ಬೆಂಗಳೂರು: ಬಸವನಗುಡಿಯ ಹೆಸರಾಂತ ‘ಅರುಣಾ ಮ್ಯೂಸಿಕಲ್ಸ್’ ಎಂಬ ಸಂಗೀತ ವಾದ್ಯಗಳ ಸಾಮ್ರಾಜ್ಯದ ಅಧಿಪತಿ ಹಾಗೂ ಖ್ಯಾತ ಹಿನ್ನೆಲೆ ಗಾಯಕಿ ಕಸ್ತೂರಿ ಶಂಕರ್ ಅವರ ಪತಿ ಶಂಕರ್ ಅವರು ಇಂದು ನಿಧನರಾಗಿದ್ದಾರೆ.
ಸಂಗೀತ ಲೋಕಕ್ಕೆ ಇವರ ಕೊಡುಗೆ ಅಪಾರ. ದಕ್ಷಿಣ ಭಾರತದ ಖ್ಯಾತ ಹಾರ್ಮೋನಿಯಂ ವಾದಕರಾದ ಹಾರ್ಮೋನಿಯಂ ಅರುಣಾಚಲಪ್ಪ ನವರ ಪುತ್ರರೇ ಈ ಶಂಕರ್. ಗಾಯನ ಲೋಕದಲ್ಲಿ ಶಂಕರ್ ಅವರ ಧರ್ಮಪತ್ನಿ ಕಸ್ತೂರಿ ಶಂಕರ್ ಅವರ ಕೊಡುಗೆ ಪ್ರತೀ ಕನ್ನಡಿಗನಿಗೂ ತಿಳಿದಿರುವಂಥದ್ದೇ. ಬಹಳಷ್ಟು ಸಿನಿಮಾಗಳಿಗೆ ಹಿನ್ನೆಲೆ ಗಾಯಕಿಯಾಗಿ ಸೇವೆ ಸಲ್ಲಿಸಿರುವ ಕಸ್ತೂರಿ ಶಂಕರ್ ಅವರು ‘ಕಸ್ತೂರಿ ಶಂಕರ್ ಆರ್ಕೆಸ್ಟ್ರಾ’ ಮೂಲಕ 38 ವರ್ಷಗಳ ಕಾಲ ಕನ್ನಡಿಗರನ್ನ ರಂಜಿಸಿರುವುದು ಕಡಿಮೆ ಸೇವೆಯೇ..?! ಖ್ಯಾತ ಸಂಗೀತ ನಿರ್ದೇಶಕ ಹಾಗೂ ನಟ ಸಾಧು ಕೋಕಿಲ ಇವರ ಗರಡಿಯ ಮತ್ತೊಂದು ರತ್ನ. ಹೀಗೆ ಹತ್ತಾರು ಪ್ರತಿಭೆಗಳನ್ನ ಸಂಗೀತ ಲೋಕಕ್ಕೆ ಕೊಡುಗೆಯಾಗಿ ಕೊಟ್ಟಂತಹ ಹಿರಿಮೆ ಗರಿಮೆ ಈ ಕುಟುಂಬದ್ದು. ಮಡದಿಗೆ ತಕ್ಕ ಪತಿಯಾಗಿ ಬದುಕಿನುದ್ದಕ್ಕೂ ಬಹುದೊಡ್ಡ ಶಕ್ತಿಯಾಗಿ ಬೆನ್ನಿಗೆ ನಿಂತ ಆದರ್ಶ ಪುರುಷ ಎಂದರೆ ತಪ್ಪಾಗಲಾರದು. ಇಡೀ ಕುಟುಂಬದ ಸದಸ್ಯರು ಬಹುಕಾಲದಿಂದ ನನಗೆ ಅತ್ಯಾಪ್ತರು. ಅಂತಿಮ ನಮನ ಸಲ್ಲಿಸಿ ಬಂದೆ. ಯಾಕೋ ದುಃಖ. ಸುಮಾರು ಸರಿ ಒಟ್ಟಿಗೆ ಊಟ ಮಾಡಿದ್ದೇವೆ. ಬದುಕಿನ ಬಗ್ಗೆ ನಿರರ್ಗಳವಾಗಿ ಮಾತನಾಡಿದ್ದೇವೆ. ಹೃದಯಕ್ಕೆ ಹತ್ತಿರವಿದ್ದ ಹಿರಿಯ ಜೀವ ಪರಮ ಜ್ಞಾನಿ, ಫಿಲಾಸಫರ್ ಹೀಗೆ ಹೇಳುತ್ತಾ ಸಾಗಿದರೆ ಬಹಳಷ್ಟು ವಿಚಾರಗಳಿವೆ. ಒಬ್ಬ ಪರಿಪೂರ್ಣ ವ್ಯಕ್ತಿಯಾಗಿ ಒಂದು ಶಕ್ತಿಯಾಗಿ ಸುಧೀರ್ಘವಾಗಿ ಬಾಳಿ ಬದುಕಿದ ಬದುಕಿನ ಸಮಗ್ರ ಅನುಭವದ ದೊಡ್ಡ ಗ್ರಂಥ ಇಂದು ನಮ್ಮಿಂದ ದೂರವಾಗಿದೆ.