ಶಿವಮೊಗ್ಗ: ಜಿಲ್ಲೆಯಲ್ಲಿ ಹೆಚ್ಚು ಸಾಗುವಾನಿ ಮರಗಳಿರುವಂತ ಅರಣ್ಯ ಪ್ರದೇಶವೆಂದರೇ ಸಾಗರ ತಾಲ್ಲೂಕಿನ ಉಳ್ಳೂರು ವ್ಯಾಪ್ತಿಯಲ್ಲಿ ಆಗಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವಂತ ಮರಗಳ್ಳರು, ಮರಗಳ ಮಾರಣಹೋಮವನ್ನೇ ನಡೆಸಿ, ಕಳ್ಳಸಾಗಾಣಿಕೆ ಮಾಡುತ್ತಿರುವುದಾಗಿ ಹೇಳಲಾಗುತ್ತಿದೆ. ದಿನೇ ದಿನೇ ಉಳ್ಳೂರು ವ್ಯಾಪ್ತಿಯಲ್ಲಿ ಸಾಗುವಾನಿ ಮರಗಳ ಕಳ್ಳಸಾಗಾಟ ಹೆಚ್ಚಾಗುತ್ತಿದ್ದರೂ, ಉಪ ವಲಯ ಅರಣ್ಯಾಧಿಕಾರಿ ಮಾತ್ರ ಕಣ್ಮುಚ್ಚಿ ಕುಳಿತಿರೋ ಆರೋಪ ಕೇಳಿ ಬಂದಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಉಳ್ಳೂರು ವ್ಯಾಪ್ತಿಯ ಅರಣ್ಯದಲ್ಲಿ ಸಾಗುವಾನಿ ಮರಗಳು ತಿಂಗಳಿಗೆ ಒಂದೆರಡು ಮರಗಳೇ ಕಣ್ಮರೆಯಾಗುತ್ತಿವೆ. ಮರಗಳ್ಳರು ಅಕ್ರಮವಾಗಿ ಮರಗಳನ್ನು ರಾತ್ರೋ ರಾತ್ರಿ ಕದ್ದು ಸಾಗಾಟ ಮಾಡುತ್ತಿದ್ದರೂ ಉಪ ವಲಯ ಅರಣ್ಯಾಧಿಕಾರಿ ಮಾತ್ರ ತನಗೇ ಸಂಬಂಧವೇ ಇಲ್ಲದ ರೀತಿಯಲ್ಲಿ ಇದ್ದಾರೆ ಎಂಬುದಾಗಿ ಅಲ್ಲಿನ ಗ್ರಾಮಸ್ಥರ ಆರೋಪವಾಗಿದೆ.
ಸಾಗುವಾನಿ ಮರಗಳ ಮಾರಣಹೋಮ, ಕಳ್ಳ ಸಾಗಾಟ ಹೇಗೆ.?
ಉಳ್ಳೂರು ವ್ಯಾಪ್ತಿಯ ಅರಣ್ಯದಲ್ಲಿ ಸಾಗುವಾನಿ ಮರಗಳೇ ಹೆಚ್ಚಾಗಿರುವ ಕಾರಣ, ಕಳ್ಳರ ಮೇಲೆ ಕಣ್ಣಿಡಬೇಕಾಗಿದ್ದು ಅರಣ್ಯ ಇಲಾಖೆಯ ಕರ್ತವ್ಯ. ಫೀಲ್ಡ್ ಬಿಟ್ಟು ಸದಾ ಸಾಗರದ ಇಲಾಖೆ ಕಚೇರಿಯಲ್ಲೇ ಉಪ ವಲಯ ಅರಣ್ಯಾಧಿಕಾರಿ ಓಡಾಡೋದನ್ನೇ ಕಳ್ಳರು ಬಂಡವಾಳ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೇ ರಾತ್ರೋ ರಾತ್ರಿ ಸಾಗುವಾನಿ ಮರಗಳನ್ನು ಕಡಿಯುವಂತ ಮರಗಳ್ಳರು, ಅಷ್ಟೇ ಚಾಲಾಕಿತನದಿಂದ ವಾಹನಗಳ ಮೂಲಕ ಬೆಳಗಾಗುವುದರ ಒಳಗಾಗಿ ಸಾಗಾಟ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ತಿಂಗಳಿಗೊಂದು, ಎರಡು ಸೇರಿದಂತೆ ವರ್ಷಕ್ಕೆ ಹತ್ತಾರು ಸಾಗುವಾನಿ ಮರಗಳನ್ನು ಅಕ್ರಮವಾಗಿ ಉಳ್ಳೂರು ಅರಣ್ಯ ವ್ಯಾಪ್ತಿಯಲ್ಲಿ ಕಡಿದು, ಕಳ್ಳ ಸಾಗಾಟ ಮಾಡಲಾಗುತ್ತಿದೆ. ಕಳೆದ ಕೆಲ ವರ್ಷಗಳಿಂದ ನೂರಾರು ಸಾಗುವಾನಿ ಮರಗಳನ್ನು ಅಕ್ರಮವಾಗಿ ಕಡಿದು ಮರಗಳ್ಳರು ಸಾಗಿಸಿರೋದಾಗಿ ಹೇಳಲಾಗುತ್ತಿದೆ.
ಉಳ್ಳೂರಿನ ಅರಣ್ಯದ ಬಗ್ಗೆ ಹೆಚ್ಚಿನ ಗಮನ ಕೊಡಬೇಕಿದ್ದಂತ ಸಾಗರದ ವಲಯ ಅರಣ್ಯಾಧಿಕಾರಿಗಳು, DFO ಮಾತ್ರ ತಮಗೆ ಇದ್ಯಾವುದು ಗೊತ್ತೇ ಇರದಂತೆ ಇರುವುದು ಹಲವು ಅನುಮಾನಗಳಿಗೂ ಕಾರಣವಾಗಿದೆ.
ಕಾಟಾಚಾರಕ್ಕೆ ಕೇಸ್, ಕಡಿದ, ಕದ್ದ ಮರವನ್ನೇ ರಿಕವರಿ ಮಾಡದೇ ಸರ್ಕಾರದ ಬೊಕ್ಕಸಕ್ಕೆ ವಂಚನೆ
ಇನ್ನೂ ಕಾಟಾಚಾರಕ್ಕೆ ಉಳ್ಳೂರು ವ್ಯಾಪ್ತಿಯಲ್ಲಿನ ಸಾಗುವಾನಿ ಮರಗಳ ಕಡಿತ, ಕಳ್ಳ ಸಾಗಾಟದ ಬಗ್ಗೆ ಉಪ ವಲಯ ಅರಣ್ಯಾಧಿಕಾರಿ ಸುಂದರ ಮೂರ್ತಿ ಮೇಲಧಿಕಾರಿಗಳ ಗಮನಕ್ಕೆ ತರುತ್ತಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೇ ಸಾಗುವಾನಿ ಮರಗಳನ್ನು ಅಕ್ರಮವಾಗಿ ಕದ್ದು ಕಳ್ಳಸಾಗಾಟ ಮಾಡಿದ್ದರೂ, ಕದ್ದ ಮಾಲನ್ನು ಮಾತ್ರ ಪತ್ತೆ ಹಚ್ಚೋ ಕಾರ್ಯಕ್ಕೇ ಮುಂದಾಗದೇ ಇರುವುದರ ಹಿಂದೆ ಅವರಿಗೂ ಅಕ್ರಮಗಳ ಕಡಿತಲೆಯಲ್ಲಿ ಪಾಲು ಇದ್ಯಾ ಎಂಬ ಅನುಮಾನಕ್ಕೆ ಕಾರಣವಾಗಿದೆ.
ಸಾಗುವಾನಿ ಮರ ಕಡಿತ, ಕದ್ದು ಸಾಗಾಟದ ಬಗ್ಗೆ ಉಳ್ಳೂರು ವ್ಯಾಪ್ತಿಯ ವಲಯ ಅರಣ್ಯ ಅಧಿಕಾರಿ ಸುಂದರ ಮೂರ್ತಿಯವರು ಪ್ರಕರಣ ದಾಖಲಿಸುತ್ತಿರೋದು, ಸಂಬಂಧ ಪಟ್ಟವರ ವಿರುದ್ಧ ಎಫ್ಐಆರ್ ಮಾಡಿಸುತ್ತಿರುವುದು ಸರಿಯಷ್ಟೇ. ಆದರೇ ಕದ್ದ ಮರಗಳನ್ನು ರಿಕವರಿ ಮಾಡೋ ಕೆಲಸವನ್ನೇ ಮಾಡುತ್ತಿಲ್ಲ. ಹೀಗಾಗಿ ಲಕ್ಷಾಂತರ ಬೆಲೆ ಬಾಳುವ ಮರಗಳು ಕಳ್ಳರ ಪಾಲಾಗುತ್ತಿವೆ. ಆ ಮೂಲಕ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗುತ್ತಿರೋ ಆರೋಪವನ್ನು ಉಳ್ಳೂರು ವ್ಯಾಪ್ತಿಯ ಜನರು ಮಾಡುತ್ತಿದ್ದಾರೆ.
ಕೇವಲ ಮರಗಳ ಮಾರಣಹೋಮ ಮಾಡಿ ಕಳ್ಳ ಸಾಗಾಟ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಿದರೆ ಸಾಲದು, ಆರೋಪಿಗಳನ್ನು ಬಂಧಿಸಿ, ಅಕ್ರಮವಾಗಿ ಕಡಿದು ಸಾಗಿಸಿದಂತ ಲಕ್ಷಾಂತರ ಬೆಲೆ ಬಾಳುವ ಸಾಗುವಾನಿ ಮರಗಳನ್ನು ಪತ್ತೆ ಹಚ್ಚಿ ವಶ ಪಡಿಸಿಕೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಹೊಸ ವರ್ಷದ ಮೊದಲ ದಿನವೇ ಒಂದು ಸಾಗುವಾನಿ ಮರ ಕಡಿತದ ಕೇಸ್
ಹೊಸ ವರ್ಷದಂದೇ ಸಾಗರ ತಾಲ್ಲೂಕು ಆನಂದಪುರ ಹೋಬಳಿಯ, ಕಾಸ್ಪಾಡಿ ಗ್ರಾಮದ ಸರ್ವೆ ನಂ.4ರಲ್ಲಿ ಮಳಲಿ ರಾಜ್ಯ ಅರಣ್ಯ ಪ್ರದೇಶದಲ್ಲಿ ವೆಂಕಟರಮಣ ಭಾಗವತ್ ಎಂಬುವರು ಅಕ್ರಮವಾಗಿ ಸಾಗವಾನಿ ಜಾತಿಯ ಮರ ಕಡಿದ ಬಗ್ಗೆ ದೂರು ದಾಖಲಿಸಲು ನ್ಯಾಯಾಲಯಕ್ಕೆ ಅನುಮತಿ ಕೋರಲಾಗಿದೆ.
ಅರಣ್ಯ ಇಲಾಖೆಯ ಮನವಿ ಮೇರೆಗೆ ಸಾಗರದ ಜೆಎಂಎಫ್ ಸಿ ಕೋರ್ಟ್ ಪ್ರಕರಣ ದಾಖಲಿಸಲು ಅನುಮತಿ ಕೂಡ ನೀಡಿದೆ ಎಂಬುದನ್ನು ವಲಯ ಅರಣ್ಯಾಧಿಕಾರಿ ಅಣ್ಣಪ್ಪ ಅವರು ಕನ್ನಡ ನ್ಯೂಸ್ ನೌಗೆ ಮಾಹಿತಿ ನೀಡಿದ್ದಾರೆ. ಜೊತೆಗೆ ಎಫ್ಐಆರ್ ಕೂಡ ದಾಖಲಾಗಿದೆ ಅಂತ ತಿಳಿಸಿದ್ದಾರೆ. ಆದರೇ ಅಕ್ರಮವಾಗಿ ಸಾಗುವಾನಿ ಮರ ಕಡಿದು ರಾತ್ರೋ ರಾತ್ರಿ ಮರ ಸಾಗಾಟ ಮಾಡಿದ್ದರೂ, ಈವರೆಗೆ ಲಕ್ಷಾಂತರ ಬೆಲೆ ಬಾಳುವ ಮರಗಳನ್ನು ಪತ್ತೆ ಹಚ್ಚದೇ ಇರುವುದು ವಿಪರ್ಯಾಸವೇ ಸರಿ.
ಈ ಹಿಂದೆಯೇ ಹಲವು ಸಾಗುವಾನಿ ಮರಗಳ ಕಡಿತಲೆ
ಸಾಗರ ವಲಯ ಉಳ್ಳೂರು ಶಾಖೆ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಸಾಗುವಾನಿ ಮರಗಳ ಕಡಿತಲೆ ಇದೇನು ಮೊದಲಲ್ಲ. ಈ ಹಿಂದೆಯೂ ಹಲವು ಬಾರಿ ಕಡಿತಲೆ ಮಾಡಲಾಗಿದ್ದು, ಕೆಲವು ರಿಕವರಿಯಾಗಿದ್ದರೇ, ಮತ್ತೆ ಕೆಲವು ಈವರೆಗೆ ಪತ್ತೆ ಹಚ್ಚಿ ವಶಪಡಿಸಿಕೊಳ್ಳಲಾಗಿಲ್ಲ.
ಉಳ್ಳೂರು ಅರಣ್ಯ ಪ್ರದೇಶದ ಸಾಗುವಾನಿ ನೆಡುತೋಪಿನ ಕಾಸ್ಪಡಿ ಗ್ರಾಮದ ಸರ್ವೆ ನಂ.21, 22ರಲ್ಲೂ ಅಕ್ರಮವಾಗಿ ಕಡಿತಲೆ ಮಾಡಲಾಗಿತ್ತು. ಉಳ್ಳೂರು ಗ್ರಾಮದ ಸರ್ವೇ ನಂ.43, 44ರಲ್ಲೂ ಸಾಗುವಾನಿ ಮರಗಳನ್ನು ಕಡಿತಲೆ ಮಾಡಿ ಸಾಗಿಸಲಾಗಿತ್ತು. ಅವ್ಯವತಾವಾಗಿ ಸಾಗುವಾನಿ ಮರ ಕಡಿತಲೆ ಪುರಾದಸರ ಗ್ರಾಮ ಸರ್ವೇ ನಂ.5ರಲ್ಲಿ ನಡೆಯುತ್ತಿದೆ ಎಂಬ ಮಾಹಿತಿಯಿದೆ.
ಈಗ ದಿನಾಂಕ 01-01-2025ರಂದು ಕಾಸ್ಪಾಡಿ ಗ್ರಾಮದ ಸರ್ವೆ ನಂ.4ರಲ್ಲಿ ಸಾಗುವಾನಿ ಮರಗಳ್ನು ಕಡಿದು ಸಾಗಾಟ ಮಾಡಿದ್ದರ ಸಂಬಂಧ ಅರಣ್ಯ ಇಲಾಖೆಯಿಂದ ಕೇಸ್ ದಾಖಲಿಸಲಾಗಿದೆ. ಇಲ್ಲಿ ಒಂದೆರಡು ತುಂಡುಗಳನ್ನಷ್ಟೇ ನೆಪಮಾತ್ರಕ್ಕೆ ವಶಕ್ಕೆ ಪಡೆಯಲಾಗಿದೆ. ಆದರೇ ಲಕ್ಷಾಂತರ ಬೆಲೆ ಬಾಳುವಂತ ಮರಗಳನ್ನು ಸಾಗಾಟ ಮಾಡಿದ್ದರೂ, ಸಾಗಿಸೋ ಮಾಹಿತಿ ಇದ್ದರೂ ತಡೆಯುವ, ತಡೆಯದಿದ್ದರೂ ಸಾಗಿಸಿದ ಕಟಾವು ಮಾಡಿದ ಮರಗಳನ್ನು ಪತ್ತೆ ಹಚ್ಚಿ ಸೀಜ್ ಮಾಡುವ ಕೆಲಸವನ್ನು ಉಪ ವಲಯ ಅರಣ್ಯಾಧಿಕಾರಿ ಮಾಡಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಇನ್ನೂ ಬಳಸಗೋಡು ಸರ್ವೇ ನಂ.23ರಲ್ಲೂ ಸಾಗುವಾನಿ ಮರಗಳ ಅಕ್ರಮ ಕಡಿತಲೆ ಮಾಡಲಾಗಿದ್ದು, ಕೋಟಿ ಗಟ್ಟಲೇ ಸರ್ಕಾರಕ್ಕೆ ನಷ್ಟ ಉಂಟು ಮಾಡಲಾಗಿದೆ. ನೆಪ ಮಾತ್ರಕ್ಕೆ ಅರಣ್ಯ ಇಲಾಖೆಯಿಂದ ಮೊಕದ್ದಮ್ಮ ದಾಖಲಿಸಿಕೊಂಡು, ಕಡಿತಲೆ ಮಾಡಿದ ಮರಗಳನ್ನು ಪತ್ತೆ ಹಚ್ಚೋ ಗೋಚಿಗೆ ಹೋಗದೇ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಲಾಗುತ್ತಿದೆ.
ಒಟ್ಟಾರೆಯಾಗಿ ಉಳ್ಳೂರು ವ್ಯಾಪ್ತಿಯಲ್ಲಿನ ಸಾಗುವಾನಿ ಮರಗಳ ಮಾರಣಹೋಮ ನಡೆಯುತ್ತಿರೋ ಆರೋಪ ಕೇಳಿ ಬಂದಿದೆ. ಲಕ್ಷಾಂತರ ಬೆಲೆಯ ಮರಗಳ ಕಡಿತಲೆ ಮಾಡಿ ರಾತ್ರೋ ರಾತ್ರಿ ಸಾಗಾಟ ಮಾಡಿದರೂ, ಉಪ ವಲಯ ಅರಣ್ಯಾಧಿಕಾರಿ ಸಂದರ ಮೂರ್ತಿ ಮಾತ್ರ ನಿಯಂತ್ರಣ, ಕಳ್ಳರ ಪತ್ತೆಯ ಗೋಚಿಗೇ ಹೋಗದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಬಗ್ಗೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು, ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಗಮನಿಸಿ, ನಿಯಂತ್ರಣ ಕ್ರಮಕೈಗೊಳ್ಳೋ ಕೆಲಸ ಮಾಡುತ್ತಾರ ಅಂತ ಕಾದು ನೋಡಬೇಕಿದೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
ಪ್ರಯಾಣಿಕರ ಗಮನಕ್ಕೆ: ಹುಬ್ಬಳ್ಳಿ-ರಿಷಿಕೇಶ್- ಹುಬ್ಬಳ್ಳಿ ನಡುವೆ ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ರೈಲು ಸಂಚಾರ
BIG NEWS: ಬೆಂಗಳೂರು ಜನತೆಗೆ ಮತ್ತೊಂದು ಶಾಕ್: ಶೀಘ್ರವೇ ನೀರಿನ ದರ ಪರಿಷ್ಕರಣೆ, ಜಲಮಂಡಳಿ ಸುಳಿವು