ಬೆಂಗಳೂರು: ಬಿಜೆಪಿ ನಾಯಕರು ರಾಜ್ಯದಲ್ಲಿ ಮಾತ್ರ ಹುಲಿ- ಸಿಂಹಗಳಾಗ್ತಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಮುಂದೆ ಇಲಿಗಳಾಗುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಅವರು ಸರಣಿ ಟ್ವಿಟ್ ಮಾಡಿದ್ದಾರೆ.
ರಾಜ್ಯದಲ್ಲಿ ಮೊದಲ ಬಾರಿ ಅಧಿಕಾರಕ್ಕೆ ಬಂದಿದ್ದಾಗ ಬೀಜಗೊಬ್ಬರ ಕೇಳಿದ ರೈತರನ್ನು ಗುಂಡಿಟ್ಟು ಸಾಯಿಸಿದ ಪಕ್ಷ ಬಿಜೆಪಿ, ಪರಿಹಾರ ಕೊಡಿ ಎಂದು ಕೇಳಿದಾಗೆಲ್ಲ ನಾವೇನು ನೋಟ್ ಪ್ರಿಂಟಿಂಗ್ ಮಷಿನ್ ಇಟ್ಟುಕೊಂಡಿದ್ದೆವೆಯೇ ಎಂದು ಧಾಷ್ಟ್ಯದಿಂದ ಕೇಳಿದ್ದು ಇದೇ ಬಿಜೆಪಿ ಮುಖ್ಯಮಂತ್ರಿಗಳು. ದೆಹಲಿಯಲ್ಲಿ ಧರಣಿ ನಡೆಸುತ್ತಿದ್ದ ರೈತರ ಮೇಲೆ ದೌರ್ಜನ್ಯ ನಡೆಸಿದ್ದು ಕೂಡಾ ಇದೇ ಬಿಜೆಪಿ. ಇಂತಹ ಹುಟ್ಟು ರೈತ ವಿರೋಧಿ ಬಿಜೆಪಿ ನಾಯಕರು ಈಗ ವೇಷ ಬದಲಿಸಿ ಸುರಿಸುವ ಕಣ್ಣೀರು ಮೊಸಳೆಯದ್ದು ಎಂದು ಅರ್ಥಮಾಡಿಕೊಳ್ಳದಷ್ಟು ರೈತರು ದಡ್ಡರಲ್ಲ ಎಂದಿದ್ದಾರೆ.
ಬರಗಾಲದ ಸೂಚನೆ ಸಿಗುತ್ತಿದ್ದಂತೆಯೇ ನಮ್ಮ ಸರ್ಕಾರ ಯುದ್ಧೋಪಾದಿಯಲ್ಲಿ ಸಮೀಕ್ಷೆ ಮತ್ತು ಪರಿಹಾರ ಕಾರ್ಯದಲ್ಲಿ ನಿರತವಾಗಿದೆ. ಸಮೀಕ್ಷೆಯ ನಂತರ ಕಳೆದ ವರ್ಷದ ಸೆಪ್ಟೆಂಬರ್ 13 ರಂದು ರಾಜ್ಯದ 223 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿತ್ತು. ನಮ್ಮ ಅಧ್ಯಯನದ ಪ್ರಕಾರ ಬರಗಾಲದಿಂದಾಗಿ ರೂ.37 ಸಾವಿರ ಕೋಟಿಗಳಷ್ಟು ನಷ್ಟ ಉಂಟಾಗಿದೆ. ಇದರಲ್ಲಿ 18,177 ಕೋಟಿ ರೂಪಾಯಿ ಪರಿಹಾರವನ್ನು ನೀಡುವಂತೆ ಸೆ.23ಕ್ಕೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೆವು. ಅಕ್ಟೋಬರ್‌ನಲ್ಲಿ ಬರ ಅಧ್ಯಯನಕ್ಕಾಗಿ ಕೇಂದ್ರದಿಂದ ತಜ್ಞರ ತಂಡ ಆಗಮಿಸಿತ್ತು. ಇಲ್ಲಿಯವರಗೆ ಅದು ನೀಡಿರುವ ವರದಿಯ ಗತಿ ಏನಾಗಿದೆಯೋ ಗೊತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬರಗಾಲದ ಸೂಚನೆ ಸಿಗುತ್ತಿದ್ದಂತೆಯೇ ನಮ್ಮ ಸರ್ಕಾರ ಯುದ್ಧೋಪಾದಿಯಲ್ಲಿ ಸಮೀಕ್ಷೆ ಮತ್ತು ಪರಿಹಾರ ಕಾರ್ಯದಲ್ಲಿ ನಿರತವಾಗಿದೆ. ಸಮೀಕ್ಷೆಯ ನಂತರ ಕಳೆದ ವರ್ಷದ ಸೆಪ್ಟೆಂಬರ್ 13ರಂದು ರಾಜ್ಯದ 223 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿತ್ತು. ನಮ್ಮ ಅಧ್ಯಯನದ ಪ್ರಕಾರ ಬರಗಾಲದಿಂದಾಗಿ ರೂ.37 ಸಾವಿರ ಕೋಟಿಗಳಷ್ಟು ನಷ್ಟ ಉಂಟಾಗಿದೆ. ಇದರಲ್ಲಿ…
— Siddaramaiah (@siddaramaiah) January 29, 2024
ಕಂದಾಯ ಸಚಿವ ಕೃಷ್ಣಭೈರೇಗೌಡರ ಜೊತೆ ನಾನು ಪ್ರಧಾನಮಂತ್ರಿ ಮೋದಿ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದೇನೆ. ಕೃಷಿ ಸಚಿವರು ಕೇಂದ್ರ ಕೃಷಿ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ. ಇಲ್ಲಿಯ ವರೆಗೆ ಬರ ಪರಿಹಾರ ಕೋರಿ 17 ಪತ್ರಗಳನ್ನು ಬರೆದಿದ್ದೇವೆ. ಯಾವುದಕ್ಕೂ ಉತ್ತರವೂ ಇಲ್ಲ, ಪೈಸೆ ಪರಿಹಾರವನ್ನೂ ಕೊಟ್ಟಿಲ್ಲ. ಪರಿಸ್ಥಿತಿ ಹೀಗಿರುವಾಗ ಬಿಜೆಪಿ ನಾಯಕರು ಯಾವ ಮುಖ ಹೊತ್ತು ಬರಪೀಡಿತ ರೈತರ ಬಳಿ ನಮ್ಮ ವಿರುದ್ಧ ದೂರು ತೆಗೆದುಕೊಂಡು ಹೋಗುತ್ತಾರೆ. ಕೇಂದ್ರ ಸರ್ಕಾರ ಮಾಡುತ್ತಿರುವ ಅನ್ಯಾಯದಿಂದ ಈಗಾಗಲೇ ರಾಜ್ಯದ ರೈತರು ರೊಚ್ಚಿಗೆದ್ದಿದ್ದಾರೆ. ಆದ್ದರಿಂದ ಅವರ ಬಳಿ ಹೋಗುವಾಗ ಜಾಗ್ರತೆಯಿಂದ ಇರಿ ಎಂದಷ್ಟೇ ಹೇಳಬಯಸುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.