ಕೊಲಂಬೊ: “ಕಷ್ಟಕಾಲದಲ್ಲಿ ನೆರವಾಗುವವನೇ ನಿಜವಾದ ಸ್ನೇಹಿತ.” ಈ ಮಾತನ್ನು ಭಾರತ ಮತ್ತೊಮ್ಮೆ ಸಾಬೀತುಪಡಿಸಿದೆ. ತೀವ್ರ ಆರ್ಥಿಕ ಮತ್ತು ಇಂಧನ ಬಿಕ್ಕಟ್ಟಿನಿಂದ ಕಂಗಾಲಾಗಿರುವ ನೆರೆಯ ರಾಷ್ಟ್ರ ಶ್ರೀಲಂಕಾಕ್ಕೆ ಭಾರತವು 38,000 ಮೆಟ್ರಿಕ್ ಟನ್ (MT) ತುರ್ತು ಇಂಧನವನ್ನು ಪೂರೈಸಿದ್ದು, ಈ ಉದಾರತೆಗೆ ಶ್ರೀಲಂಕಾ ಸರ್ಕಾರವು ಭಾರತಕ್ಕೆ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸಿದೆ.
ಪಶ್ಚಿಮ ಏಷ್ಯಾದ ಬಿಕ್ಕಟ್ಟು ಮತ್ತು ಜಾಗತಿಕ ಇಂಧನ ಬೆಲೆ ಏರಿಕೆಯ ನಡುವೆ ಭಾರತ ನೀಡಿದ ಈ ನೆರವು ಶ್ರೀಲಂಕಾದ ಪಾಲಿಗೆ ಸಂಜೀವಿನಿಯಂತಾಗಿದೆ.
ಶ್ರೀಲಂಕಾದಲ್ಲಿ ವಾಹನ ಸಂಚಾರ ಮತ್ತು ವಿದ್ಯುತ್ ಉತ್ಪಾದನೆಗೆ ಇಂಧನದ ತೀವ್ರ ಕೊರತೆ ಉಂಟಾಗಿತ್ತು. ಈ ಸಂದರ್ಭದಲ್ಲಿ ಭಾರತದ ಈ ತುರ್ತು ಪೂರೈಕೆಯು ಅಲ್ಲಿನ ಜನಜೀವನ ಮತ್ತೆ ಹಳಿಗೆ ಬರಲು ಸಹಕಾರಿಯಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಶ್ರೀಲಂಕಾ ಸರ್ಕಾರ, “ಬಿಕ್ಕಟ್ಟಿನ ಸಮಯದಲ್ಲಿ ಸಂಬಂಧಗಳು ನಿಜವಾದ ಪರೀಕ್ಷೆಗೆ ಒಳಗಾಗುತ್ತವೆ. ಭಾರತವು ಅಪ್ರತಿಮ ಸ್ನೇಹವನ್ನು ತೋರಿದೆ” ಎಂದು ಭಾವನಾತ್ಮಕವಾಗಿ ಹೇಳಿದೆ.ಪ್ರಧಾನಿ ಮೋದಿ ಅವರ ‘ನೆರೆಹೊರೆಯವರಿಗೆ ಮೊದಲ ಆದ್ಯತೆ’ ಎಂಬ ನೀತಿಯಡಿಯಲ್ಲಿ ಈ ನೆರವನ್ನು ಕಳುಹಿಸಲಾಗಿದೆ. ಹಿಂದೂ ಮಹಾಸಾಗರದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಲು ಭಾರತವು ತನ್ನ ನೆರೆಯ ರಾಷ್ಟ್ರಗಳಿಗೆ ಸತತವಾಗಿ ಬೆಂಬಲ ನೀಡುತ್ತಾ ಬಂದಿದೆ.








