ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಇತ್ತೀಚೆಗೆ ಆರಂಭವಾದ ಭೀಕರ ಯುದ್ಧ ಮತ್ತು ರಾಜತಾಂತ್ರಿಕ ಬಿಕ್ಕಟ್ಟಿನ ನಡುವೆ, ಅಲ್ಲಿನ ವಿವಿಧ ದೇಶಗಳಿಂದ ಇದುವರೆಗೆ ಸುಮಾರು 8,15,000 ಪ್ರಯಾಣಿಕರು ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ತಿಳಿಸಿದೆ.
ಫೆಬ್ರವರಿ 28 ರಿಂದ ಆರಂಭವಾದ ಈ ಸಂಘರ್ಷದ ನಂತರ, ಯುದ್ಧ ಪೀಡಿತ ಪ್ರದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ತಾಯ್ನಾಡಿಗೆ ಕರೆತರಲು ಕೇಂದ್ರ ಸರ್ಕಾರ ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದೆ.ಇಸ್ರೇಲ್, ಕುವೈತ್ ಮತ್ತು ಬಹ್ರೇನ್ ದೇಶಗಳ ವಾಯುಪ್ರದೇಶಗಳು ಬಂದ್ ಆಗಿರುವುದರಿಂದ, ಪ್ರಯಾಣಿಕರನ್ನು ಜೋರ್ಡಾನ್, ಈಜಿಪ್ಟ್ ಮತ್ತು ಸೌದಿ ಅರೇಬಿಯಾ ಮೂಲಕ ಪರ್ಯಾಯ ಮಾರ್ಗಗಳಲ್ಲಿ ಭಾರತಕ್ಕೆ ಕರೆತರಲಾಗುತ್ತಿದೆ.
ಇರಾನ್‌ನಲ್ಲಿ ಸಿಲುಕಿದ್ದ 2,170 ಭಾರತೀಯರನ್ನು (ಇದರಲ್ಲಿ 971 ವಿದ್ಯಾರ್ಥಿಗಳು ಮತ್ತು 657 ಮೀನುಗಾರರು ಸೇರಿದ್ದಾರೆ) ಅರ್ಮೇನಿಯಾ ಮತ್ತು ಅಜೆರ್ಬೈಜಾನ್ ಭೂಮಾರ್ಗದ ಮೂಲಕ ಸುರಕ್ಷಿತವಾಗಿ ರವಾನಿಸಲಾಗಿದೆ.ಯುಎಇಯಿಂದ ಸುಮಾರು 85ಕ್ಕೂ ಹೆಚ್ಚು ವಿಶೇಷ ವಿಮಾನಗಳು ಕಾರ್ಯಾಚರಣೆ ನಡೆಸುತ್ತಿವೆ. ಸೌದಿ ಅರೇಬಿಯಾ, ಓಮನ್ ಮತ್ತು ಕತಾರ್‌ನಿಂದಲೂ ವಿಮಾನಯಾನ ಮುಂದುವರಿದಿದೆ.








