ಹುಬ್ಬಳ್ಳಿ: ನೈಋತ್ಯ ರೈಲ್ವೆ ಇಂದು ಗದಗ ರಸ್ತೆಯಲ್ಲಿರುವ ಹುಬ್ಬಳ್ಳಿ ರೈಲು ವಸ್ತುಸಂಗ್ರಹಾಲಯದಲ್ಲಿ ವಿಶೇಷ ಪರಂಪರಾ ನಡಿಗೆಯೊಂದಿಗೆ ವಿಶ್ವ ಪರಂಪರಾ ದಿನವನ್ನು ಆಚರಿಸಿತು.
ಈ ಕಾರ್ಯಕ್ರಮಕ್ಕೆ ನೈಋತ್ಯ ರೈಲ್ವೆ ವಲಯದ ಮಹಾಪ್ರಬಂಧಕರಾದ ಮುಕುಲ್ ಸರನ್ ಮಾಥುರ್ ಮುಖ್ಯ ಅತಿಥಿಗಳಾಗಿ ಭಾಗಿಯಾಗಿದ್ದರು.
ಈ ಆಚರಣೆಯ ಅಂಗವಾಗಿ ಮಾಥುರ್ ಅವರು ರೈಲು ವಸ್ತುಸಂಗ್ರಹಾಲಯವನ್ನು ವೀಕ್ಷಿಸಿ, ಭಾರತೀಯ ರೈಲ್ವೆಯ ಶ್ರೀಮಂತ ಪರಂಪರೆ ಮತ್ತು ಸಂರಕ್ಷಿತ ಇತಿಹಾಸವನ್ನು ಮೆಚ್ಚಿದರು. ರೈಲ್ವೆ ಪರಂಪರೆಯನ್ನು ಕಾಪಾಡುವಲ್ಲಿ ಮತ್ತು ಪ್ರದರ್ಶಿಸುವಲ್ಲಿ ಕಾರ್ಯಾಗಾರದ ಸಿಬ್ಬಂದಿಯ ಸೃಜನಶೀಲತೆ ಮತ್ತು ಸಮರ್ಪಣೆಯನ್ನು ಅವರು ಶ್ಲಾಘಿಸಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಮಾಥುರ್, “ರೈಲ್ವೆಯು ತನ್ನದೇ ಆದ ಇತಿಹಾಸವನ್ನು ಹೊಂದಿರುವ ಏಕೈಕ ಸಂಸ್ಥೆಯಾಗಿದ್ದು, ಪರಂಪರೆಯ ಸ್ಮಾರಕಗಳು ಮತ್ತು ಉಪಕರಣಗಳ ಮೂಲಕ ಅದು ಪ್ರತಿನಿಧಿಸಲ್ಪಡುತ್ತದೆ. ಇವುಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿ. ಭವಿಷ್ಯದ ಪೀಳಿಗೆಗಾಗಿ ಈ ಪರಂಪರೆಯನ್ನು ನಾವು ಕಾಪಾಡಬೇಕು” ಎಂದು ಹೇಳಿದರು.
ಪರಂಪರೆ ಸಂರಕ್ಷಣೆಯಲ್ಲಿ ಸಾರ್ವಜನಿಕ ಆಸಕ್ತಿಯನ್ನು ಉತ್ತೇಜಿಸುವ ಕ್ರಮವಾಗಿ, ವಸ್ತುಸಂಗ್ರಹಾಲಯಕ್ಕೆ ಇಡೀ ದಿನ ಉಚಿತ ಪ್ರವೇಶವನ್ನು ನೀಡಲಾಗಿತ್ತು. ಇದು ಅನೇಕ ಸಂದರ್ಶಕರು ಮತ್ತು ಉತ್ಸಾಹಿಗಳನ್ನು ಆಕರ್ಷಿಸಿತು.
ಈ ಕಾರ್ಯಕ್ರಮದಲ್ಲಿ ಅಪರ ಮಹಾಪ್ರಬಂಧಕರಾದ ಕೆ. ಎಸ್. ಜೈನ್ ಹಾಗೂ ವಿಭಾಗಗಳ ಮುಖ್ಯಸ್ಥರು, ಇತರ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಪೋಷಕರೇ ಗಮನಿಸಿ : ಕೇಂದ್ರೀಯ ವಿದ್ಯಾಲಯ 2ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ