರಬೇಕು. ನೌಕರರಿಗೆ ಹೆಚ್ಚಿನ ದರದಲ್ಲಿ ಡಿಎ ನೀಡಿ, ಪೆನ್ಷನರ್‌ಗಳಿಗೆ ಕಡಿಮೆ ದರದಲ್ಲಿ ತುಟ್ಟಿ ಪರಿಹಾರ ನೀಡುವುದು ಕಾನೂನುಬಾಹಿರ ಮತ್ತು ಸ್ವೇಚ್ಛಾಚಾರದ ನಡವಳಿಕೆ ಎಂದು ಕೋರ್ಟ್ ಹೇಳಿದೆ.
ನೌಕರರಿಗೆ 14% ಮತ್ತು ಪೆನ್ಷನರ್‌ಗಳಿಗೆ ಕೇವಲ 11% ಡಿಎ ಘೋಷಿಸಿದ್ದ ಕೇರಳ ಸರ್ಕಾರ ಮತ್ತು ಕೆಎಸ್‌ಆರ್‌ಟಿಸಿ (KSRTC) ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಮನೋಜ್ ಮಿಶ್ರಾ ಮತ್ತು ಪ್ರಸನ್ನ ಬಿ. ವರಾಳೆ ಅವರಿದ್ದ ಪೀಠ ವಜಾಗೊಳಿಸಿದೆ.
“ಸರ್ಕಾರದ ಬಳಿ ಹಣವಿಲ್ಲ ಎಂಬ ಕಾರಣಕ್ಕೆ ನಿವೃತ್ತ ನೌಕರರ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ತುಟ್ಟಿಭತ್ಯೆ ಎನ್ನುವುದು ಸರ್ಕಾರ ನೀಡುವ ಭಿಕ್ಷೆಯಲ್ಲ, ಬದಲಾಗಿ ಅದು ಬೆಲೆ ಏರಿಕೆಯನ್ನು ತಡೆದುಕೊಳ್ಳಲು ಇರುವ ಶಾಸನಬದ್ಧ ಹಕ್ಕು” ಎಂದು ನ್ಯಾಯಾಲಯ ಖಡಕ್ ಆಗಿ ತಿಳಿಸಿದೆ.
ಇನ್ನು ಮುಂದೆ ಕೇಂದ್ರ ಅಥವಾ ರಾಜ್ಯ ಸರ್ಕಾರಗಳು ತುಟ್ಟಿಭತ್ಯೆ ಹೆಚ್ಚಳ ಮಾಡುವಾಗ ಎರಡು ವರ್ಗದವರಿಗೂ ಒಂದೇ ದರವನ್ನು ಅನ್ವಯಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
ಕೇರಳ ಸರ್ಕಾರವು 2021ರಲ್ಲಿ ತನ್ನ ನೌಕರರಿಗೆ ನೀಡಿದ ಡಿಎಗಿಂತ ಪೆನ್ಷನರ್‌ಗಳಿಗೆ ಕಡಿಮೆ ಪ್ರಮಾಣದ ತುಟ್ಟಿ ಪರಿಹಾರ ನೀಡಿ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ನಿವೃತ್ತ ನೌಕರರು ಹೈಕೋರ್ಟ್ ಮೆಟ್ಟಿಲೇರಿದ್ದರು. ಕೇರಳ ಹೈಕೋರ್ಟ್ ಸರ್ಕಾರದ ಆದೇಶವನ್ನು ರದ್ದುಗೊಳಿಸಿತ್ತು. ಇದನ್ನು ವಿರೋಧಿಸಿ ಕೇರಳ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಈಗ ಸುಪ್ರೀಂ ಕೋರ್ಟ್ ಕೂಡ ನಿವೃತ್ತ ನೌಕರರ ಪರವಾಗಿಯೇ ತೀರ್ಪು ನೀಡಿದೆ.








