ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಅರಾಜಕತೆಯು ಪರಾಕಾಷ್ಠೆ ತಲುಪಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಅವರು ಟೀಕಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಪ್ರಿಯಾಂಕ ಖರ್ಗೆ ಅವರು ಜಗತ್ತಿನ ಬಗ್ಗೆ ಮಾತನಾಡುತ್ತಾರೆ. ಆದರೆ ತಮ್ಮ ಇಲಾಖೆಯಲ್ಲಿ ಏನು ಭ್ರಷ್ಟಾಚಾರ ನಡೆದಿದೆ ಎಂದು ಅವರಿಗೆ ತಿಳಿದಿದೆಯೇ ಎಂದು ಪ್ರಶ್ನಿಸಿದರು. ನನ್ನ ಪ್ರಕಾರ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಒಂದು ಸಾವಿರ ಕೋಟಿಗಿಂತ ಹೆಚ್ಚು ಭ್ರಷ್ಟಾಚಾರ ರಾಜಾರೋಷವಾಗಿ ನಡೆಯುತ್ತಿದೆ ಎಂದು ದೂರಿದರು. ಪ್ರಿಯಾಂಕ ಖರ್ಗೆ ಅವರು ತಮ್ಮ ತಟ್ಟೆಯಲ್ಲಿ ಬಿದ್ದಿರುವ ಹೊಲಸನ್ನು ತೆಗೆದು ಸ್ವಚ್ಛ ಮಾಡಿಕೊಳ್ಳುವ ಬದಲು ಕೇಂದ್ರದಲ್ಲಿ ನಾವು ಅಧಿಕಾರಕ್ಕೆ ಬಂದರೆ ಆ ಸಂಘಟನೆಯನ್ನು ರದ್ದುಪಡಿಸುತ್ತೇವೆ ಎನ್ನುವುದರಲ್ಲಿ ಇದ್ದಾರೆ ಎಂದು ಆಕ್ಷೇಪಿಸಿದರು.
ಕುಡಚಿ ಮತಕ್ಷೇತ್ರದ ಒಂದು ಗ್ರಾಮ ಪಂಚಾಯಿತಿಯಲ್ಲಿ 17 ಕೋಟಿ ಅವ್ಯವಹಾರ ಆಗಿದೆ. ಹಾಗಿದ್ದರೆ ಸುಮಾರು 6 ಸಾವಿರ ಗ್ರಾಮ ಪಂಚಾಯಿತಿಗಳು ಇರುವಂತಹ ರಾಜ್ಯವಿದು. ಪ್ರಿಯಾಂಕ ಖರ್ಗೆ ಅವರೇ ನಿಮ್ಮ ಇಲಾಖೆಯಲ್ಲಿ ನೀವು ಏನು ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು.
ಇದು ಎಷ್ಟು ಪರ್ಸೆಂಟ್ ಪ್ರಿಯಾಂಕ ಖರ್ಗೆ ಅವರೇ?
ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಯಾವ ರೀತಿ ಭ್ರಷ್ಟಾಚಾರ ನಡೆಯುತ್ತಿದೆ ಎಂದರೆ ಒಂದು ಪಂಚಾಯಿತಿಯಲ್ಲಿ 20 ರಿಂದ 30 ಜನರನ್ನು ದಿನ ಕಾರ್ಮಿಕರನ್ನು ನೇಮಿಸಿ ಪಂಚಾಯಿತಿಯ 50 ರಿಂದ 10 ಕಾಮಗಾರಿಗಳಿಗೆ ಮೇಲೆ ನೇಮಿಸಿದ್ದ ಕಾರ್ಮಿಕರನ್ನು ನಿಲ್ಲಿಸಿ ಫೋಟೋ ತೆಗೆದುಕೊಳ್ಳುತ್ತಾರೆ. ಇದೇ ವ್ಯಕ್ತಿಗಳು ಒಂದು ಕಾಮಗಾರಿಯಲ್ಲಿ ಕಲ್ಲಪ್ಪ ಮಲ್ಲಪ್ಪ ಎಂದು ನಮೂದಿಸುತ್ತಾರೆ; ಇನ್ನೊಂದು ಕಾಮಗಾರಿಗೆ ಸುರೇಶ, ರಮೇಶ ಹೆಸರನ್ನು ನಮೂದಿಸುತ್ತಾರೆ; ಮತ್ತೊಂದು ಕಾಮಗಾರಿಗೆ ತಿಪ್ಪೇಶ-ತುಪ್ಪೇಶ ಎಂದು ನಮೂದಿಸುತ್ತಾರೆ ಎಂದು ದೂರಿದರು.
ಪ್ರಿಯಾಂಕ ಖರ್ಗೆ ಅವರಿಗೆ ನಿಮ್ಮ ಮೂಲಕ ಎಂ.ಎಸ್.ಆರ್ ನಂ.18398, 18391, 18414 ಇದೇ ತರಹ ನೂರಾರು ದಾಖಲಾತಿ ಇವೆ. ನನ್ನ ಬಳಿ ಇರುವ ದಾಖಲಾತಿಯು ಇಲಾಖೆಯ ಸೈಟಿನ ಮುಖಾಂತರ ಆನ್‍ಲೈನಲ್ಲಿ ಪಡೆದುಕೊಂಡಿರುವ ದಾಖಲಾತಿಗಳು. ಇದು ಸುಳ್ಳು ದಾಖಲಾತಿಗಳು ಅಲ್ಲ. ಪೋಟೋದಲ್ಲಿರುವ ವ್ಯಕ್ತಿಗೆ ಹಣವನ್ನು ಬಿಡುಗಡೆಗೊಳಿಸಿದ್ದಾರೆ. ಹಣದ ಬಿಡುಗಡೆ ಮಾಡಿರುವ ವ್ಯಕ್ತಿಗೆ ಮತ್ತು ಕಾಮಗಾರಿಯ ಜಾಬ್‍ಕಾರ್ಡ್‍ನಲ್ಲಿ ನಮೂದಿಸಿರುವ ವ್ಯಕ್ತಿಗೂ ಸಂಬಂಧವಿಲ್ಲ. ಯಾರನ್ನು ಅಮಾನತು ಮಾಡುತ್ತೀರ. ಬಿಜೆಪಿ ಮೇಲೆ 40 ಪರ್ಸೆಂಟ್ ಆರೋಪ ಮಾಡಿದ್ದರು; ಇದು ಎಷ್ಟು ಪರ್ಸೆಂಟ್ ಆರೋಪ ಪ್ರಿಯಾಂಕ ಖರ್ಗೆ ಅವರೇ? ಇದರ ಬಗ್ಗೆ ಏನು ಉತ್ತರ ಕೊಡುತ್ತೀರ ಎಂದು ಪಿ. ರಾಜೀವ್ ಅವರು ಪ್ರಶ್ನಿಸಿದರು.
ನರೇಗಾದಲ್ಲಿ ನಡೆಯುತ್ತಿರುವ ಅವ್ಯವಹಾರದ ಬಗ್ಗೆ ಭಾವಚಿತ್ರ ದಾಖಲಾತಿಯನ್ನು ಪ್ರದರ್ಶಿಸಿ ಮಾತನಾಡಿದ ಅವರು, ನರೇಗಾ ಕಾಮಗಾರಿ ಕೆಲಸದಲ್ಲಿರುವ ಭಾವಚಿತ್ರದ ವ್ಯಕ್ತಿಗಳಿಗೂ ನರೇಗಾ ಜಾಬ್ ಕಾರ್ಡ್‍ನಲ್ಲಿ ನಮೂದಿಸಿರುವ ಹೆಸರುಗಳಿಗೂ ಸಂಬಂಧವೇ ಇಲ್ಲ. ನರೇಗಾ ಹಣವು ಬೇರೆಯವರ ಖಾತೆಗೆ ಜಮೆಯಾಗುತ್ತಿದ್ದು, ಭಾವಚಿತ್ರವನ್ನು ತೆಗೆಸಿಕೊಂಡಿರುವ ವ್ಯಕ್ತಿಗಳು ಬೇರೆ ಎಂದು ತಿಳಿಸಿದರು. ಇನ್ನೊಂದು ನರೇಗಾ ಕಾಮಗಾರಿಯಲ್ಲಿ ಮೇಲ್ಕಂಡ ಭಾವಚಿತ್ರದ ವ್ಯಕ್ತಿಗಳು ನಿಲ್ಲುತ್ತಾರೆ. ಆದರೆ ಕಾಮಗಾರಿಗಳು ಬೇರೆ ಬೇರೆ ಮತ್ತು ಕಾರ್ಮಿಕರು ಬೇರೆ ಬೇರೆ ಎಂದು ವಿವರಿಸಿದರು.
ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ಯಾವ ಮಟ್ಟಿಗೆ ಇದೆ ಎಂದರೆ ರಾಯಬಾಗ ತಾಲ್ಲೂಕಿನ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಗದ್ದು ಅವರ ಸಹೋದರ ಬಾಬಸಾಬ್ ಗದ್ದು ಅವರು ನರೇಗಾ ಕಾಮಗಾರಿಯ ಫೋಟೋದಲ್ಲಿ ನಿಲ್ಲುತ್ತಾರೆ. ಅಂದರೆ ಸಚಿವರ ಬೆಂಬಲವಿಲ್ಲದೆ ಒಬ್ಬ ತಾಲ್ಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗೆ ಹಾಡುಹಗಲು ಭ್ರಷ್ಟಾಚಾರ ಮಾಡುವುದಕ್ಕೆ ಇಷ್ಟು ಧೈರ್ಯ ಬರುವುದಕ್ಕೆ ಸಾಧ್ಯವೇ ಎಂದು ದೂರಿದರು.
ವಿಜಯಪುರದ ನರೇಗಾ ಕಾಮಗಾರಿಯಲ್ಲಿ ಶಾಲಾ ಮಕ್ಕಳ್ಳನ್ನು ನಿಲ್ಲಿಸಿ ಬಿಲ್ಲನ್ನು ತೆಗೆದುಕೊಂಡಿದ್ದಾರೆ. ಕೇಂದ್ರ ಸರ್ಕಾರ ಮಹಿಳೆಯರಿಗೆ ಕೆಲಸ ನೀಡಲು ಕಾನೂನು ಮಾಡಿದೆ. ಯಾದಗಿರಿ ಜಿಲ್ಲೆಯಲ್ಲಿ ಪುರುಷರಿಗೆ ಸೀರೆಯನ್ನು ತೊಡಿಸಿ ನರೇಗಾ ಬಿಲ್ಲನ್ನು ತೆಗೆದುಕೊಳ್ಳುತ್ತಾರೆ. ಮೇಲೆ ಹೇಳಿದ ಎಲ್ಲ ನರೇಗಾ ಕಾಮಗಾರಿಗಳ ಬಿಲ್ಲುಗಳು ಅನುಮೋದನೆಯಾಗಿದ್ದು, ಪ್ರಿಯಾಂಕ ಖರ್ಗೆ ಅವರ ಮೂಗಿನ ಅಡಿಯಲ್ಲಿ ಸಾವಿರಾರು ಕೋಟಿ ದುರುಪಯೋಗವಾಗಿದೆ ಎಂದು ಆರೋಪಿಸಿದರು.
ಪಿಡಬ್ಲ್ಯೂಡಿ ಇಲಾಖೆಯಲ್ಲೂ ಭ್ರಷ್ಟಾಚಾರ…
ಪಿಡಬ್ಲ್ಯೂಡಿ ಇಲಾಖೆಯಿಂದ ಚಿಂಚಲಿ ರಿಂದ ಜಿನ್ನಾಬಿಡೆ ವರೆಗೆ ಡಾಂಬರ್ ರಸ್ತೆ ಆಗಲು ಅನುದಾನ ಬಿಡುಗಡೆಯಾಗುತ್ತದೆ. ಸದರಿ ಡಾಂಬರ್ ರಸ್ತೆ ಕಾಮಗಾರಿಯು ಮೇ 14ಕ್ಕೆ ಪಿಡಬ್ಲ್ಯೂಡಿ ಇಲಾಖೆಯಿಂದ ಪೂರ್ಣಗೊಳ್ಳುತ್ತದೆ. ಆದರೆ ಇದೇ ರಸ್ತೆ ಕಾಮಗಾರಿಗೆ ನರೇಗಾದಲ್ಲಿ 25 ಜೂನ್ 2024 ಬಿಲ್ಲನ್ನು ತೆಗೆಯುತ್ತಾರೆ. ಅಂದರೆ ಮೇ ತಿಂಗಳಿನಲ್ಲಿ ಪಿಡಬ್ಲ್ಯೂಡಿ ಇಲಾಖೆಯಿಂದ ಪೂರ್ಣಗೊಂಡ ಕಾಮಗಾರಿಗೆ ಜೂನ್ ತಿಂಗಳಲ್ಲಿ ನರೇಗಾ ರಸ್ತೆ ಮಾಡಿದ್ದೇವೆ ಎಂದು 5 ಲಕ್ಷ ಬಿಲ್ಲು ತೆಗೆಯುತ್ತಾರೆ. ಗ್ರಾಮೀಣಾಭಿವೃದ್ಧಿ ಅಧಿಕಾರಿಯನ್ನು ಸದರಿ ರಸ್ತೆ ಸರ್ವೆ ಮಾಡಲು ಕಳುಹಿಸಿದರೆ ಅಲ್ಲಿ ಮಣ್ಣಿನ ರಸ್ತೆ ಇರಬೇಕು. ಅಧಿಕಾರಿಯು ತನ್ನನ್ನು ತಾನು ರಕ್ಷಣೆ ಮಾಡಿಕೊಳ್ಳಬೇಕು ಎಂದರೆ ಮೇಲಧಿಕಾರಿಗಳು ತಪಾಸಣೆಗೆ ಬರುವ ಮುನ್ನ ಕೆಲಸ ಮುಗಿದಿರಬೇಕು ಎಂದು ಹೇಳುತ್ತಾರೆ. ಆ ಅಧಿಕಾರಿ ಸರ್ವೀಸ್‍ನಲ್ಲಿ ಉಳಿಯಬೇಕಾದರೆ ಡಾಂಬರ್ ರಸ್ತೆ ಕಿತ್ತು ಮಣ್ಣಿನ ರಸ್ತೆ ಮಾಡಬೇಕು. ಪ್ರಿಯಾಂಕ ಖರ್ಗೆ ಅವರು ಈ ಕೆಲಸದ ಬಗ್ಗೆ ಸ್ಥಳ ಪರಿಶೀಲನೆ ಮಾಡುವ ಧೈರ್ಯವಿದೆಯೇ ಎಂದು ಸವಾಲೆಸೆದರು.
ರಾಜ್ಯದಲ್ಲಿ ಒಂದು ಕಾಮಗಾರಿಗೆ ಹಣ ಬಿಡುಗಡೆ ಮಾಡಲು 3 ಹಂತದ ಕಾಮಗಾರಿ ಫೋಟೋವನ್ನು ಆನ್‍ಲೈನ್‍ನಲ್ಲಿ ಅಪ್‍ಲೋಡ್ ಮಾಡಬೇಕು. ಆದರೆ ರಾಜ್ಯದ ಅಧಿಕಾರಿಗಳು ಮೊಬೈಲಿನಲ್ಲಿ ಗೂಗಲ್ ಮ್ಯಾಪನ್ನು ಫೋಟೋ ನೀಡಿ ಕಾಮಗಾರಿ ದುಡ್ಡನ್ನು ತೆಗೆದುಕೊಂಡಿದ್ದಾರೆ ಎಂದು ದೂರಿದರು. ಇದೇ ರೀತಿ ರಾಜ್ಯಾದ್ಯಂತ 2 ಲಕ್ಷ, 3 ಲಕ್ಷ ಮತ್ತು 5 ಲಕ್ಷಗಳ ಸಾವಿರಾರು ಕಾಮಗಾರಿಗಳಿಗೆ ಗೂಗಲ್ ಫೋಟೋ ಅಪ್‍ಲೋಡ್ ನಿಯಮಬಾಹಿರವಾಗಿ ಬಿಲ್ಲುಗಳನ್ನು ಅನೊಮೋದನೆ ಮಾಡಿದ್ದಾರೆ. ಪ್ರಿಯಾಂಕ ಖರ್ಗೆ ಅವರೆ ನಿಮ್ಮ ಇಲಾಖೆಯಲ್ಲಿ ನಡೆಯುತ್ತಿರುವ ಅವ್ಯವಹಾರ ನಿಮಗೆ ಒಪ್ಪಿಗೆ ಇಲ್ಲದೆ ನಡೆದಿರುವುದೇ ಅಥವಾ ಈ ಅವ್ಯವಹಾರದಲ್ಲಿ ನಿಮಗೆ ಎಷ್ಟು ಷೇರು ಇದೆ ಎಂದು ಪ್ರಶ್ನಿಸಿದರು.
ಪ್ರಿಯಾಂಕ ಖರ್ಗೆ ಅವರು ಬಾಯಿ ಬಿಟ್ಟರೆ ಅಂತರಾಷ್ಟ್ರೀಯ ಸುದ್ದಿಯನ್ನು ಮಾತನಾಡುತ್ತಾರೆ. ಹಾಗಾಗಿ ಅವರ ಇಲಾಖೆಯಲ್ಲಿ ಸಾವಿರಾರು ಕೋಟಿಯ ಅಕ್ರಮ ಲೂಟಿಯಾಗುತ್ತಿದೆ. ರಾಯರೆಡ್ಡಿ ಅವರು ಅಭಿವೃದ್ಧಿ ಕಾಮಗಾರಿಯನ್ನು ಕೇಳಬೇಡಿ ಎಂದು ಮಾನಸಿಕ ಸ್ಥಿತಿಯನ್ನು ಸಿದ್ಧಪಡಿಸುತ್ತಿದ್ದಾರೆ. ಹಾಗಿದ್ದಲ್ಲಿ ಜನರ ದುಡ್ಡು ಎಲ್ಲಿ ಹೋಗುತ್ತಿದೆ ಎಂದು ಪ್ರಶ್ನಿಸಿದರು.
ಕರ್ನಾಟಕದ 1 ಸಾವಿರಕ್ಕಿಂತ ಹೆಚ್ಚು ಗ್ರಾಮ ಪಂಚಾಯಿತಿಗಳದ್ದು ದಾಖಲೆಗಳು ಬಿಜೆಪಿ ಕಾರ್ಯಾಲಯದಲ್ಲಿ ಇದೆ. ಮಾಧ್ಯಮದ ಮೂಲಕ ಆಯಾ ಜಿಲ್ಲೆಗಳಲ್ಲಿ ಪತ್ರಿಕಾಗೋಷ್ಠಿಯನ್ನು ಮಾಡಿ ದಾಖಲಾತಿಗಳನ್ನು ಮಾಧ್ಯಮಕ್ಕೆ ನೀಡುತ್ತೇವೆ ಎಂದು ತಿಳಿಸಿದರು. ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದೇವೆ ಹಾಗೂ ಬೆಳಗಾವಿಯ ಜಿಲ್ಲಾ ಕಾರ್ಯನಿರ್ವಹಣಾಧಿಕಾರಿಗೆ ಕ್ರಮ ತೆಗೆದುಕೊಳ್ಳುವಂತೆ ಖುದ್ದು ನಾನೇ ಮಾತನಾಡಿದ್ದರು ಕೂಡ ಇಲ್ಲಿಯವರಿಗೆ ವಿಚಾರಣೆ ನಡೆಸಿ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಏಕೆಂದರೆ ಮೇಲೆ ಸಚಿವರಿಂದ ಹಿಡಿದು ಕೆಳಗಡೆಯವರೆಗೆ ಭ್ರಷ್ಟಾಚಾರದಲ್ಲಿ ಎಲ್ಲರೂ ಮುಳುಗಿದ್ದಾರೆ ಎಂದು ಆರೋಪಿಸಿದರು.
ಸುಮಾರು 1 ಸಾವಿರ ಗ್ರಾಮ ಪಂಚಾಯಿತಿಯಲ್ಲಿ ಕನಿಷ್ಠ 8 ರಿಂದ 15 ಕೋಟಿಯ ಅವ್ಯವಹಾರಗಳು ಪ್ರತೀ ಪಂಚಾಯಿತಿಯಲ್ಲಿ ನಡೆದಿವೆ. ಜಿಲ್ಲಾ ಮಟ್ಟದಲ್ಲಿ ನಾವು ಆ ವರದಿಗಳನ್ನು ಬಿಡುಗಡೆ ಮಾಡುತ್ತೇವೆ. ಆ ವರದಿಗಳ ಆದಾರದ ಮೇಲೆ ಮಾಧ್ಯಮ ಮಿತ್ರರರು ವಾಸ್ತವವನ್ನು ಪರಿಶೀಲಿಸಿ. ಆಗ ನಿಮಗೆ ತಿಳಿಯುತ್ತದೆ ಈ ರಾಜ್ಯದ ಜನರ ತೆರಿಗೆ ಹಣ ಎಲ್ಲಿಹೋಗುತ್ತದೆ ಎಂದು ಮನವಿ ಮಾಡಿದರು.
ಬಿಹಾರ ಚುನಾವಣೆಗೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ಪರ್ವ…
ಬಿಹಾರ ಚುನಾವಣೆಗೆ ಹಣ ಹೊಂದಿಸುವ ಸಲುವಾಗಿ ಕರ್ನಾಟಕದ ಜನಸಾಮಾನ್ಯರಿಗೆ ಹಾಲಿನ ಬೆಲೆ ಜಾಸ್ತಿ ಆಗಿದೆ, ಬಾಂಡ್ ಪೇಪರ್ಸ್ ಬೆಲೆ ಜಾಸ್ತಿ ಆಗಿದೆ, ವಿದ್ಯುತ್ ಬಿಲ್ಲು ಜಾಸ್ತಿ ಆಗಿದೆ, ಸ್ಟಾಂಪ್ ಡ್ಯುಟಿ ಹೆಚ್ಚಾಗಿದೆ, ಮಧ್ಯದ ದರ ಹೆಚ್ಚಿಗೆ ಆಗಿದೆ. ಈ ಬೆಲೆ ಏರಿಸಿದ ಹಣವು ಎಲ್ಲಿ ಹೋಗುತ್ತಿದೆ ಎಂದರೆ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರಕ್ಕೆ ಹೋಗುತ್ತಿದೆ ಎಂದು ಆರೋಪಿಸಿದರು.
ವಾಲ್ಮೀಕಿ ನಿಗಮದ ಹಣವನ್ನು ಬಳ್ಳಾರಿ ಚುನಾವಣೆಗೆ ಬಳಸಿದರು ಮತ್ತು ತೆಲಂಗಾಣಕ್ಕೆ ಕಳುಹಿಸಿದರು. ಸುರ್ಜೇವಾಲ ಅವರು ಮೇಲಿಂದ ಮೇಲೆ ಏಕೆ ಕರ್ನಾಟಕಕ್ಕೆ ಬರುತ್ತಿದ್ದಾರೆ ಎಂದರೆ ಬಿಹಾರ ಚುನಾವಣೆಗೆ ಹಣವನ್ನು ಹೊಂದಿಸಲು ಬರುತ್ತಿದ್ದಾರೆ. ಕರ್ನಾಟಕದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಮಾಡದೆ, ಸರ್ಕಾರದ ಪ್ರಾಯೋಜಿಕತ್ವದಲ್ಲಿ ಕಾಮಗಾರಿಗಳು ನಡೆಯದಿದ್ದರು ನಡೆದಿದೆ ಎಂದು ದುಡ್ಡು ತೆಗೆಯುವ ವ್ಯವಸ್ಥೆ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು.
ಪ್ರಿಯಾಂಕ ಖರ್ಗೆ ಅವರೇ, ನಮ್ಮ ಮೇಲೆ 40 ಪರ್ಸೆಂಟ್ ಆರೋಪ ಮಾಡಿದ್ದರು ಅದನ್ನು ಸಾಬೀತುಪಡಿಸಲು ನಿಮಗೆ ಇವತ್ತಿಗೂ ಸಾಧ್ಯವಾಗಿಲ್ಲ. ನಾನು ನಿಮಗೆ ದಾಖಲಾತಿಗಳನ್ನು ಕೊಡುತ್ತೇನೆ. ನಾನು ಹೇಳಿದ ಕಾಮಗಾರಿಗಳು ಕೆಲಸಗಳ ಸ್ಥಳ ಪರಿಶೀಲನೆ ಮಾಡಿ, ಪರಿಶೀಲನೆ ಮಾಡಿರುವ ಕಾಮಗಾರಿ ಕೆಸಲಗಳು ಈ ರೀತಿ ಇದೆ ಎಂದು ರಾಜ್ಯದ ಜನತೆಗೆ ಹೇಳುವ ಧೈರ್ಯ ನಿಮಗೆ ಇದೆಯೇ ಎಂದು ಸವಾಲು ಹಾಕಿದರು.
ರಾಯರೆಡ್ಡಿಯವರ ಹೇಳಿಕೆಯಡಿ ಸರ್ಕಾರದ ಸಂಚು…
ಬೆಂಗಳೂರಿನಲ್ಲಿ ಪೌರಕಾರ್ಮಿಕರು ಹೋರಾಟಕ್ಕೆ ಇಳಿದಿದ್ದಾರೆ. ಬಿ.ಆರ್ ಪಾಟೀಲ್ ಅವರು ವಸತಿ ಇಲಾಖೆಯಲ್ಲಿ ಭ್ರಷ್ಟಾಚಾರದ ಯಾವ ಮಟ್ಟಿಗೆ ಇದೆ ಎಂದು ತಿಳಿಸಿದರು. ರಾಜು ಖಾಗೆಯವರು ನನ್ನ ಕ್ಷೇತ್ರದಲ್ಲಿ ನನಗೆ ಕೆಲಸ ಮಾಡಿಸಲು ಆಗುತ್ತಿಲ್ಲ ಎಂದು ಹೇಳಿದರು. ಬಸವರಾಜ ರಾಯರೆಡ್ಡಿ ಅವರು ನೀವು ಗ್ಯಾರೆಂಟಿಯನ್ನು ಕೇಳುವುದನ್ನು ಬಿಡಿ ರಸ್ತೆಯನ್ನು ಮಾಡುತ್ತೀವಿ. ಇಲ್ಲದಿದ್ದರೆ ರಸ್ತೆ ಮಾಡುವುದಕ್ಕೆ ಆಗುವುದಿಲ್ಲ ಎಂದು ಅವರು ಹೇಳುತ್ತಿದ್ದಾರೆ. ಹಾಗಿದ್ದರೆ ನಿಜವಾಗಿಯೂ ಕರ್ನಾಟಕದಲ್ಲಿ ಆರ್ಥಿಕ ಸ್ಥಿತಿ ಏನಿದೆ? ಬಸವರಾಜು ರಾಯರೆಡ್ಡಿ ಅವರ ಹೇಳಿಕೆಯ ಹಿಂದೆ ಈ ಸರ್ಕಾರದ ಸಂಚು ಎದ್ದು ಕಾಣುತ್ತಿದೆ ಎಂದು ಆರೋಪಿಸಿದರು.
ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಲಿಗಳ ಸಾವಾಯಿತು. ಅರಣ್ಯ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರಿಗೆ ವೇತನವನ್ನು ನೀಡುವುದಕ್ಕೆ ಈ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದರು.
10 ಕೆಜಿ ಅಕ್ಕಿಯನ್ನು ಕೊಡುತ್ತೇವೆ ಎಂದು ಸಿದ್ದರಾಮಯ್ಯನವರು ಉದ್ದುದ್ದ ಭಾಷಣ ಮಾಡಿದ್ದರು. ಆ ಪಡಿತರವನ್ನು ಪೂರೈಕೆ ಮಾಡುವ ಲಾರಿಯ ಮಾಲೀಕರು ಮುಷ್ಕರಕ್ಕೆ ಕರೆ ಕೊಡುತ್ತಿದ್ದಾರೆ. ಶಕ್ತಿ ಯೋಜನೆಯ ಬಗ್ಗೆ ಬಹಳ ದೊಡ್ಡದಾಗಿ ಹೇಳಿಕೊಳ್ಳುವ ಈ ಸರ್ಕಾರ ಸಾರಿಗೆ ಇಲಾಖೆÉಗೆ 7 ಸಾವಿರ ಕೋಟಿ ಬಾಕಿ ಉಳಿಸಿಕೊಂಡಿದೆ. ಸಾರಿಗೆ ಇಲಾಖೆ ನೌಕರರ ಪಿ.ಎಫ್ ಗ್ರಾಚ್ಯುಟಿಯನ್ನು ಕೊಡುವ ಸ್ಥಿತಿಯಲ್ಲಿ ಈ ಸರ್ಕಾರ ಇಲ್ಲ. ಸಾರಿಗೆ ನೌಕರರು ತಮ್ಮ ದುಡಿಮೆಯ ದುಡ್ಡನ್ನು ಕೇಳುವುದಕ್ಕೆ ಭಯಪಡುವ ವಾತಾವರಣವನ್ನು ಸೃಷ್ಟಿಸುವ ಕೆಲಸ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ದೂರಿದರು.
3 ಲಕ್ಷ 60 ಸಾವಿರ ಕೋಟಿ ಹಣ ಎಲ್ಲಿಗೆ ಹೋಗುತ್ತಿದೆ?
ಮಾನಸಿಕವಾಗಿ ಕಾಂಗ್ರೆಸ್ ಸರ್ಕಾರ ಅವರ ಶಾಸಕರಿಗೆ ನೀವು ಅನುದಾನ ಕೇಳಬಾರದು ಎಂದು ಮುಖ್ಯಮಂತ್ರಿಗಳು ಅವರ ಆರ್ಥಿಕ ಸಲೆಗಾರ ರಾಯರೆಡ್ಡಿ ಅವರ ಮೂಲಕ ಹೇಳಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಸಿದ್ದರಾಮಯ್ಯ ನವರು ಮಂಡಿಸಿರುವ ಬಜೆಟ್ಟಿನ ಗಾತ್ರ 4 ಲಕ್ಷದ 9 ಸಾವಿರದ 549 ಕೋಟಿ. ಇವರು ಗ್ಯಾರೆಂಟಿ ಯೋಜನೆಗಳಿಗೆ ನೀಡುತ್ತಿರುವ ಹಣ ಬರಿ 50 ಸಾವಿರ ಕೋಟಿ. ಹಾಗಿದ್ದಲ್ಲಿ ಸುಮಾರು 3 ಲಕ್ಷ 60 ಸಾವಿರ ಕೋಟಿ ಹಣ ಎಲ್ಲಿಗೆ ಹೋಗುತ್ತಿದೆ ಎಂದು ಪ್ರಶ್ನಿಸಿದರು.
ಗ್ಯಾರೆಂಟಿ ಹೆಸರಿನಲ್ಲಿ ಈ ಸರ್ಕಾರ ಲೂಟಿ ಮಾಡುತ್ತಿರುವುದನ್ನು ಸಮರ್ಥನೆ ಮಾಡಿಕೊಳ್ಳಲು ಇಂತಹ ವಾತಾವರಣವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆಯೇ ಎಂದು ಪ್ರಶ್ನಿಸಿದರು. ಗಾಣಿಗ ಮಠದ ಸ್ವಾಮೀಜಿ ಅವರು ಸಚಿವ ಶಿವರಾಜ್ ತಂಗಡಿಗೆ ಮೇಲೆ ಪತ್ರದ ಮುಖೇನ ಶೇ.25 ರಷ್ಟು ಕಮಿಷನ್ ಆರೋಪವನ್ನು ಮಾಡಿದ್ದಾರೆ. ನಾನು ರಾಜಕೀಯಕ್ಕೆ ಬಂದು 20 ವರ್ಷವಾಯಿತು, ನನ್ನ ರಾಜಕೀಯ ಜೀವನದ ಸಣ್ಣ ಅನುಭವದಲ್ಲಿ ಮಠಾದೀಶರಿಂದ ಕಮಿಷನ್ ಕೇಳುವಂತಹ ಸುದ್ದಿಯನ್ನು ನಾನು ಎಂದೂ ಕೇಳಲಿಲ್ಲ. ಅಂದರೆ ಈ ಸರ್ಕಾರದಲ್ಲಿ ಭ್ರಷ್ಟಾಚಾರ ಯಾವ ಮಟ್ಟಿಗೆ ಹೋಗಿದೆ ಎಂದು ವಿವರಿಸಿದರು.
ರಾಜ್ಯ ಕಾರ್ಯದರ್ಶಿ ಡಾ. ಲಕ್ಷ್ಮೀ ಅಶ್ವಿನ್ ಗೌಡ, ಬಿಜೆಪಿ ರಾಜ್ಯ ವಕ್ತಾರ ಡಾ. ನರೇಂದ್ರ ರಂಗಪ್ಪ ಮತ್ತುರಾಜ್ಯದ ಮಾಜಿ ಕಾರ್ಯದರ್ಶಿ ಜಗದೀಶ್ ಹಿರೇಮನಿ ಅವರು ಉಪಸ್ಥಿತರಿದ್ದರು.
SHOCKING: ರಾಜ್ಯದಲ್ಲಿ ಬೆಚ್ಚಿ ಬೀಳಿಸುವ ಘಟನೆ: ಮದುವೆಯಾಗಲು ನಿರಾಕರಿಸಿದ ಯುವತಿಗೆ ಆ್ಯಸಿಡ್ ಎರಚಿದ ಮಾವ
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಸಂಪೂರ್ಣ ನಿಷ್ಕ್ರಿಯವಾಗಿದೆ: ಬಿವೈ ವಿಜಯೇಂದ್ರ ವಾಗ್ಧಾಳಿ