ಮೊಣಕಾಲುಗಳನ್ನು ಮಡಚುವಾಗ ಅಥವಾ ಮೆಟ್ಟಿಲು ಹತ್ತುವಾಗ ಶಬ್ದ ಬರುವುದು ಇಂದಿನ ದಿನಗಳಲ್ಲಿ ಸಾಮಾನ್ಯವಾಗಿದೆ. ವೈದ್ಯಕೀಯ ಭಾಷೆಯಲ್ಲಿ ಇದನ್ನು ‘ಕ್ರೆಪಿಟಸ್’ (Crepitus) ಎಂದು ಕರೆಯಲಾಗುತ್ತದೆ. ಆದರೆ, ಈ ಶಬ್ದವು ಯಾವಾಗಲೂ ಅಪಾಯಕಾರಿಯಲ್ಲ. ಹಾಗಿದ್ದರೆ ಯಾವ ಸಂದರ್ಭದಲ್ಲಿ ನಾವು ಎಚ್ಚರ ವಹಿಸಬೇಕು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್:
ನಮ್ಮ ಕೀಲುಗಳ ನಡುವೆ ‘ಸಿನೋವಿಯಲ್ ಫ್ಲೂಯಿಡ್’ ಎಂಬ ದ್ರವವಿರುತ್ತದೆ. ಚಲನೆಯ ಸಮಯದಲ್ಲಿ ಈ ದ್ರವದಲ್ಲಿ ಸಣ್ಣ ಗಾಳಿಯ ಗುಳ್ಳೆಗಳು (Air Bubbles) ಉತ್ಪತ್ತಿಯಾಗಿ ಒಡೆಯುತ್ತವೆ. ಇದಾದಾಗ ಬರುವ ಶಬ್ದವು ಸಂಪೂರ್ಣವಾಗಿ ಸಾಮಾನ್ಯ ಮತ್ತು ನೋವುರಹಿತವಾಗಿರುತ್ತದೆ. ಆದರೆ ಶಬ್ದದ ಜೊತೆಗೆ ಕೆಳಗಿನ ಲಕ್ಷಣಗಳಿದ್ದರೆ ಅದು ಗಂಭೀರ ಸಮಸ್ಯೆಯ ಮುನ್ಸೂಚನೆ.
ಕೇವಲ ಶಬ್ದ ಬರುತ್ತಿದ್ದರೆ ಚಿಂತೆಯಿಲ್ಲ, ಆದರೆ ಶಬ್ದ ಬಂದಾಗ ಚುಚ್ಚಿದಂತಾಗುವುದು ಅಥವಾ ತೀವ್ರ ನೋವು ಕಾಣಿಸಿಕೊಂಡರೆ ಅದು ಕೀಲುಗಳ ನಡುವಿನ ಕಾರ್ಟಿಲೇಜ್ (Cartilage) ಸವಕಳಿಯ ಲಕ್ಷಣವಾಗಿರಬಹುದು.
ಮೊಣಕಾಲಿನ ಸುತ್ತ ಊತ ಕಾಣಿಸಿಕೊಂಡರೆ ಅಥವಾ ಆ ಭಾಗ ಮುಟ್ಟಿದಾಗ ಬಿಸಿಯಾಗಿದ್ದರೆ, ಅದು ‘ಆರ್ಥ್ರೈಟಿಸ್’ (Arthritis) ಅಥವಾ ಉರಿಯೂತದ ಸಂಕೇತವಾಗಿರಬಹುದು.
ಮೊಣಕಾಲು ಮಡಚುವಾಗ ಮರಳು ಅಥವಾ ಕಲ್ಲುಗಳು ಉಜ್ಜಿದಂತಹ ಅನುಭವವಾದರೆ (Grinding Sensation), ಅದು ಕೀಲುಗಳ ನಯವಾದ ಪದರ ನಾಶವಾಗಿರುವುದನ್ನು ಸೂಚಿಸುತ್ತದೆ.
ನಡೆಯುವಾಗ ಅಥವಾ ಕುಳಿತಾಗ ಮೊಣಕಾಲು ಒಮ್ಮೆಲೆ ಸಿಕ್ಕಿಹಾಕಿಕೊಂಡಂತೆ (Locking) ಭಾಸವಾದರೆ, ಅದು ‘ಮೆನಿಸ್ಕಸ್ ಟಿಯರ್’ ಅಥವಾ ಸ್ನಾಯು ಹರಿದಿರುವ ಸಾಧ್ಯತೆಯನ್ನು ತೋರಿಸುತ್ತದೆ.
ಕ್ರೀಡಾಪಟುಗಳು:ಓಟಗಾರರು ಮತ್ತು ಭಾರ ಎತ್ತುವವರಲ್ಲಿ ಮೊಣಕಾಲಿನ ಮೇಲೆ ಅತಿಯಾದ ಒತ್ತಡ ಬೀಳುವುದರಿಂದ ಈ ಸಮಸ್ಯೆ ಬೇಗ ಕಾಣಿಸಿಕೊಳ್ಳಬಹುದು.
ಅತಿಯಾದ ತೂಕ: ದೇಹದ ತೂಕ ಹೆಚ್ಚಾದಷ್ಟು ಮೊಣಕಾಲುಗಳ ಮೇಲೆ ಹೊರೆ ಹೆಚ್ಚಾಗಿ ಸವಕಳಿ ವೇಗವಾಗಿ ಸಂಭವಿಸುತ್ತದೆ.
ವಯಸ್ಸಾದವರು: ವಯಸ್ಸಾದಂತೆ ಕೀಲುಗಳ ನೈಸರ್ಗಿಕ ನಯತೆ ಕಡಿಮೆಯಾಗುವುದರಿಂದ ಶಬ್ದ ಮತ್ತು ನೋವು ಆರಂಭವಾಗಬಹುದು.








