ಬೆಂಗಳೂರು: ನಮ್ಮ ಸಮಾಜದಲ್ಲಿ ಹೆಣ್ಣುಮಕ್ಕಳು ಅಂತ್ಯಸಂಸ್ಕಾರದಲ್ಲಿ ಭಾಗವಹಿಸಬಾರದು, ಇಲ್ಲವೇ ಮಾಡಬಾರದು ಎನ್ನುವ ನಿಯಮವೊಂದಿದೆ ಈ ಕಾರಣಕ್ಕೆ ಅವರಿಗೆ ಅಂತ್ಯಸಂಸ್ಕಾರ ಸಂಬಂಧಿಸಿದ ಕಾರ್ಯಗಳಿಗೆ ಅವಕಾಶ ನೀಡುವುದಿಲ್ಲ.
ಈ ನಡುವೆ ತಮ್ಮ ತಂದೆಯ ಅಂತ್ಯಸಂಸ್ಕಾರವನ್ನು ಮಗಳು, ನಿರೂಪಕಿ, ಗಾಯಕಿ ದಿವ್ಯಾ ಆಲೂರು ಅವರು ಮಾಡಿದ್ದು, ಈ ಮೂಲಕ ಸಮಾಜಕ್ಕೆ ಒಂದೊಳ್ಳೆಯ ಸಂದೇಶವನ್ನು ಕಳುಹಿಸಿಕೊಟ್ಟಿದ್ದು, ಮೌಡ್ಯಕ್ಕೆ ಧಿಕ್ಕಾರ ಕೂಗಿದ್ದಾರೆ.
ಈ ಬಗ್ಗೆ ಹಿರಿಯ ಪತ್ರಕರ್ತ ದಂಡಿನಕೆರೆ ನಾಗರಾಜ್ ಅವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿದ್ದು, ಅದರ ವಿವರ ಈ ಕೆಳಕಂಡತಿದೆ.
ಗಂಡು ಮಕ್ಕಳಿಲ್ಲದ ಜಾನಪದ ಗಾಯಕ ಆಲೂರು ನಾಗಪ್ಪ ಅವರ ಅಂತ್ಯಸಂಸ್ಕಾರ ಮಾಡಿದ್ದು ಅವರ ಮಗಳು, ನಿರೂಪಕಿ, ಗಾಯಕಿ ದಿವ್ಯಾ ಆಲೂರು. ತನ್ನ ಅಪ್ಪನ ಅಂತ್ಯಸಂಸ್ಕಾರ ನಾನೇ ಮಾಡಬೇಕು ಎಂದು ಹಠ ಹಿಡಿದು ಸಾಧಿಸಿದ ದಿವ್ಯಾರ ಬಗ್ಗೆ ಗೌರವ ಬಂತು. ನೀ ಈ ಕೆಲಸ ಮಾಡಿದ್ರೆ ನಿನಗೆ ಕೆಟ್ಟದಾಗುತ್ತೆ ಅಂತ ಊರಿನ ಹಿರಿಯರು ಹೇಳಿದಾಗಲೂ, ಏನಾದ್ರೂ ಪರವಾಗಿಲ್ಲ ನಮ್ಮಪ್ಪನ ಅಂತ್ಯಸಂಸ್ಕಾರ ನಾನೇ ಮಾಡೋದು ಅಂತ ಹೇಳಿ ಮುಂದುವರಿದಿದ್ದಾರೆ. ಹೆಣ್ಮಕ್ಕಳು ಅಂತ್ಯಸಂಸ್ಕಾರ ಕ್ರಿಯೆಗಳಲ್ಲಿ ಭಾಗವಹಿಸಬಾರದು ಅನ್ನೋ ಸಂಪ್ರದಾಯದ ಹಿಂದೆ ಅದೇನು ಕಾರಣ ಇದೆಯೋ ಕಾಣೆ; ಆದರೆ ಗಂಡು ಮಕ್ಕಳಿಲ್ಲದ ಕುಟುಂಬ ಇದೊಂದು ಕಾರಣಕ್ಕೆ ಹೆಚ್ಚಾಗಿ ಕೊರಗುವುದನ್ನು ಕಂಡಿದ್ದೇನೆ. ದಿವ್ಯಾರ ಈ ನಡೆ, ಅಂತಹ ಕುಟುಂಬಗಳಿಗೊಂದು ಧೈರ್ಯವಾಗಬಲ್ಲದು. ಈ ಹಿಂದೆಯೂ ಕೆಲವು ಹೆಣ್ಣುಮಕ್ಕಳು ಹೀಗೆ ಅಂತಿಮ ಸಂಸ್ಕಾರಕ್ಕೆ ಮುಂದಾಗಿದ್ದನ್ನು ಕಂಡಿದ್ದೇನೆ. ದಿವ್ಯಾರಂತಹ ಸಾರ್ವಜನಿಕ ಜೀವನದಲ್ಲಿರುವವರು ಇಂತಹ ಕೆಲಸಗಳಿಗೆ ಮುಂದಾದಾಗ ಅದು ಉಂಟುಮಾಡುವ ಸಾಮಾಜಿಕ ಪರಿಣಾಮ ಹೆಚ್ಚು. ಹೆತ್ತಪ್ಪನನ್ನು ಕಳೆದುಕೊಂಡ ದುಃಖದಲ್ಲಿರುವ ದಿವ್ಯಾ ಮತ್ತವರ ಕುಟುಂಬಕ್ಕೆ ಭಗವಂತ ಈ ದುಃಖ ಭರಿಸುವ ಶಕ್ತಿ ನೀಡಲಿ. ನಾಡಿನ ಹೆಮ್ಮೆಯ ಗಾಯಕರಾದ ಆಲೂರು ನಾಗಪ್ಪ ಅವರ ಆತ್ಮಕ್ಕೆ ಶಾಂತಿ ಸಿಗಲಿ.