ಬೆಂಗಳೂರು : ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬನೆ ಜತೆಗೆ ಯಾವ ಕಾಲಕ್ಕೂ ವಿದ್ಯುತ್ ಕೊರತೆಯಾಗದಂತೆ ನೋಡಿಕೊಳ್ಳಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (ಕೆಪಿಸಿಎಲ್) ದ 56ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಡಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, “ವಿದ್ಯುತ್ ಉತ್ಪಾದನೆಯಲ್ಲಿ ರಾಜ್ಯವು ಸ್ವಾವಲಂಬನೆ ಸಾಧಿಸಿದೆ. ಮುಂದಿನ ದಿನಗಳಲ್ಲಿ ಯಾವ ಸಂದರ್ಭದಲ್ಲೂ ವಿದ್ಯುತ್ ಕೊರತೆ ಆಗಬಾರದು. ಆ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು,” ಎಂದರು.
“ಜಲ, ಉಷ್ಣ, ಸೌರ, ಪವನ, ಅನಿಲ ಮಾತ್ರವಲ್ಲ ತ್ಯಾಜ್ಯದಿಂದಲೂ ವಿದ್ಯುತ್ ಉತ್ಪಾದಿಸುವ ಮೂಲಕ ಕೆಪಿಸಿಎಲ್ ಅತ್ಯುತ್ತಮ ಸಾಧನೆ ಮಾಡಿದೆ. ಆ ಮೂಲಕ ಅತಿ ಹೆಚ್ಚು ಮೂಲಗಳಿಂದ ವಿದ್ಯುತ್ ಉತ್ಪಾದಿಸುವ ರಾಜ್ಯವಾಗಿ ಕರ್ನಾಟಕವನ್ನು ದೇಶದಲ್ಲೇ ಮುಂಚೂಣಿಯಲ್ಲಿ ನಿಲ್ಲಿಸಿದೆ,” ಎಂದು ಹೇಳಿದರು.
“ನಾನು ಪ್ರಾಥಮಿಕ ಶಿಕ್ಷಣ ಪಡೆಯುತ್ತಿರುವಾಗ ನಮ್ಮ ಊರಿನಲ್ಲಿ ವಿದ್ಯುತ್ ಇರಲಿಲ್ಲ. 7-8ನೇ ತರಗತಿಯಲ್ಲಿರುವಾಗ ನಮ್ಮ ಊರಿಗೆ ವಿದ್ಯುತ್ ಬಂತು. ಆದರೆ, ಇಂದು ವಿದ್ಯುತ್ ಸಂಪರ್ಕ ಇಲ್ಲದ ಗ್ರಾಮವೇ ಇಲ್ಲ. ಈ ರೀತಿ ರಾಜ್ಯದ ಮೂಲೆ ಮೂಲೆಗಳಿಗಳಿಗೆ, ಕೈಗಾರಿಕೆಗಳಿಗೆ ಸೇರಿದಂತೆ ಎಲ್ಲಾ ಕಡೆ ವಿದ್ಯುತ್ ಸರಬರಾಜಾಗುವಲ್ಲಿ ಕೆಪಿಸಿಎಲ್ ಅತ್ಯಂತ ಪ್ರಮುಖ ಪಾತ್ರ ವಹಿಸಿದೆ.ಹೀಗಾಗಿ ರಾಜ್ಯದ ಪ್ರಗತಿಯಲ್ಲೂ ಕೆಪಿಸಿಎಲ್ ನ ಕೊಡುಗೆ ಮಹತ್ವದ್ದು,” ಎಂದು ಶ್ಲಾಘಿಸಿದರು.
ಕೆಪಿಸಿಎಲ್ ನಲ್ಲಿ ಹುದ್ದೆಗಳ ಭರ್ತಿ
“ಕೆಪಿಸಿಎಲ್ ನಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇವೆ. ಇದರಿಂದ ಕೆಲಸಕ್ಕೆ ಸಮಸ್ಯೆಯಾಗುತ್ತಿದೆ ಎಂಬ ಮನವಿಗಳು ಬಂದಿವೆ. ಖಾಲಿ ಹುದ್ದೆಗಳ ಕುರಿತು ಇಂಧನ ಇಲಾಖೆ ಸಚಿವರು ಮತ್ತು ಕೆಪಿಸಿಎಲ್ ವ್ಯವಸ್ಥಾಪಕನಿರ್ದೇಶಕರೊಂದಿಗೆ ಸಮಾಲೋಚನೆ ನಡೆಸಿ ಶೀಘ್ರದಲ್ಲೇ ಅವುಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು,” ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಆದ್ಯತೆ
ಇಂಧನ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, “ರಾಜ್ಯದಲ್ಲಿ ಸಾಕಷ್ಟು ವಿದ್ಯುತ್ ಉತ್ಪಾದನೆಯಾಗುತ್ತಿದ್ದರೂ ಸಂಗ್ರಹಣಾ ವ್ಯವಸ್ಥೆ ಇಲ್ಲ. ಹೀಗಾಗಿ ಶರಾವತಿಯಲ್ಲಿ 2000 ಮೆಗಾವ್ಯಾಟ್ ಹಾಗೂ ವಾರಾಹಿಯಲ್ಲಿ 1500 ಮೆಗಾವ್ಯಾಟ್ ಸಾಮರ್ಥ್ಯದ ಪಂಪ್ಡ್ ಸ್ಟೋರೇಜ್ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ. ಆ ಮೂಲಕ ವಿದ್ಯುತ್ ಸಂಗ್ರಹಿಸಿ ಹೆಚ್ಚು ಬೇಡಿಕೆ ಸಂದರ್ಭದಲ್ಲಿ ಪೂರೈಸಲಾಗುವುದು. ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ರಾಜ್ಯ ಮತ್ತು ಕೇಂದ್ರ ವನ್ಯಜೀವಿ ಮಂಡಳಿಗಳಿಂದ ಈಗಾಗಲೇ ಅನುಮತಿ ಸಿಕ್ಕಿದೆ,” ಎಂದು ತಿಳಿಸಿದರು.
ಸಂಸ್ಥಾಪನಾ ದಿನದ ಅಂಗವಾಗಿ ಕೆಪಿಸಿಎಲ್ ನಲ್ಲಿ 25 ವರ್ಷ ಸುದೀರ್ಘಸೇವೆ ಸಲ್ಲಿಸಿದವರನ್ನು ಅಭಿನಂದಿಸಲಾಯಿತು. ನಿಗಮದ ನಿವೃತ್ತ ಸಿಬ್ಬಂದಿಯನ್ನು ಗೌರವಿಸಲಾಯಿತು. ಎಸ್ಎಸ್ಎಲ್ ಸಿ ಮತ್ತು ಪಿಯುಸಿಯಲ್ಲಿ ಶೇ. 90ಕ್ಕಿಂತ ಹೆಚ್ಚು ಅಂಕ ಗಳಿಸಿದ ನಿಗಮದ ಸಿಬ್ಬಂದಿಯ ಮಕ್ಕಳಿಗೆ ಚಿನ್ನದ ನಾಣ್ಯ ನೀಡಿ ಪುರಸ್ಕರಿಸಲಾಯಿತು.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯೂ ಆಗಿರುವ ವಿಧಾನ ಪರಿಷತ್ ಸದಸ್ಯ ನಸೀರ್ ಅಹ್ಮದ್, ಶಾಸರಾದ ಬಸವನಗೌಡ ದದ್ದಲ್, ಪ್ರಸಾದ್ ಅಬ್ಬಯ್ಯ, ಇಂಧನ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಹಾಗೂ ಕೆಪಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಗೌರವ್ ಗುಪ್ತ, ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಅಧ್ಯಕ್ಷ ಮನೋಹರ್, ಕೆಪಿಸಿಎಲ್ ಹಣಕಾಸು ನಿರ್ದೇಶಕ ಆರ್.ನಾಗರಾಜ, ತಾಂತ್ರಿಕ ನಿರ್ದೇಶಕ ಎಸ್.ಕೃಷ್ಣಮೂರ್ತಿ, ಮುಖ್ಯ ಜಾಗೃತ ಅಧಿಕಾರಿ ಟಿ.ಪಿ.ಶಿವಕುಮಾರ್ ಮತ್ತಿತರರು ಇದ್ದರು.
BREAKING: ಒಂದೇ ಒಂದು ದಿನದ ಮಟ್ಟಿಗೆ ‘ಪೌರಾಯುಕ್ತ’ರನ್ನು ವರ್ಗಾವಣೆ: ರಾಜ್ಯ ಸರ್ಕಾರ ಆದೇಶ
BREAKING : ಕರ್ನಾಟಕದಲ್ಲಿ ಸೆ.22 ರಿಂದ ಅ.7ರವರೆಗೆ ‘ಮರು ಜಾತಿಗಣತಿ’ ನಡೆಸಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ