ಮಸ್ಕತ್: ಒಮಾನ್ ರಾಜಧಾನಿ ಮಸ್ಕತ್ ನ ಶಿಯಾ ಮುಸ್ಲಿಂ ಮಸೀದಿಯ ಬಳಿ ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಗುಂಪು ನಡೆಸಿದ ಅಪರೂಪದ ಗುಂಡಿನ ದಾಳಿಯಲ್ಲಿ ಭಾರತೀಯ ಪ್ರಜೆಯೊಬ್ಬರು ಸಾವನ್ನಪ್ಪಿದ್ದಾರೆ ಮತ್ತು ಇತರ ಮೂವರು ಗಾಯಗೊಂಡಿದ್ದಾರೆ.
ಇಮಾಮ್ ಅಲಿ ಮಸೀದಿ ಬಳಿ ಸೋಮವಾರ ರಾತ್ರಿ ನಡೆದ ಗುಂಡಿನ ದಾಳಿಯಲ್ಲಿ ಓರ್ವ ಪೊಲೀಸ್ ಮತ್ತು ನಾಲ್ವರು ಪಾಕಿಸ್ತಾನಿ ಪ್ರಜೆಗಳು ಸಾವನ್ನಪ್ಪಿದ್ದು, 28 ಮಂದಿ ಗಾಯಗೊಂಡಿದ್ದಾರೆ.
ಘಟನೆಯಲ್ಲಿ ಮೃತಪಟ್ಟ ಭಾರತೀಯ ಪ್ರಜೆಯನ್ನು ಬಾಷಾ ಜಾನ್ ಅಲಿ ಹುಸೇನ್ ಎಂದು ಮಸ್ಕತ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಬುಧವಾರ ಗುರುತಿಸಿದೆ.
ಈ ದಾಳಿಯಲ್ಲಿ ಇತರ ಮೂವರು ಭಾರತೀಯರು ಗಾಯಗೊಂಡಿದ್ದಾರೆ.
ಜುಲೈ 15 ರಂದು ನಡೆದ ಗುಂಡಿನ ದಾಳಿಯ ನಂತರ ನಿವಾಸಿ ಭಾರತೀಯ ಸಮುದಾಯದ ಯೋಗಕ್ಷೇಮವನ್ನು ನಿಕಟವಾಗಿ ಗಮನಿಸಲಾಗುತ್ತಿದೆ ಎಂದು ಮಿಷನ್ ಹೇಳಿದೆ.
ಘಟನೆಯಲ್ಲಿ ದುರದೃಷ್ಟವಶಾತ್ ಪ್ರಾಣ ಕಳೆದುಕೊಂಡ ಬಾಷಾ ಜಾನ್ ಅಲಿ ಹುಸೇನ್ ಅವರ ಪುತ್ರ ತೌಸಿಫ್ ಅಬ್ಬಾಸ್ ಅವರೊಂದಿಗೆ ರಾಯಭಾರಿ ಅಮಿತ್ ನಾರಂಗ್ ಇಂದು ಮಾತನಾಡಿದ್ದಾರೆ ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
ಹುಸೇನ್ ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ಮರಳಿ ತರಲು ಮತ್ತು ಕುಟುಂಬಕ್ಕೆ ಅಗತ್ಯವಿರುವ ಇತರ ಎಲ್ಲ ಬೆಂಬಲಕ್ಕೆ ರಾಯಭಾರ ಕಚೇರಿಯ ಸಂಪೂರ್ಣ ಬೆಂಬಲವನ್ನು ರಾಯಭಾರಿ ಭರವಸೆ ನೀಡಿದರು.
ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೂವರು ಭಾರತೀಯ ಪ್ರಜೆಗಳನ್ನು ರಾಯಭಾರ ಕಚೇರಿಯ ಅಧಿಕಾರಿಗಳು ಭೇಟಿ ಮಾಡಿದ್ದಾರೆ.
ರಾಯಭಾರಿ ನಾರಂಗ್ ಕೂಡ ಅವರ ಕುಟುಂಬಗಳೊಂದಿಗೆ ಮಾತನಾಡಿ ಭರವಸೆ ನೀಡಿದರು